For Quick Alerts
  ALLOW NOTIFICATIONS  
  For Daily Alerts

  ಯಾರಿಗೂ ಗೊತ್ತಿಲ್ಲದ ರಘುವೀರ್ ಜೀವನದ ಕರಾಳ ಅಧ್ಯಾಯ

  |

  ಅದು ಮೇ 8, 2014.. ಬೆಳಗೆ ಎದ್ದಾಗಿನಿಂದಲೂ ರಘುವೀರ್ ಗೆ ಏನೋ ಒಂಥರಾ ಹಿಂಸೆ ಕಾಡುತ್ತಿತ್ತು. ಒಂದು ಕಡೆ ಹೊಟ್ಟೆ ನೋವಾಗಿದ್ದರೆ, ಇನ್ನೊಂದು ಕಡೆ ದಿಢೀರ್ ಅಂತ ಎದೆ ನೋವು ಕಾಣಿಸಿಕೊಳ್ತು. ಪರಿಸ್ಥಿತಿ ಕೈ ಮೀರುತ್ತಿದ್ದಾಗ ಕುಟುಂಬದವರು ಬಿ.ಟಿ.ಎಂ ಲೇಔಟ್ ನ ಖಾಸಗಿ ಆಸ್ಪತ್ರೆಗೆ ರಘುವೀರ್ ರನ್ನ ದಾಖಲಿಸಿದರು. ಆದರೆ ಅಷ್ಟರೊಳಗೆ 'ಚೈತ್ರದ ಪ್ರೇಮಾಂಜಲಿ' ಖ್ಯಾತಿಯ ನಟ ರಘುವೀರ್ ಪ್ರಾಣಪಕ್ಷಿ ಹಾರಿ ಹೋಗಿತ್ತು.

  ಬಾರದ ಲೋಕಕ್ಕೆ ತೆರಳಿದ ರಘುವೀರ್ ಗಾಗಿ ಇಡೀ ಕುಟುಂಬ ಕಂಬನಿ ಮಿಡಿಯಿತು. ಕನ್ನಡ ಚಿತ್ರರಂಗಕ್ಕೆ ತಮ್ಮದೇ ಆದ ಕೊಡುಗೆ ನೀಡಿದ್ದರೂ, ಅಂದು ಬೆಂಗಳೂರಿನ ಸಂಪಂಗಿರಾಮನಗರದಲ್ಲಿ ರಘುವೀರ್ ಪಾರ್ಥೀವ ಶರೀರದ ಅಂತಿಮ ದರ್ಶನ ಪಡೆಯಲು ಜಗ್ಗೇಶ್, ಶೋಭರಾಜ್ ಸೇರಿದಂತೆ ಸ್ಯಾಂಡಲ್ ವುಡ್ ನ ಬೆರಳೆಣಿಕೆಯಷ್ಟು ಮಂದಿ ಮಾತ್ರ ಹಾಜರಿದ್ದರು.

  ಇದಕ್ಕೆ ಕಾರಣ ಅದಾಗಲೇ ರಘುವೀರ್ ಬಗ್ಗೆ ಗಾಂಧಿನಗರದಲ್ಲಿ ಹರಿದಾಡಿದ್ದ ಗಾಳಿಮಾತುಗಳು. ''ರಘುವೀರ್ ಮನೆ ಬಿಟ್ಟಿದ್ದಾನೆ. ಅವನ ಬಳಿ ಏನೂ ಇಲ್ಲ. ಅವನನ್ನ ತಂದೆ ಓಡಿಸಿದ್ದಾರೆ'' ಅಂತೆಲ್ಲಾ ರಘುವೀರ್ ಬಗ್ಗೆ ಗುಲ್ಲೆಬ್ಬಿತ್ತು. ಬಹುಶಃ ಇಂತಹ ಮಾತುಗಳಿಂದಲೇ ವರ್ಷಗಳ ಕಾಲ ರಘುವೀರ್ ಯಾವ ಸಿನಿಮಾದಲ್ಲೂ ನಟಿಸಲಿಲ್ಲ. ರಘುವೀರ್ ಗಾಗಿ ಯಾರೂ ಅವಕಾಶವನ್ನೂ ಕೊಡಲಿಲ್ಲ. ಚಿತ್ರರಂಗದಲ್ಲಿ ಮೂಲೆ ಸೇರಿದ್ದ ರಘುವೀರ್ ರನ್ನ ಸಾವಿನಲ್ಲೂ ಅಷ್ಟಾಗಿ ಯಾರೂ ಸ್ಮರಿಸದೇ ಇದ್ದದ್ದು ವಿಷಾದನೀಯ.

