ವಿಚ್ಛೇದನದ ನಂತರ ₹200 ಕೋಟಿ ಜೀವನಾಂಶ ಕೊಡಲು ಮಾಜಿ ಗಂಡ ತಯಾರಿದ್ದರೂ ಬೇಡ ಎಂದ ಖ್ಯಾತ ನಟಿ..!
ಪ್ರೀತಿ ಅಂದರೆ ಹಾಗೇ ಜೀವನವನ್ನೇ ಬದಲಾಯಿಸುವ ಶಕ್ತಿ ಹೊಂದಿರುವ ಮಾಯಾಜಾಲ. ಮಧುರ ಪ್ರೀತಿಗೆ ತಂದೆ ತಾಯಿಯೂ ಬೇಡ, ಹಣ ಒಡವೆ ಕೂಡ ಬೇಡ. ಸಂಗಾತಿಯ ಮಾತಿನ ಕಚಗುಳಿಯ ನಡುವೆ ಸ್ಪರ್ಶದ ಸಿಂಚನ ಸಾಕು ಅನ್ಸುತ್ತೆ. ಬಿಟ್ಟಿರಲಾರದ ತವಕ, ಏನೂ ಬೇಡವೆನ್ನುವ ಭಾವ, ಹಸಿವು ಇಲ್ಲದ ಅದೆಷ್ಟೋ ಗಂಟೆಗಳು ಅವಳ ನೆನಪಲ್ಲೇ ಕಳೆದು ಹೋಗುತ್ತೆ.
ಆದರೆ ಈಗೀಗ ಪ್ರೀತಿಯ ಅರ್ಥ ಬದಲಾಗಿದೆ. ಅರ್ಥೈಸಿಕೊಳ್ಳುವ ರೀತಿ ಕೂಡ ಬದಲಾಗಿದೆ. ಎಂಥದ್ದೋ ತಿರುವುಗಳಲ್ಲಿ ಪ್ರೀತಿ ಅಂತ್ಯವಾದ ನಂತರ ಇಂಥದ್ದೊಂದು ಸಂಬಂಧವಿತ್ತು ಎನ್ನುವ ನೆನಪನ್ನು ಕೂಡ ಉಳಿಸದೆ ಹೋಗುವಷ್ಟು ಸಂಬಂಧಗಳು ವ್ಯವಹಾರಿಕವಾಗಿವೆ. ಇದಕ್ಕೆ ಚಾಹಲ್ ಮತ್ತು ಧನಶ್ರೀ ವರ್ಮಾ ದಾಂಪತ್ಯ ಮತ್ತೊಂದು ಉದಾಹರಣೆ. ಕೇವಲ ನಾಲ್ಕೇ ವರ್ಷಕ್ಕೆ ದಾಂಪತ್ಯ ಜೀವನಕ್ಕೆ ಇಬ್ಬರು ಗುಡ್ ಬೈ ಹೇಳಿದ್ದಾರೆ. ತಮ್ಮ ತಮ್ಮ ಜೀವನದಲ್ಲಿ ಕಳೆದುಹೋಗಿದ್ದಾರೆ.

ಇನ್ನು ಯಜುವೇಂದ್ರ ಚಾಹಲ್ ಅವರಿಂದ ಧನಶ್ರೀಗೆ ಜೀವನಾಂಶದ ರೂಪದಲ್ಲಿ 4.75 ಕೋಟಿ ಹಣ ಸಿಕ್ಕಿದೆ. ಈ ಹಣದ ಕುರಿತು ಸಾಮಾಜಿಕ ಜಾಲತಾಣದಲ್ಲಿ ಚರ್ಚೆ ಕೂಡ ನಡೆಯುತ್ತಿದೆ. ಇದರ ನಡುವೆ ಸಮಂತಾ ಅವರ ಹೆಸರು ಕೂಡ ಚಾಹಲ್ ಮತ್ತು ಧನಶ್ರೀ ವರ್ಮಾ ಅವರಿಂದ ಟ್ರೆಂಡಿಂಗ್‌ನಲ್ಲಿದೆ. ಹೌದು, ತಮ್ಮ ದಾಂಪತ್ಯ ಮುರಿದು ಬಿದ್ದ ಮೇಲೆ ಸಮಂತಾಗೆ ನಾಗಚೈತನ್ಯ 200 ಕೋಟಿ ಹಣವನ್ನು ನೀಡಲು ಮುಂದಾಗಿದ್ದರು ಎನ್ನುವ ಸುದ್ದಿ ಕೇಳಿ ಬಂದಿತ್ತು.
