twitter
    For Quick Alerts
    ALLOW NOTIFICATIONS  
    For Daily Alerts

    ಬಾಲಿವುಡ್ಡಿಗೆ ಬುನಾದಿ ಹಾಕಿದ ಪೃಥ್ವಿರಾಜ್ ಕಪೂರ್ ಅನ್ನು ಮರೆಯುವುದುಂಟೆ

    |

    ಭಾರತೀಯ ಸಿನಿಮಾ ಇತಿಹಾಸದಲ್ಲಿ ಕಪೂರ್‌ಗಳಿಗೆ ವಿಶೇಷ ಸ್ಥಾನವಿದೆ. 1928ರಿಂದ ಇಂದಿನವರೆಗೂ ಸಿನಿಮೋದ್ಯಮದಲ್ಲಿ ತಮ್ಮನ್ನು ಸಕ್ರಿಯವಾಗಿ ತೊಡಗಿಸಿಕೊಂಡಿರುವ ಕಪೂರ್ ಕಾಂದಾನಿಗರು ಭಾರತೀಯ ಸಿನಿಮಾಕ್ಕೆ ದೊಡ್ಡ ಯೋಗದಾನ ನೀಡಿದ್ದಾರೆ.

    ಇಂದು ಬಾಲಿವುಡ್‌ನಲ್ಲಿ ಸ್ಟಾರ್‌ಗಳಾಗಿ ಮೆರೆಯುತ್ತಿರುವ ಕಪೂರ್ ಕುಡಿಗಳಿಗೆಲ್ಲ ಮೂಲ ಪೃಥ್ವಿರಾಜ್‌ ಕಪೂರ್. ಈ ಮಹಾನ್ ನಟ ಬಾಲಿವುಡ್‌ಗೆ ಬುನಾದಿ ಹಾಕಿದ ಮಹನೀಯ ವ್ಯಕ್ತಿಗಳ ಪಟ್ಟಿಯಲ್ಲಿ ಪ್ರಮುಖರು. ಕಪೂರ್‌ಗಳಿಲ್ಲದೆ ಹಿಂದಿ ಸಿನಿಮಾ ಇಲ್ಲ ಎಂಬ ಕಾಲ ದಶಕಗಳಿಂದಲೂ ಚಾಲ್ತಿಯಲ್ಲಿದೆ ಇದಕ್ಕೆ ಮುಖ್ಯ ಕಾರಣ ಪೃಥ್ವಿರಾಜ್ ಕಪೂರ್.

    ಪಂಜಾಬ್‌ನ ಸಮುಂದ್ರಿ ಎಂಬಲ್ಲಿ ಪೃಥ್ವಿರಾಜ್ ಕಪೂರ್ 1906ರಲ್ಲಿ ಜನಿಸಿದರು. ಪೃಥ್ವಿರಾಜ್ ಅವರ ತಂದೆ ಬಸೇಶ್ವರ್‌ನಾಥ್ ಕಪೂರ್ ಬ್ರಿಟೀಷ್ ಆಡಳಿತದಲ್ಲಿ ಪೊಲೀಸ್ ಉದ್ಯೋಗದಲ್ಲಿದ್ದರು. ಅವರಿಗೆ ಪಂಜಾಬ್‌ನಿಂದ ಪಾಕಿಸ್ತಾನದ ಪೇಶಾವರಕ್ಕೆ ವರ್ಗವಾದಾಗ ಕುಟುಂಬ ಸಮೇತ ಪೇಶಾವರಕ್ಕೆ ಹೋಗಿ ನೆಲೆಸಿದರು. ಪಾಕಿಸ್ತಾನ ಆಗ ಭಾರತದ್ದೇ ಭಾಗವಾಗಿತ್ತು. ಪೇಶಾವರದಲ್ಲಿಯೇ ವಿದ್ಯಾಭ್ಯಾಸ ಮಾಡಿದರು ಪೃಥ್ವಿರಾಜ್ ಕಪೂರ್. ಬಾಲ್ಯವಿವಾಹವಾಗಿದ್ದ ಪೃಥ್ವಿರಾಜ್ ಕಪೂರ್ 18 ವರ್ಷದವರಾಗುವ ವೇಳೆಗಾಗಲೇ ತಂದೆಯೂ ಆಗಿಬಿಟ್ಟಿದ್ದರು. 1918ರ ವೇಳೆಗೆ ರಂಗಭೂಮಿ ಬಗ್ಗೆ ಆಸಕ್ತಿ ಬೆಳೆಸಿಕೊಂಡಿದ್ದ ಪೃಥ್ವಿರಾಜ್ ಕಪೂರ್ ಪಾಕಿಸ್ತಾನದ ಲೈಲ್ಲಾಪುರ್, ಪೇಶಾವರ್‌ಗಳಲ್ಲಿ ನಾಟಕಗಳಲ್ಲಿ ಅಭಿನಯಿಸುತ್ತಿದ್ದರು. ನಟನೆಯ ಆರಂಭಿಕ ಪಟ್ಟುಗಳನ್ನು ಅವರು ಅಲ್ಲಿಯೇ ಕಲಿತದ್ದು.

