ಡಾಲಿ ದಶಕ: ಅಂದು "ಆ ಬೋ* ಮಗನ್ನ ಕರೀರಿ ಅಂದಿದ್ರು": ಸೋಲಿನ ಕೂಪದಿಂದ ಸಾಧಕರ ಸೀಟ್‌ವರೆಗೆ ಧನು ಜರ್ನಿ
ನಟ ರಾಕ್ಷಸ ಡಾಲಿ ಧನಂಜಯ್ ಚಿತ್ರರಂಗದಲ್ಲಿ 10 ವರ್ಷ ಪೂರೈಸಿದ್ದಾರೆ. ಅರಸೀಕೆರೆಯ ಹುಡುಗ ಚಂದನವನದಲ್ಲಿ ನೆಲೆ ಕಂಡುಕೊಳ್ಳಲು ನಡೆಸಿದ ಹೋರಾಟ ಅಷ್ಟಿಷ್ಟಲ್ಲ. ಸೋಲು, ಅವಮಾನಗಳನ್ನು ಮೆಟ್ಟಿ ವೀಕೆಂಡ್ ವಿತ್ ರಮೇಶ್ ಸಾಧಕರ ಸೀಟ್ ಏರಿದರು. ಒಂದ್ಕಾಲದಲ್ಲಿ ಚಿತ್ರರಂಗದಲ್ಲಿ ಧನಂಜಯ್ ಕಥೆ ಮುಗಿದೇ ಹೋಯ್ತು ಅನ್ನುವ ಮಾತುಗಳು ಶುರುವಾಗಿತ್ತು. ಆದರೆ ಅದನ್ನೆಲ್ಲಾ ಮೀರಿ ಗೆದ್ದರು.
ಸರಿಯಾಗಿ 10 ವರ್ಷಗಳ ಹಿಂದೆ ಧನಂಜಯ್ ನಟಿಸಿದ ಮೊದಲ ಸಿನಿಮಾ 'ಡೈರೆಕ್ಟರ್ಸ್ ಸ್ಪೆಷಲ್' ರಿಲೀಸ್ ಆಗಿತ್ತು. ಚೊಚ್ಚಲ ಪ್ರಯತ್ನದಲ್ಲೇ ಧನು ಭರವಸೆ ಮೂಡಿಸಿದರು. ನಿಧಾನವಾಗಿ ಒಂದೊಂದೇ ಸಿನಿಮಾಗಳಲ್ಲಿ ನಟಿಸಲು ಆರಂಭಿಸಿದರು. ಇನ್ನೇನು ಗೆದ್ದೆ ಎನ್ನುವ ಸಮಯದಲ್ಲಿ ಪಾತಾಳಕ್ಕೆ ಕುಸಿದುಬಿಟ್ಟರು. ಅಲ್ಲಿಗೆ ಎಲ್ಲವೂ ಮುಗಿತು ಅಂತ ಕೆಲವರು ಅಂದುಕೊಂಡಿದ್ದರು. ಆದರೆ ಧನು ಪಟ್ಟು ಬಿಡಲಿಲ್ಲ, 'ಟಗರು' ಚಿತ್ರದ ಡಾಲಿ ಪಾತ್ರ ದೊಡ್ಡ ಬ್ರೇಕ್ ಕೊಡ್ತು. ಮತ್ತೆ ಫೀನಿಕ್ಸ್ ರೀತಿ ಎದ್ದು ಬಂದರು. ಮುಂದೆ ನಿರ್ಮಾಪಕರು ಆದರು.

ಹಿಟ್ ಸಿನಿಮಾ ಕೊಟ್ಟ ನಿರ್ದೇಶಕರು ಧನಂಜಯ್ ಜೊತೆ ಸಿನಿಮಾ ಮಾಡಿದ್ರೆ ಸೋಲ್ತಾರೆ ಎನ್ನುವ ಮಾತುಗಳು ಇಂಡಸ್ಟ್ರಿಯಲ್ಲಿ ಶುರುವಾಗಿತ್ತಂತೆ. ಇವನನ್ನು ನೋಡಲು ಜನ ಬರ್ತಿಲ್ಲ, ಈ ವಿಚಾರವನ್ನು ಸ್ವತ: ಧನಂಜಯ್ ಈ ಹಿಂದೆ ಅನುಶ್ರೀ ಆಂಕರ್ ಯೂ ಎನ್ನುತ್ತಿದ್ದರಂತೆ. ಇದನ್ನೆಲ್ಲಾ ನಾನು ಯಾವತ್ತು ಮರೆಯುವುದಿಲ್ಲ ಎಂದು ನಟ ಧನಂಜಯ್ ಈ ಹಿಂದೆ ಅನುಶ್ರೀ ಆಂಕರ್ ಯೂಟ್ಯೂಬ್ ಚಾನಲ್ ಸಂದರ್ಶನದಲ್ಲಿ ಹೇಳಿಕೊಂಡಿದ್ದರು.
