'KGF' ರಾಕಿ ತರ ಹಣ ಮಾಡೋಕೆ ಮನೆ ಬಿಟ್ಟು ಮುಂಬೈ ಸೇರಿದ ಬಾಲಕ; ಬಳಿಕ ಏನಾಯ್ತು?
ಸಿನಿಮಾ ಬಹಳ ಪವರ್‌ಫುಲ್ ಮಾಧ್ಯಮ. ಸಿನಿಮಾಗಳು ಜನರ ಮೇಲೆ ಪರಿಣಾಮ ಬೀರುತ್ತದೆ. ಅದೇ ಕಾರಣಕ್ಕೆ ಸಿನಿಮಾವನ್ನು ಒಳ್ಳೆ ರೀತಿಯಲ್ಲಿ ಬಳಸಿಕೊಳ್ಳಬೇಕು, ಸಮಾಜಕ್ಕೆ ಕೆಟ್ಟ ಸಂದೇಶ ಕೊಡುವಂತೆ ತೋರಿಸಬಾರದು ಎನ್ನುವ ಕಳಕಳಿ ಇದೆ. ಯಶ್ ನಟನೆಯ 'ಕೆಜಿಎಫ್' ಸಿನಿಮಾ ನೋಡಿ ಬಾಲಕನೊಬ್ಬ ಮನೆಬಿಟ್ಟು ಮುಂಬೈ ಸೇರಿದ ಕಥೆ ಈಗ ಬೆಳಕಿಗೆ ಬಂದಿದೆ.
2023ರಲ್ಲಿ 'ಕೆಜಿಎಫ್' ಸಿನಿಮಾ ನೋಡಿ ಪ್ರೇರಣೆಗೊಂಡು ಹಣ ಮಾಡಬೇಕು ಎಂದು 17 ವರ್ಷದ ಕಲಬುರಗಿ ಜಿಲ್ಲೆಯ ಬಾಲಕನೊಬ್ಬ ಮನೆಬಿಟ್ಟು ಮುಂಬೈ ಸೇರಿದ್ದನು. ಪೊಲೀಸ್ ಠಾಣೆಗೆ ದೂರು ನೀಡಿದರೂ ಮಗನನ್ನು ಹುಡುಕಲ ಸಾಧ್ಯವಾಗಲಿಲ್ಲ. ಕೊನೆಗೆ ಆಧಾರ್ ಓಟಿಪಿಗಾಗಿ ಮನೆಗೆ ಫೋನ್ ಮಾಡಿದಾಗ ತಂದೆ ಮಗನ ಮನವೊಲಿಸಿ ಮನೆಗೆ ವಾಪಸ್ ಕರೆದುಕೊಂಡು ಬಂದಿದ್ದಾರೆ. ಕಲಬುರಗಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಬಾಲಕನ ತಂದೆ ಫೀನಿಕ್ಸ್ ಈ ಬಗ್ಗೆ ಮಾಹಿತಿ ನೀಡಿದ್ದಾರೆ.

