ಐಶ್ವರ್ಯ ಚಿತ್ರಕ್ಕೆ ಆಯ್ಕೆಯಾಗಿದ್ಹೇಗೆ ದೀಪಿಕಾ ಪಡುಕೋಣೆ ? ಇಂದ್ರಜಿತ್ ಲಂಕೇಶ್ ಕಣ್ಣಿಗೆ ಬಿದ್ದಿದ್ಹೇಗೆ ಡಿಪ್ಪಿ.?
ದಕ್ಷಿಣದಿಂದ ವಲಸೆ ಹೋಗಿ ಬಾಲಿವುಡ್ ನಲ್ಲಿ ಬದುಕು ಕಟ್ಟಿಕೊಂಡವರು ದೀಪಿಕಾ ಪಡುಕೋಣೆ. ಓಂ ಶಾಂತಿ ಓಂ ಚಿತ್ರದ ಮೂಲಕ, ಹಿಂದಿ ಚಿತ್ರರಂಗವನ್ನ ಪ್ರವೇಶಿಸಿದ ದೀಪಿಕಾ ಅದಕ್ಕೂ ಮುನ್ನ ಮಾಡೆಲ್ ಆಗಿ ಮಿಂಚು ಹರಿಸಿದವರು. ಬಿಕಿನಿಯಲ್ಲಿ ವರೈಟಿ ವರೈಟಿ ಫೋಸ್ ಕೊಟ್ಟು ಕಣ್ಮನ ಸೆಳೆದವರು. ಇಷ್ಟೇ ಅಲ್ಲ.. ಸೈಕಲ್ ಗ್ಯಾಪ್‌ನಲ್ಲಿ ಆಲ್ಬಂ ಹಾಡುಗಳಿಗೆ ಕೂಡ ಸೊಂಟ ಬಳುಕಿಸಿದವರು ದೀಪಿಕಾ ಪಡುಕೋಣೆ.
ಇಂಥ ದೀಪಿಕಾ ಅಭಿನಯದ ಮೊದಲ ಸಿನಿಮಾ ಯಾವುದು ಎಂದರೆ, ಕರ್ನಾಟಕದಲ್ಲಿರುವ ಚಿಕ್ಕ ಮಕ್ಕಳು ಕೂಡ ಐಶ್ವರ್ಯ ಚಿತ್ರದ ಹೆಸರನ್ನ ಹೇಳ್ತಾರೆ. ಆದರೆ ವಿಪರ್ಯಾಸ ಇವತ್ತು ಕೂಡ ದೀಪಿಕಾಗೆ ಇದೇ ಪ್ರಶ್ನೆಯನ್ನ ಕೇಳಿದರೆ, ಓಂ ಶಾಂತಿ ಓಂ ಎಂಬ ಉತ್ತರವೇ ಬರುತ್ತೆ. ಇರಲಿ.. ದೀಪಿಕಾ ಒಪ್ಪಲಿ..ಬಿಡಲಿ.. ಸತ್ಯ ಯಾವತ್ತಿದ್ದರೂ ಸತ್ಯನೇ. ಸದ್ಯದ ಸಮಾಚಾರ ಏನೆಂದರೆ, ಐಶ್ವರ್ಯ ಚಿತ್ರಕ್ಕೆ ದೀಪಿಕಾ ಆಯ್ಕೆಯಾಗಿದ್ಹೇಗೆ ಅನ್ನುವ ಇಂಟ್ರೆಸ್ಟಿಂಗ್ ವಿಚಾರವನ್ನ, ಆ ಚಿತ್ರದ ನಿರ್ದೇಶಕ, ಕನ್ನಡದ ಪತ್ರಕರ್ತ, ಇಂದ್ರಜಿತ್ ಲಂಕೇಶ್ ಹೇಳಿದ್ದಾರೆ.

ಹೌದು, ನಿಮಗೆ ಗೊತ್ತಿರಲಿ.. ಐಶ್ವರ್ಯ ಮಾಡುವ ಮೊದಲು, ಇಂದ್ರಜಿತ್ ಲಂಕೇಶ್ ಮೊನಾಲಿಸ ಸಿನಿಮಾವನ್ನ ಮಾಡಿದ್ದರು. ಧ್ಯಾನ್ ಮತ್ತು ಸದಾ ಈ ಚಿತ್ರದ ನಾಯಕ-ನಾಯಕಿ. 2004ರಲ್ಲಿ ತೆರೆಗೆ ಬಂದ ಈ ಚಿತ್ರ ಆ ಕಾಲದಲ್ಲಿ 25 ವಾರ ಪ್ರದರ್ಶನ ಕಂಡಿತ್ತು. ಇಂದ್ರಜಿತ್ ಲಂಕೇಶ್ ಅವರಿಗೆ ಸ್ಟಾರ್ ನಿರ್ದೇಶಕ ಎಂಬ ಪಟ್ಟವನ್ನೂ ತಂದು ಕೊಟ್ಟಿತ್ತು. ಸಹಜವಾಗಿ ನಿರ್ದೇಶಕನಾಗಿ ಇಂದ್ರಜಿತ್ ಲಂಕೇಶ್ ಉತ್ತುಂಗದಲ್ಲಿದ್ದ ದಿನಗಳವು.