ಇನ್ಫೋಸಿಸ್ ಕೆಲಸ ಬಿಟ್ಟು ಬಂದ ಧನು
ಚಿಕ್ಕಂದಿನಿಂದಲೂ ಪ್ರತಿಯೊಂದು ವಿಚಾರದಲ್ಲೂ ಗೆಲ್ಲುತ್ತಾ ಬಂದವರು ಧನಂಜಯ್. 10ನೇ ತರಗತಿಯಲ್ಲಿ ಹೆಚ್ಚು ಅಂಕ ಗಳಿಸಿ ಆ ವರ್ಷ ಅರಸೀಕೆರೆ ತಾಲೂಕಿಗೆ ಟಾಪರ್ ಎನಿಸಿಕೊಂಡಿದ್ದರು. ಶಾಲೆ ದಿನಗಳಲ್ಲೇ ನಾಟಕಗಳಲ್ಲಿ ನಟಿಸಿ ಚಪ್ಪಾಳೆ ಗಿಟ್ಟಿಸಿಕೊಂಡಿದ್ದರು. ಮುಂದೆ ಕಾಲೇಜು ಮುಗಿಸಿ ಇನ್‌ಫೋಸಿಸ್ ಸಂಸ್ಥೆಯಲ್ಲಿ ಕೆಲಸ ಸಿಕ್ಕಿತ್ತು. ಆದರೆ ನಟನಾಗುವ ಆಸೆ ಒಳಗಿತ್ತು. ಅದಕ್ಕಾಗಿ ಕೆಲಸ ಬಿಟ್ಟು ರಂಗಭೂಮಿ ಸೇರಿದರು. ನಂತರ ಗುರುಪ್ರಸಾದ್ ಪರಿಚಯದಿಂದ ಚಿತ್ರರಂಗ ಪ್ರವೇಶಿಸಿದರು.
ಸೋಲಿನಿಂದ ಕಂಗೆಟ್ಟ ಡಾಲಿ
ರಾಟೆ, ಬಾಕ್ಸರ್, ಜೆಸ್ಸಿ, ಬದ್ಮಾಶ್ ಸಿನಿಮಾಗಳು ಅಷ್ಟಾಗಿ ಸದ್ದು ಮಾಡಲಿಲ್ಲ. ಅದೇ ಸಮಯದಲ್ಲಿ ಧನು ಬಗ್ಗೆ ಇಂಡಸ್ಟ್ರಿಯಲ್ಲಿ ನೆಗೆಟಿವ್ ಟಾಕ್ ಶುರುವಾಗಿತ್ತು. ಆತನಿಗೆ ಅದೃಷ್ಟ ಇಲ್ಲ. ಆತ ನಟಿಸಿದ ಸಿನಿಮಾಗಳು ಗೆಲ್ಲಲ್ಲ ಎನ್ನುವಂತಹ ಮಾತುಗಳು ಕೇಳಿಬಂದಿತ್ತು. ಸೆಟ್‌ನಲ್ಲಿ ಒಮ್ಮೆ ಯಾರು "ಆ ಬೋಳಿ ಮಗನನ್ನು ಕರೀರಿ" ಎಂದು ಹೇಳಿದ್ದು ಕೂಡ ಕೇಳಿದ್ದೇನೆ ಎಂದು ಧನು ಆ ಸಂದರ್ಶನದಲ್ಲಿ ಹೇಳಿಕೊಂಡಿದ್ದರು. ಅಂತಹ ಸಮಯದಲ್ಲೇ 'ಟಗರು' ಸಿನಿಮಾ ಅವಕಾಶ ಸಿಕ್ಕಿತ್ತು.