ಕಲಬುರಗಿಯ ಕಾವೇರಿ ನಗರಲ್ಲಿ ಫಿನಿಕ್ಸ್ ಮಸಾಲೆ ಪದಾರ್ಥ ವ್ಯಾಪಾರ ಮಾಡಿಕೊಂಡಿದ್ದಾರೆ. ಒಂದೂವರೆ ವರ್ಷದ ಹಿಂದೆ ಆಟವಾಡಲು ಹೋಗಿದ್ದ ಮಗ ಮನೆಗೆ ವಾಪಸ್ ಬಂದಿರಲಿಲ್ಲ. ಕೂಡಲೇ ಚೌಕ್ ಪೊಲೀಸ್ ಠಾಣೆಗೆ ದೂರು ನೀಡಿ ಮಗನಿಗಾಗಿ ಹುಡುಕಾಟ ನಡೆಸಿದೆ. ಆದರೆ ಆತ ಪತ್ತೆ ಆಗಿರಲಿಲ್ಲ. ತಾಯಿ ಇಲ್ಲದ ಮಗ ಎಂದು ಬಹಳ ಕಾಳಜಿಯಿಂದ ಅವನನ್ನು ಸಾಕುತ್ತಿದ್ದೆ. ಮನೆಯಲ್ಲಿ ಬಡತನ. ಹಾಗಾಗಿ ಹೇಗಾದರೂ ಮಾಡಿ ಹೆಚ್ಚು ಹಣ ಸಂಪಾದಿಸಬೇಕು ಎಂದು 'ಕೆಜಿಎಫ್' ಚಿತ್ರದ ನಾಯಕ ರಾಕಿ ರೀತಿ ಮುಂಬೈಗೆ ಹೋಗಿ ಹಣ ಸಂಪಾದಿಸುವ ಪ್ರಯತ್ನ ಮಾಡಿದ್ದ ಎಂದು ಫಿನಿಕ್ಸ್ ಮಾಹಿತಿ ನೀಡಿದ್ದಾರೆ.
ಗಾಣಗಾಪುರದ ರೈಲು ನಿಲ್ದಾಣದಿಂದ ರೈಲು ಏರಿ ಮಗ ಮುಂಬೈ ಸೇರಿದ್ದಾನೆ. ಅಲ್ಲಿ ಕನ್ನಡಿಗರೊಬ್ಬರ ಹೋಟೆಲ್‌ನಲ್ಲಿ ಕೆಲಸಕ್ಕೆ ಸೇರಿದ್ದ. ತಿಂಗಳಿಗೆ 12 ಸಾವಿರ ರೂಪಾಯಿ ಸಂಬಳ ಎಂದು ಫೀನಿಕ್ಸ್ ಹೇಳಿದ್ದಾರೆ. "ಹಣವನ್ನು ಬ್ಯಾಂಕ್ ಖಾತೆಗೆ ಹಾಕಲು ಹೊಸದಾಗಿ ಖಾತೆ ತೆರೆಯಬೇಕಿತ್ತು. ಅದಕ್ಕಾಗಿ ಬೆಂಗಳೂರಿನಲ್ಲಿದ್ದ ಸಹೋದರಿ ಮನೆಗೆ ಹೋಗಿ ಆಧಾರ್ ಕಾರ್ಡ್ ಜೆರಾಕ್ಸ್ ತೆಗೆದುಕೊಂಡಿದ್ದಾನೆ. ಆಧಾರ್ ಕಾರ್ಡ್‌ಗೆ ಲಿಂಕ್ ಆಗಿದ್ದ ನನ್ನ ಫೋನ್ ನಂಬರ್ ಬದಲಿಸಲು ಪ್ರಯತ್ನಿಸಿ ಅರ್ಜಿ ಸಲ್ಲಿಸಿದ್ದಾನೆ. ಈ ವೇಳೆ ನನ್ನ ನಂಬರ್‌ಗೆ ಓಟಿಪಿ ಬಂದಿತ್ತು. ಆ ಓಟಿಪಿ ಸಂಖ್ಯೆ ಕೇಳಲು ಫೋನ್ ಮಾಡಿದ್ದ. 16 ತಿಂಗಳ ಬಳಿಕ ನನ್ನ ಜೊತೆ ಮಾತನಾಡಿದ್ದ. ನಂತರ ಆತನ ಮನವೊಲಿಸಿ ಮನೆಗೆ ಕರೆದುಕೊಂಡು ಬಂದಿದ್ದೀನಿ" ಎಂದು ವಿವರಿಸಿದ್ದಾರೆ.

ಪ್ರಶಾಂತ್ ನೀಲ್ ನಿರ್ದೇಶನದ 'ಕೆಜಿಫ್' ಸಿನಿಮಾ ಎರಡು ಭಾಗಗಳಾಗಿ ತೆರೆಗೆ ಬಂದಿತ್ತು. ಚಿತ್ರದ ಮೊದಲ ಭಾಗದಲ್ಲಿ ನಾಯಕ ರಾಕಿ(ಯಶ್) ಹಿನ್ನೆಲೆ ಕಟ್ಟಿಕೊಡಲಾಗಿತ್ತು. ತಾಯಿ ಸಾಯುವ ಕೊನೆ ಗಳಿಗೆಯಲ್ಲಿ ಆಕೆ ಮಗನಿಗೆ 'ನೀನು ಶ್ರೀಮಂತನಾಗು, ಪ್ರಬಲನಾಗು' ಅಂತ ಹೇಳಿರುತ್ತಾಳೆ. ಅಮ್ಮನ ಮಾತನ್ನು ಈಡೇರಿಸಲು ಪವರ್ ಬೇಕು ಅಂತ ಬಾಲಕ ರಾಕಿ ಮುಂಬೈ ಸೇರುತ್ತಾನೆ. ಅಲ್ಲಿ ಬೂಟ್ ಪಾಲಿಶ್ ಮಾಡುತ್ತಲೇ ತನ್ನದೇ ಬ್ರ್ಯಾಂಡ್ ಸೃಷ್ಟಿಸಿಕೊಳ್ಳುತ್ತಾನೆ. ಡಾನ್ ಆಗುವ ಕನಸು ಕಂಡ ರಾಕಿ ಒಂದು ಸುಫಾರಿ ಪಡೆದು ಬೆಂಗಳೂರಿಗೆ ಬರ್ತಾನೆ. ಅಲ್ಲಿಂದ ಅವನು ಕೆಜಿಎಫ್ ನರಾಚಿಗೆ ಹೋಗುತ್ತಾನೆ.
ರಾಜಾ ಕೃಷ್ಣಪ್ಪ ಬೈರ್ಯ ಮುಂದೆ ರಾಕಿ ಭಾಯ್ ಆಗಿ ದೊಡ್ಡ ಮಾಫಿಯಾ ಡಾನ್ ಆಗಿ ಬೆಳೆಯುತ್ತಾನೆ. ಪ್ರಪಂಚದಲ್ಲಿರುವ ಚಿನ್ನ ಎಲ್ಲವೂ ನನಗೆ ಬೇಕು ಎಂದು ಹಠಕ್ಕೆ ಬೀಳುತ್ತಾನೆ. ಮುಂದೆ ಅವನ ಜೀವನದಲ್ಲಿ ಏನೆಲ್ಲಾ ಆಗುತ್ತದೆ ಎನ್ನುವುದು ಇನ್ನುಳಿದ ಕಥೆ.


Click it and Unblock the Notifications











