ಮೊದಲ ರಾತ್ರಿ ವಿಡಿಯೋ ನೋಡಿ ಬಿದ್ದು ಬಿದ್ದು ನಕ್ಕಿದ್ದ ಸುದೀಪ್: ವೀಕೆಂಡ್ ವಿತ್ ರಮೇಶ್‌ನಲ್ಲೂ ಪ್ಲೇ ಆಗಿತ್ತು!
ನಟ ಕಿಚ್ಚ ಸುದೀಪ್ ಚಿತ್ರರಂಗದಲ್ಲಿ 29 ವರ್ಷ ಪೂರೈಸಿದ್ದಾರೆ. ಈ ಹಾದಿಯಲ್ಲಿ ಸಾಕಷ್ಟು ಏಳುಬೀಳು ಕಂಡಿದ್ದಾರೆ. ಆರಂಭದಲ್ಲಿ ಐರೆನ್ ಲೆಗ್ ಎನ್ನುವ ಹಣೆಪಟ್ಟಿ ಕೂಡ ಕಟ್ಟಿಬಿಟ್ಟಿದ್ದರು. ಅದನ್ನೆಲ್ಲಾ ಮೀರಿ ಇಂದು ಅಭಿನಯ ಚಕ್ರವರ್ತಿ, ಬಾದ್‌ಶಾ ಅಂತೆಲ್ಲಾ ಬಿರುದು ಪಡೆದುಕೊಂಡಿದ್ದಾರೆ.
ನಟನಾಗಿ ಮಾತ್ರವಲ್ಲದೇ ನಿರೂಪಕನಾಗಿ ಗಾಯಕನಾಗಿ ನಿರ್ದೇಶಕನಾಗಿಯೂ ಸುದೀಪ್ ಸಕ್ಸಸ್ ಕಂಡಿದ್ದಾರೆ. ಇತ್ತೀಚೆಗೆ ಅವರು ಬಿಗ್‌ಬಾಸ್ ಶೋ ನಿರೂಪಣೆಗೆ ಬ್ರೇಕ್ ಹಾಕಿದ್ದು ಅಭಿಮಾನಿಗಳಿಗೆ ನಿರಾಸೆ ಮೂಡಿಸಿದೆ. ಇನ್ನು 'ಮ್ಯಾಕ್ಸ್' ಸಿನಿಮಾ ಬ್ಲಾಕ್‌ಬಸ್ಟರ್ ಹಿಟ್ ಆಗಿದೆ. ಶೀಘ್ರದಲ್ಲೇ ಸಿನಿಮಾ ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗಲಿದೆ. ಸದ್ಯ ಸಿಸಿಎಲ್ ಕ್ರಿಕೆಟ್ ಆಡಲು ಸುದೀಪ್ ತಂಡದ ಜೊತೆ ತಾಲೀಮು ನಡೆಸುತ್ತಿದ್ದಾರೆ.

ಸೋಶಿಯಲ್ ಮೀಡಿಯಾ ಬಗ್ಗೆ ಸಾಕಷ್ಟು ಟೀಕೆಗಳಿವೆ. ಆದರೆ ಅದನ್ನು ಮೆಚ್ಚಿಕೊಳ್ಳುವವರು ಇದ್ದಾರೆ. ಮುಖ್ಯವಾಗಿ ಸೋಶಿಯಲ್ ಮೀಡಿಯಾ ಹಳೇಯ ವಿಚಾರಗಳನ್ನು ನೆನಪು ಮಾಡುತ್ತಿರುತ್ತದೆ. ಯಾವುದೋ ಹಳೆ ಫೋಟೊ, ವೀಡಿಯೋ ವೈರಲ್ ಆಗಿ ಸರ್‌ಪ್ರೈಸ್ ಮಾಡುತ್ತಿರುತ್ತದೆ. ಸಿನಿಮಾ ತಾರೆಯರ ಹಳೇ ಫೋಟೊ, ವೀಡಿಯೋಗಳನ್ನು ಅಭಿಮಾನಿಗಳು ಆಗಾಗ್ಗೆ ವೈರಲ್ ಮಾಡುತ್ತಿರುತ್ತಾರೆ.
ಸದ್ಯ ಸುದೀಪ್ ನಟಿಸಿದ್ದ ಹಳೆಯ ಜಾಹೀರಾತು ವಿಡಿಯೋವೊಂದು ಇದೀಗ ವೈರಲ್ ಆಗುತ್ತಿದೆ. 'ಬ್ರಹ್ಮ' ಚಿತ್ರದಲ್ಲಿ ಸುದೀಪ್ ಮೊದಲ ಬಾರಿಗೆ ನಟಿಸಿದ್ದರು. ಆದರೆ ಆ ಸಿನಿಮಾ ರಿಲೀಸ್ ಆಗಲೇಯಿಲ್ಲ, ಜನವರಿ 31ರಂದು ಆ ಚಿತ್ರಕ್ಕೆ ಬಣ್ಣ ಹಚ್ಚಿದ್ದರು. ಅಲ್ಲಿಂದ ಇಲ್ಲಿಯವರೆಗೆ 29 ವರ್ಷಗಳನ್ನು ಸುದೀಪ್ ಪೂರೈಸಿದ್ದಾರೆ. ಅದಕ್ಕೂ ಮುನ್ನ ಜಾಹೀರಾತು ಹಾಗೂ ಕಿರುತೆರೆ ಧಾರಾವಾಹಿಯಲ್ಲಿ ಸುದೀಪ್ ನಟಿಸಿದ್ದರು.