  ಸಾಹಸ ಸಿಂಹ ವಿಷ್ಣುವರ್ಧನ್, ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್, ಶಶಿ ಕುಮಾರ್, ಸುನೀಲ್, ನವರಸ ನಾಯಕ ಜಗ್ಗೇಶ್ ಬಹುಬೇಡಿಕೆಯ ಹೀರೋಗಳಾಗಿ ಮಿಂಚುತ್ತಿದ್ದ ಟೈಮ್ ನಲ್ಲಿ ಕನ್ನಡ ಚಿತ್ರರಂಗಕ್ಕೆ ಕಾಲಿಟ್ಟು 'ಚೈತ್ರದ ಪ್ರೇಮಾಂಜಲಿ', 'ಶೃಂಗಾರ ಕಾವ್ಯ' ಅಂತಹ ಬ್ಲಾಕ್ ಬಸ್ಟರ್ ಚಿತ್ರಗಳನ್ನು ನೀಡಿದ್ದವರು ಇದೇ ರಘುವೀರ್.

  ಎರಡು ಸೂಪರ್ ಹಿಟ್ ಗಳನ್ನು ಕೊಟ್ಟು ಸಕ್ಸಸ್ ಫುಲ್ ಹೀರೋ ಆಗಿದ್ದ ರಘುವೀರ್ ಅಷ್ಟೇ ಬೇಗ ಗಾಂಧಿನಗರದ ಮಾರ್ಕೆಟ್ ನಲ್ಲಿ ಪಾತಾಳಕ್ಕೆ ಕುಸಿದುಬಿಟ್ಟರು. ತಂದೆಯನ್ನ ವಿರೋಧಿಸಿ ನಿಜ ಜೀವನದಲ್ಲಿ ಶೃಂಗಾರ ಕಾವ್ಯ ಬರೆಯಲು ಹೋದ ರಘುವೀರ್ ಪಟ್ಟ ಕಷ್ಟ ಅಷ್ಟಿಷ್ಟಲ್ಲ. ದುರಂತ ನಾಯಕ ರಘುವೀರ್ ಜೀವನದ ಕಣ್ಣೀರ ಅಧ್ಯಾಯ ಸವಿವರವಾಗಿ ಇಲ್ಲಿದೆ ಓದಿರಿ...

  ಅಂದು ಆ ನಿರ್ಧಾರ ಮಾಡದೇ ಇದ್ದಿದ್ದರೆ..?

  ಅಂದು ಆ ನಿರ್ಧಾರ ಮಾಡದೇ ಇದ್ದಿದ್ದರೆ..?

