ಅಮರಶಿಲ್ಪಿ ಜಕಣಾಚಾರಿ ಚಿತ್ರ ಡಾ.ರಾಜ್ ಕೈ ತಪ್ಪಿದ್ಹೇಗೆ..? ಅಣ್ಣಾವ್ರ ಜಾಗಕ್ಕೆ ಕಲ್ಯಾಣ್ ಕುಮಾರ್ ಬಂದಿದ್ಹೇಗೆ..?
ಡಾ.ರಾಜ್ ಕುಮಾರ್.. ಕನ್ನಡ ಚಲನಚಿತ್ರ ರಂಗದ ಶಿಖರ ಪ್ರಾಯ. ಅಭಿಮಾನಿಗಳಲ್ಲಿ ದೇವರನ್ನ ಕಂಡ ದೇವತಾ ಮನುಷ್ಯ. ಗೋಕಾಕ್ ಚಳುವಳಿಯನ್ನು ಒಳಗೊಂಡಂತೆ ಕನ್ನಡನಾಡು-ನುಡಿಗೆ ಧಕ್ಕೆ ಬಂದಾಗ ಬೀದಿಗೆ ಬಂದು ಪ್ರಜಾಸತ್ತಾತ್ಮಕ ಹೋರಾಟಕ್ಕೆ ಬೆಂಬಲವಾಗುತ್ತಲೇ ಕೇಂದ್ರಶಕ್ತಿಯಾದವರು ಡಾ.ರಾಜ್ ಕುಮಾರ್. ತಮ್ಮ ಜೀವಿತಾವಧಿಯಲ್ಲಿ ಹತ್ತಾರು ಪಾತ್ರ.. ನೂರಾರು ಚಿತ್ರಗಳನ್ನ ಮಾಡಿರುವ ಡಾ.ರಾಜ್ ಕುಮಾರ್, ಹಾಗೇ ನೋಡಿದರೆ ಕನ್ನಡ ದ ಮೊಟ್ಟ ಮೊದಲ ವರ್ಣ ಚಿತ್ರ ಅಮರಶಿಲ್ಪಿ ಜಕಣಾಚಾರಿ ಚಿತ್ರದ ನಾಯಕನಾಗಬೇಕಿತ್ತು. ಆದರೆ ಅದು ಆಗಲಿಲ್ಲ ಅನ್ನುವುದು ಬಹುತೇಕರಿಗೆ ಗೊತ್ತಿರದ ವಿಚಾರ.
ಹೌದು. ನಿಮಗೆ ಗೊತ್ತಿರಲಿ .. ಅಮರ ಶಿಲ್ಪಿ ಜಕಣಾಚಾರಿ ಚಿತ್ರಕ್ಕೆ ನಾಯಕನಾಗಿ ಆಯ್ಕೆಯಾದ ಮೇಲೂ ಆ ಚಿತ್ರದಿಂದ ವಂಚಿತರಾದವರು ಡಾ.ರಾಜ್ ಕುಮಾರ್. ಅವರ ಸ್ಥಾನಕ್ಕೆ ನಂತರ ಬಂದವರು ಕಲ್ಯಾಣ್ ಕುಮಾರ್. ಇದಕ್ಕೆ ಸಾಕ್ಷಿ ಅನ್ನುವಂತೆ ಚಿತ್ರೀಕರಣಕ್ಕೂ ಮುನ್ನ ಲುಕ್ ಟೆಸ್ಟ್ ಮಾಡಲು ಅಣ್ಣಾವ್ರನ್ನ ಸ್ಟುಡಿಯೋಗೆ ಬಿಎಸ್ ರಂಗಾ ಕರೆದಿದ್ದರು. ಸೋದರ ವರದಪ್ಪನವರ ಕಾರಿನಲ್ಲಿ ಡಾ.ರಾಜ್ ಕುಮಾರ್ ಸ್ಟುಡಿಯೋವರೆಗೆ ಡ್ರಾಫ್ ಮಾಡಿಸಿಕೊಂಡಿದ್ದರು ಕೂಡ. ಆದರೆ.. ಆ ನಂತರ ಅಣ್ಣಾವ್ರು ಮೇಕಪ್ ಮಾಡಿಕೊಂಡು ಕಾದಿದ್ದೇ ಬಂತು. ನಿರ್ದೇಶಕರಾದ ಬಿ.ಎಸ್.ರಂಗಾ ಮೇಕಪ್ ರೂಮ್ ಬಳಿ ಸುಳಿಯಲೇ ಇಲ್ಲ.

