DDLJ ಸಿನಿಮಾದ ನಾಯಕ ರಾಜ್ ಮಹಿಳಾ ಪೀಡಕನೇ?
ದಿಲ್‌ವಾಲೆ ದುಲ್ಹನಿಯಾ ಲೇ ಜಾಯೆಂಗೆ (ಡಿಡಿಎಲ್‌ಜೆ) ಸಿನಿಮಾ ಬಿಡುಗಡೆ ಆಗಿ 25 ವರ್ಷವಾಯಿತು, ಆ ಸಿನಿಮಾ ಪ್ರೇಕ್ಷಕರ ಮೇಲೆ ಹಾಕಿರುವ ಮೋಡಿ ಇನ್ನೂ ಮುಗಿದಿಲ್ಲ.
ಸಿನಿಮಾದ ಮುಖ್ಯ ಪಾತ್ರಗಳಾದ ರಾಜ್, ಸಿಮ್ರನ್ ಈಗಲೂ ತಾಜಾ ಎನಿಸುತ್ತಾರೆ. ಸಿನಿಮಾದ ಹಾಡುಗಳು, ಸಂಭಾಷಣೆ ಈಗಲೂ ಕಚಗುಳಿ ಇಡುತ್ತವೆ. ಭಾರತದ ಎವರ್‌ಗ್ರೀನ್ ಸಿನಿಮಾಗಳಲ್ಲಿ ಅಗ್ರಸ್ಥಾನದಲ್ಲಿದೆ ಡಿಡಿಎಲ್‌ಜೆ.
ಶಾರುಖ್ ನಿರ್ವಹಿಸಿದ್ದ ರಾಜ್ ಪಾತ್ರವಂತೂ ಹೆಂಗೆಳೆಯರ ಮೆಚ್ಚಿನ ಪಾತ್ರವಾಗಿತ್ತು, ರಾಜ್ ಪಾತ್ರ ಮನೆಮಾತಾಗಿತ್ತು, ಶಾರುಖ್ ಗೆ 'ಮನೆಮಗನ' ಇಮೇಜ್ ತಂದುಕೊಟ್ಟ ಪಾತ್ರವದು. ಆದರೆ ರಾಜ್ ಸ್ವಭಾವತಃ ಮಹಿಳಾ ಪೀಡಕನಾಗಿದ್ದನೆ? ಹೀಗೊಂದು ಚರ್ಚೆ ಇದೀಗ ಸಾಮಾಜಿಕ ಜಾಲತಾಣದಲ್ಲಿ ಪ್ರಾರಂಭವಾಗಿದೆ. ಇದಕ್ಕೆ ಬಾಲಿವುಡ್ ನಟಿಯೊಬ್ಬರು ಪರೋಕ್ಷ ಅನುಮೋದನೆ ನೀಡಿದ್ದಾರೆ.

ಮೊದಲು ದ್ವೇಷ ಆ ನಂತರ ಪ್ರೀತಿ
ಸಿನಿಮಾದಲ್ಲಿ ರಾಜ್ ಹಾಗೂ ಸಿಮ್ರನ್ ಯೂರೋಪ್ ಟ್ರಿಪ್‌ನಲ್ಲಿ ಪರಸ್ಪರ ಭೇಟಿಯಾಗುತ್ತಾರೆ. ಆರಂಭದಲ್ಲಿ ಪರಸ್ಪರ ದ್ವೇಷಿಸುವ ಅವರು, ನಂತರ ಪ್ರೀತಿಯಲ್ಲಿ ಬೀಳುತ್ತಾರೆ. ದ್ವೇಷದ ಸಮಯದಲ್ಲಿ ರಾಜ್ ಹಲವು ಭಾರಿ ಸಿಮ್ರನ್ ಅನ್ನು ಕಾಡಿಸುತ್ತಾನೆ ಇದು ಈಗ ಚರ್ಚೆಯ ವಿಷಯ. ರಾಜ್, ಸಿಮ್ರನ್ ಅನ್ನು ಕಾಡಿಸುವುದನ್ನು ಮಹಿಳಾ ಪೀಡನೆ ಎಂದಿದ್ದಾರೆ ಕೆಲವರು.