    ಚಿಕ್ಕಮ್ಮನಿಂದ ಸಾಲ ಪಡೆದು ಬಾಂಬೆ ಬಂದ ಪೃಥ್ವಿರಾಜ್

    ಚಿಕ್ಕಮ್ಮನಿಂದ ಸಾಲ ಪಡೆದು ಬಾಂಬೆ ಬಂದ ಪೃಥ್ವಿರಾಜ್

    ನಾಟಕಗಳಲ್ಲಿ ಹೆಸರು ಮಾಡಿದ್ದ ಪೃಥ್ವಿರಾಜ್ ಕಪೂರ್, ಸಿನಿಮಾಗಳಲ್ಲಿ ನಟಿಸಬೇಕೆಂಬ ಆಸೆಯಿಂದ ಮನೆಯವರ ವಿರೋಧದ ನಡುವೆಯೂ ತಮ್ಮ ಚಿಕ್ಕಮ್ಮನಿಂದ ಸಾಲ ಪಡೆದು ಬಾಂಬೆಗೆ ರೈಲು ಹತ್ತಿದ್ದರು. ಪೃಥ್ವಿರಾಜ್ ಕಪೂರ್ ತಂದೆಗೆ ಮಗನನ್ನು ವಕೀಲನನ್ನಾಗಿಸುವ ಆಸೆಯಿತ್ತು. 1928ರಲ್ಲಿ ಬಾಂಬೆಗೆ ಬಂದ ಪೃಥ್ವಿರಾಜ್ ಕಪೂರ್ ಇಂಪೀರಿಯಲ್ ಸಿನಿಮಾಸ್‌ನಲ್ಲಿ ಕೆಲಸಕ್ಕೆ ಸೇರಿಕೊಂಡರು. ಅದೇ ವರ್ಷ ಅವರಿಗೆ ಸಿನಿಮಾದಲ್ಲಿ ನಟಿಸುವ ಅವಕಾಶವೂ ಸಿಕ್ಕಿತು ಆದರೆ ಹೆಸರೇ ಇಲ್ಲದ ಪಾತ್ರದಲ್ಲಿ. ಆದರೆ ಪೃಥ್ವಿರಾಜ್ ನಟನೆ, ಸುಂದರ ಮುಖಭಾವ ಗಮನಿಸಿದ ನಿರ್ದೇಶಕರೊಬ್ಬರು 'ಸಿನಿಮಾ ಗರ್ಲ್' ಹೆಸರಿನ ಸಿನಿಮಾದಲ್ಲಿ ಪೋಷಕ ಪಾತ್ರ ನೀಡಿದರು.

