'ಕಲ್ಕಿ', 'ಪುಷ್ಪ' ಗಣೇಶ ಮೂರ್ತಿಗಳ ದರ್ಬಾರ್; ನಿಮಗೆ ಗೊತ್ತಾ ಈ ಟ್ರೆಂಡ್ ಹುಟ್ಟುಹಾಕಿದ್ದೇ ಅಣ್ಣಾವ್ರ ಫ್ಯಾನ್ಸ್
ವಿಘ್ನ ನಿವಾರಕ ಗಣೇಶನನ್ನು ನಾನಾ ಹೆಸರುಗಳಿಂದ ಪೂಜಿಸಲಾಗುತ್ತದೆ. ಗಣಪನಿಗೆ ನಾನಾ ರೂಪಗಳೂ ಇವೆ. ಇನ್ನು ಕಲಾವಿದರು ತಮ್ಮದೇ ಕಲ್ಪನೆಯಲ್ಲಿ ವಿಘ್ನೇಶ್ವರನಿಗೆ ನಾನಾ ರೀತಿಯ ವೇಷಭೂಷಣ ತೊಡಿಸಿ ಖುಷಿಪಡುತ್ತಾರೆ.
ಸಾಮಾನ್ಯವಾಗಿ ಫೋಟೊಗಳಲ್ಲಿ ಪೀಠದ ಮೇಲೆ ಕುಳಿತ ಗಣಪನನ್ನು ಮೊದಲಿಗೆ ನೋಡುತ್ತಿದ್ದೆವು. ಬಳಿಕ ತಾವರೆ ಹೂವಿನ ಮೇಲೆ, ಇಲಿ, ನವಿಲು, ಆನೆ, ಸಿಂಹ ಮೇಲೆ ಕುಳಿತಂತೆ ಚಿತ್ರಕಲಾವಿದರು ಗಣೇಶನನ್ನು ಚಿತ್ರಗಳನ್ನು ಬಿಡಿಸಲು ಆರಂಭಿಸಿದರು. ಬಳಿಕ ಇದರಿಂದ ಪ್ರೇರಣೆಗೊಂಡು ಗಣೇಶ ಮೂರ್ತಿ ತಯಾರಕರು ಗಣಪನಿಗೆ ನಾನಾ ರೂಪ ಕೊಟ್ಟರು. ಜನ ಅಂತಹ ಗಣೇಶ ಮೂರ್ತಿಗಳನ್ನು ಮುಗಿಬಿದ್ದು ಕೊಳ್ಳಲು ಆರಂಭಿಸಿದರು.

ಇತ್ತೀಚಿನ ವರ್ಷಗಳಲ್ಲಿ ಗಜಾನನನ ಭಿನ್ನ ವಿಭಿನ್ನ ಮೂರ್ತಿಗಳು ಮಾರುಕಟ್ಟೆಯಲ್ಲಿ ಸಿಗುತ್ತವೆ. ಅರ್ಧನಾರೀಶ್ವರ, ವೆಂಕಟೇಶ್ವರ ಹೀಗೆ ನಾನಾ ದೇವರ ಅವತಾರಗಳಲ್ಲಿ ಗಣೇಶ ಮೂರ್ತಿಗಳನ್ನು ತಯಾರಿಸಲಾಗುತ್ತಿದೆ. ಕೆಲ ವರ್ಷಗಳಿಂದ ಅದಕ್ಕೆ ಸಿನಿಮಾ ಟಚ್ ಕೊಡುವ ಕೆಲಸ ಆರಂಭವಾಯಿತು. 'ಬಾಹುಬಲಿ' ಚಿತ್ರದಲ್ಲಿ ಪ್ರಭಾಸ್ ಶಿವಲಿಂಗ ಹೊತ್ತು ನಡೆಯುವ ರೀತಿಯಲ್ಲಿ ಗಣೇಶನ ಮೂರ್ತಿ ದೊಡ್ಡದಾಗಿ ಸದ್ದು ಮಾಡಿತ್ತು. ಆ ಫೋಟೊಗಳು ಬಹಳ ಟ್ರೆಂಡ್ ಆಗಿತ್ತು.
