Darshan controversies: ನಟ ದರ್ಶನ್ ಸುತ್ತ ಸುತ್ತಿಕೊಂಡ ವಿವಾದಗಳು ಒಂದೆರಡಲ್ಲ
ರೇಣುಕಾಸ್ವಾಮಿ ಎಂಬುವವರ ಹತ್ಯೆ ಪ್ರಕರಣ ಸಂಬಂಧ ಪೊಲೀಸರು ನಟ ದರ್ಶನ್ ಅವರನ್ನು ಬಂಧಿಸಿದ್ದಾರೆ. ಮೈಸೂರಿನ ಫಾರ್ಮ್‌ಹೌಸ್‌ನಲ್ಲೇ ದರ್ಶನ್ ಅವರನ್ನು ಬಂಧಿಸಿ ಮೈಸೂರಿನಿಂದ ಬೆಂಗಳೂರಿಗೆ ಕರೆತರಲಾಗುತ್ತಿದೆ. ದರ್ಶನ್ ಗೆಳತಿ ಪವಿತ್ರಾ ಗೌಡ ಸೋಶಿಯಲ್ ಮೀಡಿಯಾ ಪೋಸ್ಟ್‌ಗಳಿಗೆ ರೇಣುಕಾ ಸ್ವಾಮಿ ಕೆಟ್ಟ ಕಾಮೆಂಟ್ ಹಾಕುತ್ತಿದ್ದದ್ದೇ ಇದಕ್ಕೆ ಕಾರಣ ಎನ್ನಲಾಗಿದೆ.
ಈ ಹಿಂದೆ ಕೂಡ ಸಾಕಷ್ಟು ವಿವಾದಗಳಿಂದ ನಟ ದರ್ಶನ್ ಸುದ್ದಿ ಆಗಿದ್ದರು. ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ 12 ವರ್ಷಗಳ ಹಿಂದೆ ನಟ ದರ್ಶನ್ ಸೆರೆವಾಸವನ್ನು ಸಹ ಅನುಭವಿಸಿದ್ದರು.

ಮಾಸ್ ಹೀರೊ ಆಗಿ ಸಿನಿರಸಿಕರ ಮನಗೆದ್ದ ನಟ ದರ್ಶನ್ ತಮ್ಮ ಮಾಸ್ ನಡೆ ನುಡಿಯಿಂದ ನಿಜ ಜೀವನದಲ್ಲಿ ಸಾಕಷ್ಟು ವಿವಾದಗಳನ್ನು ಮೈಮೇಲೆ ಎಳೆದುಕೊಂಡಿದ್ದಾರೆ. ದರ್ಶನ್ ವಿವಾದಗಳ ಹಿಂದೆ ಹೋಗುತ್ತಾರೋ ಅಥವಾ ವಿವಾದಗಳು ದರ್ಶನ್ ಅವರನ್ನು ಬಿಡಲ್ವೋ ಗೊತ್ತಿಲ್ಲ. ಸದಾ ಒಂದಿಲ್ಲೊಂದು ವಿವಾದದಿಂದ ದರ್ಶನ್ ಸುದ್ದಿ ಆಗುತ್ತಿರುತ್ತಾರೆ. "ದರ್ಶನ್ ಮಗು ಥರ ಆದ್ರೆ ಕೆಣಕುದ್ರೆ ಬೆಂಕಿ.. ಸುಮ್ಮನಿದ್ರೆ ಅವನ ಪಾಡಿಗೆ ಅವ್ನು ಇರುತ್ತಾನೆ" ಎಂದು ಹಿಂದೆ ಕ್ರೇಜಿಸ್ಟಾರ್ ರವಿಚಂದ್ರನ್ ಒಮ್ಮೆ ಹೇಳಿದ್ದರು. ನಟ ಕಿಚ್ಚ ಸುದೀಪ್ ಕೂಡ ದರ್ಶನ್ ಕೋಪದ ಬಗ್ಗೆ ಮಾತನಾಡಿದ್ದು ಇದೆ. ಇನ್ನು ದರ್ಶನ್ ವಿವಾದಗಳ ಪಟ್ಟಿ ಮುಂದೆ ಇದೆ ಓದಿ.