    ಬಹುಕಾಲ ಪೋಷಕ ಪಾತ್ರಗಳಲ್ಲಿ ನಟಿಸಿದ ಪೃಥ್ವಿರಾಜ್ ಕಪೂರ್

    ಬಹುಕಾಲ ಪೋಷಕ ಪಾತ್ರಗಳಲ್ಲಿ ನಟಿಸಿದ ಪೃಥ್ವಿರಾಜ್ ಕಪೂರ್

    ಮೂಕಿ ಸಿನಿಮಾಗಳಾದ 'ದೋ ದಾರೆ ತಲ್ವಾರ್', 'ಪ್ರಿನ್ಸ್ ವಿಜಯ್ ಕುಮಾರ್', 'ಶೇರ್ ಎ ಅರಬ್' ಇನ್ನೂ ಕೆಲವು ಮೂಕಿ ಸಿನಿಮಾಗಳಲ್ಲಿ ಪೃಥ್ವಿರಾಜ್ ಕಪೂರ್ ನಟಿಸಿದರು. ನಂತರ 1931ರಲ್ಲಿ ಬಿಡುಗಡೆ ಆದ ಭಾರತದ ಮೊದಲ ಟಾಕಿ ಸಿನಿಮಾ 'ಆಲಂ ಆರಾ'ದಲ್ಲಿ ಪೃಥ್ವಿರಾಜ್ ಕಪೂರ್ ಪೋಷಕ ಪಾತ್ರದಲ್ಲಿ ನಟಿಸಿದರು. ನಂತರ 'ದ್ರೌಪದಿ' ಹೆಸರಿನ ಸಿನಿಮಾದಲ್ಲಿ ಅರ್ಜುನನ ಪಾತ್ರದಲ್ಲಿ ಕಾಣಿಸಿಕೊಂಡರು. ಆ ನಂತರ ಹಲವು ಸಿನಿಮಾಗಳಲ್ಲಿ ಪೃಥ್ವಿರಾಜ್ ಕಪೂರ್ ದ್ವಿತೀಯ ನಾಯಕ, ಮುಖ್ಯ ಪೋಷಕ ನಟನ ಪಾತ್ರಗಳಲ್ಲಿಯೇ ಕಾಣಿಸಿಕೊಂಡರು. 1940ರ ವೇಳೆಗೆ ನಾಯಕನಟನಾಗಿ ಕಾಣಿಸಿಕೊಂಡರು ಪೃಥ್ವಿರಾಜ್ ಕಪೂರ್.

    1942ರಲ್ಲಿ ಪೃಥ್ವಿ ಥಿಯೇಟರ್ ಸ್ಥಾಪನೆ

    1942ರಲ್ಲಿ ಪೃಥ್ವಿ ಥಿಯೇಟರ್ ಸ್ಥಾಪನೆ

    1941ರಲ್ಲಿ ಬಿಡುಗಡೆ ಆದ 'ಸಿಖಂದರ್' ಸಿನಿಮಾ ಅಂತೂ ದೊಡ್ಡ ಬ್ಲಾಕ್ ಬಸ್ಟರ್ ಹಿಟ್ ಆಯಿತು. ಆ ಸಿನಿಮಾದ ಮೂಲಕ ಪೃಥ್ವಿರಾಜ್ ಕಪೂರ್ ಭಾರತದ ಸ್ಟಾರ್ ಆಗಿಬಿಟ್ಟರು. ಸಿನಿಮಾಗಳಲ್ಲಿ ಜನಪ್ರಿಯ ನಟರಾಗಿದ್ದರೂ ಸಹ ಪೃಥ್ವಿರಾಜ್ ಕಪೂರ್‌ಗೆ ನಾಟಕಗಳ ಮೇಲಿನ ಪ್ರೀತಿ ಹೋಗಿರಲಿಲ್ಲ. ಸಿನಿಮಾಗಳ ಜೊತೆಗೆ ನಾಟಕಗಳಲ್ಲಿಯೂ ನಟಿಸುತ್ತಲೇ ಇದ್ದರು. ಸಿನಿಮಾಗಳಲ್ಲಿ ಗಳಿಸಿದ ಹಣವನ್ನು ನಾಟಕಗಳ ಮೇಲೆ ತೊಡಗಿಸಲು ಆರಂಭಿಸಿದರು. 1942ರಲ್ಲಿ ಪೃಥ್ವಿರಾಜ್ ಕಪೂರ್, 'ಪೃಥ್ವಿ ಥಿಯೇಟರ್' ನಾಟಕ ತಂಡ ಹಾಗೂ ರಂಗ ಮಂದಿರ ಪ್ರಾರಂಭಿಸಿದರು. 150 ಜನಗಳ ದೊಡ್ಡ ತಂಡವನ್ನು ಕಟ್ಟಿಕೊಂಡು ಭಾರತದಾದ್ಯಂತ ಹಲವು ನಾಟಕಗಳ ಪ್ರದರ್ಶನವನ್ನು ಪೃಥ್ವಿರಾಜ್ ಕಪೂರ್ ನೀಡಿದರು. ಪೃಥ್ವಿರಾಜ್‌ರ ತಂಡದಲ್ಲಿ ಮಗ ರಾಜ್ ಕಪೂರ್ ಸಹ ಇದ್ದರು ಮತ್ತು ರಾಜ್‌ ಕಪೂರ್ ತಂಡದ ಮುಖ್ಯ ನಟರಾಗಿದ್ದರು. ಪೃಥ್ವಿರಾಜ್ ಕಪೂರ್ ಆರಂಭಿಸಿದ ಪೃಥ್ವಿ ಥಿಯೇಟರ್‌ನಿಂದ ಹಲವು ಅತ್ಯುತ್ತಮ ನಟರು ಭಾರತೀಯ ಸಿನಿಮಾರಂಗಕ್ಕೆ ದೊರೆತದ್ದು ಈಗ ಇತಿಹಾಸ.

