twitter
    For Quick Alerts
    ALLOW NOTIFICATIONS  
    For Daily Alerts

    'ಪೊಗರು' ಹಿನ್ನೆಲೆಯಲ್ಲಿ ಸಿನಿಮಾ ಹಳವಂಡಗಳ ಪಕ್ಷಿನೋಟ

    By ಫಿಲ್ಮೀಬೀಟ್ ಡೆಸ್ಕ್
    |

    'ಪೊಗರು' ಸಿನಿಮಾ ಇದೀಗ ಬಹು ಚರ್ಚೆಯಲ್ಲಿದೆ. ಸಿನಿಮಾದ ಕೆಲವು ದೃಶ್ಯಗಳಲ್ಲಿ ಬ್ರಾಹ್ಮಣ ಸಮುದಾಯವನ್ನು ಅವಹೇಳನ ಮಾಡಲಾಗಿದೆ ಎಂದು ಆರೋಪಿಸಲಾಗಿದ್ದು, ಚಿತ್ರತಂಡ ಈ ಬಗ್ಗೆ ಬಹಿರಂಗ ಕ್ಷಮೆ ಕೇಳಿದ್ದಲ್ಲದೆ, ಆ ದೃಶ್ಯಗಳನ್ನು ಕತ್ತರಿಸುವುದಾಗಿ ಹೇಳಿದೆ.

    ಸಿನಿಮಾ ಆಗಲಿ ನಿಜಜೀವನವಾಗಲಿ ಯಾವುದೇ ಸಮುದಾಯವನ್ನು ಅವಹೇಳನ ಮಾಡುವ ಅಧಿಕಾರ ಸಂವಿಧಾನ ಯಾರಿಗೂ ನೀಡಿಲ್ಲ. ಅಂತೆಯೇ ಈಗ 'ಪೊಗರು' ಸಿನಿಮಾ ತಂಡ ತಪ್ಪಿಗೆ ಕ್ಷಮೆ ಕೋರಿದೆ. ಆದರೆ ನಮ್ಮ ಸಿನಿಮಾಗಳಲ್ಲಿ ಸಮುದಾಯಕ್ಕೆ ಅವಮಾನವಾದಾಗ ವ್ಯಕ್ತವಾಗುವ ಈ ಆಕ್ರೋಶ 'ಮಾನವೀಯತೆ'ಗೆ ಅವಹೇಳನ ಆದಾಗ ವ್ಯಕ್ತವಾಗುವುದಿಲ್ಲ ಎಂಬುದು ಗಮನಿಸಬೇಕಾದ ಅಂಶ.

    'ಪೊಗರು' ಸಿನಿಮಾವನ್ನೇ ಉದಾಹರಣೆಯಾಗಿ ತೆಗೆದುಕೊಳ್ಳುವುದಾದರೆ ಇದೇ ಸಿನಿಮಾದ ಹಾಡಿನಲ್ಲಿ ಮಹಿಳೆಯನ್ನು ನಿಂದಿಸುವ, ಕಾಡಿಸುವ, ಪೀಡಿಸುವ, ಬಹಿರಂಗವಾಗಿ ಧಮ್ಕಿ ಹಾಕುವ ಸನ್ನಿವೇಶಗಳಿವೆ. ಸಿನಿಮಾದಲ್ಲಿಯೂ ಇದೇ ಮಾದರಿಯ ಕೆಲವು ಸನ್ನಿವೇಶಗಳಿವೆ. ಆದರೆ ಆ ಬಗ್ಗೆ ಸಮುದಾಯದ ವಿಷಯಕ್ಕೆ ವ್ಯಕ್ತವಾದಂಥಹಾ ಆಕ್ರೋಶ ವ್ಯಕ್ತವಾಗಲಿಲ್ಲ. (ಈ ಬಗ್ಗೆ 'ಫಿಲ್ಮೀಬೀಟ್ ಕನ್ನಡ' ಸಿನಿಮಾ ಬಿಡುಗಡೆಗೆ ಮುಂಚೆಯೇ ವರದಿ ಮಾಡಿತ್ತು. ಬೆದರಿಕೆ ಕರೆಗಳ ಮೂಲಕ ನಮ್ಮ ದನಿ ಅಡಗಿಸುವ ವಿಫಲ ಪ್ರಯತ್ನಗಳೂ ನಡೆದವು).

