ಹೀರೊಯಿನ್, ಲಿರಿಕ್ಸ್ ಬಿಟ್ಹಾಕಿ; ಉಪ್ಪಿ ಎಲ್ಲರನ್ನೂ ಟ್ರೋಲ್ ಮಾಡಿದ್ದಾರೆ ಅನ್ನೋದು ಗೊತ್ತಾಯ್ತಾ?
ಉಪೇಂದ್ರ ನಿರ್ದೇಶಿಸಿ ನಟಿಸುತ್ತಿರುವ 'ಯುಐ' ಸಿನಿಮಾ ಭಾರೀ ನಿರೀಕ್ಷೆ ಮೂಡಿಸಿದೆ. ಸದ್ಯ ಚಿತ್ರದ ಟ್ರೋಲ್ ಸಾಂಗ್ ಸಖತ್ ವೈರಲ್ ಆಗ್ತಿದೆ. ಉಪ್ಪಿ ಕ್ರಿಯೇಟಿವಿಟಿ ಸೂಪರ್ ಎಂದು ಅಭಿಮಾನಿಗಳು ಕೊಂಡಾಡುತ್ತಿದ್ದಾರೆ. ಅಜನೀಶ್ ಲೋಕನಾಥ್ ಸಂಗೀತ, ನರೇಶ್ ಕುಮಾರ್ ಸಾಹಿತ್ಯ ಸಾಂಗ್ ಸಂಚಲನ ಸೃಷ್ಟಿಸಿದೆ.
ಸೋಶಿಯಲ್ ಮೀಡಿಯಾದಲ್ಲಿ ಹೆಚ್ಚುನ ಟ್ರೋಲ್ ಆಗಿದ್ದ ಮೀಮ್ಸ್ ಆಗಿ ವೈರಲ್ ಆಗಿದ್ದ ಪದಗಳನ್ನು ಸೇರಿಸಿ ಈ ಸಾಂಗ್ ಕಟ್ಟಿಕೊಟ್ಟಿದ್ದಾರೆ. ರೀಲ್ಸ್‌ನಲ್ಲಿ ಮುಳುಗಿ ಹೋದ ನಾಯಕಿ, ಆಕೆಯ ಪ್ರೀತಿಯ ಬಗ್ಗೆ ಹೇಳುವಾಗ ಹಾಡು ಮೂಡಿ ಬಂದಿದೆ. ಇತ್ತೀಚೆಗೆ ಟ್ರೆಂಡ್ ಆಗಿದ್ದ ತಗಡು, ಗುಮ್ಮಿಸ್ಕೊತ್ತಿಯಾ, ಏನಂತೀರಾ ಸೇರಿದಂತೆ ಹಲವು ಜನಪ್ರಿಯ ಟ್ರೋಲ್‌ಗಳನ್ನು ಬಳಸಿ ಸಾಂಗ್ ಮಾಡಲಾಗಿದೆ.

ಪ್ಯಾನ್ ಇಂಡಿಯಾ ಸಿನಿಮಾ 'ಯುಐ' 5 ಭಾಷೆಗಳಲ್ಲಿ ತೆರೆಗೆ ಬರ್ತಿದೆ. ಆಯಾ ಭಾಷೆಗೆ ತಕ್ಕಂತೆ ಅಲ್ಲಿನ ಪ್ರಾದೇಶಿಕ ವಿಚಾರಗಳು, ಟ್ರೋಲ್ಸ್ ಸೇರಿಸಿ ಸಾಹಿತ್ಯ ಬರೆಯಲಾಗಿದೆ. 'ರಾಜ್ಯವೇ ಖುಷಿಪಡುವ ಸುದ್ದಿ', 'ನಾನು ನಂದಿನಿ', 'ಜೋಡೆತ್ತು', 'ಎಲ್ಲಿದ್ದಿಯಪ್ಪಾ', 'ಬೆಳ್ಳುಳ್ಳಿ ಕಬಾಬ್', 'ಮರ ಯಾಕೆ', 'ಹೆಂಗ್ ಪುಂಗ್ಲಿ', 'ಆರ್. ಚಂದ್ರು ಹೈಪ್', 'ಬಡವರು ಮಕ್ಕಳು ಬೆಳಿಬೇಕು', 'ನಾ ಡ್ರೈವರಾ', 'ಕರಿಮಣಿ ಮಾಲೀಕ' ಹೀಗೆ ಸಾಕಷ್ಟು ಜನಪ್ರಿಯ ಟ್ರೋಲ್ ಪದಗಳು ಹಾಡಿನಲ್ಲಿವೆ.