1. ಪತ್ನಿ ಮೇಲೆ ಹಲ್ಲೆ
2011ರಲ್ಲಿ ನಟ ದರ್ಶನ್ ತಮ್ಮ ಪತ್ನಿ ವಿಜಯಲಕ್ಷ್ಮಿ ಮೇಲೆ ಹಲ್ಲೆ ನಡೆಸಿದ್ದು ಭಾರೀ ಚರ್ಚೆ ಹುಟ್ಟು ಹಾಕಿತ್ತು. ಸೆಪ್ಟೆಂಬರ್ 8, 2011ರಲ್ಲಿ ನಟ ದರ್ಶನ್ ಪತ್ನಿಯ ಮೇಲೆ ಮಾರಣಾಂತಿಕ ಹಲ್ಲೆ ಮಾಡಿದ್ದರು ಎನ್ನಲಾಗಿತ್ತು. ಈ ಸಂಬಂಧ ಸ್ವತಃ ಪತ್ನಿ ವಿಜಯಲಕ್ಷ್ಮೀ ವಿಜಯ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಮರು ದಿನವೇ ಪೊಲೀಸರು ದರ್ಶನ್ ಅವರನ್ನು ಬಂಧಿಸಿದ್ದರು. ಇನ್ನು ಈ ಪ್ರಕರಣದಲ್ಲಿ ನಟಿ ನಿಖಿತಾ ತುಕ್ರಾಲ್ ಹೆಸರು ಕೇಳಿ ಬಂದಿತ್ತು. 28 ದಿನಗಳ ಕಾಲ ದರ್ಶನ್ ಜೈಲಿನಲ್ಲಿದ್ದರು. ಇದೇ ಸಮಯದಲ್ಲಿ 'ಸಾರಥಿ' ಸಿನಿಮಾ ರಿಲೀಸ್ ಆಗಿ ಗೆದ್ದಿತ್ತು. ಬಳಿಕ ರಾಜಿ ಸಂಧಾನ ನಡೆದು ಪ್ರಕರಣ ಸುಖಾಂತ್ಯ ಕಂಡಿತ್ತು.
2. 'ಚಿಂಗಾರಿ' ನಿರ್ಮಾಪಕರ ಜೊತೆ ಕಿರಿಕ್?
ದರ್ಶನ್ ನಟನೆಯ 'ಚಿಂಗಾರಿ' ಸಿನಿಮಾ 2012ರಲ್ಲಿ ಬಿಡುಗಡೆಯಾಗಿ ಯಶಸ್ಸು ಕಂಡಿತ್ತು. ಆದರೆ ಸಿನಿಮಾ ಸಕ್ಸಸ್ ಬೆನ್ನಲ್ಲೇ ಚಿತ್ರದ ನಿರ್ಮಾಪಕ ಮಹದೇವ್ ಹಾಗೂ ದರ್ಶನ್ ನಡುವೆ ಕಿರಿಕ್ ನಡೆದಿದೆ ಎನ್ನುವ ಸುದ್ದಿ ಹರಿದಾಡಿತ್ತು. ನಟ ದರ್ಶನ್, ಚಿತ್ರದ ನಿರ್ಮಾಪಕರಿಗೆ ಕರೆ ಮಾಡಿ ಅವಾಚ್ಯ ಶಬ್ಧಗಳಿಂದ ನಿಂದಿಸಿದ್ದರು ಎನ್ನುವ ಗುಸುಗುಸು ಕೇಳಿ ಬಂದಿತ್ತು.