ಹೀಗಾಗಿಯೇ.. ಸಿಕ್ಕಾಪಟ್ಟೆ ಉತ್ಸಾಹದಲ್ಲಿದ್ದ ಇಂದ್ರಜಿತ್ ಲಂಕೇಶ್, ಐಶ್ವರ್ಯ ಚಿತ್ರವನ್ನ ಘೋಷಿಸಿದ್ದರು. ಹೊಸ ನಾಯಕಿಯನ್ನ ಪರಿಚಯಿಸಬೇಕೆಂಬ ಉದ್ದೇಶದಿಂದ ರಿಯಲ್ ಸ್ಟಾರ್ ಉಪೇಂದ್ರ ಅವರ ಜೊತೆ ಅನೇಕ ಯುವತಿಯರ ಆಡಿಷನ್ ಕೂಡ ಮಾಡಿದ್ದರು ಇಂದ್ರಜಿತ್ ಲಂಕೇಶ್. ಆದರೆ.. ಯಾರು ಇಷ್ಟವಾಗಲಿಲ್ಲ. ಇಷ್ಟವಾಗಲಿಲ್ಲ ಅನ್ನುವುದಕ್ಕಿಂತ ತಮ್ಮ ಅಭಿನಯ ಸಾಮರ್ಥ್ಯದಿಂದ ಇಂದ್ರಜಿತ್ ಲಂಕೇಶ್ ಮತ್ತು ಉಪೇಂದ್ರ ಅವರ ಹೃದಯವನ್ನ ಯಾರು ಗೆಲ್ಲಲಿಲ್ಲ. ಹೀಗಾಗಿಯೇ.. ಮುಂದೇನ್ಮಾಡುವುದು ಎಂದು ಆಲೋಚನೆ ಮಾಡ್ತಿದ್ದ ಸಮಯದಲ್ಲಿಯೇ ಇಂದ್ರಜಿತ್ ಲಂಕೇಶ್, ಫ್ಯಾಷನ್ ಶೋ ಒಂದಕ್ಕೆ ಮುಖ್ಯ ಅತಿಥಿಯಾಗಿ ಹೋಗಿದ್ದರು. ದೀಪಿಕಾ ಪಡುಕೋಣೆ ಇಂದ್ರಜಿತ್ ಲಂಕೇಶ್ ಅವರ ಕಣ್ಣಿಗೆ ಬಿದ್ದಿದ್ದು ಇಲ್ಲಿಯೇ.

ದೀಪಿಕಾ ಪಡುಕೋಣೆ ಅವರ ಹೊಳೆಯುವ ಕಣ್ಣು, ಎತ್ತರ, ಆಕರ್ಷಕ ವ್ಯಕ್ತಿತ್ವಕ್ಕೆ ಅಲ್ಲಿಯೇ ಮನಸೋತ ಇಂದ್ರಜಿತ್ ಲಂಕೇಶ್, ಮರು ದಿನ ಮತ್ತೊಬ್ಬ ಪತ್ರಕರ್ತರ ಸಹಾಯದಿಂದ ದೀಪಿಕಾ ಅವರ ಫೋನ್ ನಂಬರ್ ಪಡೆಯುವಲ್ಲಿ ಯಶಸ್ವಿಯಾದರು. ನೇರವಾಗಿ ಕರೆ ಮಾಡಿ ಮಾತನಾಡಿದರು ಕೂಡ. ಆದರೆ.. ಅವತ್ತು, ದೀಪಿಕಾ ಫೋಟೋಶೂಟ್‌ಗಾಗಿ ಮುಂಬೈನಲ್ಲಿ ಬಿಡಾರ ಹೂಡಿದ್ದರು. ಆದರೂ.. ಇರಲಿ, ಯಾವುದಕ್ಕೂ ಒಮ್ಮೆ ಭೇಟಿಯಾಗೋಣ ಎಂದು ತೀರ್ಮಾನ ಮಾಡಿದ ಇಂದ್ರಜಿತ್ ಲಂಕೇಶ್, ಮುಂಬೈಗೆ ತೆರಳಿದರು. ಐಶಾರಾಮಿ ಪಂಚತಾರಾ ಹೊಟೇಲ್‌ವೊಂದರಲ್ಲಿ ದೀಪಿಕಾ ಅವರನ್ನ ಭೇಟಿಯಾದರು. ವಿಶೇಷ ಅಂದರೆ.. ಮಾತಿಲ್ಲ.. ಕಥೆ ಇಲ್ಲ.. ಇಂದ್ರಜಿತ್ ಲಂಕೇಶ್ ಕೈ ಕುಲುಕಿದ್ದಷ್ಟೇ ಒಪ್ಪಂದಕ್ಕೆ ದೀಪಿಕಾ ಸಹಿ ಹಾಕಿದರು. ಐಶ್ವರ್ಯ ಚಿತ್ರಕ್ಕೆ ನಾಯಕಿಯಾದರು. ಮುಂದಾಗಿದ್ದು ಇತಿಹಾಸ

