ಉಯ್ಯಾಲೆ ಚಿತ್ರದಲ್ಲಿನ ಆ ಸನ್ನಿವೇಶ ಬೇಡ ಎಂದಿದ್ದೇಕೆ ಡಾ.ರಾಜ್ ? ನಿರ್ದೇಶಕರ ಜೊತೆ ಭಿನ್ನಾಭಿಪ್ರಾಯಕ್ಕೆ ಕಾರಣವೇನು ?
ಡಾ.ರಾಜ್ ಕುಮಾರ್ ಕೇವಲ ಶ್ರೇಷ್ಠ ನಾಯಕ- ಅತ್ಯುತ್ತಮ ಗಾಯಕ ಮಾತ್ರ ಆಗಿರಲಿಲ್ಲ. ನಿರ್ದೇಶಕರ ನಟ ಕೂಡ ಆಗಿದ್ದರು. ನಿರ್ಮಾಪಕರ ಕಷ್ಟ-ನಷ್ಟವನ್ನ ಅರಿತು ಕೆಲಸವನ್ನೂ ಮಾಡುತ್ತಿದ್ದರು. ಇಷ್ಟೇ ಅಲ್ಲ ತಮ್ಮಿಂದ ತಪ್ಪಾಗಿದೆ ಎಂಬ ಭಾವ ರಾಜ್ ಅವರಲ್ಲಿ ಮೂಡಿದಾಗ, ಹಿರಿಯರು, ಕಿರಿಯರೆನ್ನದೆ ಕ್ಷಮಿಸಿ ಎನ್ನುವ ಮನೋಧರ್ಮ ಡಾ.ರಾಜಕುಮಾರ್ ಅವರದಾಗಿತ್ತು. ಇದಕ್ಕೆ ಅತ್ಯುತ್ತಮ ಉದಾಹರಣೆ ಉಯ್ಯಾಲೆ ಚಿತ್ರದ ಚಿತ್ರೀಕರಣದ ಸಂದರ್ಭ
ಹೌದು, ಉಯ್ಯಾಲೆ.. 1969ರಲ್ಲಿ ತೆರೆಗೆ ಬಂದ ಸಿನಿಮಾ. ಎನ್. ಲಕ್ಷ್ಮೀನಾರಾಯಣ್ ನಿರ್ದೇಶನದ ಈ ಚಿತ್ರಕ್ಕೆ ಚದುರಂಗ ಕಥೆ ಬರೆದಿದ್ದರು. ಕಲ್ಪನಾ, ಹರಿಣಿ ಬಾಲಕೃಷ್ಣ, ಅಶ್ವಥ್, ಬಾಲಕೃಷ್ಣ, ಬೇಬಿ ಗಿರಿಜಾ, ಡಾ.ರಾಜ್ ಕುಮಾರ್ ಅವರ ಜೊತೆ ಚಿತ್ರದಲ್ಲಿದ್ದರು. ವಿಶೇಷ ಅಂದರೆ.. ಯಾವತ್ತು, ಯಾವುದಕ್ಕೂ ಚಕಾರವೆತ್ತದ ಡಾ.ರಾಜ್, ಉಯ್ಯಾಲೆ ಚಿತ್ರದ ಸನ್ನಿವೇಶವೊಂದನ್ನ ಪ್ರಶ್ನಿಸಿದ್ದರು. ಇದರಿಂದ ಚಿತ್ರದನಿರ್ದೇಶಕ ಎನ್.ಲಕ್ಷ್ಮೀನಾರಾಯಣ್ ಅವರ ಜೊತೆಗೂ ಸಣ್ಣ ಭಿನ್ನಾಭಿಪ್ರಾಯವೊಂದು ತಲೆದೋರಿತ್ತು.