3. ದರ್ಶನ್ - ಸುದೀಪ್ ದೂರಾ ದೂರ
ನಟ ಸುದೀಪ್ ಹಾಗೂ ನಟ ದರ್ಶನ್ ಬಹಳ ಆತ್ಮೀಯ ಸ್ನೇಹಿತರಾಗಿದ್ದರು. ಆದರೆ ಅದೊಂದು ದಿನ ಇದ್ದಕ್ಕಿದಂತೆ "ನಾನು ಹಾಗೂ ಸುದೀಪ್ ಸ್ನೇಹಿತರಲ್ಲ, ನಾವು ಕೇವಲ ಕನ್ನಡ ಚಿತ್ರರಂಗದ ನಟರಷ್ಟೆ. ಯಾವುದೇ ಉಹಾಪೋಹಗಳು ಬೇಡ. ಎಲ್ಲಾ ಮುಗೀತು" ಎಂದು ದರ್ಶನ್ ಟ್ವೀಟ್ ಮಾಡಿದ್ದರು. ಆ ಮೂಲಕ ಕಿಚ್ಚನ ಜೊತೆಗಿನ ಸ್ನೇಹಕ್ಕೆ ಎಳ್ಳು ನೀರು ಬಿಟ್ಟರು. ಆ ಬಳಿಕ ಎಂದೂ ಇಬ್ಬರು ಒಟ್ಟಿಗೆ ಕಾಣಿಸಿಕೊಳ್ಳಲಿಲ್ಲ. ಸಂದರ್ಶನವೊಂದರಲ್ಲಿ ದರ್ಶನ್‌ಗೆ 'ಮೆಜೆಸ್ಟಿಕ್' ಸಿನಿಮಾ ಅವಕಾಶ ಕೊಡಿಸಿದ್ದು ನಾನೇ. ಆ ಚಿತ್ರವನ್ನ ನಾನೇ ಮಾಡಬೇಕಿತ್ತು. ಆದರೆ ನನ್ನ ಡೇಟ್ಸ್ ಇಲ್ಲದ ಕಾರಣಕ್ಕೆ ಆ ಅವಕಾಶವನ್ನ ದರ್ಶನ್‌ಗೆ ಕೊಡಿಸಿದೆ ಎಂದು ಸುದೀಪ್ ಹೇಳಿದ್ದರು. ಇದರ ಬಗ್ಗೆ ಸುದೀಪ್ ಕ್ಲಾರಿಟಿ ಕೊಡಲಿ ಎಂದು ದರ್ಶನ್ ಆಗ್ರಹಿಸಿದ್ದರು.
3. ಬುಲೆಟ್ ಪ್ರಕಾಶ್- ದಿನಕರ್ ಕಿರಿಕ್
'ಸುಲ್ತಾನ್' ಸಿನಿಮಾ ವಿಚಾರವಾಗಿ ನಟ ಬುಲೆಟ್ ಪ್ರಕಾಶ್ ಹಾಗೂ ದರ್ಶನ್ ಸಹೋದರ ದಿನಕರ್ ನಡುವೆ ಸಣ್ಣ ಜಗಳವಾಗಿತ್ತು. ತಮಿಳಿನ 'ಪೂಜೈ' ಸಿನಿಮಾ ರೈಟ್ಸ್ ತಂದು ದರ್ಶನ್ ಜೊತೆ ಸಿನಿಮಾ ಮಾಡಲು ಬುಲೆಟ್ ಪ್ರಕಾಶ್ ಮುಂದಾಗಿದ್ದರು. ಆದರೆ ಸಿನಿಮಾ ಪ್ರಮೋಷನ್ ವಿಚಾರದಲ್ಲಿ ದಿನಕರ್ ಹಾಗೂ ಬುಲೆಟ್ ನಡುವೆ ಕಿರಿಕ್ ಆಗಿ ದಿನಕರ್ ವಿರುದ್ಧ್ ಬುಲೆಟ್ ಪ್ರಕಾಶ್ ದೂರು ದಾಖಲಿಸಿದ್ದರು. ಈ ವಿವಾದದಲ್ಲಿ ನೇರವಾಗಿ ದರ್ಶನ್ ಹೆಸರು ಬರದೇ ಇದ್ದರೂ ಭಾರೀ ಸುದ್ದಿ ಆಗಿದ್ದಂತೂ ಸುಳ್ಳಲ್ಲ.
