ಕ್ರಿಕೆಟರ್ ಅವತಾರದಲ್ಲಿ ನಟಸಾರ್ವಭೌಮ ಡಾ. ರಾಜ್‌ಕುಮಾರ್; ಈ ಫೋಟೊ ಹಿಂದಿನ ಕಥೆ ಗೊತ್ತಾ?
ನಟಸಾರ್ವಭೌಮ ಡಾ. ರಾಜ್‌ಕುಮಾರ್. ಕನ್ನಡ ಚಿತ್ರರಂಗದ ದಂತಕತೆ. ಆಡು ಮುಟ್ಟದ ಸೊಪ್ಪಿಲ್ಲ. ಅಣ್ಣಾವ್ರು ಮಾಡದ ಪಾತ್ರಗಳಿಲ್ಲ. ಮಾಲೀಯಾಗಿ ಕೂಲಿಯಾಗಿ ಕುಬೇರನಾಗಿ ಗುರುವಾಗಿ ದೈವವಾಗಿ ಹೀಗೆ ಎಲ್ಲಾ ತರಹದ ಪಾತ್ರಗಳಲ್ಲಿ ಲೀಲಾಜಾಲವಾಗಿ ಡಾ. ರಾಜ್ ನಟಿಸಿ ಗೆದ್ದವರು. ಬರೀ ಸಿನಿಮಾಗಳಿಂದ ಮಾತ್ರವಲ್ಲ ತಮ್ಮ ಸರಳ, ಸಜ್ಜನ ವ್ಯಕ್ತಿತ್ವದಿಂದಲೂ ಎಲ್ಲರಿಗೂ ಬಹಳ ಹತ್ತಿರವಾಗಿಬಿಟ್ಟಿದ್ದರು.
3ನೇ ತರಗತಿವರೆಗೆ ಮಾತ್ರ ಓದಿದ್ದ ಮುತ್ತುರಾಜ್ ಮುಂದೆ ಕನ್ನಡ ಚಿತ್ರರಂಗದ ಸೂಪರ್ ಸ್ಟಾರ್ ಆಗಿ ಮೆರೆದರು. ಅಸಂಖ್ಯಾತ ಅಭಿಮಾನಿಗಳ ಹೃದಯ ಸಿಂಹಾಸನದಲ್ಲಿ ಇಂದಿಗೂ ರಾಜನಾಗಿಯೇ ಮರೆಯುತ್ತಿದ್ದಾರೆ. ಅಣ್ಣಾವ್ರ ಮಗು ಮನಸ್ಸಿನ ವ್ಯಕ್ತಿತ್ವ ಎಲ್ಲರನ್ನೂ ಸದಾ ಸೆಳೆಯುತ್ತಿತ್ತು. ಹೊಸದನ್ನು ಕಂಡರೆ ಮಕ್ಕಳಂತೆ ಖುಷಿಪಡುವ, ಹೊಸ ವಿಷಯಗಳನ್ನು ಕಲಿಯುವ ಹಂಬಲ ಮುತ್ತುರಾಜನಲ್ಲಿತ್ತು. ಯಾವುದೇ ಅಹಂ ಇಲ್ಲದೇ ಕೊನೆಯವರೆಗೂ ಸಾಧು ಸಂತನಂತೆ ಜೀವನ ಸಾಗಿಸಿದವರು ಡಾ. ರಾಜ್‌ಕುಮಾರ್.