ಸುಧಾಕರ್ ಭಂಡಾರಿ ನಿರ್ದೇಶನದ ಜಾಹೀರಾತಿನಲ್ಲಿ ಸುದೀಪ್ ಕಾಣಿಸಿಕೊಂಡಿದ್ದರು. ಅದು ಮ್ಯಾಟರ್ಸ್(ಹಾಸಿಗೆ)ಯ ಜಾಹೀರಾತು. ಮೊದಲ ರಾತ್ರಿಯ ಸನ್ನಿವೇಶದಂತಹ ಜಾಹೀರಾತು ಅದು. ವೀಕೆಂಡ್ ವಿತ್ ರಮೇಶ್ ಕಾರ್ಯಕ್ರಮದಲ್ಲಿ ಸುದೀಪ್ ಭಾಗವಹಿಸಿದ್ದರು. ಆಗ ವೇದಿಕೆಯ ಮೇಲೆ ಈ ಜಾಹೀರಾತು ವೀಡಿಯೋ ಪ್ರದರ್ಶಿಸಿ ರಮೇಶ್ ಅರವಿಂದ್ ಅದರ ಬಗ್ಗೆ ಮಾತನಾಡಿದ್ದರು.
ಸುದೀಪ್ ಜಾಹೀರಾತು ವೀಡಿಯೋ ನೋಡಿ ವೇದಿಕೆಯಲ್ಲಿ ನಾಚಿಕೊಂಡಿದ್ದರು. ಬಹಳ ದಿನಗಳ ಬಳಿಕ ಈ ವೀಡಿಯೋ ಈಗ ಸೋಶಿಯಲ್ ಮೀಡಿಯಾದಲ್ಲಿ ಮತ್ತೆ ವೈರಲ್ ಆಗುತ್ತಿದೆ. ಅಭಿಮಾನಿಗಳು ವೀಡಿಯೋ ನೋಡಿ ನಕ್ಕು ಕಾಮೆಂಟ್ ಮಾಡುತ್ತಿದ್ದಾರೆ. ಈ ಜಾಹೀರಾತಿನಲ್ಲಿ ನಟಿಸಿದ ಬಳಿಕ 'ಬ್ರಹ್ಮ', 'ಓ ಕುಸುಮ ಬಾಲೆ' ಎಂಬ ಎರಡು ಸಿನಿಮಾಗಳಲ್ಲಿ ಸುದೀಪ್ ನಟಿಸಿದ್ದರು. ಶುರುವಾಗಿದ್ದ ಎರಡೂ ಸಿನಿಮಾ ನಿಂತು ಹೋಗಿತ್ತು.
ಬಳಿಕ ನಟಿಸಿದ 'ತಾಯವ್ವ' ಸಿನಿಮಾ ಕೂಡ ಸದ್ದು ಮಾಡಲಿಲ್ಲ. ಆಗ ಚಿತ್ರರಂಗವೇ ಬೇಡ ಎಂದು ಸುದೀಪ್ ನಿರ್ಧರಿಸಿದ್ದರಂತೆ. ಆ ಬಳಿಕ ಧಾರಾವಾಹಿಯಲ್ಲಿ ನಟಿಸಲು ಮುಂದಾಗಿದ್ದರು. 'ಪ್ರೇಮದ ಕಾದಂಬರಿ' ಎಂಬ ಧಾರಾವಾಹಿಯಲ್ಲಿ ನಟಿಸಿದ್ದರು. ಆ ಬಳಿಕ 'ಪ್ರತ್ಯರ್ಥ' ಚಿತ್ರದಲ್ಲಿ ನಟಿಸಿದರು. ಮತ್ತೆ ಸಿನಿಮಾಗಳಲ್ಲಿ ನಟಿಸೋಕೆ ಆರಂಭಿಸಿದರು. ಅಂದಹಾಗೆ ಆ ಜಾಹೀರಾತು ಹಾಗೂ ಧಾರಾವಾಹಿ ನಿರ್ದೇಶಿಸಿದ್ದ ಸುಧಾಕರ್ ಭಂಡಾರಿ ಕುಡ ವೇದಿಕೆಗೆ ಬಂದು ಮಾತನಾಡಿದ್ದರು.
ನಿರ್ದೇಶಕ ಸುಧಾಕರ್ ಭಂಡಾರಿ ಮಕ್ಕಳಾದ ಅನೂಪ್ ಭಂಡಾರಿ ಹಾಗೂ ನಿರೂಪ್ ಭಂಡಾರಿ ಚಿತ್ರರಂಗದಲ್ಲಿ ಗುರ್ತಿಸಿಕೊಂಡಿದ್ದಾರೆ. ಅನೂಪ್ ನಿರ್ದೇಶನದ 'ವಿಕ್ರಾಂತ್ ರೋಣ' ಚಿತ್ರದಲ್ಲಿ ಸುದೀಪ್ ನಟಿಸಿದ್ದರು. ಇದೀಗ ಅನೂಪ್ ನಿರ್ದೇಶನದ 'ಬಿಲ್ಲ ರಂಗ ಬಾಷ' ಚಿತ್ರದಲ್ಲಿ ನಟಿಸಲು ಸುದೀಪ್ ಸಿದ್ಧತೆ ನಡೆಸುತ್ತಿದ್ದಾರೆ. ಮಾರ್ಚ್ ಕೊನೆ ವಾರದಲ್ಲಿ ಈ ಸಿನಿಮಾ ಚಿತ್ರೀಕರಣ ಶುರುವಾಗಲಿದೆ. ಬಹಳ ದೊಡ್ಡಮಟ್ಟದಲ್ಲಿ ಸಿನಿಮಾ ತೆರೆಗೆ ಬರಲಿದೆ.


Click it and Unblock the Notifications