4. ಜ್ಯೂ. ಆರ್ಟಿಸ್ಟ್ ಮೇಲೆ ದರ್ಶನ್ ಹಲ್ಲೆ?
'ಯಜಮಾನ' ಚಿತ್ರದ ಹಾಡಿನ ಚಿತ್ರೀಕರಣದ ವೇಳೆ ನಟ ದರ್ಶನ್ ಹಲ್ಲೆ ನಡೆಸಿದ್ದಾರೆಂದು ಸಹ ಕಲಾವಿದ ಶಿವಶಂಕರ್ ಆರೋಪಿಸಿದ್ದರು. ಹಾಡಿನ ಚಿತ್ರೀಕರಣದ ವೇಳೆಗೆ ಮೊಬೈಲ್‌ನಲ್ಲಿ ಚಿತ್ರೀಕರಣ ನಡೆಸುತ್ತಿದ್ದರು ಎನ್ನುವ ಕಾರಣಕ್ಕೆ ದರ್ಶನ್ ಗರಂ ಆಗಿದ್ದರು ಎನ್ನುವ ಗುಸುಗುಸು ಕೇಳಿ ಬಂದಿತ್ತು. ಕೋಟ್ಯಂತರ ರೂಪಾಯಿ ಹಾಕಿ ಸಿನಿಮಾ ನಿರ್ಮಾಣ ಮಾಡಲಾಗುತ್ತದೆ. ಆದರೆ ಚಿತ್ರೀಕರಣದ ವೇಳೆಗೆ ಈ ರೀತಿ ದೃಶ್ಯಗಳನ್ನುಸ ಸೆರೆ ಹಿಡಿದು ಸೋಶಿಯಲ್ ಮೀಡಿಯಾದಲ್ಲಿ ಹರಿ ಬಿಡುವುದು ತಪ್ಪು ಎನ್ನುವ ಕಾರಣಕ್ಕೆ ದರ್ಶನ್ ಅಸಮಾಧನಗೊಂಡಿದ್ದರು ಎನ್ನಲಾಗಿತ್ತು.
5. ಜಗ್ಗೇಶ್- ದರ್ಶನ್ ಅಭಿಮಾನಿಗಳ ವಿವಾದ
'ತೋತಾಪುರಿ' ಸಿನಿಮಾ ಚಿತ್ರೀಕರಣ ಸೆಟ್‌ಗೆ ದರ್ಶನ್ ಅಭಿಮಾನಿಗಳು ಮುತ್ತಿಗೆ ಹಾಕಿ ಜಗ್ಗೇಶ್ ವಿರುದ್ಧ ಧಿಕ್ಕಾರ ಕೂಗಿದ್ದು ವಿವಾದ ಸೃಷ್ಟಿಸಿತ್ತು. ದರ್ಶನ್ ಹುಡುಗರ ಬಗ್ಗೆ ನಟ ಜಗ್ಗೇಶ್ ಹಗುರವಾಗಿ ಮಾತನಾಡಿದ್ದಾರೆ ಎನ್ನಲಾಗಿದ್ದ ಆಡಿಯೋ ಕ್ಲಿಪ್ ವೈರಲ್ ಆಗಿ ಭಾರೀ ಸುದ್ದಿ ಆಗಿತ್ತು. ಇದರ ಬೆನ್ನಲ್ಲೇ ದರ್ಶನ್ ಅಭಿಮಾನಿಗಳು ಕ್ಷಮೆ ಕೇಳುವಂತೆ ಜಗ್ಗೇಶ್ ಅವರಲ್ಲಿ ಪಟ್ಟು ಹಿಡಿದಿದ್ದರು. ಸಂದರ್ಶನವೊಂದರಲ್ಲಿ ಈ ಘಟನೆ ಬಗ್ಗೆ ಜಗ್ಗೇಶ್‌ಗೆ ಸ್ವತಃ ದರ್ಶನ್ ಕ್ಷಮೆ ಕೇಳಿದ್ದರು.