  ಆಗಿನ್ನೂ ರಘುವೀರ್ ಕಾಲೇಜು ವಿದ್ಯಾರ್ಥಿ. ತಂದೆ ಮುನಿಯಲ್ಲಪ್ಪ ಬಿಲ್ಡಿಂಗ್ ಕಂಟ್ರ್ಯಾಕ್ಟರ್ ಆಗಿದ್ದರು. ಅಪ್ಪನ ಹಾದಿಯಲ್ಲಿ ಸಾಗಲು ಬಿ.ಎಮ್.ಎಸ್ ಕಾಲೇಜಿನಲ್ಲಿ ರಘುವೀರ್ ಸಿವಿಲ್ ಇಂಜಿನಿಯರಿಂಗ್ ಓದುತ್ತಿದ್ದರು. ಹೀಗಿರುವಾಗಲೇ, ರೆಬೆಲ್ ಸ್ಟಾರ್ ಅಂಬರೀಶ್ ಮನೆಯನ್ನು ಕಟ್ಟುವ ಜವಾಬ್ದಾರಿ ರಘುವೀರ್ ತಂದೆ ಮುನಿಯಲ್ಲಪ್ಪಗೆ ಸಿಕ್ತು. ಪ್ರ್ಯಾಕ್ಟಿಕಲ್ ಎಕ್ಸ್ ಪೀರಿಯನ್ಸ್ ಬೇಕು ಅಂತ ರಘುವೀರ್ ಕೂಡ ಅಂಬರೀಶ್ ಮನೆ ಕಟ್ಟುತ್ತಿದ್ದ ಜಾಗಕ್ಕೆ ಭೇಟಿ ನೀಡುತ್ತಿದ್ದರು. ಆಗಲೇ ರಘುವೀರ್ ಗೆ ಅಂಬರೀಶ್ ಪರಿಚಯ ಆಗಿದ್ದು. ಅಂಬರೀಶ್ ರವರ ಗತ್ತು, ಗೈರತ್ತು ಕಂಡು 'ನಟ'ನಾಗಬೇಕು ಎಂಬ ಆಸೆ ರಘುವೀರ್ ಮನಸ್ಸಿನಲ್ಲಿ ಚಿಗುರೊಡೆಯಿತು. ಅದೊಂದು ದಿನ ಧೈರ್ಯ ಮಾಡಿ ಅಂಬಿ ಮಾಮನಂತೆ ದೊಡ್ಡ ಹೀರೋ ಆಗಬೇಕು ಅಂತ ಅಪ್ಪನ ಮುಂದೆ ರಘುವೀರ್ ಹೇಳಿಯೇಬಿಟ್ಟರು. ಆಗ ''ಓದು ಅಥವಾ ಸಿನಿಮಾ.. ಯಾವುದನ್ನಾದರೂ ಒಂದನ್ನ ಆಯ್ಕೆ ಮಾಡು'' ಅಂತ ತಂದೆ ಹೇಳಿದಾಗ ಓದಿಗೆ ಗುಡ್ ಬೈ ಹೇಳಿ ಬಣ್ಣದ ಬದುಕನ್ನ ರಘುವೀರ್ ಆರಿಸಿಕೊಂಡರು. ಬಹುಶಃ ಅಂದು ಓದಿನ ಕಡೆ ಮುಖ ಮಾಡಿದಿದ್ದರೆ, ರಘುವೀರ್ 'ದುರಂತ ನಾಯಕ'ನಾಗುತ್ತಿರಲಿಲ್ಲ.!

  ಹೃದಯಾಘಾತದಿಂದ ನಟ ರಘುವೀರ್ ವಿಧಿವಶಹೃದಯಾಘಾತದಿಂದ ನಟ ರಘುವೀರ್ ವಿಧಿವಶ

  ಮಗನಿಗೆ ಬೆನ್ನೆಲುಬಾಗಿದ್ದ ತಂದೆ ಮುನಿಯಲ್ಲಪ್ಪ

  ಮಗನಿಗೆ ಬೆನ್ನೆಲುಬಾಗಿದ್ದ ತಂದೆ ಮುನಿಯಲ್ಲಪ್ಪ

  ರಘುವೀರ್ ತಂದೆಗೆ ಒಟ್ಟು ಎಂಟು ಜನ ಮಕ್ಕಳು. ಅದರಲ್ಲಿ ರಘುವೀರ್ ಆರನೇಯವರು. ಉಳಿದವರಿಗೆ ಹೋಲಿಸಿದರೆ ರಘುವೀರ್ ಮೇಲೆ ತಂದೆ ಮುನಿಯಲ್ಲಪ್ಪಗೆ ಪ್ರೀತಿ ಸ್ವಲ್ಪ ಜಾಸ್ತಿನೇ ಇತ್ತು. ಹೀಗಾಗಿ, ನಟ ಆಗಲು ನಿರ್ಧರಿಸಿದ ರಘುವೀರ್ ರನ್ನ ಚೆನ್ನೈಗೆ ಕಳುಹಿಸಿ ಡ್ಯಾನ್ಸ್, ಫೈಟ್, ಹಾರ್ಸ್ ರೈಡಿಂಗ್ ಸೇರಿದಂತೆ ಸಿನಿಮಾಗೆ ಬೇಕಾದ ಸಕಲ ವಿದ್ಯೆಗಳನ್ನೂ ತಂದೆ ಕಲಿಸಿದರು. ಮಗನ ಚೊಚ್ಚಲ ಚಿತ್ರಕ್ಕೆ ಬಂಡವಾಳ ಹಾಕಲು ರಘುವೀರ್ ತಂದೆ ಮುನಿಯಲ್ಲಪ್ಪ ಮುಂದೆ ಬಂದರು.

  ನಟ ರಘುವೀರ್ ಬಾಳಿಗೆ ಮುಳ್ಳಾದವರು ಯಾರು?