    ಆರ್‌.ಕೆ.ಫಿಲಮ್ಸ್ ಸ್ಥಾಪನೆಗೆ ಒತ್ತು

    ಆರ್‌.ಕೆ.ಫಿಲಮ್ಸ್ ಸ್ಥಾಪನೆಗೆ ಒತ್ತು

    40ರ ದಶದಲ್ಲಿ ಪೃಥ್ವಿ ಥಿಯೇಟರ್‌ ಕಡೆಗೆ ಹೆಚ್ಚು ಗಮನ ನೀಡಿದ ಪೃಥ್ವಿರಾಜ್ ಕಪೂರ್ 1942 ರ ಬಳಿಕ 1950 ರ ವರೆಗೆ ಕೇವಲ ಕೇವಲ ಎರಡು ಸಿನಿಮಾಗಳಲ್ಲಿ ಮಾತ್ರವೇ ನಟಿಸಿದರು. ಆದರೆ 1950ರ ಬಳಿಕ ಭಾರತದಲ್ಲಿ ಸಿನಿಮಾಗಳು ಹೆಚ್ಚಾಗುವ ವೇಳೆಗೆ ನಾಟಕ ಮತ್ತು ಸಿನಿಮಾ ಎರಡರ ನಡುವೆ ಸಮತೋಲನ ಮಾಡಲು ಆರಂಭಿಸಿ ಕೆಲವು ಮುಖ್ಯವಾದ ಸಿನಿಮಾಗಳಲ್ಲಿ ನಟಿಸಿದರು. ವಿಶೇಷವೆಂದರೆ ಈ ಅವಧಿಯಲ್ಲಿ ಪೃಥ್ವಿರಾಜ್ ಕಪೂರ್ ನಟಿಸಿದ ಎಲ್ಲ ಸಿನಿಮಾಗಳು ಹಿಟ್ ಆದವು. ಮಗ ರಾಜ್‌ ಕಪೂರ್ ಜೊತೆಗೆ ಹಲವು ಸಿನಿಮಾಗಳಲ್ಲಿ ಪೃಥ್ವಿರಾಜ್ ಕಪೂರ್ ನಟಿಸಿದರು. ಮಗನ ಗೆಳೆಯನ ಪಾತ್ರಗಳಲ್ಲಿಯೂ ಪೃಥ್ವಿ ನಟಿಸಿದ್ದು ವಿಶೇಷ. ಮಗ ಮತ್ತು ತಂದೆಗೆ ಕೇವಲ 18 ವರ್ಷವಷ್ಟೆ ಅಂತರವಿತ್ತು. ಹಾಗಾಗಿ ಇಬ್ಬರೂ ಜೊತೆಗಾರರಂತೆ ಕಾಣುತ್ತಿದ್ದರು. 1948ರಲ್ಲಿ ರಾಜ್ ಕಪೂರ್ ಆರ್‌ಕೆ ಫಿಲಮ್ಸ್ ಎಂಬ ಸಿನಿಮಾ ನಿರ್ಮಾಣ ಸಂಸ್ಥೆ ಆರಂಭಿಸಿದರು. ಅದಕ್ಕೆ ದೊಡ್ಡ ಒತ್ತಾಸೆ ಪೃಥ್ವಿರಾಜ್ ಕಪೂರ್. ಆ ನಂತರ ಆರ್‌.ಕೆ.ಸ್ಟುಡಿಯೋ ಹಾಗೂ ಪೃಥ್ವಿ ಥಿಯೇಟರ್ ಅನ್ನು ಬೆಳೆಸುವಲ್ಲಿಯೂ ಪೃಥ್ವಿರಾಜ್ ಕಪೂರ್ ಯೋಗದಾನ ದೊಡ್ಡದು.