6. ದರ್ಶನ್- ಉಮಾಪತಿ ನಡುವೆ ಜಗಳ?
ಉಮಾಪತಿ ಶ್ರೀನಿವಾಸ್ ನಿರ್ಮಾಣದ 'ರಾಬರ್ಟ್' ಚಿತ್ರದಲ್ಲಿ ದರ್ಶನ್ ನಟಿಸಿದ್ದರು. ಸಿನಿಮಾ ಹಿಟ್ ಆಗಿತ್ತು. ಆದರೆ ಆ ಬಳಿಕ ಇಬ್ಬರ ನಡುವೆ ಕಿರಿಕ್ ಉಂಟಾಗಿತ್ತು. ನಟ ದರ್ಶನ್ ಅವರ ಹೆಸರು ಬಳಸಿಕೊಂಡು ನಿರ್ಮಾಪಕ ಉಮಾಪತಿ ಶ್ರೀನಿವಾಸ್ 25 ಕೋಟಿ ರೂ. ವಂಚನೆಗೆ ಯತ್ನಿಸಿದರು ಎನ್ನುವ ವಿಚಾರ ಭಾರೀ ಸುದ್ದಿ ಆಗಿತ್ತು. ಫೇಕ್ ಲೋನ್ ಪ್ರಕರಣ ದೊಡ್ಡಮಟ್ಟದಲ್ಲಿ ಸದ್ದು ಮಾಡಿತ್ತು. ಇಬ್ಬರ ನಡುವೆ ಆರೋಪ ಪ್ರತ್ಯಾರೋಪ ನಡೆದಿತ್ತು.
7. ಹೋಟೆಲ್ ಸಿಬ್ಬಂದಿ ಮೇಲೆ ಹಲ್ಲೆ?
ನಟ ದರ್ಶನ್ ಮೈಸೂರಿನ ಸಂದೇಶ ಪ್ರಿನ್ಸ್ ಹೊಟೇಲ್ ಸಿಬ್ಬಂದಿ ಮೇಲೆ ಹಲ್ಲೆ ಮಾಡಿದ್ದರು ಎನ್ನುವ ಆರೋಪ ಕೇಳಿಬಂದಿತ್ತು. ಈ ವಿಚಾರದಲ್ಲಿ ನಿರ್ದೇಶಕ ಇಂದ್ರಜಿತ್ ಲಂಕೇಶ್ ಸಾಕಷ್ಟು ಆರೋಪಗಳನ್ನು ಮಾಡಿದ್ದರು. ದರ್ಶನ್ ಹಾಗೂ ಸ್ನೇಹಿತರು ಪಾರ್ಟಿ ಮಾಡಿದ್ದರು. ಈ ವೇಳೆ ಸಪ್ಲೆಯರ್ ಗಂಗಾಧರ್ ಎಂಬುವವರ ಮೇಲೆ ದರ್ಶನ್ ಹಲ್ಲೆ ನಡೆಸಿದ್ದಾರೆ ಎಂದು ಇಂದ್ರಜಿತ್ ಸುದ್ದಿಗೋಷ್ಠಿ ನಡೆಸಿ ಆರೋಪ ನಡೆಸಿದ್ದರು. ಇದಕ್ಕೆ ದರ್ಶನ್ ಸಹ ತಿರುಗೇಟು ನೀಡಿದ್ದರು.