  'ಅಜಯ್ ವಿಜಯ್' ಕಥೆ

  'ಅಜಯ್ ವಿಜಯ್' ಕಥೆ

  ರಘುವೀರ್ ಅಭಿನಯದ ಚೊಚ್ಚಲ ಚಿತ್ರಕ್ಕೆ ಆಕ್ಷನ್ ಕಟ್ ಹೇಳಲು ಎ.ಟಿ.ರಘು ಮನಸ್ಸು ಮಾಡಿದರು. ಅಸಲಿಗೆ, ರಘುವೀರ್ ಜನ್ಮನಾಮ ದಿನೇಶ್. ಕನ್ನಡ ಚಿತ್ರರಂಗದಲ್ಲಿ ಈಗಾಗಲೇ ಹಾಸ್ಯ ನಟ ದಿನೇಶ್ ಇದ್ದಿದ್ದರಿಂದ ಆ ಹೆಸರು ಬೇಡ ಅಂತ ಎ.ಟಿ.ರಘು ಹೇಳಿದ್ದರು. ಬಳಿಕ ಮಗನಿಗೆ ರಾಮನ ಹೆಸರು ಇರಲಿ ಅಂತ 'ರಘುವೀರ್' ಹೆಸರನ್ನು ಸೂಚಿಸಿದವರು ಅವರ ತಂದೆ ಮುನಿಯಲ್ಲಪ್ಪ. ಎ.ಟಿ.ರಘು ಮತ್ತು ರಘುವೀರ್ 'ಅಜಯ್ ವಿಜಯ್' ಚಿತ್ರ ಮಾಡಲು ಹೊರಟಾಗ ಮೊದಲು ನೆನಪಾಗಿದ್ದು ವಿನೋದ್ ರಾಜ್. ಆದ್ರೆ, ವಿನೋದ್ ರಾಜ್ ಬದಲಿಗೆ ಮುರಳಿಯನ್ನ ಹಾಕಿಕೊಂಡರೆ ತಮಿಳಿನಲ್ಲೂ ಮಾರ್ಕೆಟ್ ಇರುತ್ತೆ ಎಂಬ ಕಾರಣಕ್ಕೆ ಅಜಯ್ ಮತ್ತು ವಿಜಯ್ ಪಾತ್ರಗಳಿಗೆ ರಘುವೀರ್ ಮತ್ತು ಮುರಳಿ ರನ್ನ ಫಿಕ್ಸ್ ಮಾಡಲಾಯಿತು. ಆಗಿನ ಕಾಲಕ್ಕೆ 35 ಲಕ್ಷದಲ್ಲಿ ತಯಾರಾದ 'ಅಜಯ್ ವಿಜಯ್' ನಿರೀಕ್ಷಿಸಿದ ಮಟ್ಟಕ್ಕೆ ಸಕ್ಸಸ್ ಆಗಲಿಲ್ಲ.

