For Quick Alerts
  ALLOW NOTIFICATIONS  
  For Daily Alerts

  'ಬಂಧನ' ಸಿನಿಮಾದ ಬಗ್ಗೆ ಇಲ್ಲಿವೆ ಕುತೂಹಲಕಾರಿ ಮಾಹಿತಿ

  By ರವೀಂದ್ರ ಕೊಟಕಿ
  |

  ಭಾರತೀಯ ಸಿನಿಮಾ ರಂಗದಲ್ಲಿ ಟ್ರ್ಯಾಜಿಡಿ ಸಿನಿಮಾಗಳನ್ನು ಪರಿಗಣನೆಗೆ ತೆಗೆದುಕೊಂಡರೆ ಮೊಟ್ಟಮೊದಲನೆಯದಾಗಿ ಬರುವುದು 'ದೇವದಾಸ್'. ಶರತ್ ಚಂದ್ರ ಚಟ್ಟೋಪಾಧ್ಯಾಯ ಅವರ ಬಂಗಾಳಿ ಕಾದಂಬರಿ 'ದೇವದಾಸ್' ಆಧಾರಿತ ಅದೇ ಹೆಸರಿನ ಚಿತ್ರ ಹಲವು ಭಾಷೆಗಳಲ್ಲಿ ಹಲವು ಬಾರಿ ತೆರೆಕಂಡಿದೆ. 1928 ರಲ್ಲಿ ಮೊದಲ ಬಾರಿಗೆ ಮೂಕಿ ಸಿನಿಮಾ 'ದೇವದಾಸ್' ತೆರೆಗೆ ಬಂತು.

  ಆನಂತರ ಬಂಗಾಳಿ,ಅಸ್ಸಾಮಿ, ತೆಲುಗು, ಹಿಂದಿ, ಉರ್ದು, ತಮಿಳು, ಮಲಯಾಳಂನಲ್ಲಿ ಅನೇಕ ಬಾರಿ ನಿರ್ಮಾಣವಾಯಿತು. ಅದರಲ್ಲೂ ವಿಶೇಷವಾಗಿ ಹಿಂದಿಯಲ್ಲಿ ದಿಲೀಪ್ ಕುಮಾರ್, ತೆಲುಗಿನಲ್ಲಿ ಅಕ್ಕಿನೇನಿ ನಾಗೇಶ್ವರರಾವ್ ದೇವದಾಸ್ ಪಾತ್ರಕ್ಕೆ ಕೇರಾಫ್ ಅಡ್ರೆಸ್ ಆಗಿಬಿಟ್ಟರು. ಟ್ರ್ಯಾಜಿಡಿ ಸಿನಿಮಾಗಳ ಚರಿತ್ರೆಯಲ್ಲಿ ದೇವದಾಸ್ ಒಂದು ವಿಶಿಷ್ಟವಾದ ಚಿತ್ರ. ಹಲವು ಭಾಷೆಗಳಲ್ಲಿ ನಿರ್ಮಾಣವಾದ ಈ ಚಿತ್ರ ಕನ್ನಡದಲ್ಲಿ ಮಾತ್ರ ನಿರ್ಮಾಣ ಆಗಲೇ ಇಲ್ಲ.

  ಆದರೆ ಅದೊಂದು ಚಿತ್ರ ಕನ್ನಡ ಸಿನಿ ಇತಿಹಾಸದಲ್ಲೇ 'ದೇವದಾಸ್' ಚಿತ್ರದಂತೆ ಕ್ಲಾಸ್ ಟ್ರ್ಯಾಜಿಡಿ ಎಂಡಿಂಗ್ ,ಎವರ್ ಗ್ರೀನ್ ಚಿತ್ರವಾಗಿ ಕನ್ನಡದ ಆಲ್ ಟೈಮ್ ಟ್ರ್ಯಾಜಿಡಿ ಸಿನಿಮಾಗಳಲ್ಲಿ ಒಂದು ಕ್ಲಾಸ್ ಚಿತ್ರವಾಗಿ ಇಂದಿಗೂ ಜನಪ್ರಿಯವಾಗಿದೆ. ಅದೇ ರಾಜೇಂದ್ರಸಿಂಗ್ ಬಾಬು ನಿರ್ದೇಶನದಲ್ಲಿ ವಿಷ್ಣುವರ್ಧನ್ ಸುಹಾಸಿನಿ ಮುಖ್ಯಭೂಮಿಕೆಯಲ್ಲಿ ಅಭಿನಯಿಸಿದ 'ಬಂಧನ'.

