For Quick Alerts
  ALLOW NOTIFICATIONS  
  For Daily Alerts

  ಕನ್ನಡದ ಮೊದಲ ಸಿನಿಮಾ 'ಸತಿ ಸುಲೋಚನ' ನಿರ್ಮಾಣವಾಗಿದ್ದು ಹೇಗೆ?

  |

  ಭಾರತದ ಮೊದಲ ಸಿನಿಮಾ 1913ರಲ್ಲಿಯೇ ನಿರ್ಮಾಣವಾಯಿತು ಆದರೆ ಮೊದಲ ಕನ್ನಡ ಸಿನಿಮಾ ನಿರ್ಮಾಣವಾಗಲು ತುಸು ಹೆಚ್ಚು ಸಮಯವನ್ನೇ ಪಡೆದುಕೊಂಡಿತು. ಕನ್ನಡದ ಮೊದಲ ಸಿನಿಮಾ, ಮೊದಲ ವಾಕ್ ಸಿನಿಮಾ ಎರಡೂ ಆದ 'ಸತಿ ಸುಲೋಚನಾ' 1934ರ ಮಾರ್ಚ್ 3 ರಂದು ಬಿಡುಗಡೆ ಆಯಿತು. 'ಸತಿ ಸುಲೋಚನಾ' ಸಿನಿಮಾಕ್ಕೆ ಮುನ್ನ ಇನ್ನೊಂದು ಕನ್ನಡ ಸಿನಿಮಾ ಸೆನ್ಸಾರ್ ಆಯಿತಾದರೂ ಮೊದಲು ಬಿಡುಗಡೆ ಆಗಿದ್ದು 'ಸತಿ ಸುಲೋಚನಾ'.

  ಭಾರತದ ಮೊದಲ ವಾಕ್‌ ಚಿತ್ರ 'ಆಲಂ ಆರ'ದ ನಿರ್ಮಾಣದ ನಂತರ ದೇಶದೆಲ್ಲೆಡೆ ಸಿನಿಮಾ ಉದ್ಯಮದಲ್ಲಿ ಉತ್ಸಾಹ ಕಂಡು ಬಂತು. ಅದಾಗಲೇ ಮೂಕಿ ಸಿನಿಮಾ ನಿರ್ಮಾಣ ಮಾಡುತ್ತಿದ್ದ ತಮಿಳು, ತೆಲುಗು, ಮಲಯಾಳಂ ಸಿನಿಮಾ ಉದ್ಯಮಗಳು ಟಾಕಿ ಸಿನಿಮಾ ನಿರ್ಮಾಣದತ್ತ ಗಮನ ಹರಿಸಿದವು. ಅಸ್ಸಾಂನ ಮೊದಲ ಸಿನಿಮಾ ಸಹ ನಿರ್ಮಾಣವಾಯಿತು. ಆದರೆ ಕನ್ನಡದಲ್ಲಿ ಯಾವ ಸಿನಿಮಾ ಸಹ ನಿರ್ಮಾಣ ಆಗಿರಲಿಲ್ಲ.

  ರಾಜಸ್ಥಾನದಿಂದ ಬೆಂಗಳೂರಿಗೆ ಬಂದು ನೆಲೆಸಿದ್ದ ಉದ್ಯಮಿ ಚಮನ್‌ಲಾಲ್ ಡೂಂಗಾಂಜಿ ಎಂಬುವರು 1932ರಲ್ಲಿಯೇ ಸಿನಿಮಾ ನಿರ್ಮಾಣ ಸಂಸ್ಥೆಯೊಂದನ್ನು ಕಟ್ಟಿ ಸಿನಿಮಾ ನಿರ್ಮಾಣ ಮಾಡಲು ಉತ್ಸುಕರಾಗಿದ್ದರು. ರಾಮಾಯಣದ ಕತೆಯೊಂದನ್ನು ಸಿನಿಮಾ ಆಗಿಸುವುದು ಅವರ ಆಸೆಯಾಗಿತ್ತು. ಅದಾಗಲೇ ತೆಲುಗಿನಲ್ಲಿ ಮೂಕಿ ಸಿನಿಮಾ ನಿರ್ದೇಶನ ಮಾಡಿದ್ದ ಯರ್ರಗುಡಿಪಾಟಿ ವರದ ರಾವ್ ಅವರಿಗೆ ಜವಾಬ್ದಾರಿ ವಹಿಸಲಾಯಿತು. ಅದಾಗಲೇ ರಂಗಭೂಮಿಯಲ್ಲಿ ದೊಡ್ಡ ಹೆಸರು ಮಾಡಿದ್ದ ಎಂ ವಿ ಸುಬ್ಬಯ್ಯ ನಾಯ್ಡು ಎಂದೇ ಖ್ಯಾತರಾಗಿದ್ದ ಮೈಸೂರು ವೆಂಕಟಪ್ಪ ಸುಬ್ಬಯ್ಯ ನಾಯ್ಡು ಅವರನ್ನು ಪಾತ್ರಕ್ಕಾಗಿ ಕೇಳಿದಾಗ ತಮ್ಮ ಜೊತೆಯೇ ನಟಿಸುತ್ತಿದ್ದ ನಾಗೇಂದ್ರ ರಾವ್‌ ಅವರಿಗೆ ಪಾತ್ರ ನೀಡುವುದಾದರೆ ಮಾತ್ರವೇ ಸಿನಿಮಾದಲ್ಲಿ ನಟಿಸುವುದಾಗಿ ಷರತ್ತು ಹಾಕಿದರು. ಷರತ್ತಿಗೆ ನಿರ್ದೆಶಕ, ನಿರ್ಮಾಪಕರು ಒಪ್ಪಿಕೊಂಡರು. ಅಂದಹಾಗೆ ಎಂ.ವಿ.ಸುಬ್ಬಯ್ಯ ನಾಯ್ಡು ಅವರು ನಟ ಲೋಕೇಶ್ ಅವರ ತಂದೆ, ಸೃಜನ್ ಲೋಕೇಶ್ ಅವರ ತಾತ.