  'ಚೈತ್ರದ ಪ್ರೇಮಾಂಜಲಿ' ಹುಟ್ಟಿದ ಕಥೆ

  'ಚೈತ್ರದ ಪ್ರೇಮಾಂಜಲಿ' ಹುಟ್ಟಿದ ಕಥೆ

  'ಅಜಯ್ ವಿಜಯ್' ಸಿನಿಮಾದಲ್ಲಿ ನಿರ್ದೇಶಕ ಎ.ಟಿ.ರಘುಗೆ ಅಸೋಸಿಯೇಟ್ ಆಗಿದ್ದವರು ಎಸ್.ನಾರಾಯಣ್. ಹೀಗಾಗಿ, ತಮ್ಮ ಎರಡನೇ ಚಿತ್ರಕ್ಕೆ ಡೈರೆಕ್ಟರ್ ಆಗುವ ಚಾನ್ಸ್ ನ ಎಸ್.ನಾರಾಯಣ್ ಗೆ ಕೊಡಲು ರಘುವೀರ್ ನಿರ್ಧರಿಸಿದರು. ಎಸ್.ನಾರಾಯಣ್ ಬರೆದಿದ್ದ ನವಿರಾದ ಪ್ರೇಮಕಥೆಗೆ ರಘುವೀರ್ ಹೀರೋ ಪಾತ್ರಕ್ಕೆ ಸೆಟ್ ಆಗಲ್ಲ ಅಂತ ಎಷ್ಟೋ ಮಂದಿ ಅಡ್ಡಗಾಲು ಹಾಕಿದ್ದರು. ಕೊನೆಗೆ ರಘುವೀರ್-ಎಸ್.ನಾರಾಯಣ್ ಕಾಂಬಿನೇಶನ್ ನಲ್ಲೇ 'ಚೈತ್ರದ ಪ್ರೇಮಾಂಜಲಿ' ಚಿತ್ರದ ಮುಹೂರ್ತ ಫಿಕ್ಸ್ ಆಯ್ತು. ಅಂಬರೀಶ್ ಕ್ಲಾಪ್ ಮಾಡಿದ್ರೆ, ಶಿವರಾಜ್ ಕುಮಾರ್ ಕ್ಯಾಮರಾ ಸ್ವಿಚ್ ಆನ್ ಮಾಡಿದರು. 'ಚೈತ್ರದ ಪ್ರೇಮಾಂಜಲಿ' ಕಂಪ್ಲೀಟ್ ಆದ ಮೇಲೆ ಪ್ರೊಜೆಕ್ಷನ್ ಹಾಕಲಾಯಿತು. ಆಗ ರಘುವೀರ್ ಎದುರಿಸಿದ ಅವಮಾನ ಅಷ್ಟಿಷ್ಟಲ್ಲ.

  ಮೈನಸ್ ಪಾಯಿಂಟ್ 'ಹೀರೋ'

  ಮೈನಸ್ ಪಾಯಿಂಟ್ 'ಹೀರೋ'

  ಅಂದು 'ಚೈತ್ರದ ಪ್ರೇಮಾಂಜಲಿ' ಸಿನಿಮಾ ನೋಡಿದ ನಿರ್ಮಾಪಕರು ಮತ್ತು ವಿತರಕರು ಹೇಳಿದ್ದು ಒಂದೇ ಮಾತು - ''ಚಿತ್ರಕ್ಕೆ ಹೀರೋನೇ ಮೈನಸ್ ಪಾಯಿಂಟ್'. ಅವತ್ತು ರಘುವೀರ್ ಮುಖ ನೋಡಿ ಹಲ್ಲು ಬಿಟ್ಟಿದ್ದ ಕೆಲ ವಿತರಕರು 'ಚೈತ್ರದ ಪ್ರೇಮಾಂಜಲಿ' ಚಿತ್ರವನ್ನ ರಿಲೀಸ್ ಮಾಡಲು ಮುಂದೆ ಬರಲಿಲ್ಲ. ಕಡೆಗೆ ನಿರ್ಮಾಪಕ ರಾಮು 'ಚೈತ್ರದ ಪ್ರೇಮಾಂಜಲಿ' ಕೊಂಡುಕೊಂಡರು. ಮಾರ್ಚ್ 4, 1991 ರಂದು 'ಚೈತ್ರದ ಪ್ರೇಮಾಂಜಲಿ' ತೆರೆಗೆ ಬಂತು. ಎಲ್ಲರ ನಿರೀಕ್ಷೆಗೂ ಮೀರಿ 'ಚೈತ್ರ ಪ್ರೇಮಾಂಜಲಿ' ಯಶಸ್ವಿ ಆಯ್ತು. ಪ್ರೊಜೆಕ್ಷನ್ ಹಾಕಿದ್ದಾಗ ಗಹಗಹಿಸಿ ನಕ್ಕಿದ್ದ ವಿತರಕರು ಬಳಿಕ ಅದೇ ರಘುವೀರ್ ಮುಂದೆಯೇ ಡಿಸ್ಟ್ರಿಬ್ಯೂಷನ್ ರೈಟ್ಸ್ ಗಾಗಿ ಕ್ಯೂ ನಿಲ್ಲುವಂತಾಯಿತು.