  'ಬಂಧನ' ಚಿತ್ರ ಮೂಲತಃ ಕಾದಂಬರಿಗಾರ್ತಿ ಉಷಾ ನವರತ್ನರಾಮ್ ಅವರ 'ಬಂಧನ' ಕಾದಂಬರಿ ಆಧಾರಿತ ಚಿತ್ರ. ಈ ಕಾದಂಬರಿ ಹೋದಿದ ನಿರ್ದೇಶಕ ನಿರ್ಮಾಪಕ ರಾಜೇಂದ್ರ ಸಿಂಗ್ ಬಾಬು ಅವರಿಗೆ ಇದು ಕನ್ನಡದಲ್ಲಿ 'ದೇವದಾಸ್' ಚಿತ್ರದಂತೆ ಒಂದು ಕ್ಲಾಸಿಕ್ ಸಿನಿಮಾ ಆಗುವ ಸಾಧ್ಯತೆಗಳಿವೆ. ಜೊತೆಗೆ ಇದನ್ನು ತನ್ನ ನೆಚ್ಚಿನ ನಾಯಕನಟನಾದ ವಿಷ್ಣುವರ್ಧನ್ ಅವರ ಕೈಯಲ್ಲಿ ಮಾಡಿಸಬೇಕು ಅಂತ ಆಗಲೇ ಸಿಂಗ್ ಬಾಬು ತೀರ್ಮಾನಕ್ಕೆ ಬಂದು ಬಿಡುತ್ತಾರೆ. ಅದು ಅಲ್ಲದೆ ರಾಜೇಂದ್ರಸಿಂಗ್ ಬಾಬು ಅವರಿಗೆ ವಿಷ್ಣುವರ್ಧನ್ ಅವರನ್ನು ಮಾಸ್ ಮತ್ತು ಆಕ್ಷನ್ ಇಮೇಜ್ ಇಂದ ಹೊರತಾದ ಒಂದು ರೋಮ್ಯಾಂಟಿಕ್ ಪಾತ್ರದಲ್ಲಿ ತೋರಿಸುವ ಇಚ್ಛೆ ಹೊಂದಿದ್ದರು.

  ಈ ಕಾದಂಬರಿ ಓದಿದ ಅವರಿಗೆ ಅದರೊಳಗಿನ ಭಾವನಾತ್ಮಕ ಕಥಾನಕ ಇನ್ನಿಲ್ಲದಷ್ಟು ಇಷ್ಟವಾಯಿತು. ಇದೇ ಚಿತ್ರ ವಿಷ್ಣುವರ್ಧನ್ ಅವರಿಗೆ ಸರಿಯಾದದ್ದು ಅಂತ ನಿರ್ಣಯಿಸಿದ ಬಾಬು ಆ ಕಾದಂಬರಿಯ ಹಕ್ಕುಗಳನ್ನು ಪಡೆಯಲು ಮುಂದಾದರು. ಆದರೆ ಆ ಹಕ್ಕುಗಳು ಆಗಾಗಲೇ ಕಲ್ಪನಾ ಅವರ ಬಳಿಯಲ್ಲಿ ಇತ್ತು. ಬಾಬು ಅವರ ಕೋರಿಕೆಯ ಮೇರೆಗೆ ಕಲ್ಪನಾ ಸಾಯುವ ಕೆಲವೇ ದಿನಗಳ ಮೊದಲು ಅದರ ಹಕ್ಕುಗಳನ್ನು ಬಾಬು ಅವರಿಗೆ ಹಸ್ತಾಂತರಿಸಿದರು. ಹೀಗೆ 'ಬಂಧನ' ಹಕ್ಕುಗಳು ಬಾಬು ಪಾಲಿಗೆ ಒಲಿಯಿತು.

  ವಿಷ್ಣು ಅವರಿಗೆ ರೋಮ್ಯಾಂಟಿಕ್ ಕಥೆ?

  ವಿಷ್ಣು ಅವರಿಗೆ ರೋಮ್ಯಾಂಟಿಕ್ ಕಥೆ?