ಎಲ್ಲರೂ ಉಪೇಂದ್ರ ವಿಭಿನ್ನ ಶೈಲಿ, ವಿಭಿನ್ನ ಆಲೋಚನೆಯನ್ನು ಮೆಚ್ಚಿಕೊಂಡಿದ್ದಾರೆ. ಮುಖ್ಯವಾಗಿ ನಾಯಕಿಯ ಪ್ರಸೆನ್ಸ್ ಹಾಗೂ ಲಿರಿಕ್ಸ್ ಬಗ್ಗೆ ಮಾತನಾಡುತ್ತಿದ್ದಾರೆ. ಮೆಚ್ಚಿ ಕೊಂಡಾಡುತ್ತಿದ್ದಾರೆ. ಆದರೆ ಇದೆಲ್ಲದರ ನಡುವೆ ಉಪೇಂದ್ರ ಹೇಳಲು ಬಯಸಿರುವ ವಾಸ್ತವ ಸತ್ಯ ಇಲ್ಲಿ ಗೌಣವಾಗಿಬಿಟ್ಟಿದೆ. ನಿಜ ಹೇಳಬೇಕು ಅಂದ್ರೆ ಉಪೇಂದ್ರ ಹಾಡಿನಲ್ಲಿ ಎಲ್ಲರನ್ನು ಟ್ರೋಲ್ ಮಾಡಿದ್ದಾರೆ. ಅದು ಸಾಹಿತ್ಯದಲ್ಲಿ ಅಲ್ಲ ಹಾಡಿನ ಹಿನ್ನೆಲೆಯಲ್ಲಿ ಬರುವ ಒಂದಷ್ಟು ಸನ್ನಿವೇಶಗಳಲ್ಲಿ.
ಹಾಡು ನೋಡುವಾಗ ಬಹುತೇಕರ ಗಮನ ಸಾಹಿತ್ಯ ಹಾಗೂ ನಾಯಕಿಯ ಡ್ಯಾನ್ಸ್ ಮೇಲೆ ಇದೆ. ಆದರೆ ಹಾಡಿನಲ್ಲಿ ಸಾಕಷ್ಟು ಸಮಸ್ಯೆಗಳ ಬಗ್ಗೆ ಉಪೇಂದ್ರ ಹೇಳಲು ಪ್ರಯತ್ನಿಸಿದ್ದಾರೆ. ಜನಕ್ಕೆ ಏನೇ ಸಮಸ್ಯೆ ಇದ್ದರೂ ಅದೆಲ್ಲವನ್ನು ಬಿಟ್ಟು ಮೊಬೈಲ್ ನೋಡುತ್ತಾ ಕಾಲ ಕಳೆಯುತ್ತಿದ್ದಾರೆ. ಟ್ರೋಲ್ಸ್, ರೀಲ್ಸ್ ನೋಡ್ತಾ ತಮ್ಮದೇ ಲೋಕದಲ್ಲಿ ಕಳೆದುಹೋಗಿದ್ದಾರೆ ಎನ್ನುವುದನ್ನು ಹೇಳುವ ಪ್ರಯತ್ನ ಮಾಡಿದ್ದಾರೆ.
ಇವತ್ತು ಮೊಬೈಲ್ ಫೋನ್ ಇಲ್ಲದೇ ಜನ ಜೀವನವೇ ನಡೆಯುವುದಿಲ್ಲ ಎನ್ನುವಂತಾಗಿಬಿಟ್ಟಿದೆ. ಇದು ಒಂದುಮಟ್ಟಿಗೆ ಸತ್ಯ. ಆದರೆ ಅವಶ್ಯಕತೆಗಿಂತ ಹೆಚ್ಚು ಜನ ಮೊಬೈಲ್ ಫೋನ್ ಬಳಸುತ್ತಿದ್ದಾರೆ. ಬರೀ ಮಾತನಾಡಲು, ಅವಶ್ಯಕ ಕೆಲಸಗಳಿಗೆ ಉಪಯೋಗವಾಗಬೇಕಿದ್ದ ಮೊಬೈಲ್ ಈಗ ಅತಿಯಾದ ಬಳಕೆಯಿಂದ ಭಾರೀ ಸಮಸ್ಯೆ ಎದುರಾಗುತ್ತಿದೆ. ಮೊಬೈಲ್ ಕೈಯಲ್ಲಿದ್ದರೆ ಅಕ್ಕ ಪಕ್ಕ ಯಾರು ಇದ್ದಾರೆ? ಏನಾಗುತ್ತಿದೆ? ಎನ್ನುವುದನ್ನು ಮರೆತುಬಿಡುತ್ತಾರೆ.