ಅಕ್ಷರಶಃ ಡಾ.ರಾಜ್ ಅವರ ತಾಳ್ಮೆಯ ಪರೀಕ್ಷೆ ನಡೆಯುತ್ತಿದ್ದ ದಿನ ಅದು. ಆದರೂ ಅಣ್ಣಾವ್ರು ಸಂಯಮವನ್ನ ಕಳೆದುಕೊಳ್ಳಲಿಲ್ಲ. ಬದಲಿಗೆ ಅವರು ಯಾವುದೋ ಚರ್ಚೆಯಲ್ಲಿದ್ದಾರೆ, ಬರ‍್ತಾರೆ ಅಣ್ಣ ಎಂದು ಮೇಕಪ್ ಮ್ಯಾನ್ ಹೇಳಿದಾಗ ಕೂಡ ಪರವಾಗಿಲ್ಲ ಬಿಡಿ ಎಂದು ಕಾಯುತ್ತ ಕೂತರು ಡಾ.ರಾಜ್ ಕುಮಾರ್. ಕೊನೆಗೆ ಸಮಯದ ಮುಳ್ಳು ತಿರುಗುತ್ತಾನೇ ಇತ್ತು. ಆದರೂ ಯಾರೂ ಬರದೇ ಇದ್ದಾಗ ರಾಜಕುಮಾರ್ ಮೇಕಪ್ ಮ್ಯಾನ್ ಕರೆದು ವಿಚಾರಿಸಿಕೊಂಡು ಬರಲು ಹೇಳಿದರು. ಆಗ ರಾಜ್ ಕಾದಿದ್ದು ನಿಜಕ್ಕೂ ಅಚ್ಚರಿ ಹಾಗೂ ನಿರಾಸೆ.
ಯಾಕೆಂದರೆ ಡಾ.ರಾಜ್ ಕುಮಾರ್ ಅಣತಿಯಂತೆ ಹೋಗಿ ಬಂದ ಆ ಮೇಕಪ್ ಮ್ಯಾನ್, ಅಣ್ಣ, ನೀವು ಮನೆಗೆ ಹೋಗ್‌ಬೇಕಂತೆ ಎಂದು ಹೇಳಿದ್ದರು. ಮೇಕಪ್ ಮ್ಯಾನ್ ಆಡಿದ ಈ ಮಾತುಗಳಿಂದ ವಿಚಲಿತಗೊಂಡರೂ ಡಾ.ರಾಜ್, ಅವತ್ತು ಹೋಗಿ ಯಾಕೆಂದು ಕೇಳಲಿಲ್ಲ. ಮರು ಮಾತನಾಡದೇ ವಾಪಸ್ ಮನೆಗೆ ಹೋಗಲು ನಿರ್ಧಾರ ಮಾಡಿದರು.
ಇನ್ನೂ ಆ ಕಾಲದಲ್ಲಿ ಇಂದಿನಂತೆ ಮೊಬೈಲ್ ಇರಲಿಲ್ಲ. ಎಲ್ಲದಕ್ಕೂ ಸ್ಟುಡಿಯೋದಲ್ಲಿದ್ದ ಫೋನ್ ಬಳಸಬೇಕಿತ್ತು. ಆದರೆ ಅಣ್ಣಾವ್ರಿಗೆ ಸ್ಟುಡಿಯೋವರೆಗೆ ಬಿಟ್ಟು ಹೋಗಿದ್ದ ವರದಪ್ಪನವರಿಗೆ ಫೋನ್ ಮಾಡಲೂ ಇಷ್ಟವಾಗಲಿಲ್ಲ. ಮೇಕಪ್ ಕಳಚಿ ಅಲ್ಲಿಂದ ಹೊರಟರು.

ಡಾ.ರಾಜ್ ಅಲ್ಲಿಂದ ಬಂದ ಒಂದೆರಡು ದಿನದಲ್ಲಿ ಅಮರಶಿಲ್ಪಿ ಜಕ್ಕಣಾಚಾರಿ ಚಿತ್ರೀಕರಣ ಪ್ರಾರಂಭವಾಗಿದೆ ಎಂಬ ಸುದ್ದಿ ಕಿವಿಗೆ ಬಿತ್ತು. ಪ್ರಸಿದ್ಧ ನಟ ಕಲ್ಯಾಣ್‌ಕುಮಾರ್ ನಾಯಕ ಅನ್ನುವ ವಿಚಾರ ಜಗಜ್ಜಾಹೀರಾಯಿತು. ಆಗ ಡಾ.ರಾಜ್ ಅವರ ಆಪ್ತರಲ್ಲಿ ಒಬ್ಬರಾದ ಬರಗೂರು ರಾಮಚಂದ್ರಪ್ಪ ಅವರು ಈ ವಿಚಾರವನ್ನ ರಾಜ್ ಬಳಿ ಪ್ರಸ್ತಾಪಿಸಿದ್ದರು ಕೂಡ. ಆದರೆ ರಾಜಕುಮಾರ್ ಅವರು ಈ ವಿಷಯವನ್ನು ಬೆಳೆಸಲಿಲ್ಲ. ಅವರವರು ಪಡೆದುಕೊಂಡದ್ದು ಅವರವರಿಗೆ ಅಷ್ಟೆ ಸಾರ್. ಕಲ್ಯಾಣಕುಮಾರ್ ಒಳ್ಳೆ ನಟ, ನನಗಿಂತ ಮುಂಚೆ ಪ್ರಸಿದ್ಧಿಗೆ ಬಂದಾತ. ಆತ ಒಂದ್ ವಿಷಯದಲ್ಲಿ ನನಗೆ ಗುರು ಎಂದರು.