  ವಿಷ್ಣುವರ್ಧನ್ ಅದೇ ಸಮಯದಲ್ಲಿ ಆಕ್ಷನ್ ಚಿತ್ರಗಳ ಮೂಲಕ ಜನಪ್ರಿಯತೆಯ ಉತ್ತುಂಗದಲ್ಲಿದ್ದರು.

  ವಿಷ್ಣು ಅವರ ಮಾಸ್ ಇಮೇಜಿಗೆ ತಕ್ಕ ಕಥೆಗಳೊಂದಿಗೆ ನಿರ್ದೇಶಕರು, ನಿರ್ಮಾಪಕರು ವಿಷ್ಣು ಅವರ ಮನೆ ಬಾಗಲಿಗೆ ಕಾಲ್ ಶೀಟ್ ಗಾಗಿ ತಡಕಾಡುತ್ತಿದ್ದರು. ಇಂತಹ ಸಂದರ್ಭದಲ್ಲಿ ವಿಷ್ಣು ಅವರ ಆತ್ಮೀಯ ಗೆಳೆಯರಾದ ಸಿಂಗ್ ಬಾಬು ಅವರಿಗೆ ಈ ರೋಮ್ಯಾಂಟಿಕ್ ಟ್ರ್ಯಾಜಿಡಿ ಚಿತ್ರಕ್ಕೆ ಗ್ರೀನ್ ಸಿಗ್ನಲ್ ಕೊಟ್ಟಾಗ 'ಬಾಬು ಅವರಿಗೆ ಎಲ್ಲೋ ತಲೆಕೆಟ್ಟಿದೆ. ವಿಷ್ಣು ಅಂತಹ ನಟನೊಂದಿಗೆ ಇಂತಹ ಚಿತ್ರ ಮಾಡುವುದು ಎಷ್ಟರ ಮಟ್ಟಿಗೆ ಸರಿ?'ಅಂತ ಗಾಂಧಿನಗರದ ಪಂಡಿತರು ಮಾತನಾಡಿಕೊಂಡರು. ವಿಷ್ಣುವರ್ಧನ್ ಅವರನ್ನು ಡಾ. ಹರೀಶ್ ಪಾತ್ರದಲ್ಲಿ ಪೂರ್ಣವಾಗಿ ಕಂಡಿದ್ದ ಬಾಬು ಅವರು ಇದರ ಬಗ್ಗೆ ಯಾವುದೇ ರೀತಿಯಲ್ಲಿ ತಲೆ ಕೆಡಿಸಿಕೊಳ್ಳದೆ ತಮ್ಮದೇ ನಿರ್ಮಾಣ ಸಂಸ್ಥೆಯಾದ ರೋಹಿಣಿ ಪಿಚ್ಚರ್ಸ್ ನಲ್ಲಿ ಚಿತ್ರ ನಿರ್ಮಾಣ ಕಾರ್ಯ ಆರಂಭಿಸಿದರು.

  ಆರತಿ ಸ್ಥಾನಕ್ಕೆ ಬಂದ ಸುಹಾಸಿನಿ!

  ಆರತಿ ಸ್ಥಾನಕ್ಕೆ ಬಂದ ಸುಹಾಸಿನಿ!

  'ಬಂಧನ' ಚಿತ್ರದ ನಂದಿನಿ ಪಾತ್ರಕ್ಕೆ ಮೊದಲು ಆಯ್ಕೆ ಆಗಿದ್ದಿದ್ದು ನಟಿ ಆರತಿ. ಆದರೆ ಆರತಿ ಅವರ ಡೇಟ್ ಗಳ ಹೊಂದಾಣಿಕೆಯ ಸಮಸ್ಯೆಯಿಂದಾಗಿ ಮತ್ತೊಂದು ನಟಿಯ ತಲಾಶೆಯಲ್ಲಿ ಬಾಬು ಇರುವಾಗಲೇ ಬಾಬು ಅವರ ತಂಗಿ ವಿಜಯಲಕ್ಷ್ಮಿ ಸಿಂಗ್ ಅವರ ಜೊತೆ ಬೆಂಗಳೂರಿಗೆ ಚಿತ್ರೀಕರಣಕ್ಕೆಂದು ಬಂದಿದ್ದ ಸುಹಾಸಿನಿ ಎದುರಾಗುತ್ತಾರೆ. ಬಾಬು ಅವರ ತಂಗಿ,ಸುಹಾಸಿನಿ ಅವರ ಪರಿಚಯವನ್ನು ಬಾಬು ಅವರಿಗೆ ಮಾಡಿಸುತ್ತಾರೆ.