ಸೋಶಿಯಲ್ ಮೀಡಿಯಾ ಗೀಳು ಹತ್ತಿಸಿಕೊಂಡವರ ಕಥೆಯಂತೂ ಮುಗಿದೇ ಹೋಯಿತು. ಸುಖಾ ಸುಮ್ಮನೆ ಮೊಬೈಲ್ ನೋಡುತ್ತಾ ಕಾಲ ಕಳೆಯುತ್ತಿದ್ದಾರೆ. ಅವಶ್ಯಕತೆಗಿಂತ ಹೆಚ್ಚು ಫೋನ್ ಬಳಸುತ್ತಿದ್ದಾರೆ. ಇದು ಕೆಟ್ಟ ಸ್ವರೂಪ ಪಡೆದುಕೊಳ್ಳುತ್ತಿದೆ. ಟ್ರೋಲ್ ಸಾಂಗ್‌ನಲ್ಲಿ ಸಾಕಷ್ಟು ವಾಸ್ತವ ಸಮಸ್ಯೆಗಳನ್ನು ತೋರಿಸಲಾಗಿದೆ. ನೀರಿಗಾಗಿ ಹಾಹಾಕಾರ, ಗುಂಡಿ ಬಿದ್ದ ರಸ್ತೆ, ಟ್ರಾಫಿಕ್, ಜಗಳ, ಇದನ್ನೆಲ್ಲಾ ಮರೆತು ಜನ ಬರೀ ಮೊಬೈಲ್‌ನಲ್ಲಿ ಮುಳುಗಿರುವುದನ್ನು ಹೇಳಲಾಗಿದೆ.
ಗರ್ಭಿಣಿ ಹೆರಿಗೆ ನೋವು ಅನುಭವಿಸುತ್ತಿದ್ದರೆ ಜೊತೆಗಿರುವಾಕೆ ಕೂಡ ಫೋನ್ ನೋಡುತ್ತಾ ಕುಳಿತ್ತಿದ್ದಾಳೆ. ರಸ್ತೆ ತುಂಬಾ ಕಸ ಬಿದ್ದಿದ್ದರೂ ಜನ ತಲೆ ಕೆಡಿಸಿಕೊಳ್ಳದೇ ಮೊಬೈಲ್ ನೋಡುತ್ತಿದ್ದಾರೆ. ಯಾರಾದರೂ ಗುಂಡಿಗೆ ಬಿದ್ದರೂ ಜನ ಕಾಪಾಡದೇ ಅದನ್ನು ವಿಡಿಯೋ ಮಾಡುವುದು ಹೀಗೆ ಸಾರ್ವಜನಿಕರ ಬೇಜವಾಬ್ದಾರಿಯನ್ನು ಉಪ್ಪಿ ಪರೋಕ್ಷವಾಗಿ ಖಂಡಿಸಿದ್ದಾರೆ.
ಬರೀ ಹಾಡು ಮಾತ್ರವಲ್ಲ ಸಿನಿಮಾದಲ್ಲಿ ಇಂತಹ ಸಾಕಷ್ಟು ವಿಚಾರಗಳ ಉಪೇಂದ್ರ ಬೆಳಕು ಚೆಲ್ಲುವ ಪ್ರಯತ್ನ ಮಾಡಿದ್ದಾರೆ ಎನ್ನುವುದು ಗೊತ್ತಾಗುತ್ತಿದೆ. ಟೈಟಲ್‌ನಿಂದಲೇ 'ಯುಐ' ಸಿನಿಮಾ ಕುತೂಹಲ ಮೂಡಿಸಿದೆ. ಇನ್ನು ಚಿತ್ರದ ಕಥೆ ಏನು ಎನ್ನುವುದರ ಬಗ್ಗೆ ಯಾವುದೇ ಸುಳಿವು ಕೊಟ್ಟಿಲ್ಲ ಉಪೇಂದ್ರ. ಹಾಗಾಗಿ ಸಿನಿಮಾ ಭಾರೀ ಕುತೂಹಲ ಮೂಡಿಸಿದೆ.


Click it and Unblock the Notifications