    ರಾಶಿ-ರಾಶಿ ಉದಾಹರಣೆಗಳು ಸಿಗುತ್ತವೆ

    ರಾಶಿ-ರಾಶಿ ಉದಾಹರಣೆಗಳು ಸಿಗುತ್ತವೆ

    ನಮ್ಮ ಸಿನಿಮಾಗಳು ಅದರಲ್ಲಿಯೂ ವಾಣಿಜ್ಯ ಸಿನಿಮಾಗಳಲ್ಲಿ ಬಹುತೇಕ 'ವ್ಯಕ್ತಿ ಅವಹೇಳನ' ಅಥವಾ 'ಮಾನವೀಯತೆಯ ಉಲ್ಲಂಘನೆ' ಇದ್ದೇ ಇರುತ್ತದೆ. ಇದಕ್ಕೆ ರಾಶಿ-ರಾಶಿ ಉದಾಹರಣೆಗಳು ದೊರೆಯುತ್ತವೆ. ನಾಯಕ ಪಾತ್ರಧಾರಿ ಹಾಸ್ಯನಟರನ್ನು ಹಾಸ್ಯದ ಉದ್ದೇಶಕ್ಕೆ (?!) ಕಪಾಳಕ್ಕೆ ಹೊಡೆಯುವುದು, ಬಣ್ಣ, ಆಕಾರ, ಕುಟುಂಬದ ಸ್ಥರ, ಆಹಾರ ಪದ್ಧತಿಯನ್ನು ತಮಾಷೆ ಮಾಡುವ ಹಲವಾರು ದೃಶ್ಯಗಳು ನಮ್ಮ ಸಿನಿಮಾಗಳಲ್ಲಿ ಕಾಣಸಿಗುತ್ತವೆ.

    ವ್ಯಕ್ತಿಯೊಬ್ಬನನ್ನು ವಿನಾಕರಣ ಹೊಡೆಯುವುದು ಒಪ್ಪತಕ್ಕದ್ದೆ?

    ವ್ಯಕ್ತಿಯೊಬ್ಬನನ್ನು ವಿನಾಕರಣ ಹೊಡೆಯುವುದು ಒಪ್ಪತಕ್ಕದ್ದೆ?

    ಯುವ ನಾಯಕನ ಸಿನಿಮಾದಲ್ಲಿ ಹಿರಿಯ ಹಾಸ್ಯನಟ ನಟಿಸುತ್ತಿರುತ್ತಾನೆ, ಆ ಯುವ ನಾಯಕ, ಪರದೆಯ ಮೇಲೆ ತನ್ನ 'ಸುಪೀರಿಯಾರಿಟಿ' ಪ್ರದರ್ಶಿಸಲು ಸುಖಾ-ಸುಮ್ಮನೆ ಹಾಸ್ಯ ನಟನ ಕಪಾಳಕ್ಕೆ ಬಿಗಿಯುತ್ತಾನೆ. ಪರದೆಯ ಮೇಲೂ, ಪರದೆಯ ಹೊರಗೂ ಆ ನಟನ ವ್ಯಕ್ತಿತ್ವಕ್ಕೆ, ಆ ನಟ ನಿರ್ವಹಿಸಿರುವ ಪಾತ್ರಕ್ಕೂ ಅಗೌರವ ತೋರುವ ನಡೆ ಇದು. ಹೀಗೆ ಹಿರಿಯರ ಅಥವಾ ಇನ್ನಾವುದೇ ವ್ಯಕ್ತಿಗೆ ಹಾಸ್ಯದ ಕಾರಣಕ್ಕೆ ಹೊಡೆಯುವುದು ಮಾನವೀಯತೆ ಎನಿಸಿಕೊಳ್ಳಲಾರದು.

    ಬಾಡಿ ಶೇಮಿಂಗ್ ಎಂಬುದು ಸಾಮಾನ್ಯವಾಗಿಬಿಟ್ಟಿದೆ!

    ಬಾಡಿ ಶೇಮಿಂಗ್ ಎಂಬುದು ಸಾಮಾನ್ಯವಾಗಿಬಿಟ್ಟಿದೆ!