  ಆಗಷ್ಟೇ ತಮಿಳು-ತೆಲುಗಿನಲ್ಲಿ ಒಂದೆರಡು ಚಿತ್ರಗಳನ್ನು ಮಾಡಿದ ಸುಹಾಸಿನಿ ಅವರನ್ನು ನೋಡಿದ ತಕ್ಷಣ ಬಾಬು ಇವರೇ ನಂದಿನಿ ಅಂತ ಫಿಕ್ಸ್ ಆಗ್ ಬಿಡ್ತಾರೆ. ಹೀಗೆ ನಂದಿನಿ ಪಾತ್ರಕ್ಕೆ ಸುಹಾಸಿನಿಯ ಆಗಮನವಾಯಿತು.

  ಜೈಜಗದೀಶ್ ಪಾತ್ರ ಅಂಬರೀಶ್ ಮಾಡಬೇಕಿತ್ತು

  ಜೈಜಗದೀಶ್ ಪಾತ್ರ ಅಂಬರೀಶ್ ಮಾಡಬೇಕಿತ್ತು

  ಆರಂಭದಲ್ಲಿ ನಂದಿನಿ ಪತ್ರಕ್ಕೆ ಆರತಿ ಅವರನ್ನು ಆಯ್ಕೆ ಮಾಡಿಕೊಂಡಿದ್ದ ಬಾಬು ಅದೇ ರೀತಿ ನಂದಿನಿಯ ಗಂಡ ಇಂಜಿನಿಯರ್ ಬಾಲು ಪಾತ್ರಕ್ಕೆ ಅಂಬರೀಶ್ ಅವರನ್ನು ಆಯ್ಕೆ ಮಾಡಿದ್ದರು. ಆದರೆ ಆ ಪಾತ್ರ ಒಂದು ಚೂರು ನೆಗೆಟಿವ್ ಶೇಡ್ ಸಹ ಹೊಂದಿರುವ ಪಾತ್ರವಾಗಿರುತ್ತದೆ. ಆದರೆ ಆಗಾಗಲೇ 'ಅಂತ' ಅಂತಹ ರೆಬಲ್ ಪಾತ್ರದ ಮೂಲಕ ರೆಬಲ್ ಸ್ಟಾರ್ ಆಗಿದ್ದ ಅಂಬರೀಶ್ ಅವರ ಸ್ಟಾರ್ ವ್ಯಾಲ್ಯೂ ಮನಸ್ಸಲ್ಲಿಟ್ಟುಕೊಂಡು ಸಿಂಗ್ ಬಾಬು ಆ ಆಲೋಚನೆಯನ್ನು ಕೈಬಿಡುತ್ತಾರೆ. ಅಂಬರೀಶ್ ಅವರ ಬದಲು ಜೈ ಜಗದೀಶ್ ಅವರನ್ನು ಆ ಸ್ಥಾನಕ್ಕೆ ತುಂಬಲಾಯಿತು.