ಅಸಲಿಗೆ ಅದು ಮಹಡಿಯಿಂದ ರಾಜಕುಮಾರ್ ನಿಧಾನವಾಗಿ ಮೆಟ್ಟಿಲು ಇಳಿದು ಹಾಲ್‌ಗೆ ಬಂದು ನಿಂತು ಯೋಚಿಸುವ ಸನ್ನಿವೇಶ. ಒಂದೇ ಶಾಟ್‌ನಲ್ಲಿ ತೆಗೆಯಬೇಕೆಂದು ಲಕ್ಷ್ಮೀನಾರಾಯಣ್ ಅವರ ನಿರ್ಧಾರ. ಆಗ ರಾಜಕುಮಾರ್ ತುಂಬಾ ಎಳೆದಂತೆ ಆಗುತ್ತೆ, ಒಂದೇ ಶಾಟ್ ಬೇಡ ಅಲ್ವ? ಎಂದು ಹೇಳಿದ್ದರು . ಆದರೆ, ರಾಜ್ ಮಾತನ್ನ ಚಿತ್ರದ ಸೂತ್ರಧಾರ ಲಕ್ಷ್ಮೀನಾರಾಯಣ್ ಸುತಾರಾಂ ಒಪ್ಪಲಿಲ್ಲ. ಬದಲಿಗೆ ಸನ್ನಿವೇಶ ಚಿತ್ರಕ್ಕೆ ಅಗತ್ಯ ಇದೆ, ಸನ್ನಿವೇಶದಲ್ಲಿ ಬದಲಾವಣೆ ಮಾಡಲು ಸಾಧ್ಯ ಇಲ್ಲ ಎಂದು ದೃಢವಾಗಿ ಹೇಳಿದ್ದರು.
ಇದರಿಂದ ಕೆಲ ಕಾಲ ವಿಚಲಿತಗೊಂಡ ಡಾ.ರಾಜ್, ಮರು ಮಾತನಾಡದೇ ರೂಮ್‌ವೊಂದಕ್ಕೆ ತೆರಳಿ ಮೌನವಾಗಿ ಒಂದೈದು ನಿಮಿಷ ಕುಳಿತು ಬಿಟ್ಟಿದ್ದರು. ಆ ನಂತರ ಬಂದು ಚಿತ್ರೀಕರಣದಲ್ಲಿ ಭಾಗಿಯಾಗಿದ್ದರು. ತಮ್ಮ ಕಲ್ಪನೆಯಂತೆಯೇ ಲಕ್ಷ್ಮೀನಾರಾಯಣ್ ಆ ಸನ್ನಿವೇಶವನ್ನ ಚಿತ್ರೀಕರಿಸಿದರು ಕೂಡ. ಆ ನಂತರ.. ಚಿತ್ರದ ಚಿತ್ರೀಕರಣ ಮುಕ್ತಾಯವಾಯಿತು. ಚಿತ್ರ ಬಿಡುಗಡೆಯ ಬಾಗಿಲಿಗೆ ಬಂದು ನಿಂತಿತು. ಬಿಡುಗಡೆಗೆ ಮುನ್ನ ಮೊದಲ ಪ್ರದರ್ಶನದಲ್ಲಿ ಕೂತು ಚಿತ್ರವನ್ನ ನೋಡಿದ ಡಾ.ರಾಜ್ ಕುಮಾರ್, ಒಂದು ಕ್ಷಣ ಮೂಕವಿಸ್ಮಿತರಾಗಿದ್ದರು. ಲಕ್ಷ್ಮೀನಾರಾಯಣ್ ಅವರ ಬಳಿ ಬಂದು ಅವತ್ತು ಒಂದೇ ಶಾಟ್ ಬೇಡ ಅಂತ ನಾನು ಹೇಳಿದ್ದು ತಪ್ಪಾಯ್ತು. ನಿಮ್ಮ ಕಲ್ಪನೆ ಸರಿಯಾಗಿದೆ ಅಂತ ಚಿತ್ರ ನೋಡಿದ ಮೇಲೆ ಮನವರಿಕೆ ಆಯ್ತು ಎಂದರು.

ಈ ಕಾರಣಕ್ಕೆ ಅವರವರ ಕೆಲ್ಸ ಅವರವರದು ಅಂತ ನಾವು ಸುಮ್ಮನಿರಬೇಕು. ಕೊನೇಲಿ ಸಿನಿಮಾ ಹೇಗ್ ಬರುತ್ತೆ ಅಂತ ನಿರ್ದೇಶಕರಿಗೆ ಗೊತ್ತಿರುತ್ತೆ. ನಾವು ಸುಮ್ನೆ ಅಭಿನಯ ಮಾಡ್ಬೇಕು ಅಷ್ಟೆ ಎಂದು ಹೇಳಿದ್ದರು ಡಾ.ರಾಜ್ ಕುಮಾರ್. ಈ ವಿಷಯವನ್ನು ಸ್ವತಃ ಎನ್.ಲಕ್ಷ್ಮೀನಾರಾರಾಯಣ್ ಅವರು ಡಾ.ಬರಗೂರು ರಾಮಚಂದ್ರಪ್ಪ ಅವರಿಗೆ ಹೇಳಿದ್ದರು. ಡಾ. ರಾಜಕುಮಾರ್ ಅವರು ಕೂಡ ಈ ಪ್ರಸಂಗವನ್ನು ಕಾಲಾನು ನಂತರ ಬರಗೂರು ಅವರಿಗೆ ವಿವರಿಸಿದ್ದರು. ನಾವು ಹೀರೊಗಳು ಅಂತ ಏನೇನೋ ಯೋಚಿಸಬಾರದು. ಕತೆ ಮುಖ್ಯ ಎಂದು ಹೇಳಿದ್ದರು ಡಾ.ರಾಜ್ ಕುಮಾರ್. ಬರಗೂರು ಅವರು ಬರೆದಿರುವ ಜನಪದ ನಾಯಕ ಡಾ. ರಾಜ್ ಕುಮಾರ್ ಎಂಬ ಅಮೂಲ್ಯ ಕೃತಿಯಲ್ಲಿ ಈ ಘಟನೆಯ ಉಲ್ಲೇಖ ಇದೆ.


Click it and Unblock the Notifications











