ಈ ವರ್ಷ ಬಾಕ್ಸಾಫೀಸ್‌ನಲ್ಲಿ ಮುಗ್ಗರಿಸಿದ ಟಾಪ್ 10 ಕನ್ನಡ ಸಿನಿಮಾಗಳ ಲಿಸ್ಟ್
ಕನ್ನಡ ಸಿನಿರಸಿಕರನ್ನು ಒಪ್ಪಿಸುವುದು, ಮೆಚ್ಚಿಸುವುದು ಬಹಳ ಕಷ್ಟ ಎನ್ನುವ ಮಾತುಗಳು ಕೇಳಿಬರುತ್ತಲೇ ಇರುತ್ತದೆ. ಅಷ್ಟು ಸುಲಭವಾಗಿ ನಮ್ಮವರು ಯಾವುದೇ ಸಿನಿಮಾವನ್ನು ಒಪ್ಪಿಕೊಳ್ಳಲ್ಲ. ಪರಭಾಷಾ ಫಿಲ್ಮ್ ಮೇಕರ್ಸ್ ಕೂಡ ತಮ್ಮ ಸಿನಿಮಾಗಳ ರಿಪೋರ್ಟ್ ಬೆಂಗಳೂರಿನಲ್ಲಿ ಹೇಗಿದೆ ಎಂದು ತಿಳಿದುಕೊಳ್ಳಲು ಉತ್ಸುಕರಾಗಿರುತ್ತಾರೆ. ಇಲ್ಲಿ ಸಿನಿಮಾ ಗೆದ್ದರೆ ಎಲ್ಲಾ ಕಡೆ ಗೆದ್ದಂತೆ ಲೆಕ್ಕ ಎನ್ನುವ ವಾದವೂ ಇದೆ.
ಸಿನಿಮಾ ಸಕ್ಸಸ್ ಸೂತ್ರ ನಿಜಕ್ಕೂ ಯಾರಿಗೂ ಗೊತ್ತಿಲ್ಲ. ದೊಡ್ಡ ಸ್ಟಾರ್‌ಕಾಸ್ಟ್, ಭಾರೀ ಬಜೆಟ್, ಸ್ಟಾರ್ ನಟ, ಸ್ಟಾರ್ ನಿರ್ದೇಶಕ ಒಟ್ಟಿಗೆ ಕೈ ಜೋಡಿಸಿ ಸಿನಿಮಾ ಮಾಡಿದ ಮಾತ್ರಕ್ಕೆ ಅದು ಗೆಲ್ಲುವುದಿಲ್ಲ. ತೆರೆಮೇಲೆ ಮ್ಯಾಜಿಕ್ ನಡೆಯಬೇಕು. ಪ್ರೇಕ್ಷಕರನ್ನು ಸಿನಿಮಾ ಥಿಯೇಟರ್‌ನಲ್ಲಿ ಹಿಡಿದಿಟ್ಟುಕೊಳ್ಳಬೇಕು ಆಗ ಮಾತ್ರ ಸಕ್ಸಸ್ ಕಟ್ಟಿಟ್ಟಬುತ್ತಿ. ಈ ವರ್ಷ ಕನ್ನಡ ಸಿನಿಮಾಗಳು ಅಷ್ಟಾಗಿ ಸದ್ದು ಮಾಡಲಿಲ್ಲ. ಸಾಕಷ್ಟು ಸಿನಿಮಾಗಳು ಪ್ರೇಕ್ಷಕರ ಬರ ಎದುರುಸಿದ್ದವು.

ಭಾರೀ ನಿರೀಕ್ಷೆ ಮೂಡಿಸಿದ್ದ ಸಿನಿಮಾಗಳು ಪ್ರೇಕ್ಷಕರ ಮನಗೆಲ್ಲುವಲ್ಲಿ ವಿಫಲವಾಗಿದ್ದವು. ವಿಪರ್ಯಾಸ ಎಂದರೆ ಈ ವರ್ಷ ಕರ್ನಾಟಕದಲ್ಲಿ ಅತಿಹೆಚ್ಚು ಗಳಿಕೆ ಕಂಡ ಸಿನಿಮಾ ಕನ್ನಡ ಸಿನಿಮಾ ಅಲ್ಲ. ತಮಿಳು ಸಿನಿಮಾ. ಅರಗಿಸಿಕೊಳ್ಳುವುದಕ್ಕೆ ಕಷ್ಟ ಎನಿಸಿದರೂ ಇದೇ ಸತ್ಯ. ಹಾಗಾದ್ರೆ ಈ ವರ್ಷ ಭಾರೀ ನಿರೀಕ್ಷೆ ಮೂಡಿಸಿ ಸೋಲುಂಡ ಟಾಪ್ 10 ಕನ್ನಡ ಸಿನಿಮಾಗಳು ಯಾವುವು? ಮುಂದೆ ಓದಿ.