  ಇಂದ್ರಜಿತನ ಪಾತ್ರದಲ್ಲಿ ಸುಬ್ಬಯ್ಯ ನಾಯ್ಡು

  ಇಂದ್ರಜಿತನ ಪಾತ್ರದಲ್ಲಿ ಸುಬ್ಬಯ್ಯ ನಾಯ್ಡು

  'ಇಂದ್ರಜಿತ ವಧೆ' ನಾಟಕವನ್ನು ಸಿನಿಮಾ ಮಾಡಲು ತಂಡವು ನಿಶ್ಚಯಿಸಿ ಗುಬ್ಬಿ ವೀರಣ್ಣನವರಿಗೆ ನಾಟಕಗಳನ್ನು ಬರೆದಿದ್ದ ಬೆಳ್ಳಾವೆ ನರಹರಿ ಶಾಸ್ತ್ರಿಗಳನ್ನು ಸಂಪರ್ಕಿಸಿ ಚಿತ್ರಕತೆ ಬರೆದುಕೊಡುವಂತೆ ಕೇಳಿದರು ಅಂತೆಯೇ ಬೆಳ್ಳಾವೆ ನರಹರಿ ಶಾಸ್ತ್ರಿಗಳು ಸಿನಿಮಾಕ್ಕೆ ಒಪ್ಪುವಂತೆ ಚಿತ್ರಕತೆ ಬರೆದುದು ಮಾತ್ರವೇ ಅಲ್ಲದೆ 16 ಹಾಡುಗಳನ್ನು ಸಿನಿಮಾಕ್ಕಾಗಿ ಬರೆದುಕೊಟ್ಟರು. ನಂತರ ಇಂದ್ರಜಿತನ ಪಾತ್ರದಲ್ಲಿ ಸುಬ್ಬಯ್ಯ ನಾಯ್ಡು, ಸುಲೋಚನಾ ಪಾತ್ರಕ್ಕೆ ತ್ರಿಪುರಾಂಭ, ರಾವಣನ ಪಾತ್ರದಲ್ಲಿ ನಾಗೇಂದ್ರ ರಾವ್, ಮಂಡೋದರಿ ಪಾತ್ರಕ್ಕೆ ಲಕ್ಷ್ಮಿ, ಲಕ್ಷ್ಮಣನ ಪಾತ್ರಕ್ಕೆ ನಿರ್ದೇಶಕರೂ ಆಗಿದ್ದ ವೈ.ವಿ.ರಾವ್ ಹೀಗೆ ಪಾತ್ರಗಳ ಆಯ್ಕೆಯಾಗಿ ಸಿನಿಮಾ ಚಿತ್ರೀಕರಣಕ್ಕೆ ಮುನ್ನ ತಾಲೀಮು ಸಹ ಆರಂಭವಾಯಿತು.