ಡಾ. ರಾಜ್ ಅವರ ಈ ಮಾತನ್ನ ಕೇಳಿ ಆಶ್ಚರ್ಯಕ್ಕೊಳಗಾದ ಕನ್ನಡದ ಖ್ಯಾತ ಸಾಹಿತಿ ಸಿನಿಮಾ ನಿರ್ದೇಶಕ ಬರಗೂರು ರಾಮಚಂದ್ರಪ್ಪನವರು, ಅದು ಹೇಗೆ ಸಾರ್ ಅವರು ಗುರು ಆದ್ರು? ಎಂದು ಕೇಳಿದಾಗ ಡಾ.ರಾಜ್ ಕುಮಾರ್ ಸ್ವಾರಸ್ಯಕರ ಘಟನೆಯನ್ನ ನೆನೆದರು. ನಾನು ಮದ್ರಾಸಿಗೆ ಹೋದಾಗ ನಾಟಕದೋರ್ ತರಾ ಉದ್ದಕೂದಲು ಇತ್ತು. ಏ ಮುತ್ತುರಾಜ, ಇಲ್ಲಿ ಹೀಗೆಲ್ಲ ಕೂದ್ಲು ಬಿಟ್ಕೊಂಡ್ ಇರ್‌ಬಾರ‍್ದು ಬಾ ಅಂತ ಕರ‍್ಕೊಂಡ್ ಹೋಗಿ ನೀಟಾಗಿ ಕಟಿಂಗ್ ಮಾಡ್ಸಿದ್ದು ಕಲ್ಯಾಣಕುಮಾರ್ ಸಾರ್. ಈ ವಿಷಯದಲ್ಲಿ ಗುರು ತಾನೆ? ಎಂದು ತೀರಾ ಸಹಜವಾಗಿ ಮೆಚ್ಚಿ ಮಾತಾಡಿದರು ಡಾ.ರಾಜ್ ಕುಮಾರ್.

ಅಮರಶಿಲ್ಪಿ ಜಕಣಾಚಾರಿ ಸುತ್ತ ಮುತ್ತದ ಈ ವಿಚಾರವನ್ನ ಡಾ.ಬರಗೂರು ರಾಮಚಂದ್ರಪ್ಪ ಅವರು ತಮ್ಮ ಜನಪದ ನಾಯಕ ಡಾ. ರಾಜ್ ಕುಮಾರ್ ಎಂಬ ಅಮೂಲ್ಯ ಕೃತಿಯಲ್ಲಿ ಉಲ್ಲೇಖಿಸಿದ್ದಾರೆ. ಒಟ್ನಲ್ಲಿ.. ಡಾ.ರಾಜ್ ಕುಮಾರ್ ಯಾವತ್ತೂ ತಾವೊಬ್ಬ ಸೂಪರ್ ಸ್ಟಾರ್ ಎಂಬ ಅಹಂನ ನೆತ್ತಿಗೇರಿಸಿಕೊಂಡವರಲ್ಲ. ಅವರಿಗೆ ಸಾಮಾನ್ಯರು-ಅಸಾಮಾನ್ಯರು ಎಂಬ ಭೇದಭಾವವೂ ಇರಲಿಲ್ಲ. ಸಾಹಿತಿಗಳಾದಿಯಾಗಿ ಸಾಂಸ್ಕೃತಿಕ ಕ್ಷೇತ್ರದ ಎಲ್ಲರಿಗೂ ವಿಶೇಷ ಗೌರವ ತೋರುತ್ತ ಬಂದರು. ಎನಗಿಂತ ಕಿರಿಯರಿಲ್ಲ ಎಂಬ ಭಾವದಿಂದಲೇ ಹಿರಿಯರಾದವರು ಡಾ.ರಾಜ್ ಕುಮಾರ್


Click it and Unblock the Notifications