8. ನಿರ್ದೇಶಕ ಪ್ರೇಮ್ ದೊಡ್ಡ 'ಪುಡುಂಗಾ' ಎಂದಿದ್ದ ದರ್ಶನ್
ನಿರ್ದೇಶಕ ಇಂದ್ರಜಿತ್ ಲಂಕೇಶ್ ಆರೋಪಗಳಿಗೆ ಪ್ರತಿಕ್ರಿಯೆ ನೀಡಲು ನಟ ದರ್ಶನ್ ಮೈಸೂರಿನ ತಮ್ಮ ತೋಟದ ಮನೆಯಲ್ಲಿ ಸುದ್ದಿಗೋಷ್ಠಿ ನಡೆಸಿದ್ದರು. ಈ ವೇಳೆ ದರ್ಶನ್, ನಿರ್ದೇಶಕ ಜೋಗಿ ಪ್ರೇಮ್ ಹೆಸರು ಪ್ರಸ್ತಾಪಿಸಿದ್ದರು. "ಪ್ರೇಮ್ ಏನು ಪುಡಂಗಾ, ಎರಡು ಕೊಂಬೈತಾ? 'ಕರಿಯ'ದಲ್ಲೂ ನಾವು ನೋಡಿದ್ದೇವೆ ಪ್ರೇಮ್‌ದು ಏನು ಅಂತ" ಎಂದುಬಿಟ್ಟಿದ್ದರು. ಈ ಬಗ್ಗೆ ಪ್ರೇಮ್ ಸಮಾಧಾನ ವ್ಯಕ್ತಪಡಿಸಿದ್ದರು. ಸುದ್ದಿಗೋಷ್ಠಿ ನಡೆಸಿ ನೋವು ತೋಡಿಕೊಂಡಿದ್ದರು. ಇನ್ಮುಂದೆ ದರ್ಶನ್ ಜೊತೆ ಸಿನಿಮಾ ಮಾಡುವ ಮಾತೇ ಇಲ್ಲ ಎಂದಿದ್ದರಯ. ಆದರೆ ಇತ್ತೀಚಿಗೆ ಇದೇ ಕಾಂಬಿನೇಷನ್‌ನಲ್ಲಿ ಸಿನಿಮಾವೊಂದು ಘೋಷಣೆಯಾಗಿದೆ. ಕೆವಿಎನ್ ಸಂಸ್ಥೆ ಚಿತ್ರ ನಿರ್ಮಿಸಲಿದೆ.
9. ಮಾಧ್ಯಮಗಳ ಜೊತೆ ಕಿರಿಕ್
ನಟ ದರ್ಶನ್ ಮಾಧ್ಯಮಗಳಿಗೆ ಅವಾಚ್ಯ ಪದಗಳಿಂದ ನಿಂದಿಸಿದ್ದರು ಎನ್ನುವ ವಿಚಾರ ಭಾರೀ ರಾದ್ಧಾಂತಕ್ಕೆ ಕಾರಣವಾಗಿತ್ತು. ಇದೇ ಕಾರಣಕ್ಕೆ ಎರಡು ವರ್ಷಗಳ ನಟ ದರ್ಶನ್ ಮೇಲೆ ವಿದ್ಯುನ್ಮಾನ ಮಾಧ್ಯಮಗಳು ಅಘೋಷಿತ ನಿರ್ಬಂಧ ಹೇರಿದ್ದವು. ದರ್ಶನ್ ಕುರಿತಾದ ಯಾವುದೇ ಸುದ್ದಿ ಪ್ರಸಾರ ಮತ್ತು ಪ್ರಕಟಿಸದಂತೆ ಮಾಧ್ಯಮ ಸಂಸ್ಥೆಗಳು ನಿರ್ಧಾರ ತೆಗೆದುಕೊಂಡಿದ್ದವು. ಆದರೆ ಇತ್ತೀಚೆಗೆ ನಟ ದರ್ಶನ್ ಮಾಧ್ಯಮಗಳ ಕ್ಷಮೆ ಕೇಳಿದ್ದರು. ಬಳಿಕ ವಿವಾದ ಸುಖಾಂತ್ಯ ಕಂಡಿತ್ತು.