ಅಣ್ಣಾವ್ರಿಗೆ ಕ್ರಿಕೆಟ್ ಅಂದ್ರೆ ಬಹಳ ಕ್ರೇಜ್ ಇತ್ತು. ಭಾರತ ತಂಡ ಆಡುವ ಏಕದಿನ ಪಂದ್ಯಗಳನ್ನು ತಪ್ಪದೇ ಟಿವಿಯಲ್ಲಿ ನೋಡುತ್ತಿದ್ದರು. ಸಿಕ್ಸ್, ಬೌಂಡರಿ ಹೊಡೆದಾಗ ಮಕ್ಕಳಂತೆ ಕುಣಿದು ಕುಪ್ಪಳಿಸುತ್ತಿದ್ದರು. ಒಮ್ಮೆ ಕರ್ನಾಟಕದ ಕ್ರಿಕೆಟ್ ಆಟಗಾರರರನ್ನು ಮನೆಗೆ ಆಹ್ವಾನಿಸಿ ವಿಶೇಷ ಔತಣ ನೀಡಿದ್ದರು. ಅಭಿಮಾನಿಗಳ ಪ್ರೀತಿಯ ದೇವರು ಡಾ. ರಾಜ್‌ಕುಮಾರ್ ಹಾಗೂ ಕ್ರಿಕೆಟ್ ದೇವರು ಸಚಿನ್ ತೆಂಡೂಲ್ಕರ್ ಹುಟ್ಟುಹಬ್ಬ ಒಂದೇ ದಿನ.
ಸದ್ಯ ಎಲ್ಲೆಲ್ಲೂ ಐಪಿಎಲ್ ಕಾರುಬಾರು ಶುರುವಾಗಿದೆ. ಕನ್ನಡ ಚಿತ್ರರಂಗದಲ್ಲಿ ಕ್ರಿಕೆಟ್ ಅಂದಾಕ್ಷಣ ಮೊದಲಿಗೆ ನೆನಪಾಗುವುದು ಈ ಫೋಟೋ. ಏಪ್ರಿಲ್ 24, ಅಣ್ಣಾವ್ರು ಹಾಗೂ ಸಚಿನ್ ಜನ್ಮದಿನ. ಪ್ರತಿಬಾರಿ ಆ ದಿನ ಒಂದು ಫೋಟೊ ಸಖತ್ ವೈರಲ್ ಆಗುತ್ತದೆ. ಅದು ಡಾ. ರಾಜ್ ಹಾಗೂ ಸಚಿನ್ ಬ್ಯಾಟ್ ಹಿಡಿದು ಕಾಣಿಸಿಕೊಂಡಿರುವ ಕೊಲಾಜ್ ಫೋಟೊ. ಸೋಶಿಯಲ್ ಮೀಡಿಯಾ ಬಂದಮೇಲೆ ಅಭಿಮಾನಿಗಳು ಈ ಫೋಟೊವನ್ನು ವೈರಲ್ ಮಾಡುತ್ತಾ ಬರುತ್ತಿದ್ದಾರೆ. ಅಷ್ಟಕ್ಕೂ ಡಾ. ರಾಜ್‌ಕುಮಾರ್ ಯಾವಾಗ ಕ್ರಿಕೆಟ್ ಆಡಿದ್ದರು? ಅಥವಾ ಯಾವ ಸಿನಿಮಾದಲ್ಲಿ ಗ್ಲೌಸು, ಪ್ಯಾಡು ತೊಟ್ಟಿದ್ದರು ಎನ್ನುವುದು ಬಹಳ ಜನಕ್ಕೆ ಗೊತ್ತಿಲ್ಲ. ಅಂದಹಾಗೆ ಈ ಫೋಟೊ 'ಎರಡು ಕನಸು' ಚಿತ್ರದ್ದು.

1974ರಲ್ಲಿ ದೊರೆ ಭಗವಾನ್ ನಿರ್ದೇಶನದಲ್ಲಿ 'ಎರಡು ಕನಸು' ಸಿನಿಮಾ ಮೂಡಿ ಬಂದಿತ್ತು. ಚಿತ್ರದಲ್ಲಿ ಇಂಗ್ಲೀಷ್ ಫ್ರೊಫೆಸರ್ ರಾಮಚಂದ್ರ ರಾಯ ಪಾತ್ರದಲ್ಲಿ ಅಣ್ಣಾವ್ರು ನಟಿಸಿದ್ದರು. ಆ ಚಿತ್ರದ ಸಣ್ಣ ದೃಶ್ಯದಲ್ಲಿ ಬ್ಯಾಟ್ ಹಿಡಿದು ಡಾ. ರಾಜ್ ಕ್ರಿಕೆಟ್ ಆಡುವುದನ್ನು ನೋಡಬಹುದು. ಲೈಬ್ರರಿಯಲ್ಲಿ ಓದುತ್ತಾ ಕುಳಿತ ರಾಮಚಂದ್ರ ರಾಯನನ್ನು ಆತನ ಸ್ನೇಹಿತ ಅನಂತರಾಮು ಆಡಲು ಕರೆದುಕೊಂಡು ಹೋಗುವ ಸನ್ನಿವೇಶ ಅದು.