  ಡಾ. ಹರೀಶ್ ಪಾತ್ರದಲ್ಲಿ ವಿಷ್ಣು ಅವರ ಪರಕಾಯಪ್ರವೇಶ

  ಡಾ. ಹರೀಶ್ ಪಾತ್ರದಲ್ಲಿ ವಿಷ್ಣು ಅವರ ಪರಕಾಯಪ್ರವೇಶ

  'ಬಂಧನ' ಚಿತ್ರದ ಕೇಂದ್ರಬಿಂದು ಡಾ.ಹರೀಶ್ ಪಾತ್ರ. ಒಂದು ಸೈಡ್ ಲವರ್ ಆಗಿ, ಭಗ್ನಪ್ರೇಮಿಯಾಗಿ,

  ತನ್ನ ಕಾರಣದಿಂದಲೇ ಬೇರೆಯಾದ ನಂದಿನಿ-ಬಾಲು ಅವರನ್ನು ಒಟ್ಟುಗೂಡಿಸುವ ಕರುಣಾಮಯನಾಗಿ, ಚಿತ್ರದ ಕೊನೆಗೆ ಟ್ರ್ಯಾಜಿಡಿ ನಾಯಕನಾಗಿ ಹಲವು ತರದ ಅಭಿನಯಗಳನ್ನು ಏಕಕಾಲಕ್ಕೆ ವಿಷ್ಣುವರ್ಧನ್ ಅವರು ಪಾತ್ರದೊಳಗೆ ಪರಕಾಯ ಪ್ರವೇಶ ಮಾಡಿ ನಟಿಸಿದ್ದಾರೆ. ಇನ್ನು ಜೊತೆಗೆ ಸುಹಾಸಿನಿ, ಜೈಜಗದೀಶ್, ರೂಪಾದೇವಿ, ಕಾಂಚನ, ಮುಸುರಿ ಕೃಷ್ಣಮೂರ್ತಿ, ಶಿವರಾಂ ಸೇರಿದಂತೆ ಅನೇಕ ಕಲಾವಿದರ ಸಮಯೋಚಿತ ಅಭಿನಯ ಕೂಡ ಚಿತ್ರದ ಗೆಲುವಿನಲ್ಲಿ ವಿಶೇಷವಾದ ಪಾತ್ರವನ್ನೇ ವಹಿಸಿದೆ.

  ಸ್ಪ್ಯಾನಿಷ್ ಭಾಷೆಯ ಹಾಡಿನಿಂದ ಸ್ಪೂರ್ತಿ

  ಸ್ಪ್ಯಾನಿಷ್ ಭಾಷೆಯ ಹಾಡಿನಿಂದ ಸ್ಪೂರ್ತಿ

  'ಬಂಧನ' ಚಿತ್ರದ ಮೈನ್ ಅಟ್ರ್ಯಾಕ್ಷನ್ ಆ ಚಿತ್ರದ ಮಧುರವಾದ ಹಾಡುಗಳು. ಎಲ್ಲಾ ಹಾಡುಗಳು ಇಂದಿಗೂ ಕೂಡ ಎವರ್ ಗ್ರೀನ್. ಎಂ. ರಂಗರಾವ್ ಅವರ ಸಂಗೀತ, ಆರ್. ಎನ್. ಜಯಗೋಪಾಲ್ ಅವರ ಸಾಹಿತ್ಯ,ಎಸ್. ಪಿ. ಬಾಲಸುಬ್ರಮಣ್ಯಂ, ಜೇಸುದಾಸ್, ಎಸ್. ಜಾನಕಿಯವರ ಕಂಠಸಿರಿಯಲ್ಲಿ ಮೂಡಿಬಂದಿರುವ ಎಲ್ಲಾ ಹಾಡುಗಳು ಚಿತ್ರದ ಗೆಲುವಿನಲ್ಲಿ ಪ್ರಮುಖ ಪಾತ್ರವನ್ನು ವಹಿಸಿದೆ.

  ಬಣ್ಣ ನನ್ನ ಒಲವಿನ ಬಣ್ಣ...

  ಈ ಬಂಧನ...

  ನೂರೊಂದು ನೆನಪು...

  ಪ್ರೇಮದ ಕಾದಂಬರಿ...

  ಒಂದಕ್ಕಿಂತ ಒಂದು ಸೂಪರ್ ಹಿಟ್ ಹಾಡುಗಳು. ಅದರಲ್ಲೂ "ಬಣ್ಣ.... 'ಹಾಡು ಆಗಿನ ಕಾಲದಲ್ಲಿ ದಾಖಲೆಯನ್ನೇ ನಿರ್ಮಿಸಿತ್ತು. ಆದರೆ ಇದರ ಮೂಲ ಹಾಡು ಸ್ಪ್ಯಾನಿಷ್ ಭಾಷೆಯದಾಗಿತ್ತು. Per Qualche

  Dollaro in piu..