ರಾಜ್ ಮಹಿಳಾ ಪೀಡಕ ಸ್ವಭಾವದವನೇ?
ಸಿನಿಮಾದಲ್ಲಿ ರಾಜ್, ಸಿಮ್ರನ್ ಳ ಒಪ್ಪಿಗೆ ಇಲ್ಲದೆ ಆಕೆಯೊಂದಿಗೆ ಸೆಕ್ಸ್ ಮಾಡಿದ್ದಾಗಿ ಹೇಳುತ್ತಾನೆ (ರಾಜ್ ಸುಳ್ಳು ಹೇಳಿರುತ್ತಾನೆ). ಆಕೆಯ ಬಟ್ಟೆ ಹರಿಯುತ್ತಾನೆ (ಆಕಸ್ಮಿಕವಾಗಿ). ಆಕೆಯೊಂದಿಗೆ ಬಲವಂತವಾಗಿ ನೃತ್ಯ ಮಾಡುತ್ತಾನೆ, ಆಕೆಯನ್ನು ಸಾರ್ವಜನಿಕ ಸ್ಥಳದಲ್ಲಿ ಎಳೆದಾಡುತ್ತಾನೆ (ಹಾಡಿನಲ್ಲಿ) ಹೀಗೆ ಮಾಡುವುದನ್ನು ಮಹಿಳಾ ಪೀಡನೆ ಎನ್ನದಿರಲಾದೀತೆ? ಎಂದು ಮಹಿಳೆಯೊಬ್ಬರು ಟ್ವಿಟ್ಟರ್‌ನಲ್ಲಿ ಪ್ರಶ್ನೆ ಎತ್ತಿದ್ದಾರೆ.

'ಮಹಿಳೆಯನ್ನು ಪೀಡಿಸುವುದನ್ನು ರೊಮ್ಯಾಂಟೀಕ್ ಎಂಬಂತೆ ತೋರಲಾಗಿದೆ'
ರಾಜ್ ಸ್ವಭಾವ ಕುರಿತ ಮಹಿಳೆಯ ಅಭಿಪ್ರಾಯಕ್ಕೆ ಅನುಮೋದನೆ ನೀಡಿರುವ ನಟಿ ಸ್ವರಾ ಭಾಸ್ಕರ್, 'ನೀವು ಹೇಳುತ್ತಿರುವುದು ನಿಜ. ಡಿಡಿಎಲ್‌ಜೆ ಸಿನಿಮಾದಲ್ಲಿ ಪೀಡಿಸುವುದು ಸಹ ರೊಮ್ಯಾಂಟಿಕ್ ಎಂಬಂತೆ ಚಿತ್ರಿಸಲಾಗಿದೆ. ನಾವು ಕಲಿಯಬೇಕು, ಬದಲಾಗಬೇಕು ಎಂದಿದ್ದಾರೆ.

ನಾನು ಸಹ ಡಿಡಿಎಲ್‌ಜೆ ಸಿನಿಮಾದ ಅಭಿಮಾನಿ: ಸ್ವರಾ
ಆದರೆ ಸ್ವರಾ ಭಾಸ್ಕರ್ ಟ್ವೀಟ್ ವೈರಲ್ ಆಗುತ್ತಿದ್ದಂತೆ ಇದಕ್ಕೆ ಸಮಜಾಯಿಷಿ ನೀಡಿರುವ ನಟಿ, 'ನಾನು ಸಹ ಡಿಡಿಎಲ್‌ಜೆ ಸಿನಿಮಾದ ಹಾಗೂ ರಾಜ್, ಸಿಮ್ರನ್ ರ ಅಭಿಮಾನಿ. ಈ ಸಿನಿಮಾ ಪೀಳಿಗೆಗಳಿಗೆ ಪ್ರೀತಿಯ ಪಾಠ ಮಾಡಿದೆ. ಜೀವನವನ್ನು ಖುಷಿಯಾಗಿ ಎದುರಿಸುವ ಶಕ್ತಿ ತುಂಬಿದೆ, ಈ ಹಿಂದಿನ ಟ್ವೀಟ್‌ಗಳನ್ನು ರಚನಾತ್ಮಕ ಚರ್ಚೆಯ ಭಾಗವಾಗಿ ಮಾಡಿದ್ದೆ' ಎಂದಿದ್ದಾರೆ ಸ್ವರಾ ಭಾಸ್ಕರ್.


Click it and Unblock the Notifications