  ಶೃಂಗಾರ ಕಾವ್ಯ ಬರೆದ ರಘುವೀರ್

  ಶೃಂಗಾರ ಕಾವ್ಯ ಬರೆದ ರಘುವೀರ್

  'ಚೈತ್ರದ ಪ್ರೇಮಾಂಜಲಿ' ಸಕ್ಸಸ್ ಆದ್ಮೇಲೆ ರಘುವೀರ್ 'ಶೃಂಗಾರ ಕಾವ್ಯ' ಪ್ರಾಜೆಕ್ಟ್ ನ ಕೈಗೆತ್ತಿಕೊಂಡರು. 'ಶೃಂಗಾರ ಕಾವ್ಯ' ಚಿತ್ರಕ್ಕೆ ಎಸ್.ಮಹೇಂದರ್ ಆಕ್ಷನ್ ಕಟ್ ಹೇಳಿದರು. ಹೀರೋಯಿನ್ ಪಾತ್ರಕ್ಕೆ ಚೆನ್ನೈನಿಂದ ಸಿಂಧು ಬಂದರು. ಚಿಕ್ಕಮಗಳೂರಿನಲ್ಲಿ ಶೂಟಿಂಗ್ ನಡೆಯಿತು. 'ಚೈತ್ರದ ಪ್ರೇಮಾಂಜಲಿ' ಚಿತ್ರದಂತೆ 'ಶೃಂಗಾರ ಕಾವ್ಯ' ಕೂಡ ಸೂಪರ್ ಹಿಟ್ ಆಯ್ತು. ಅತ್ತ ಎರಡು ಹಿಟ್ ಕೊಟ್ಟು ಸ್ಯಾಂಡಲ್ ವುಡ್ ನಲ್ಲಿ ಸಕ್ಸಸ್ ಆಗುತ್ತಿದ್ದ ರಘುವೀರ್ ಹೃದಯದಲ್ಲಿ ಇತ್ತ ಪ್ರೀತಿ ಹುಟ್ಟಿತ್ತು.

  ರಘುವೀರ್-ಸಿಂಧು ಪ್ರೇಮ ಕಥೆ

  ರಘುವೀರ್-ಸಿಂಧು ಪ್ರೇಮ ಕಥೆ

  'ಶೃಂಗಾರ ಕಾವ್ಯ' ಚಿತ್ರೀಕರಣ ಸಂದರ್ಭದಲ್ಲೇ ನಟಿ ಸಿಂಧು ಮತ್ತು ರಘುವೀರ್ ಮಧ್ಯೆ ಪ್ರೇಮಾಂಕುರವಾಯಿತು. ನಟಿ ಸಿಂಧು ಜೊತೆಗೆ ರಘುವೀರ್ ಮದುವೆ ನಡೆಯುವುದು ತಂದೆ ಮುನಿಯಲ್ಲಪ್ಪಗೆ ಇಷ್ಟ ಇರಲಿಲ್ಲ. ತಂದೆಯ ಮಾತನ್ನು ಧಿಕ್ಕರಿಸಿ ರಘುವೀರ್.. ಸಿಂಧು ಕೈಹಿಡಿದರು. ರಘುವೀರ್ ಅಧಃಪತನ ಶುರುವಾಗಿದ್ದು ಇಲ್ಲಿಂದಲೇ.!

  ತಂದೆ-ಮಗನ ಮಧ್ಯೆ ಮನಸ್ತಾಪ

  ತಂದೆ-ಮಗನ ಮಧ್ಯೆ ಮನಸ್ತಾಪ

  ಮಗ ರಘುವೀರ್ ಮೇಲೆ ಪ್ರಾಣವನ್ನೇ ಇಟ್ಟುಕೊಂಡಿದ್ದ ತಂದೆಗೆ ಅಂದು ದೊಡ್ಡ ಆಘಾತ ಎದುರಾಗಿತ್ತು. ಪತ್ನಿಯ ತಮ್ಮನ ಮಗಳನ್ನು ರಘುವೀರ್ ಗೆ ಕೊಟ್ಟು ಮದುವೆ ಮಾಡಬೇಕೆನ್ನುವುದು ತಂದೆ ಮುನಿಯಲ್ಲಪ್ಪನ ಆಸೆಯಾಗಿತ್ತು. ಆದ್ರೆ, ಅದನ್ನ ಧಿಕ್ಕರಿಸಿ ಸಿಂಧು ಕೊರಳಿಗೆ ರಘುವೀರ್ ತಾಳಿ ಕಟ್ಟಿದರು. ತಂದೆ-ಮಗನ ಮಧ್ಯೆ ಮನಸ್ತಾಪ ಉಂಟಾಯಿತು. ಮನೆ ಬಿಟ್ಟು ರಘುವೀರ್ ಹೊರ ನಡೆದರು. ಕುಟುಂಬದವರೊಂದಿಗೆ ಮಾತುಕತೆಯನ್ನೂ ನಿಲ್ಲಿಸಿಬಿಟ್ಟರು ರಘುವೀರ್. ಆಗಲೇ, ರಘುವೀರ್ ಬಗ್ಗೆ ಗಾಂಧಿನಗರದಲ್ಲಿ ಗಾಳಿಮಾತುಗಳು ಶುರುವಾಗಿದ್ದು.