ಇನ್ನೂ.. ದೀಪಿಕಾ ಪಡುಕೋಣೆ, ಚಿತ್ರರಂಗದಲ್ಲಿ ಅಂಬೆಗಾಲು ಇಡ್ತಿದ್ದ ಸಮಯದಲ್ಲಿ, ಐಶ್ವರ್ಯ ಚಿತ್ರಕ್ಕೆ ನಾಯಕಿಯಾಗಿ ಆಯ್ಕೆಯಾದ ಸಂದರ್ಭದಲ್ಲಿ.. ಇವರ ಜಾತಕವನ್ನ ಕೈಯಲ್ಲಿ ಹಿಡ್ಕೊಂಡು, ದೀಪಿಕಾ ಭವಿಷ್ಯಕ್ಕೆ ಯಾವುದು ಒಳ್ಳೇಯದು.. ಯಾವುದು ಕೆಟ್ಟದ್ದು.. ಎಂದು ನಿರ್ಧಾರವನ್ನ ಮಾಡುತ್ತಾ, ಬಣ್ಣದ ಪ್ರಪಂಚದಲ್ಲಿ ತಿರುಗಾಡುತ್ತಿದ್ದವರು ಬೇರೆ ಯಾರು ಅಲ್ಲ ಬದಲಿಗೆ ಪೂಜಾ ದದ್ಲಾನಿ ಅನ್ನುವುದು ವಿಶೇಷ. ಈ ಪೂಜಾ ದದ್ಲಾನಿ ಬೇರೆ ಯಾರು ಅಲ್ಲ, ಬದಲಿಗೆ.. ಇವತ್ತು ಬಾಲಿವುಡ್‌ನ ಬಾದ್‌ಷಾ ಶಾರುಖ್ ಖಾನ್ ಅವರನ್ನ ನೆರಳಿನಂತೆ ಹಿಂಬಾಲಿಸುತ್ತಾ, ಕಿಂಗ್ ಖಾನ್ ಬದುಕಿನ ಬಹು ಮುಖ್ಯ ಭಾಗವೇ ಆಗಿ ಹೋಗಿರುವ ಮ್ಯಾನೇಜರ್ ಕಂ ಕುಟುಂಬದ ಸದಸ್ಯೆ ಅನ್ನುವುದು ನಿಮಗೆ ಗೊತ್ತಿರಲಿ. ಇಂತಹ ಪೂಜಾ ದದ್ಲಾನಿ ಒಂದ್ಕಾಲದಲ್ಲಿ, ದೀಪಿಕಾ ಅವರ ಮ್ಯಾನೇಜರ್ ಆಗಿದ್ದರು ಎಂಬ ವಿಚಾರ ಅಚ್ಚರಿ ಎನಿಸಿದರೂ ಇದೇ ಸತ್ಯ. ಈ ಸತ್ಯವನ್ನೂ ಕೂಡ ಇಂದ್ರಜಿತ್ ಲಂಕೇಶ್ ಬಹಿರಂಗ ಪಡಿಸಿದ್ದಾರೆ.
ಅಂದ್ಹಾಗೇ ತಮ್ಮ ಐಶ್ವರ್ಯ ಚಿತ್ರ ಹಾಗೂ ದೀಪಿಕಾ ಪಡುಕೋಣೆಯ ಪಾತ್ರದ ಸುತ್ತ ಮುತ್ತ, ಇಂದ್ರಜಿತ್ ಲಂಕೇಶ್ ಈ ಎಲ್ಲ ಇಂಟ್ರೆಸ್ಟಿಂಗ್ ವಿಚಾರಗಳನ್ನ ರ್ಯಾಪಿಡ್ ರಶ್ಮಿ ಅವರ ಜೊತೆ ಹಂಚಿಕೊಂಡಿದ್ದಾರೆ. ರ್ಯಾಪಿಡ್ ರಶ್ಮಿ ಜೊತೆಗಿನ ಸಂದರ್ಶನದಲ್ಲಿ ಮನ ಬಿಚ್ಚಿ ಮಾತನಾಡಿದ್ದಾರೆ. ಆಸಕ್ತರು.. ಯುಟ್ಯೂಬ್ ನಲ್ಲಿ ರ್ಯಾಪಿಡ್ ರಶ್ಮಿ ಅವರ ಸಂಪೂರ್ಣ ಸಂದರ್ಶನವನ್ನ ನೋಡಬಹುದು.


Click it and Unblock the Notifications