    ಬಾಡಿ ಶೇಮಿಂಗ್ ಎಂಬುದು ಸಿನಿಮಾಗಳಲ್ಲಿ ಹಾಸು ಹೊಕ್ಕಾಗಿದೆ. ಪಾತ್ರಗಳು ಮತ್ತೊಂದು ಪಾತ್ರದ ಆಕಾರವನ್ನು ಹಾಸ್ಯ ಮಾಡುವ ನೂರಾರು ಉದಾಹರಣೆಗಳು ಸಿನಿಮಾಗಳಲ್ಲಿ ಸಿಗುತ್ತವೆ. ಇದನ್ನು ಹೊರತುಪಡಿಸಿ, ದಪ್ಪಗಿರುವವರನ್ನು ಬಫೂನ್‌ಗಳಂತೆ ತೋರಿಸುವ, ಕುಬ್ಜರನ್ನು ಹಾಸ್ಯದ ವಸ್ತುಗಳನ್ನಾಗಿ ತೋರಿಸುವ ದೃಶ್ಯಗಳು ಹಳೆಯ ಸಿನಿಮಾಗಳಲ್ಲಿಯೂ ಸಾಕಷ್ಟು ಇವೆ. ಹೀಗೆ ಬಿಂಬಿಸುವುದು ತಪ್ಪು ಎಂದು ನಮ್ಮ ನಿರ್ದೇಶಕರಿಗೂ ಎನಿಸಲಿಲ್ಲ, ಪ್ರಶ್ನಿಸುವ ಸೂಕ್ಷ್ಮವನ್ನು ಪ್ರೇಕ್ಷಕರಾದ ನಾವೂ ಬೆಳೆಸಿಕೊಂಡಿಲ್ಲ.

    ಮಹಿಳೆಯರ ಮೇಲೆ ಹಿಂಸಾಚಾರದ ವೈಭವೀಕರಣ

    ಮಹಿಳೆಯರ ಮೇಲೆ ಹಿಂಸಾಚಾರದ ವೈಭವೀಕರಣ

    ಮಹಿಳೆಯರ ಅವಹೇಳನ ಅಥವಾ ಮಹಿಳೆಯರ ಮೇಲೆ ದಬ್ಬಾಳಿಕೆ ಸಿನಿಮಾಗಳಲ್ಲಿ ಯಥೇಚ್ಛ. ನಾಯಕಿಯನ್ನು ಆಕೆಯ ಇಚ್ಛೆಯ ವಿರುದ್ಧವಾಗಿ ನಾಯಕನೇ ಕಾಡಿಸುವ, ಕಿಡ್ನಾಪ್ ಮಾಡಿ ಪ್ರೀತಿಸುವಂತೆ ಒತ್ತಾಯಿಸುವ, ಬೆದರಿಕೆ ಹಾಕಿ ಪ್ರೀತಿಸುವಂತೆ ಮಾಡುವ, 'ಸೆಕ್ಸಿಸ್ಟ್ ಕಮೆಂಟ್' ಹೊಡೆಯುವ ದೃಶ್ಯಗಳು ರಾಶಿಗಟ್ಟಲೆ ಇವೆ ನಮ್ಮ ಸಿನಿಮಾಗಳಲ್ಲಿ. ನಾಯಕಿಗೆ ಹಿಂಸೆ ಮಾಡುವ ದೃಶ್ಯಗಳನ್ನು ವೈಭವೀಕರಿಸಿ ಹೀಗೆ ಕಾಡಿಸುವುದು, ಪೀಡಿಸುವುದು ಸಾಮಾನ್ಯ ಎಂಬಂತೆ ಬಿಂಬಿಸಿಬಿಟ್ಟಿವೆ ನಮ್ಮ ಸಿನಿಮಾಗಳು. ಓಂ, ಹುಚ್ಚ, ಅಪ್ಪು, ತೆಲುಗಿನ ದೇವದಾಸು, ಅರ್ಜುನ್ ರೆಡ್ಡಿ ಇನ್ನೂ ಹಲವಾರು 'ಪಾಪ್ಯುಲರ್' ಸಿನಿಮಾಗಳನ್ನು ಇಲ್ಲಿ ಉದಾಹರಣೆಯಾಗಿ ನೀಡಬಹುದು.