ಅಣ್ಣಾವ್ರು ತೆರೆಮೇಲೆ ಬ್ಯಾಟ್ ಬೀಸಿದ್ದನ್ನು ಅಂದು ತೆರೆಮೇಲೆ ಅಭಿಮಾನಿಗಳು ನೋಡಿ ಸಖತ್ ಎಂಜಾಯ್ ಮಾಡಿದ್ದರು. ಅಂದಹಾಗೆ ಈ ದೃಶ್ಯದಲ್ಲಿ ನಟಿಸಲು ಅಣ್ಣಾವ್ರು ಒಂದೆರಡು ದಿನ ಕ್ರಿಕೆಟ್ ಪ್ರಾಕ್ಟೀಸ್ ಸಹ ಮಾಡಿದ್ದರು. ಶಿವಣ್ಣ ಬೌಲಿಂಗ್‌ನಲ್ಲಿ ಪ್ರಾಕ್ಟೀಸ್ ನಡೆದಿತ್ತು. ಈ ಸಂಗತಿಯನ್ನು ಇತ್ತೀಚೆಗೆ ವೇದಿಕೆಯೊಂದರಲ್ಲಿ ರಾಘಣ್ಣ ಹಂಚಿಕೊಂಡಿದ್ದರು. ಕ್ರಿಕೆಟ್ ಪ್ರಾಕ್ಟೀಸ್ ಮಾಡಲು ಅಪ್ಪಾಜಿ ಪಂಚೆ ಉಟ್ಟು ಬರುತ್ತಿದ್ದರು ಎಂದು ರಾಘಣ್ಣ ಆ ದಿನಗಳನ್ನು ನೆನಪಿಸಿಕೊಂಡಿದ್ದರು.
"ಎರಡು ಕನಸು ಚಿತ್ರದ ಕ್ರಿಕೆಟ್ ಆಡುವ ಸನ್ನಿವೇಶಕ್ಕೆ ಅಪ್ಪಾಜಿ 2 ದಿನ ಪ್ರಾಕ್ಟೀಸ್ ಮಾಡಿದ್ದರು. ನಮ್ಮಣ್ಣ ಬೌಲಿಂಗ್ ಮಾಡ್ತಾನೆ. ತಂದೆ ಪಂಚೆ ಉಟ್ಟು ಬಂದರು. ನಿರ್ದೇಶಕ ಭಗವಾನ್ ಪ್ಯಾಂಟ್ ಹಾಕ್ಕೊಬೇಕು ಕಣಯ್ಯ ಅಂದಿದ್ದಕ್ಕೆ, ಅಪ್ಪಾಜಿ ಅಲ್ಲ, ಬಾಲ್‌ನ ಬ್ಯಾಟ್‌ಯಿಂದ ಹೊಡಿತ್ತೀನಾ? ಪ್ಯಾಂಟ್ ಇಂದ ಹೊಡಿತ್ತೀನಾ? ಎಂದು ಹೇಳಿದ್ದರಂತೆ. ಭಾರತ ತಂಡದಲ್ಲಿ ಆಡುವ ಆಟಗಾರರರನ್ನು ಮನೆಗೆ ಕರೆಸು ಎಂದಿದ್ದರಂತೆ, ಅವರ ಆಟದ ಬಗ್ಗೆ ಸಾಕಷ್ಟು ಹೊತ್ತು ಸಮಾಲೋಚನೆ ನಡೆಸಿದ್ದರು" ಎಂದು ರಾಘಣ್ಣ ವಿವರಿಸಿದ್ದರು.


Click it and Unblock the Notifications