1. ಕಬ್ಜ
ಆರ್. ಚಂದ್ರು ನಿರ್ದೇಶನದಲ್ಲಿ ರಿಯಲ್ ಸ್ಟಾರ್ ಉಪೇಂದ್ರ ನಟನೆಯ 'ಕಬ್ಜ' ಸಿನಿಮಾ ಭಾರೀ ನಿರೀಕ್ಷೆ ಮೂಡಿಸಿದ್ದು ಸುಳ್ಳಲ್ಲ. ಚಿತ್ರದಲ್ಲಿ ಕಿಚ್ಚ ಸುದೀಪ್, ಶಿವಣ್ಣ ಅತಿಥಿ ಪಾತ್ರಗಳಲ್ಲಿ ನಟಿಸಿದ್ದರು. 'KGF' ರೇಂಜ್ ಸಿನಿಮಾ ಎಂದೇ 'ಕಬ್ಜ' ಚಿತ್ರವನ್ನು ಬಿಂಬಿಸಲಾಗಿತ್ತು. ಆದರೆ ಪ್ಯಾನ್ ಇಂಡಿಯಾ ಮಟ್ಟದಲ್ಲಿ ರಿಲೀಸ್ ಆಗಿದ್ದ ಸಿನಿಮಾ ಗೆಲ್ಲಲಿಲ್ಲ. ನಿರ್ಮಾಪಕರು ಸೇಫ್ ಆಗಿದ್ದಾರೆ. ಆದರೆ ವಿತರಕರು ಹಾಗೂ ಡಿಜಿಟಲ್ ರೈಟ್ಸ್ ಪಡೆದ ಅಮೇಜಾನ್ ಪ್ರೈಂ ನಷ್ಟ ಅನುಭವಿಸಿರುವುದಾಗಿ ಹೇಳಲಾಗ್ತಿದೆ.
2. ಟೋಬಿ
ರಾಜ್ ಬಿ. ಶೆಟ್ಟಿ ಚಿತ್ರಕಥೆ ಬರೆದು ನಟಿಸಿದ್ದ 'ಟೋಬಿ' ಸಿನಿಮಾ ಈ ವರ್ಷ ಸೋಲುಂಡ ಮತ್ತೊಂದು ಪ್ರಮುಖ ಸಿನಿಮಾ. ಪೋಸ್ಟರ್, ಟ್ರೈಲರ್‌ನಿಂದ ಬಾಸಿಲ್ ನಿರ್ದೇಶನದ ಸಿನಿಮಾ ಗಮನ ಸೆಳೆದಿತ್ತು. ರಾಜ್ ಬಿ. ಶೆಟ್ಟಿ ನಟನೆ ಬಗ್ಗೆಯೂ ಮೆಚ್ಚುಗೆ ವ್ಯಕ್ತವಾಗಿತ್ತು. ಆದರೆ ದೊಡ್ಡಮಟ್ಟದಲ್ಲಿ ಪ್ರೇಕ್ಷಕರನ್ನು ಸೆಳೆಯುವಲ್ಲಿ 'ಟೋಬಿ' ವಿಫಲವಾಗಿದ್ದು ಸುಳ್ಳಲ್ಲ. ಈ ವಾರವೇ ಸಿನಿಮಾ ಸೋನಿಲಿವ್‌ನಲ್ಲಿ ಸ್ಟ್ರೀಮಿಂಗ್ ಆಗಲಿದೆ.

3. ಬ್ಯಾಡ್ ಮ್ಯಾನರ್ಸ್
ದುನಿಯಾ ಸೂರಿ ಬಹಳ ದಿನಗಳ ನಂತರ ಕಟ್ಟಿಕೊಟ್ಟ 'ಬ್ಯಾಡ್ ಮ್ಯಾನರ್ಸ್' ಸಿನಿಮಾ ಕೂಡ ಫ್ಲಾಟ್ ಲಿಸ್ಟ್ ಸೇರಿದೆ. 'ಅಮರ್' ಬಳಿಕ ಅಭಿಷೇಕ್ ಅಂಬರೀಶ್ ಈ ಚಿತ್ರದಲ್ಲಿ ನಟಿಸಿದ್ದರು. ಸೂರಿ ಅಭಿಮಾನಿಗಳಿಗೆ ಸಿನಿಮಾ ಇಷ್ಟವಾದರೂ ಸಾಮಾನ್ಯ ಪ್ರೇಕ್ಷಕರಿಗೆ ಹತ್ತರವಾಗಲಿಲ್ಲ. ಅಭಿ ನಟನೆ ಬಗ್ಗೆ ಮೆಚ್ಚುಗೆ ವ್ಯಕ್ತವಾಯಿತು.
