ಮೌನವಾಗಿ 'ನಾನೇ ಬಾಸ್' ಎಂದು ಸುತ್ತಾಡುತ್ತಿದ್ದಾರಾ ನಟ ರಾಕಿಂಗ್ ಸ್ಟಾರ್ ಯಶ್ ?
ಚಿತ್ರರಂಗದಲ್ಲಿ ಸ್ಟಾರ್ ವಾರ್, ಫ್ಯಾನ್ಸ್ ವಾರ್ ನಡೆಯುತ್ತಲೇ ಇರುತ್ತದೆ. ನಂಬರ್ 1 ಪಟ್ಟಕ್ಕಂತೂ ಹೋರಾಟ ಮುಂದುವರೆದೇ ಇದೆ. ಕೆಲವೊಮ್ಮೆ ನಟರು ಬೇಡ ಅಂದರೂ ಈ ನಂಬರ್ 1 ಗೇಮ್ ಬಗ್ಗೆ ಅಭಿಮಾನಿಗಳು ಅತ್ಯುತ್ಸುಕರಾಗಿರುತ್ತಾರೆ. ಸ್ಟಾರ್ ನಟರೇ ಇದನ್ನು ಪ್ರತಿಷ್ಠೆಯಾಗಿ ಪರಿಗಣಿಸುವುದು ಇದೆ.
ಕನ್ನಡ ಚಿತ್ರರಂಗದಲ್ಲೀಗ ಬೆರಳೆಣಿಕೆಯಷ್ಟು ಸ್ಟಾರ್ ನಟರು ಇದ್ದಾರೆ. ಆದರೂ ತಕ್ಕ ಮಟ್ಟದಲ್ಲಿ ದೊಡ್ಡ ಸಿನಿಮಾಗಳು ಬಿಡುಗಡೆ ಆಗುತ್ತಿಲ್ಲ. 2ನೇ ಹಂತದ ನಟರು ಬೆಳೆಯುತ್ತಿಲ್ಲ. ಹಾಗಾಗಿ ಪ್ರೇಕ್ಷಕರನ್ನು ಸೆಳೆಯಲು ಸ್ಟಾರ್ ನಟರ ಸಿನಿಮಾಗಳೇ ಬೇಕು ಎನ್ನುವಂತಾಗಿಬಿಟ್ಟಿದೆ. ಆದರೆ ಪ್ಯಾನ್ ಇಂಡಿಯಾ ಜಮಾನದಲ್ಲಿ ಅಷ್ಟು ಬೇಗ ಸಿನಿಮಾಗಳನ್ನು ಮಾಡಿ ರಿಲೀಸ್ ಮಾಡೋಕೆ ಆಗಲ್ಲ ಎನ್ನುವವರು ಇದ್ದಾರೆ.

'KGF' ಸಿನಿಮಾ ಮೂಲಕ ನಟ ಯಶ್ ಪ್ಯಾನ್ ಇಂಡಿಯಾ ಮಟ್ಟದಲ್ಲಿ ಗೆದ್ದಿದ್ದು ಗೊತ್ತೇಯಿದೆ. ಸರಣಿ ಸಿನಿಮಾಗಳಿಂದ ದೇಶ ವಿದೇಶದಲ್ಲಿ ರಾಕಿಂಗ್ ಸ್ಟಾರ್ ಅಭಿಮಾನಿಗಳನ್ನು ಸೃಷ್ಟಿಸಿಕೊಂಡರು. ಸದ್ಯ 'ಟಾಕ್ಸಿಕ್' ಚಿತ್ರದಲ್ಲಿ ಯಶ್ ನಟಿಸುತ್ತಿದ್ದಾರೆ. ಇತ್ತೀಚೆಗೆ ಮುಹೂರ್ತ ನೆರವೇರಿಸಿ ಚಿತ್ರಕ್ಕೆ ಚಾಲನೆ ಕೊಡಲಾಗಿದೆ. ಗೀತು ಮೋಹನ್ ದಾಸ್ ಚಿತ್ರಕ್ಕೆ ಆಕ್ಷನ್ ಕಟ್ ಹೇಳಲಿದ್ದಾರೆ. ಕೆವಿಎನ್ ಪ್ರೊಡಕ್ಷನ್ಸ್ ಜೊತೆ ಸೇರಿ ಸ್ವತಃ ಯಶ್ ಚಿತ್ರ ನಿರ್ಮಾಣ ಮಾಡುತ್ತಿದ್ದಾರೆ.
ಇನ್ನು ಅಭಿಮಾನಿಗಳ ನಡುವೆ ಸ್ಯಾಂಡಲ್‌ವುಡ್ ಬಾಸ್ ಯಾರು ಎನ್ನುವ ಬಗ್ಗೆ ಆಗಾಗ್ಗೆ ಚರ್ಚೆ ನಡೆಯುತ್ತಿರುತ್ತದೆ. ಪರಸ್ಪರ ಕೆಸರೆರಚಾಟವೂ ಕಂಡುಬರುತ್ತದೆ. ಇತ್ತೀಚೆಗೆ ಒರಿಜಿನಲ್ ಡಿಬಾಸ್ ಯಾರು? ಎಂದು ದರ್ಶನ್ ಹಾಗೂ ಧ್ರುವ ಸರ್ಜಾ ಅಭಿಮಾನಿಗಳ ನಡುವೆ ಕಿತ್ತಾಟ ಶುರುವಾಗಿತ್ತು. ಒರಿಜಿನಲ್ ಡಿಬಾಸ್ ಧ್ರುವ ಸರ್ಜಾ ಎಂದು ಬ್ಯಾನರ್ ಹಿಡಿದು ಅಭಿಮಾನಿಗಳು ಸಂಭ್ರಮಿಸಿದ್ದರು. ಇದನ್ನು ದರ್ಶನ್ ಫ್ಯಾನ್ಸ್ ಚಕಾರ ಎತ್ತಿದ್ದರು.