  ಬಿಡುಗಡೆಯಾದ ಎಲ್ಲಾ ಕೇಂದ್ರಗಳಲ್ಲೂ ಶತದಿನೋತ್ಸವ

  ಬಿಡುಗಡೆಯಾದ ಎಲ್ಲಾ ಕೇಂದ್ರಗಳಲ್ಲೂ ಶತದಿನೋತ್ಸವ

  24 ಆಗಸ್ಟ್ 1984 ರಂದು ಬಿಡುಗಡೆಯಾದ ಚಿತ್ರ ಮೊದಲ ದಿನದ ಮೊದಲನೇ ಶೋ ಇಂದಲೇ ಸೂಪರ್ ಹಿಟ್ ಎಂಬ ಟಾಕ್ ಪಡೆಯಿತು. ಬಿಡುಗಡೆಯಾದ ಎಲ್ಲಾ 18 ಪ್ರಮುಖ ಚಿತ್ರಮಂದಿರಗಳಲ್ಲಿ ಕೂಡ ಚಿತ್ರ ಶತಮಾನವನ್ನು ಆಚರಿಸಿತು.ಜೊತೆಗೆ ಹತ್ತಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ 25 ವಾರ ಪ್ರದರ್ಶನ ಕಂಡಿತು. ಜೊತೆಗೆ ಎರಡು ಚಿತ್ರಮಂದಿರಗಳಲ್ಲಿ ಸತತ 30 ವಾರ ಪ್ರದರ್ಶನ ಕಂಡ ಮೊದಲ ಚಿತ್ರ ಎಂಬ ಹೆಗ್ಗಳಿಕೆಗೂ ಕೂಡ ಪಾತ್ರವಾಯಿತು. ಅಲ್ಲದೆ ಚಿತ್ರ ಒಂದು ವರ್ಷ ಪ್ರದರ್ಶನ ಕಂಡಿತ್ತು. 84 ರಲ್ಲಿ ತೆರೆಕಂಡ ಎಲ್ಲ ಚಿತ್ರಗಳ ಪೈಕಿ ಅತಿ ಹೆಚ್ಚು ಕಲೆಕ್ಷನ್ ಮಾಡಿದ ಚಿತ್ರ 'ಬಂಧನ'.

  ಹಲವು ಪ್ರಶಸ್ತಿಗಳಿಗೆ ಭಾಜನವಾಯಿತು 'ಬಂಧನ'

  ಹಲವು ಪ್ರಶಸ್ತಿಗಳಿಗೆ ಭಾಜನವಾಯಿತು 'ಬಂಧನ'

  84ರ ದ "ಬೆಸ್ಟ್ ಕನ್ನಡ ಫಿಲಂ' ರಾಷ್ಟ್ರೀಯ ಪ್ರಶಸ್ತಿ ಪಡೆಯಿತು. ವಿಷ್ಣುವರ್ಧನ್ ಅವರಿಗೆ ಆ ವರ್ಷದ ಅತ್ಯುತ್ತಮ ನಟ ಮತ್ತು ಸಂಗೀತ ನಿರ್ದೇಶಕ ಎಂ. ರಂಗರಾವ್ ಅವರಿಗೆ ಅತ್ಯುತ್ತಮ ಸಂಗೀತ ನಿರ್ದೇಶಕ ರಾಜ್ಯ ಪ್ರಶಸ್ತಿ ಕೂಡ ಒಲಿಯಿತು. ಇನ್ನು ವಿಷ್ಣುವರ್ಧನ್ ಮತ್ತು ಸುಹಾಸಿನಿ ಅವರಿಗೆ "ಫಿಲಂ ಫೇರ್ ಅವಾರ್ಡ್' ಲಭಿಸಿತ್ತು. ಒಂದಡೆ ಬಾಕ್ಸ್ ಆಫೀಸ್ ನಲ್ಲಿ ಭರ್ಜರಿ ಯಶಸ್ಸು ಇನ್ನೊಂದೆಡೆ ಪ್ರಶಸ್ತಿಗಳನ್ನು ಕೂಡ ಪಡೆದ ಈ ಚಿತ್ರ ' ಪ್ರೇಮಪಾಸಂ' ಎಂಬ ಹೆಸರಿನಲ್ಲಿ ರಿಮೇಕ್ ಆಯಿತು. 'ಬಂಧನ' ಅಂದಿಗೂ ಇಂದಿಗೂ ಎಂದೆಂದಿಗೂ ಕನ್ನಡದ ಎವರ್ ಗ್ರೀನ್ ಕ್ಲಾಸಿಕ್ ರೋಮ್ಯಾಂಟಿಕ್ ಟ್ರ್ಯಾಜಿಡಿ ಸಿನಿಮಾ.

  English summary
  Here is some intresting information about movie Bandhana. Vishnuvardhan and Suhasini starer Bandhana movie is a super hit when its released.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X