ಆದರೆ, ಸಮಂತಾ ಈ ಹಣವನ್ನು ನಿರಾಕರಿಸಿದ್ದರು. ಒಂದೇ ಒಂದು ಪೈಸೆಯನ್ನು ಕೂಡ ನಾಗಚೈತನ್ಯ ಅವರಿಂದ ಸಮಂತಾ ಪಡೆದಿಲ್ಲ ಎಂಬ ಮಾತು ಕೂಡ ಆಗ ಅಂದರೆ 2021ರಲ್ಲಿ ಕೇಳಿ ಬಂದಿತ್ತು. ಖುದ್ದು ಸಮಂತಾ ಕೂಡ ನಾನು ಹಣ ಪಡೆದಿಲ್ಲ ಎನ್ನುವ ವಿಚಾರವನ್ನು ಹೇಳಿದ್ದರು. ಈ ಕುರಿತು 2022ರಲ್ಲಿ ಕಾಫಿ ವಿತ್ ಕರಣ್ ಕಾರ್ಯಕ್ರಮದಲ್ಲಿ ಮಾತನಾಡಿದ್ದ ಸಮಂತಾ ನಾನು ವಿಚ್ಛೇದನದ ಬಳಿಕ ಜೀವನಾಂಶವಾಗಿ 250 ಕೋಟಿ ಹಣ ಪಡೆದಿದ್ದೇನೆ ಎಂದು ಅನೇಕರು ಬರೆದಿದ್ದಾರೆ.
ಆದರೆ ಅಸಲಿಗೆ ಜೀವನಾಂಶ ಪಡೆಯುವಂತಿಲ್ಲ ಎಂದು ಮೊದಲೇ ನಿಶ್ಚಯವಾಗಿತ್ತು ಹಾಗಾಗಿ ಜೀವನಾಂಶ ಪಡೆದಿಲ್ಲ ಎಂದು ಸಮಂತಾ ಹೇಳಿದ್ದರು. ಆದರೂ ಕೂಡ ಸತ್ಯವನ್ನು ಅರಿಯದೇ ಹಲವರು ಹಲವು ರೀತಿಯಲ್ಲಿ ನನ್ನ ಬಗ್ಗೆ ಬರೆದಿದ್ದಾರೆ, ಫ್ಯಾಕ್ಟ್ ಹೆಸರಿನಲ್ಲಿ ಗಾಳಿ ಸುದ್ದಿಗಳನ್ನು ತೇಲಿ ಬಿಟ್ಟಿದ್ದಾರೆ ಎಂದು ಬೇಸರವನ್ನು ಮಾಡಿಕೊಂಡಿದ್ದರು.