ಡಾಲಿಯಾಗಿ ಅಬ್ಬರಿಸಿದ ಧನಂಜಯ್
ಸೂರಿ ನಿರ್ದೇಶನದ 'ಟಗರು' ಚಿತ್ರದಲ್ಲಿ ರೌಡಿ ಡಾಲಿಯಾಗಿ ಧನಂಜಯ್ ಬಣ್ಣ ಹಚ್ಚಿದ್ದರು. ಹೀರೊ ಆಗಿ ನಟಿಸ್ತಿದ್ದ ಧನು ಏಕಾಏಕಿ ವಿಲನ್ ಪಾತ್ರಕ್ಕೆ ಜೀವ ತುಂಬಿದ್ದರು. ತಮ್ಮೊಳಗಿನ ಎಲ್ಲಾ ನೋವು, ಹತಾಶೆಯನ್ನು ಒಮ್ಮೆಲೆ ಹೊರಹಾಕಿ ಆ ಪಾತ್ರದಲ್ಲಿ ಜೀವಿಸಿದ್ದರು. ಡಾಲಿ ಪಾತ್ರದಿಂದ ಹೊಸ ಪಯಣ ಶುರುವಾಯಿತು. ನೋಡ ನೋಡುತ್ತಲೇ ರಾಮ್‌ಗೋಪಾಲ್ ವರ್ಮಾ ನಿರ್ದೇಶನದ 'ಭೈರವಗೀತ' ಚಿತ್ರಕ್ಕೆ ಆಯ್ಕೆ ಆದರು. ಮುಂದೆ ದೊಡ್ಡ ದೊಡ್ಡ ಸಿನಿಮಾಗಳಲ್ಲಿ ನಟಿಸಲು ಆರಂಭಿಸಿದರು. ಈಗ ತೆಲುಗು, ತಮಿಳು ಪ್ಯಾನ್ ಇಂಡಿಯಾ ಸಿನಿಮಾಗಳಲ್ಲಿ ನಟಿಸ್ತಿದ್ದಾರೆ.
ನಿರ್ಮಾಪಕರಾದ ಧನಂಜಯ್
ಹೀರೊ ಆಗಿ ಸಕ್ಸಸ್ ಕಂಡ ಧನಂಜಯ್ 'ಬಡವ ರಾಸ್ಕಲ್' ಚಿತ್ರದಿಂದ ನಿರ್ಮಾಪಕರಾಗುವ ಸಾಹಸಕ್ಕೆ ಕೈ ಹಾಕಿದ್ದರು. ಆದರೆ ಅದೇ ಸಮಯದಲ್ಲಿ ಕೊರೊನ ಹಾವಳಿ ಶುರುವಾಗಿ ಸಂಕಷ್ಟ ಎದುರಿಸುವಂತಾಯಿತು. ಆದರೆ ಸಿನಿಮಾ ಕೈಬಿಡಲಿಲ್ಲ. ಧನು ನಿರ್ಮಾಪಕರಾಗಿಯೂ ಗೆದ್ದರು. ಮುಂದೆ 'ಹೆಡ್‌ಬುಷ್' ಅನ್ನೋ ಮತ್ತೊಂದು ಸಿನಿಮಾ ನಿರ್ಮಿಸಿದರು. ಒಂದಷ್ಟು ವಿವಾದಗಳಿಂದ ಆ ಸಿನಿಮಾ ಅಷ್ಟಾಗಿ ಸದ್ದು ಮಾಡಲಿಲ್ಲ. ಟಗರು ಪಲ್ಯ ಎನ್ನುವ ಹೊಸಬರ ಸಿನಿಮಾ ನಿರ್ಮಾಣ ಮಾಡುತ್ತಿದ್ದಾರೆ.
10 ವರ್ಷಗಳ ಸಂಭ್ರಮಾಚರಣೆ
ಸದ್ಯ ತೆಲುಗಿನ 'ಜೀಬ್ರಾ', 'ಪುಷ್ಪ- 2', ತಮಿಳಿನ 'ಪಾಯುಂ ಒಲಿ ನೀ ಎನಕ್ಕು' ಸಿನಿಮಾಗಳಲ್ಲಿ ಧನಂಜಯ್ ನಟಿಸುತ್ತಿದ್ದಾರೆ. ಕನ್ನಡದಲ್ಲಿ ಇತ್ತೀಚೆಗೆ 'ಗುರುದೇವ್ ಹೊಯ್ಸಳ' ಸಿನಿಮಾ ಮಾಡಿ ಗೆದ್ದರು. 'ಉತ್ತರಕಾಂಡ' ಅನ್ನೋ ಮತ್ತೊಂದು ಚಿತ್ರದಲ್ಲಿ ನಟಿಸ್ತಿದ್ದಾರೆ. ಇನ್ನು ಗೀತ ಸಾಹಿತಿಯಾಗಿ ಒಂದಷ್ಟು ಹಾಡುಗಳನ್ನು ಬರೆದಿದ್ದಿದ್ದಾರೆ. ಧನಂಜಯ್ ಚಿತ್ರರಂಗದಲ್ಲಿ 10 ವರ್ಷ ಪೂರೈಸಿದ ಸಂಭ್ರಮವನ್ನು ಮೈಸೂರಿನಲ್ಲಿ ಅಭಿಮಾನಿಗಳ ಜೊತೆ ಆಚರಿಸಿಕೊಳ್ಳುತ್ತಿದ್ದಾರೆ.


Click it and Unblock the Notifications