    ಎಂದೂ ಮರೆಯಲಾಗದ 'ಮುಘಲ್-ಎ-ಅಜಮ್'

    ಎಂದೂ ಮರೆಯಲಾಗದ 'ಮುಘಲ್-ಎ-ಅಜಮ್'

    1960ರ ವೇಳೆಗೆ ಹಿರಿಯ ಪೋಷಕ ನಟನಾಗಿ ಪೃಥ್ವಿರಾಜ್ ಗುರುತಿಸಿಕೊಳ್ಳಲು ಆರಂಭಿಸಿದರು. 1960ರಲ್ಲಿ ಬಿಡುಗಡೆ ಆದ 'ಮುಘಲ್-ಎ-ಅಜಂ' ಸಿನಿಮಾದಲ್ಲಿ ಪೃಥ್ವಿರಾಜ್ ಕಪೂರ್ ನಟಿಸಿದ್ದ ಅಕ್ಬರ್ ಪಾತ್ರವನ್ನು ಭಾರತದ ಸಿನಿಮಾ ಪ್ರೇಮಿಗಳು ಎಂದಿಗೂ ಮರೆಯಲು ಸಾಧ್ಯವಿಲ್ಲ. 'ಮುಘಲ್-ಎ-ಅಜಮ್' ಸಿನಿಮಾ ಸೃಷ್ಟಿಸಿದ ದಾಖಲೆಗಳು ದಶಕಗಳ ವರೆಗೆ ಇನ್ನಾವ ಹಿಂದಿ ಸಿನಿಮಾ ಸಹ ಅಳಿಸಲು ಸಾಧ್ಯವಾಗಲಿಲ್ಲ. ಪೃಥ್ವಿರಾಜ್ ಕಪೂರ್‌ಗೆ ದೊಡ್ಡ ಅಭಿಮಾನಿವರ್ಗವನ್ನು ಈ ಸಿನಿಮಾ ತಂದುಕೊಟ್ಟಿತು.

    ಪೋಷಕ ಪಾತ್ರಗಳಿಗೆ ಸೀಮಿತವಾದ ನಟ

    ಪೋಷಕ ಪಾತ್ರಗಳಿಗೆ ಸೀಮಿತವಾದ ನಟ

    1960ರ ಬಳಿಕ ಹಲವಾರು ಸಿನಿಮಾಗಳಲ್ಲಿ ಪೃಥ್ವಿರಾಜ್ ಕಪೂರ್ ಪೋಷಕ ಪಾತ್ರಗಳಲ್ಲಿ ನಟಿಸಿದರು. 'ರುಸ್ತುಂ ಶೋಹ್ರಾಬ್', 'ಗಜಲ್', 'ಜಿಂದಗಿ', 'ಜಾನ್ವಾರ್', 'ಡಾಕು ಮಂಗಲ್ ಸಿಂಗ್', 'ಯೇ ರಾತ್ ಫಿರ್ ನಹೀ ಆಯೇಗಿ', 'ತೀನ್ ಬಹುರಾಣಿಯಾ', 'ಹೀರ್ ರಾಂಝಾ' ಇನ್ನೂ ಹಲವು ಸಿನಿಮಾಗಳಲ್ಲಿ ಪೃಥ್ವಿರಾಜ್ ಕಪೂರ್ ನಟಿಸಿದರು. ಹಿಂದಿ ಸಿನಿಮಾದ ಬಹು ಮುಖ್ಯ ಪೋಷಕ ನಟ ಎನಿಸಿಕೊಂಡರು.