  ಕೊಲ್ಹಾಪುರದ ಸ್ಟುಡಿಯೋದಲ್ಲಿ ಚಿತ್ರೀಕರಣ

  ಕೊಲ್ಹಾಪುರದ ಸ್ಟುಡಿಯೋದಲ್ಲಿ ಚಿತ್ರೀಕರಣ

  ಚಿತ್ರತಂಡ 1933 ರಲ್ಲಿ ರೈಲಿನಲ್ಲಿ ಕೊಲ್ಹಾಪುರಕ್ಕೆ ತೆರಳಿ ಅಲ್ಲಿನ 'ಛತ್ರಪತಿ ಸಿನಿಟೋನ್' ಹೆಸರಿನ ಸ್ಟುಡಿಯೋದಲ್ಲಿ ಚಿತ್ರೀಕರಣದಲ್ಲಿ ಪಾಲ್ಗೊಂಡಿತು. ಸಿನಿಮಾದ ಬಹುತೇಕ ಚಿತ್ರೀಕರಣ ನೈಸರ್ಗಿಕ ಲೈಟ್‌ನಲ್ಲಿಯೇ ಮಾಡಲಾಯಿತು. ಕನ್ನಡಿಗಳನ್ನು ಬಳಸಿ ಕೆಲವು ಟ್ರಿಕ್ ಶಾಟ್‌ಗಳನ್ನು ಸಹ ಮಾಡಲಾಗಿತ್ತು. ಸಾವಿರಾರು ಮಂದಿಯನ್ನು ಒಟ್ಟು ಸೇರಿಸಿ ಎರಡು ಕ್ಯಾಮೆರಾ ಬಳಸಿ ಯುದ್ಧದ ದೃಶ್ಯಗಳನ್ನು ಸಹ ಚಿತ್ರೀಕರಿಸಲಾಯಿತು. ಈ ನಡುವೆ ಸಿನಿಮಾದ ನಿರ್ಮಾಪಕರು ಕಲಾವಿದರಿಗೆ ಸಂಭಾವನೆ ಕೊಟ್ಟಿಲ್ಲವೆಂದು ಸುಬ್ಬಯ್ಯ ನಾಯ್ಡು ಸೇರಿದಂತೆ ಇತರೆ ಕಲಾವಿದರು ಪ್ರತಿಭಟನೆ ಸಹ ಮಾಡಿದ್ದರು. ಹೇಗೊ ಎಲ್ಲ ಅಡೆ-ತಡೆಗಳನ್ನು ಮೀರಿ ಸಿನಿಮಾ ಚಿತ್ರೀಕರಣ ಪೂರ್ಣಗೊಂಡಿತು. ಸಿನಿಮಾ ಮುಗಿಯುವ ವೇಳೆಗೆ 40,000 ವೆಚ್ಚವಾಗಿತ್ತು.

  ಬೆಂಗಳೂರಿನ ಪ್ಯಾರಾಮೌಂಟ್ ಚಿತ್ರಮಂದಿರದಲ್ಲಿ ಬಿಡುಗಡೆ

  ಬೆಂಗಳೂರಿನ ಪ್ಯಾರಾಮೌಂಟ್ ಚಿತ್ರಮಂದಿರದಲ್ಲಿ ಬಿಡುಗಡೆ

  ಸಿನಿಮಾವು ಮಾರ್ಚ್ 03, 1934ರಂದು ಕೆ.ಆರ್.ಪೇಟೆ ಬಳಿಕ ಪ್ಯಾರಾಮೌಂಟ್ ಹಾಲ್‌ನಲ್ಲಿ ಬಿಡುಗಡೆ ಆಯಿತು. ಕುಸ್ತಿ, ನಾಟಕ ಇನ್ನಿತರೆ ಸಾಂಸ್ಕೃತಿಕ ಕಾರ್ಯಕ್ರಮ ನಡೆಯುತ್ತಿದ್ದ ಪ್ಯಾರಾಮೌಂಟ್ ಹಾಲ್ ಅನ್ನೇ ಚಿತ್ರಮಂದಿರವನ್ನಾಗಿ ಬದಲಾಯಿಸಲಾಗಿತ್ತು. ಇದು ಕರ್ನಾಟಕದ ಮೊದಲ ಚಿತ್ರಮಂದಿರ ಸಹ. ಚಿತ್ರಮಂದಿರದಲ್ಲಿ ಸಿನಿಮಾ ಬಿಡುಗಡೆ ಆಗಿದ್ದೇ ತಡ ಜನ ಸಿನಿಮಾ ನೋಡಲು ಮುಗಿಬಿದ್ದರು, ಪಕ್ಕದ ಹಳ್ಳಿಗಳಿಂದ ಎತ್ತಿನ ಗಾಡಿಯಲ್ಲಿ ಬಂದು ಸಿನಿಮಾ ನೋಡಿ ಹೋಗುತ್ತಿದ್ದರು. ಸುಮಾರು ಎಂಟು ವಾರ ಪ್ಯಾರಾಮೌಂಟ್ ಚಿತ್ರಮಂದಿರದಲ್ಲಿ 'ಸತಿ ಸುಲೋಚನಾ' ಸಿನಿಮಾ ಓಡಿತ್ತು. ಮಹಾನ್ ದಾನಿ ದೊಡ್ಡಣ್ಣನವರು ಕೊಟ್ಟಿದ್ದ ಜಮೀನಿನಲ್ಲಿ ಪ್ಯಾರಾಮೌಂಟ್ ಚಿತ್ರಮಂದಿರ ಮಾಡಲಾಗಿತ್ತಾದ್ದರಿಂದ ಅದನ್ನು ದೊಡ್ಡಣ್ಣ ಹಾಲ್ ಎಂದೇ ಕರೆಯುತ್ತಿದ್ದರು. ಪ್ಯಾರಾಮೌಂಟ್ ಇದ್ದ ಜಾಗದಲ್ಲಿ ನಂತರ ಪರಿಮಳ ಹಾಗೂ ಪ್ರದೀಪ್ ಎಂಬ ಎರಡು ಚಿತ್ರಮಂದಿರ ನಿರ್ಮಾಣ ಮಾಡಲಾಯಿತು.