ಇತ್ತೀಚಿನ ವರ್ಷಗಳಲ್ಲಿ 'ಕೆಜಿಎಫ್' ರಾಕಿಭಾಯ್, 'ಪುಷ್ಪ'ರಾಜ್ ಅವತಾರಗಳಲ್ಲಿ ಗಣೇಶ ಮೂರ್ತಿಗಳನ್ನು ನೋಡುತ್ತಿದ್ದೇವೆ. ಈ ವರ್ಷ ಪ್ರಭಾಸ್ ನಟನೆಯ 'ಕಲ್ಕಿ' ಚಿತ್ರದಿಂದ ಪ್ರೇರಣೆಗೊಂಡು ಗಣೇಶ ಮೂರ್ತಿಯನ್ನು ನಿರ್ಮಿಸಲಾಗಿದೆ. ತಮಿಳುನಾಡಿನಲ್ಲಿ 'ಕಲ್ಕಿ' ಚಿತ್ರವನ್ನು ನೆನಪಿಸುವ ಸೆಟ್ ನಿರ್ಮಿಸಿ ಗಣೇಶ ಮೂರ್ತಿಯನ್ನು ಪ್ರತಿಷ್ಠಾಪಿಸಿ ಪೂಜೆ ಮಾಡಲಾಗುತ್ತಿದೆ. ಮಕ್ಕಳನ್ನು ಇಂತಹ ಗಣೇಶ ಮೂರ್ತಿಗಳು ಹೆಚ್ಚು ಹೆಚ್ಚು ಆಕರ್ಷಿಸುತ್ತಿವೆ.

ತಮಿಳುನಾಡಿದ ಡೆಕಣಿಕೋಟೆಯಲ್ಲಿ 30 ಲಕ್ಷ ರೂ. ವೆಚ್ಚದಲ್ಲಿ 'ಕಲ್ಕಿ' ಸಿನಿಮಾ ಥೀಮ್ ಸೆಟ್ ನಿರ್ಮಿಸಲಾಗಿದೆ. ಅಶ್ವತ್ಥಾಮನ ಅವಾತಾರದಲ್ಲಿ ಗಣೇಶ ಮೂರ್ತಿ ತಯಾರಿಸಿ ಪ್ರತಿಷ್ಠಾಪಿಸಲಾಗಿದೆ. ಬುಜ್ಜಿ ಕಾರು, ಕಾಂಪ್ಲೆಕ್ಸ್ ಸೆಟ್, ಯಾಸ್ಕೀನ್ ಪಾತ್ರ ಎನ್ನವನ್ನು ಇಲ್ಲಿ ನೋಡಬಹುದು. ದೂರದ ಊರುಗಳಿಂದ ಜನ ಹೋಗಿ ಈ 'ಕಲ್ಕಿ' ಸಿನಿಮಾ ಥೀಮ್ ಗಣೇಶ ಪೆಂಡಾಲ್ ನೋಡಿ ಬರುತ್ತಿದ್ದಾರೆ.
'ಕಲ್ಕಿ' ಮಾತ್ರವಲ್ಲ 'ಕಾಂತಾರ'(ಪಂಜುರ್ಲಿ ದೈವ), 'ದೇವರ' ಸಿನಿಮಾಗಳ ಪಾತ್ರಗಳಿಂದಲೂ ಪ್ರೇರಣೆಗೊಂಡು ಗಣೇಶ ಮೂರ್ತಿ ನಿರ್ಮಿಸಲಾಗಿದೆ. ಆಂಧ್ರ, ತೆಲಂಗಾಣದಲ್ಲಿ ಅಲ್ಲು ಅರ್ಜುನ್ ಅಭಿಮಾನಿಗಳು ಮತ್ತೊಮ್ಮೆ 'ಪುಷ್ಪ'ರಾಜ್ ಗೆಟಪ್ ಗಣೇಶನನ್ನು ಪ್ರತಿಷ್ಠಾಪಿಸಿ ಪೂಜಿಸುತ್ತಿದ್ದಾರೆ. ಇನ್ನು ಜ್ಯೂ. ಎನ್‌ಟಿಆರ್ ಫ್ಯಾನ್ಸ್ 'ದೇವರ' ಪಾತ್ರದ ರೀತಿಯಲ್ಲಿ ಗಣೇಶನನ್ನು ನೋಡಿ ಖುಷಿಪಡುತ್ತಿದ್ದಾರೆ. ಈಗಾಗಲೇ ಇಂತಹ ಗಣೇಶ ಮೂರ್ತಿಗಳ ಫೋಟೊಗಳು ವೈರಲ್ ಆಗುತ್ತಿದೆ.