    ದಕ್ಷಿಣ ಭಾರತ ಸಿನಿಮಾ ಮಂದಿ ತುಸು ಸಹಿಷ್ಣುಗಳು

    ದಕ್ಷಿಣ ಭಾರತ ಸಿನಿಮಾ ಮಂದಿ ತುಸು ಸಹಿಷ್ಣುಗಳು

    ಬಣ್ಣದ ವಿಚಾರದಲ್ಲಿ ದಕ್ಷಿಣ ಭಾರತದ ಸಿನಿಮಾ ಮಂದಿ ಸಹಿಷ್ಣುಗಳೆ. ದಕ್ಷಿಣ ಭಾರತದ ಸಿನಿಮಾಗಳಲ್ಲಿ ವರ್ಣಬೇಧ ಹೆಚ್ಚಾಗಿ ಕಂಡುಬರುವುದಿಲ್ಲ. ಕಪ್ಪು ವರ್ಣದವರನ್ನು ನಾಯಕ-ನಾಯಕಿಯರಾಗಿ ಇಲ್ಲಿನ ಪ್ರೇಕ್ಷಕರು ಒಪ್ಪಿಕೊಂಡು ಮೆರೆಸಿದ್ದಾರೆ. ಆದರೆ ಬಾಲಿವುಡ್ ಸಿನಿಮಾಗಳಲ್ಲಿ ವರ್ಣ ಅಸಹಿಷ್ಣುತೆ ಹೆಚ್ಚಿಗೆ ಕಂಡುಬರುತ್ತದೆ. ಇತ್ತೀಚೆಗೆ ಇದು ಕಡಿಮೆ ಆಗಿದೆಯಾದರೂ, ದಶಕದ ಹಿಂದೆ, ಕಪ್ಪಗಿರುವವರನ್ನು ಹಾಸ್ಯನಟರಂತೆ, ಬಫೂನ್‌ಗಳಂತೆ ಚಿತ್ರಿಸುವ, ಸಿನಿಮಾಗಳಲ್ಲಿ ಅವರಿಗೆ ಕಾಲೂ ಎಂದು ಹೆಸರಿಡುವ, ಕಪ್ಪಗಿರುವವರನ್ನೇ ಹುಡುಕಿ ವಿಲನ್‌ಗಳಾಗಿ ಮಾಡುವ ಪರಿಪಾಠ ಹೆಚ್ಚಿಗಿತ್ತು.

    ಸೂಕ್ಷ್ಮತೆ ರೂಢಿಸಿಕೊಳ್ಳುವುದು ಯಾವಾಗ?

    ಸೂಕ್ಷ್ಮತೆ ರೂಢಿಸಿಕೊಳ್ಳುವುದು ಯಾವಾಗ?

    ಜಗತ್ತೇ ಮಾನವ ಸೂಕ್ಷ್ಮತೆಯನ್ನು ರೂಢಿಸಿಕೊಳ್ಳುತ್ತಿದೆ. ಭಾರತವು ಇದಕ್ಕೆ ನಿಧಾನಕ್ಕೆ ಆದರೂ ತೆರೆದುಕೊಳ್ಳುತ್ತಿದೆ. ಸಮಾಜದ ಕನ್ನಡಿ ಎನಿಸಿಕೊಂಡ ಸಿನಿಮಾಗಳು ಮೊದಲಿಗೆ ಮಾನವ ಸೂಕ್ಷ್ಮತೆಯನ್ನು ಬೆಳೆಸಿಕೊಳ್ಳಬೇಕಿದೆ. ಸಮುದಾಯದ ಅವಹೇಳನವನ್ನು ಪ್ರಜ್ಞಾಪೂರ್ವಕವಾಗಿ ತಪ್ಪಿಸುವ ಜೊತೆಗೆ ಅತ್ಯಂತ ಮುಖ್ಯವಾದ ಮಾನವ ಸೂಕ್ಷ್ಮತೆಯನ್ನು ಸಹ ರೂಢಿಸಿಕೊಳ್ಳಬೇಕಿದೆ ನಮ್ಮ ಸಿನಿಮಾ ನಿರ್ದೇಶಕರು, ನಟ-ನಟಿಯರು.

    English summary
    Many of our movies were insensible. Most of the movies promote body shaming, women discrimination, racism and other social evils.
    Friday, February 26, 2021, 15:51
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X