4. ಬಾನ ದಾರಿಯಲ್ಲಿ
ಪ್ರೀತಂ ಗುಬ್ಬಿ ಹಾಗೂ ಗಣೇಶ್ ಕಾಂಬಿನೇಷನ್‌ನಲ್ಲಿ ಬಂದ 'ಬಾನ ದಾರಿಯಲ್ಲಿ' ಸಿನಿಮಾ ಕೂಡ ಪ್ರೇಕ್ಷಕರ ನಿರೀಕ್ಷೆ ತಲುಪುವಲ್ಲಿ ವಿಫಲವಾಗಿತ್ತು. ಕೀನ್ಯಾದ ಎಪಿಸೋಡ್ ಬಗ್ಗೆ ಮೆಚ್ಚುಗೆ ವ್ಯಕ್ತವಾಗಿತ್ತು. ಚಿತ್ರದಲ್ಲಿ ರುಕ್ಮಿಣಿ ವಸಂತ್, ರೀಷ್ಮಾ ನಾಣಯ್ಯ ನಾಯಕಿಯರಾಗಿ ನಟಿಸಿದ್ದರು. ಒಳ್ಳೆ ಓಪನಿಂಗ್ ಪಡೆದುಕೊಂಡರೂ ಕೂಡ ಸಿನಿಮಾ ಗೆಲುವಿನ ದಡ ಸೇರಲಿಲ್ಲ.
5. ಗರಡಿ
ಬಿ. ಸಿ ಪಾಟೀಲ್ ನಿರ್ಮಿಸಿ, ನಟಿಸಿದ್ದ 'ಗರಡಿ' ಸಿನಿಮಾ ಭಾರೀ ನಿರೀಕ್ಷೆ ಮೂಡಿಸಿದ್ದು ಸುಳ್ಳಲ್ಲ. ಯಶಸ್ ಸೂರ್ಯ, ಸೋನಲ್ ಮಂಥೆರೋ ಚಿತ್ರದ ಲೀಡ್ ರೋಲ್‌ಗಳಲ್ಲಿ ನಟಿಸಿದ್ದರು. ಯೋಗರಾಜ್ ಭಟ್ ನಿರ್ದೇಶನದ ಚಿತ್ರಕ್ಕೆ ವಿ. ಹರಿಕೃಷ್ಣ ಸಂಗೀತವಿತ್ತು. ಹಳ್ಳಿ ಸೊಗಡಿನ ಸಿನಿಮಾ ಕುತೂಹಲ ಮೂಡಿಸಿತ್ತಾರೂ ಪ್ರೇಕ್ಷಕರ ಮನಗೆಲ್ಲವಲ್ಲಿ ಯಶ ಕಾಣಲಿಲ್ಲ. ದರ್ಶನ್ ಗೆಸ್ಟ್ ಅಪಿಯರೆನ್ಸ್‌ಗೆ ಅದ್ಭುತ ರೆಸ್ಪಾನ್ಸ್ ಸಿಕ್ಕಿತ್ತಾದರೂ ಆ ಅಂಶವೊಂದೇ ಚಿತ್ರವನ್ನು ಮೇಲೆತ್ತಲು ಸಾಧ್ಯವಾಗಲಿಲ್ಲ.
6. ತೋತಾಪುರಿ- 2
ಕಳೆದ ವರ್ಷ ತೆರೆಗೆ ಬಂದಿದ್ದ 'ತೋತಾಪುರಿ- 1' ಸಿನಿಮಾ ಬಾಕ್ಸಾಫೀಸ್‌ನಲ್ಲಿ ಮುಗ್ಗರಿಸಿತ್ತು. ಆದರೂ ಮೊದ್ಲೆ ಎರಡು ಭಾಗಗಳಾಗಿ ಸಿನಿಮಾ ನಿರ್ಮಾಣವಾಗಿತ್ತು. ವಿಜಯ ಪ್ರಸಾದ್- ಜಗ್ಗೇಶ್ ಕಾಂಬೋ ಮ್ಯಾಜಿಕ್ ಮಿಸ್ ಆಗಿತ್ತು. ಧನಂಜಯ, ಸುಮನಾ ರಂಗನಾಥ್ ಚಿತ್ರದಲ್ಲಿದ್ದರು. ಈ ವರ್ಷ 'ತೋತಾಪುರಿ- 2' ಬಂದು ಹೋಗಿದ್ದೇ ಯಾರಿಗೂ ಗೊತ್ತಾಗಲಿಲ್ಲ.