ಅವತ್ತು ಸಮಂತಾ ಅವರಾಡಿದ ಈ ಮಾತುಗಳ ಬಗ್ಗೆ ಈಗ ಅನೇಕರು ಸೋಶಿಯಲ್ ಮೀಡಿಯಾದಲ್ಲಿ ಚರ್ಚೆ ಮಾಡುತ್ತಿದ್ದಾರೆ. ನಾಗಚೈತನ್ಯ ಅವರಿಂದ ಹಣ ಪಡೆಯದ ಸಮಂತಾ ಅವರನ್ನು ಹಾಡಿ ಹೊಗಳುತ್ತಿದ್ದಾರೆ. ಗಂಡನ ಜೊತೆ ಸಂಬಂಧ ಕಡಿದುಕೊಂಡು ಹಣ ಪಡೆದ ಬೇರೆ ನಾಯಕಿಯರನ್ನು ತೆಗಳುತ್ತಿದ್ದಾರೆ. ಪ್ರೀತಿ ಎಂಬ ಜೀವಜಲವನ್ನು ದುಡ್ಡಿನಲ್ಲಿ ಅಳೆಯಬಾರದು ಎನ್ನುವುದಕ್ಕೆ ಸಮಂತಾ ಉದಾಹರಣೆ ಎನ್ನುತ್ತಿದ್ದಾರೆ. ಚಿತ್ರರಂಗದಲ್ಲಿ ಜೀವನಾಂಶವನ್ನು ನಿರಾಕರಿಸಿದ ನಾಯಕಿ ಯಾರಾದರೂ ಇದ್ದರೆ ಅದು ಕೇವಲ ಸಮಂತಾ ಮಾತ್ರ ಎಂಬ ಅಭಿಪ್ರಾಯವನ್ನು ಕೂಡ ವ್ಯಕ್ತಪಡಿಸುತ್ತಿದ್ದಾರೆ.
ಇನ್ನುಳಿದಂತೆ ಸಮಂತಾ ಅವರನ್ನು ಸಂಪೂರ್ಣ ಮರೆತಿರುವ ನಾಗಚೈತನ್ಯ ತಮ್ಮ ಎರಡನೇ ಪತ್ನಿ ಶೋಭಿತಾ ಅವರ ಜೊತೆ ನೆಮ್ಮದಿಯಾಗಿ ಕಾಲ ಕಳೆಯುತ್ತಿದ್ಧಾರೆ. ಮತ್ತೊಂದೆಡೆ ದಕ್ಷಿಣ ಭಾರತೀಯ ಚಿತ್ರರಂಗದಿಂದ ಕಾಲ್ಕಿತ್ತಿರುವ ಸಮಂತಾ ಸದ್ಯ ಬಾಲಿವುಡ್‌ನಲ್ಲಿ ಬ್ಯುಸಿಯಾಗುವ ಪ್ರಯತ್ನ ಮಾಡುತ್ತಿದ್ದಾರೆ. ಒಂದಾದ ಮೇಲೊಂದು ವೆಬ್ ಸರಣಿ ಮತ್ತು ಸಿನಿಮಾಗಳನ್ನು ಒಪ್ಪಿಕೊಳ್ಳುತ್ತಿದ್ದಾರೆ. ಇನ್ನು ಇದೇ ಸಂದರ್ಭದಲ್ಲಿ ಫ್ಯಾಮಿಲಿ ಮ್ಯಾನ್ ಚಿತ್ರದ ನಿರ್ಮಾಪಕ-ನಿರ್ದೇಶಕ ರಾಜ್ ನಿಡಿಮೋರು ಜೊತೆ ಕೂಡ ಸಮಂತಾ ಹೆಸರು ತಳುಕು ಹಾಕಿಕೊಂಡಿದೆ. ಇಬ್ಬರು ಶೀಘ್ರದಲ್ಲಿಯೇ ಮದುವೆಯಾಗಲಿದ್ಧಾರೆ ಎನ್ನುವ ಸುದ್ದಿ ಕೇಳಿ ಬರುತ್ತಿದೆ. ಇದಕ್ಕೆ ಪೂರಕವಾಗಿ ಅನೇಕ ಕಾರ್ಯಕ್ರಮಗಳಲ್ಲಿ ಇಬ್ಬರು ಜೊತೆ ಜೊತೆಯಾಗಿ ಕಾಣಿಸಿಕೊಳ್ಳುತ್ತಿದ್ಧಾರೆ.


Click it and Unblock the Notifications