10. ಫಾರಂ ಹೌಸ್ ಮೇಲೆ ಅರಣ್ಯಾಧಿಕಾರಿಗಳ ದಾಳಿ
ನಟ ದರ್ಶನ್ ಮೈಸೂರಿನ ತಮ್ಮ ಫಾರ್ಮ್ ಹೌಸ್‌ನಲ್ಲಿ ಸಾಕಷ್ಟು ಪ್ರಾಣಿ, ಪಕ್ಷಿಗಳನ್ನು ಸಾಕುತ್ತಿದ್ದಾರೆ. ಆದರೆ ಬಾರ್ ಹೆಡೆಡ್ ಗೂಸ್ ಎಂಬ ವಿಶಿಷ್ಟ ಪ್ರಭೇದದ ಬಾತುಕೋಳಿಗಳನ್ನು ಸಾಕಲು ಅನುಮತಿ ಇಲ್ಲ. ಆದರೆ ಈ ಪಕ್ಷಿಗಳು ದರ್ಶನ್ ಫಾರ್ಮ್‌ಹೌಸ್‌ನಲ್ಲಿ ಇದ್ದವು. ಈ ಸಂಬಂಧ ಮೈಸೂರು ಅರಣ್ಯ ಸಂಚಾರಿದಳದ ಅಧಿಕಾರಿಗಳು ದಾಳಿ ನಡೆಸಿ ಆ ಪಕ್ಷಿಗಳನ್ನು ವಶಕ್ಕೆ ಪಡೆದಿದ್ದರು. ಈ ಪಕ್ಷಿಗಳನ್ನು ಸಾಕುವುದು ವನ್ಯಜೀವಿ ಸಂರಕ್ಷಣೆಯ ಕಾಯ್ದೆಯಡಿ ಅಪರಾಧ. ಹಾಗಾಗಿ ಸಾಕಣೆ ನಿಷೇಧಿತ ವನ್ಯ ಪಕ್ಷಿಗಳ ಸಾಕಣೆಗಾಗಿ ಪ್ರಕರಣ ದಾಖಲಾಗಿತ್ತು.
11. ದರ್ಶನ್ ಮೇಲೆ ಚಪ್ಪಲಿ ಎಸೆದ ಕಿಡಿಗೇಡಿ
ಹೊಸಪೇಟೆಯಲ್ಲಿ 'ಕ್ರಾಂತಿ' ಸಿನಿಮಾ ಸಾಂಗ್ ರಿಲೀಸ್ ವೇಳೆ ಕಿಡಿಗೇಡಿಯೊಬ್ಬ ನಟ ದರ್ಶನ್ ಮೇಲೆ ಚಪ್ಪಲಿ ಎಸೆದಿದ್ದು ಭಾರೀ ವಿವಾದಕ್ಕೆ ಕಾರಣವಾಗಿತ್ತು. ಚಿತ್ರದ 'ಗೊಂಬೆ ಗೊಂಬೆ' ಹಾಡನ್ನು ಅಭಿಮಾನಿಗಳ ನಡುವೆ ರಿಲೀಸ್ ಮಾಡಲು ಇಡೀ ಚಿತ್ರತಂಡ ಹೊಸಪೇಟೆಗೆ ಹೋಗಿತ್ತು. ದೊಡ್ಡ ಬಸ್ ಮೇಲೆ ಇಡೀ ಚಿತ್ರತಂಡ ನಿಂತಿತ್ತು. ಈ ವೇಳೆ ಕೆಳಗೆ ಅಭಿಮಾನಿಗಳ ಗುಂಪಿನಿಂದ ಚಪ್ಪಲಿಯೊಂದನ್ನು ದರ್ಶನ್ ಮೇಲೆ ತೂರಲಾಗಿತ್ತು. ಈ ವಿಚಾರದಲ್ಲಿ ಸ್ಯಾಂಡಲ್‌ವುಡ್ ಕಲಾವಿದರು ದರ್ಶನ್ ಬೆಂಬಲಕ್ಕೆ ನಿಂತಿದ್ದರು.