    ಡಾ.ರಾಜ್‌ಕುಮಾರ್ ಜೊತೆ 'ಸಾಕ್ಷಾತ್ಕಾರ' ಸಿನಿಮಾದಲ್ಲಿ ನಟನೆ

    ಡಾ.ರಾಜ್‌ಕುಮಾರ್ ಜೊತೆ 'ಸಾಕ್ಷಾತ್ಕಾರ' ಸಿನಿಮಾದಲ್ಲಿ ನಟನೆ

    ಕನ್ನಡದಲ್ಲಿ ಡಾ.ರಾಜ್‌ಕುಮಾರ್ ನಟಿಸಿ ಪುಟ್ಟಣ್ಣ ಕಣಗಾಲ್ ನಿರ್ದೇಶನ ಮಾಡಿದ್ದ 'ಸಾಕ್ಷಾತ್ಕಾರ' ಸಿನಿಮಾದಲ್ಲಿ ರಾಜ್‌ಕುಮಾರ್ ಅವರ ತಂದೆಯ ಪಾತ್ರದಲ್ಲಿ ಪೃಥ್ವಿರಾಜ್ ಕಪೂರ್ ನಟಿಸಿದ್ದರು. 1970 ರ ಸಮಯದಲ್ಲಿಯೇ ಹಿಂದಿಯಿಂದ ಪೋಷಕ ಪಾತ್ರಕ್ಕಾಗಿ ಪೃಥ್ವಿರಾಜ್ ಕಪೂರ್ ಅವರನ್ನು ಕರೆತಂದಿದ್ದರೆಂದರೆ ಅವರ ಖ್ಯಾತಿ ಎಷ್ಟಿತ್ತೆಂದು ಅಂದಾಜು ಮಾಡಬಹುದು. ಪೃಥ್ವಿರಾಜ್ ಕಪೂರ್ ನಟಿಸಿದ ಏಕೈಕ ಸಿನಿಮಾ 'ಸಾಕ್ಷಾತ್ಕಾರ'. ಹಿಂದಿ ಸಿನಿಮಾ ಬಿಟ್ಟರೆ ಎರಡು ಪಂಜಾಬಿ ಸಿನಿಮಾಗಳಲ್ಲಿ ಪೃಥ್ವಿರಾಜ್ ಕಪೂರ್ ನಟಿಸಿದ್ದರು.

    ಹಿಂದಿ ಸಿನಿಮಾಗಳಲ್ಲಿ ನಟಿಸುತ್ತಿರುವ ನಾಲ್ಕನೇ ತಲೆಮಾರು

    ಹಿಂದಿ ಸಿನಿಮಾಗಳಲ್ಲಿ ನಟಿಸುತ್ತಿರುವ ನಾಲ್ಕನೇ ತಲೆಮಾರು

    ನಟ, ರಂಗಭೂಮಿ ಕಲವಿದ, ಬರಹಗಾರ, ನಾಟಕ ನಿರ್ದೇಶಕ, ನಿರ್ಮಾಪಕ ಹೀಗೆ ಹಲವು ವಿಭಾಗಗಳಲ್ಲಿ ಪರಿಣಿತಿ ಹೊಂದಿದ್ದ ಪೃಥ್ವಿರಾಜ್ ಕಪೂರ್ 1972ರಲ್ಲಿ ನಿಧನರಾದರು. ಪೃಥ್ವಿರಾಜ್ ಕಪೂರ್ ಅವರಿಗೆ ಪದ್ಮಭೂಷಣ ಹಾಗೂ ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿ ನೀಡಿ ಗೌರವಿಸಲಾಗಿದೆ. ಅವರ ಜನ್ಮ ಶತಾಬ್ದಿ ಅಂಗವಾಗಿ ಅವರ ಚಿತ್ರವಿರುವ ಪೋಸ್ಟ್ ಕಾರ್ಡ್‌ ಅನ್ನು 1996ರಲ್ಲಿ ಹೊರತಂದಿತು ಸರ್ಕಾರ. ಈಗ ಬಾಲಿವುಡ್‌ ಸಿನಿಮಾಗಳಲ್ಲಿ ನಟಿಸುತ್ತಿರುವ ರಣಬೀರ್ ಕಪೂರ್, ಕರೀನಾ ಕಪೂರ್, ಅರ್ಜುನ್ ಕಪೂರ್‌ ಅವರುಗಳು ಇದೇ ಪೃಥ್ವಿರಾಜ್ ಕಪೂರ್ ಅವರ ನಾಲ್ಕನೇ ತಲೆಮಾರು.

    English summary
    Indian Cinema History Part 11: Hindi Cinema Veteran Prithviraj Kapoor's Biography.
    Friday, July 30, 2021, 22:20
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X