ಬಹಳ ಹಿಂದೆ ನಟ ಯಶ್ 6 ವರ್ಷಗಳ ಹಿಂದೆ ನಟ ಯಶ್ ತಮ್ಮ ಹೊಸ ಬೆಂಜ್ ಕಾರ್‌ಗಾಗಿ 8055 ನಂಬರ್ ಪಡೆದಿದ್ದರು. ಅದು ಬಹಳ ಸುದ್ದಿ ಆಗಿತ್ತು. 8055 ಅಂಕಿ BOSS ಎನ್ನುವಂತೆಯೂ ಕಾಣುತ್ತದೆ. ಹಾಗಾಗಿ 72 ಸಾವಿರ ಕೊಟ್ಟು ಯಶ್ ಈ ಫ್ಯಾನ್ಸಿ ನಂಬರ್ ಖರೀದಿಸಿದ್ದರು ಎಂದು ಸುದ್ದಿ ಆಗಿತ್ತು. ಪರೋಕ್ಷವಾಗಿ ನಾನೇ ಬಾಸ್ ಎನ್ನುತ್ತಿದ್ದಾರೆ ಎನ್ನುವ ಚರ್ಚೆ ನಡೆದಿತ್ತು.
ಯಶ್ ಅವರ ಕೆಲ ಕಾರುಗಳ ಮೇಲೆ 8055 ನಂಬರ್ ಇದೆ. ಅದನ್ನು BOSS ಎಂದು ಕೂಡ ಓದಿಕೊಳ್ಳಬಹುದು. ಇತ್ತೀಚೆಗೆ ನಟ ಯಶ್ ಹೆಚ್ಚು ಸಾರ್ವಜನಿಕವಾಗಿ ಕಾಣಿಸಿಕೊಳ್ಳುತ್ತಿಲ್ಲ. 'ಟಾಕ್ಸಿಕ್' ಸಿನಿಮಾ ಮುಹೂರ್ತಕ್ಕೂ ಮಾಧ್ಯಮದವರಿಗೆ ಆಹ್ವಾನ ಇರಲಿಲ್ಲ. ಇನ್ನು ಬ್ರಾಹ್ಮೀ ಮಹೂರ್ತದಲ್ಲಿ ನಡೆದ ಪೂಜೆಗೆ ಯಶ್ ತಮ್ಮ ಕಪ್ಪು ಬಣ್ಣದ ರೇಂಜ್ ರೋವರ್ ಕಾರ್‌ನಲ್ಲಿ ಬಂದಿಳಿದಿದ್ದಾರೆ. ಈ ವೇಳೆ ಕಾರಿನ ನಂಬರ್ ಪ್ಲೇಟ್‌ನಲ್ಲಿ ಮತ್ತದೇ 8055 ಸಂಖ್ಯೆ ಎದ್ದು ಕಾಣಿಸಿದೆ.
ಇನ್ನು 'ಟಾಕ್ಸಿಕ್' ಸಿನಿಮಾ ಬಹಳ ನಿರೀಕ್ಷೆ ಹುಟ್ಟಾಕ್ಕಿದೆ. ಪ್ಯಾನ್ ಇಂಡಿಯಾ ಮಟ್ಟದಲ್ಲಿ ಸಿನಿಮಾ ತೆರೆಗೆ ಬರಲಿದೆ. ಚಿತ್ರದಲ್ಲಿ ಯಾರೆಲ್ಲಾ ನಟಿಸುತ್ತಾರೆ ಎನ್ನುವ ಕುತೂಹಲವಿದೆ. 180 ಕೋಟಿ ಬಜೆಟ್ ಸಿನಿಮಾ ಎನ್ನಲಾಗ್ತಿದೆ. ಮುಂದಿನ ವರ್ಷ ಏಪ್ರಿಲ್ 10ಕ್ಕೆ 'ಟಾಕ್ಸಿಕ್' ತೆರೆಗೆ ಬರಬೇಕಿದೆ. ರಾಜೀವ್ ರವಿ ಚಿತ್ರಕ್ಕೆ ಛಾಯಾಗ್ರಾಹಕರಾಗಿ ಕೆಲಸ ಮಾಡಲಿದ್ದಾರೆ. ದೇಶ ವಿದೇಶಗಳಲ್ಲಿ ಸಿನಿಮಾ ಚಿತ್ರೀಕರಣ ನಡೆಯಲಿದೆ.


Click it and Unblock the Notifications