12. ಹುಲಿ ಉಗುರು ಹೊಂದಿದ್ದ ಆರೋಪ
ಇತ್ತೀಚೆಗೆ ರಾಜ್ಯದಲ್ಲಿ ಹುಲಿ ಉಗುರು ವಿಚಾರ ಭಾರೀ ಸದ್ದು ಮಾಡಿತ್ತು. ಹುಲಿ ಉಗುರಿನ ಪೆಂಡೆಂಟ್ ಹೊಂದಿದ್ದ ಆರೋಪದಲ್ಲಿ ಬಿಗ್‌ಬಾಸ್ ಸ್ಪರ್ಧಿ ವರ್ತೂರು ಸಂತೋಷ್ ಬಂಧನವಾಗಿತ್ತು. ಇದರ ಬೆನ್ನಲ್ಲೇ ನಟ ದರ್ಶನ್ ಹುಲಿ ಉಗುರಿನ ಪೆಂಡೆಂಟ್ ಧರಿಸಿದ್ದ ಫೋಟೊ ವೈರಲ್ ಆಗಿತ್ತು. ಬಳಿಕ ಅರಣ್ಯ ಇಲಾಖೆ ಅಧಿಕಾರಿಗಳು ನಟ ದರ್ಶನ್ ಮನೆಯಲ್ಲಿ ಶೋಧ ನಡೆಸಿದ್ದರು. 8 ಹುಲಿ ಉಗುರಿನ ಪೆಂಡೆಂಟ್ ದರ್ಶನ್ ಮನೆಯಲ್ಲಿ ಸಿಕ್ಕಿದ್ದವು. ಆದರೆ ಅದೆಲ್ಲ ಅಸಲಿ ಹುಲಿ ಉಗುರು ಅಲ್ಲ ಎನ್ನುವ ಮಾಹಿತಿ ಲಭಿಸಿತ್ತು.
13. ಮಹಿಳೆ ಮೇಲೆ ದರ್ಶನ್ ಮನೆ ನಾಯಿ ದಾಳಿ
ಕಳೆದೆರಡು ದಿನಗಳಿಂದ ನಟ ದರ್ಶನ್‌ಗೆ ಮತ್ತೊಂದು ವಿವಾದ ಸುತ್ತಿಕೊಂಡಿದೆ. ಮಹಿಳೆಯೊಬ್ಬರು ದರ್ಶನ್ ಮನೆ ನಾಯಿ ನನ್ನ ಮೇಲೆ ದಾಳಿ ಮಾಡಿ ಕಚ್ಚಿದೆ ಎಂದು ಆರೋಪಿಸಿ ದೂರು ನೀಡಿದ್ದಾರೆ. ದರ್ಶನ್ ನಿವಾಸದ ಬಳಿ ಕಾರ್ ಪಾರ್ಕಿಂಗ್ ವಿಚಾರಕ್ಕೆ ಸಂಬಂಧಿಸಿ ಅಮಿತಾ ಜಿಂದಾಲ್ ಹಾಗೂ ದರ್ಶನ್ ಮನೆ ನಾಯಿಯನ್ನು ನೋಡಿಕೊಳ್ಳುತ್ತಿದ್ದ ಹೇಮಂತ್ ಎನ್ನುವವರ ನಡುವೆ ವಾಗ್ವಾದ ನಡೆದಿದೆ. ಬಳಿಕ ನಾಯಿಗಳು ಆಕೆಯ ಮೇಲೆ ದಾಳಿ ನಡೆಸಿದ್ದಾಗಿ ದೂರಿನಲ್ಲಿ ಹೇಳಲಾಗಿದೆ. ಈ ವಿಚಾರಕ್ಕೆ ಸಂಬಂಧಿಸಿ ನಾಯಿ ನೋಡಿಕೊಳ್ಳುತ್ತಿದ್ದ ವ್ಯಕ್ತಿ ಹಾಗೂ ನಟ ದರ್ಶನ್ ವಿರುದ್ಧ ಮಹಿಳೆ ದೂರು ನೀಡಿದ್ದಾರೆ.


Click it and Unblock the Notifications