7. ರಾಜಮಾರ್ತಾಂಡ
ಚಿರಂಜೀವಿ ಸರ್ಜಾ ನಟನೆಯ ಕೊನೆಯ ಸಿನಿಮಾ 'ರಾಜಮಾರ್ತಾಂಡ' ಈ ವರ್ಷ ಬಿಡುಗಡೆಯಾಗಿತ್ತು. ಚಿತ್ರದಲ್ಲಿ ಚಿರು ಪಾತ್ರಕ್ಕೆ ಸಹೋದರ ಧ್ರುವ ಸರ್ಜಾ ವಾಯ್ಸ್ ನೀಡಿದ್ದರು. ಆಕ್ಷನ್ ಪ್ರಿನ್ಸ್ ಹುಟ್ಟುಹಬ್ಬದ ಸಂಭ್ರಮದಲ್ಲೇ 'ರಾಜಮಾರ್ತಾಂಡ' ಸಿನಿಮಾ ತೆರೆಗೆ ಬಂದಿತ್ತು. ಆದರೆ ಸಿನಿಮಾ ಗೆಲ್ಲಲಿಲ್ಲ.
8. ತತ್ಸಮ ತದ್ಭವ
ಮೇಘನಾ ರಾಜ್ ಕಂಬ್ಯಾಕ್ ಸಿನಿಮಾ ಎನ್ನುವ ಕಾರಣಕ್ಕೆ 'ತತ್ಸಮ ತದ್ಭವ' ಸಿನಿಮಾ ನಿರೀಕ್ಷೆ ಮೂಡಿಸಿತ್ತು. ಚಿತ್ರದಲ್ಲಿ ಪ್ರಜ್ವಲ್ ದೇವರಾಜ್ ಪೊಲೀಸ್ ಆಫೀಸರ್ ಪಾತ್ರದಲ್ಲಿ ಮಿಂಚಿದ್ದರು. ಒಂದೊಳ್ಳೆ ಸಸ್ಪೆನ್ಸ್ ಥ್ರಿಲ್ಲರ್ ಎನ್ನುವ ಮಾತುಗಳು ಕೇಳಿಬಂದಿತ್ತಾದರೂ ಓಟಿಟಿ ಹೇಳಿ ಮಾಡಿಸಿದ ಸಿನಿಮಾ ಎನ್ನುವ ಹಣೆಪಟ್ಟಿ ಕೆಲವರು ಕಟ್ಟಿಬಿಟ್ಟರು.
9. ಸ್ವಾತಿ ಮುತ್ತಿನ ಮಳೆಹನಿಯೇ
ನಟಿ ರಮ್ಯಾ ನಿರ್ಮಾಣದ ಮೊದಲ ಸಿನಿಮಾ 'ಸ್ವಾತಿ ಮುತ್ತಿನ ಮಳೆಹನಿಯೇ'. ಮೊದಲಿಗೆ ಈ ಚಿತ್ರದಲ್ಲಿ ರಮ್ಯಾ ನಾಯಕಿಯಾಗಿ ನಟಿಸೋದಾಗಿ ಘೋಷಣೆ ಆಗಿತ್ತು. ಆದರೆ ಬಳಿಕ ಸಿರಿ ರವಿಕುಮಾರ್ ನಾಯಕಿಯಾಗಿ ನಟಿಸಿದರು. ರಾಜ್. ಬಿ ಶೆಟ್ಟಿ ಕಥೆ, ಚಿತ್ರಕಥೆ ಬರೆದು ನಿರ್ದೇಶಿಸಿ ನಟಿಸಿದ್ದ ರೊಮ್ಯಾಂಟಿಕ್ ಸಿನಿಮಾ ಪ್ರೇಕ್ಷಕರ ಬರ ಎದುರಿಸಿತು.
10. ಗೌಳಿ
ಶ್ರೀನಗರ ಕಿಟ್ಟಿ ಬಹಳ ದಿನಗಳ ನಂತರ ನಟಿಸಿದ ಸಿನಿಮಾ ಇದು. ಟೀಸರ್, ಟ್ರೈಲರ್‌ನಿಂದ 'ಗೌಳಿ' ಸಿನಿಮಾ ಕುತೂಹಲ ಮೂಡಿಸಿತ್ತು. ಹಸು ಸಾಕಿ ಹಾಲು ಮಾರಿ ಬದುಕುವ ಗೌಳಿ ಸಮುದಾಯದ ಕಥೆಯನ್ನು ಚಿತ್ರದಲ್ಲಿ ನಿರ್ದೇಶಕ ಸುರ ಹೇಳಿದ್ದರು. ಆ ಸಮುದಾಯದ ಪ್ರತಿನಿಧಿಯಾಗಿ ಕಿಟ್ಟಿ ನಟಿಸಿದ್ದರು. ಆದರೆ ಸಿನಿಮಾ ಬಾಕ್ಸಾಫೀಸ್‌ನಲ್ಲಿ ಸದ್ದು ಮಾಡಲೇಯಿಲ್ಲ.


Click it and Unblock the Notifications