  ಮೊದಲ ಸಿನಿಮಾ ಆಗಬೇಕಿದ್ದಿದ್ದು 'ಭಕ್ತ ಧೃವ'

  ಮೊದಲ ಸಿನಿಮಾ ಆಗಬೇಕಿದ್ದಿದ್ದು 'ಭಕ್ತ ಧೃವ'

  ಕನ್ನಡ ಮೊತ್ತ ಮೊದಲ ಸಿನಿಮಾ 'ಸತಿ ಸುಲೋಚನಾ' ಎಂಬುದು ಶತಪ್ರತಿಶತ ಸರಿ ಆದರೆ ಅದಕ್ಕೂ ಮುನ್ನಾ 'ಭಕ್ತ ಧೃವ' ಎಂಬ ಕನ್ನಡದ್ದೇ ಸಿನಿಮಾ ಸೆಟ್ಟೇರಿತ್ತು ಮತ್ತು ಪೂರ್ಣ ಸಹ ಆಯಿತು. 'ಸತಿ ಸುಲೋಚನಾ' ಸಿನಿಮಾಕ್ಕೆ ಮುನ್ನವೇ ಅದು ಸೆನ್ಸಾರ್ (ಪ್ರದರ್ಶನಕ್ಕೆ ಸ್ಥಳೀಯ ಆಡಳಿತದ ಒಪ್ಪಿಗೆ) ಸಹ ಪಡೆದುಕೊಂಡಿತು ಆದರೆ ಬಿಡುಗಡೆ ಆಗಲು ತಡವಾಯ್ತು ಅದರ ನಡುವೆ 'ಸತಿ ಸುಲೋಚನಾ' ಸಿನಿಮಾ ಬಿಡುಗಡೆ ಆಗಿ ಇತಿಹಾಸದಲ್ಲಿ ಸ್ಥಾನ ಭದ್ರ ಮಾಡಿಕೊಂಡು ಬಿಟ್ಟಿತು. ಮೊದಲು ಪೂರ್ಣಗೊಂಡರೂ ಸಹ 'ಭಕ್ತ ಧೃವ' ಕನ್ನಡದ ಎರಡನೇ ಸಿನಿಮಾ ಆಯಿತು. 1934ರ ಮಾರ್ಚ್ 03 ರಂದು 'ಸತಿ ಸುಲೋಚನಾ' ಬಿಡುಗಡೆ ಆದರೆ ಏಪ್ರಿಲ್ 01 ಕ್ಕೆ 'ಭಕ್ತ ಧೃವ' ಬಿಡುಗಡೆ ಆಯ್ತು. ಸಿನಿಮಾವನ್ನು ಮರಾಠಿಯ ಪಾರ್ಶ್ವನಾಥ ಅಲ್ಟೇಕರ್ ನಿರ್ದೇಶಿಸಿದರು. ನಿರ್ಮಾಣ ಮಾಡಿದ್ದ ಯು.ಎಲ್.ನಾರಾಯಣ ರಾವ್. ಸಿನಿಮಾವನ್ನು ರಂಗಭೂಮಿ ನಟ ಎ.ವಿ.ವರದಾಚಾರ್ ನೆನಪಿಗಾಗಿ ನಿರ್ಮಿಸಲಾಯಿತು.

  English summary
  Indian cinema History Part 07: Kannada's first movie Sati Sulochana released on March 03, 1934.
  Friday, July 23, 2021, 18:35
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X