ನಿಜ ಹೇಳಬೇಕು ಅಂದರೆ ಇಂತಹ ವಿಭಿನ್ನ ರೀತಿಯ ಗಣೇಶ ಮೂರ್ತಿಗಳ ಟ್ರೆಂಡ್ ಮೊದಲಿಗೆ ಕರ್ನಾಟಕದಲ್ಲೇ ಶುರುವಾಗಿತ್ತು. ಇಂತಾದೊಂದು ಟ್ರೆಂಡ್ ಹುಟ್ಟುಹಾಕಿದ್ದು ಡಾ. ರಾಜ್‌ಕುಮಾರ್ ಅಭಿಮಾನಿಗಳು ಎನ್ನುವುದು ವಿಶೇಷ. ಬಹಳ ಹಿಂದೆಯೇ ಡಾ. ರಾಜ್‌ಕುಮಾರ್ ಹಾಗೂ ವೀರಪ್ಪನ್ ಥೀಮ್ ಗಣೇಶಗಳನ್ನು ಅಭಿಮಾನಿಗಳು ಪ್ರತಿಷ್ಠಾಪಿಸಿದ್ದರು.
ಕನ್ನಡ ಕಣ್ಮಣಿ ಡಾ. ರಾಜ್‌ಕುಮಾರ್ ಅವರನ್ನು ಕಾಡುಗಳ್ಳ ವೀರಪ್ಪನ್ ಅಪಹರಿಸಿದ್ದು ಗೊತ್ತೇಯಿದೆ. 108 ದಿನಗಳ ಕಾಲ ಅಣ್ಣಾವ್ರು ವಿರಪ್ಪನ್ ಜೊತೆ ಕಾಡು ಮೇಡು ಅಲೆಯುವಂತಾಗಿತ್ತು. ಅಣ್ಣಾವ್ರ ಬಿಡುಗಡೆ ಬಳಿಕ ಅಭಿಮಾನಿಗಳು ಇದೇ ಥೀಮ್‌ನಲ್ಲಿ ಗಣೇಶ ಮೂರ್ತಿ ಪ್ರತಿಷ್ಠಾಪಿಸಿ ಪೂಜೆ ಮಾಡಿದ್ದರು. ವೀರಪ್ಪನ್ ಕಲಾಕೃತಿ ಜೊತೆ ಅಣ್ಣಾವ್ರ ಕಲಾಕೃತಿ ಇಟ್ಟು ಗಮನ ಸೆಳೆದಿದ್ದರು. ಮುಂದೆ ಇದು ದೊಡ್ಡ ಮಟ್ಟದಲ್ಲಿ ಮುಂದುವರೆಯಿತು.
ರಾಜ್‌ಕುಮಾರ್ ಅಪಹರಣ ಪ್ರಕರಣವನ್ನು ಪ್ರಸ್ತಾಪಿಸಿ 'ಕುಟುಂಬ' ಚಿತ್ರದಲ್ಲಿ ಉಪೇಂದ್ರ ಒಂದು ಹಾಡು ಬರೆದಿದ್ದರು. 'ಜೈ ಗಣೇಶ' ಎಂದು ಕುಣಿಸಿದ್ದರು. ಆ ಹಾಡಿನಲ್ಲಿ ಕೂಡ ಇದೇ ಥೀಮ್ ಅನ್ನು ತೋರಿಸುವ ಪ್ರಯತ್ನ ಮಾಡಲಾಗಿತ್ತು. ಈಗ ಗಣೇಶ ಮೂರ್ತಿ ಪ್ರತಿಷ್ಠಾಪನೆಗೆ ಜನ ಹೊಸ ಹೊಸ ಥೀಮ್‌ಗಳ ಹುಡುಕಾಟ ನಡೆಸುತ್ತಿದ್ದಾರೆ. ಆದರೆ ಗ್ಯಾಂಗ್‌ಸ್ಟರ್ ರಾಕಿಭಾಯ್, ಸ್ಮಗ್ಲರ್ ಪುಷ್ಪರಾಜ್ ಗೆಟಪ್‌ಗಳಲ್ಲಿ ಗಣೇಶ ಮೂರ್ತಿ ಪ್ರತಿಷ್ಠಾಪಿಸುವ ಬಗ್ಗೆ ಕೆಲವರು ಬೇಸರ ವ್ಯಕ್ತಪಡಿಸುತ್ತಿದ್ದಾರೆ.


Click it and Unblock the Notifications