  ಕೇಳೋರು ಇರಲಿಲ್ಲ.!

  ಕೇಳೋರು ಇರಲಿಲ್ಲ.!

  ''ರಘುವೀರ್ ಮನೆ ಬಿಟ್ಟಿದ್ದಾನೆ. ಅವನ ಹತ್ತಿರ ಏನೂ ಇಲ್ಲ. ಅವ್ನ ಅಪ್ಪ ಓಡಿಸಿದ್ದಾರೆ'' ಅಂತೆಲ್ಲಾ ಮಾತುಗಳು ಗಾಂಧಿನಗರದಲ್ಲಿ ಕೇಳಿಬಂತು. ಆಗ ರಘುವೀರ್ ಗೆ ಯಾವ ಚಿತ್ರದ ಆಫರ್ ಗಳೂ ಸಿಗಲಿಲ್ಲ. ರಘುವೀರ್ ಗೆ ಬ್ಯಾಕಪ್ ಇದದ್ದು ಅವರ ಅಪ್ಪ ಮಾತ್ರ. ಅಪ್ಪನನ್ನ ಬಿಟ್ಟು ಬಂದ ಮೇಲೆ ರಘುವೀರ್ ರನ್ನ ಕೇಳೋರೇ ಇರಲಿಲ್ಲ. ಕೆಲಸ ಇಲ್ಲದ ರಘುವೀರ್ ಪ್ರತಿದಿನ ಪಟ್ಟ ಕಷ್ಟ, ಅನುಭವಿಸಿದ ನೋವು, ಅವಮಾನ, ಯಾತನೆ ಪದಗಳಲ್ಲಿ ಹೇಳಲು ಸಾಧ್ಯವಿಲ್ಲ.

  ಪತ್ನಿ ಸಿಂಧು ನಿಧನ

  ಪತ್ನಿ ಸಿಂಧು ನಿಧನ

  ನವೆಂಬರ್ 15, 1992 ರಂದು ರಘುವೀರ್-ಸಿಂಧು ದಾಂಪತ್ಯ ಜೀವನ ಆರಂಭಿಸಿದರು. ಇಬ್ಬರ ದಾಂಪತ್ಯಕ್ಕೆ ಸಾಕ್ಷಿಯಾಗಿ ಜುಲೈ1, 1994 ರಲ್ಲಿ ಹೆಣ್ಣು ಮಗು ಜನಿಸಿತು. ಬೆಂಗಳೂರಿನಲ್ಲೇ ಸಂಸಾರ ನಡೆಸಿದರೂ, ರಘುವೀರ್ ಊರು ಬಿಟ್ಟಿದ್ದಾನೆ ಎಂಬ ಮಾತುಗಳು ಕೇಳಿಬಂದಿತ್ತು. ಆರ್ಥಿಕವಾಗಿ ಕಷ್ಟದಲ್ಲಿ ಸಂಸಾರ ನಡೆಸುತ್ತಿದಾಗಲೇ ಒಂದು ದುರಂತ ನಡೆದು ಹೋಯ್ತು. ನಟಿ ಸಿಂಧುಗೆ ಚಿಕ್ಕವಯಸ್ಸಿನಿಂದಲೂ ವೀಝಿಂಗ್ ಸಮಸ್ಯೆ ಇತ್ತು. ಸುನಾಮಿ ಸಂತ್ರಸ್ತರಿಗೆ ಚಾರಿಟಿ ಫಂಡ್ ರೈಸ್ ಮಾಡಲು ಹೋದಾಗ ಸುಂಟರಗಾಳಿ ಬೀಸಿದ ಪರಿಣಾಮ ಮೂಗಿನೊಳಗೆ ಧೂಳು ಹೋಗಿದ್ದರಿಂದ ಮೂರು ದಿನ ನಟಿ ಸಿಂಧು ಕೋಮಾಗೆ ಜಾರಿದ್ದರು. ಚಿಕಿತ್ಸೆ ಫಲಕಾರಿ ಆಗದೆ 2003 ರಲ್ಲಿ ನಟಿ ಸಿಂಧು ವಿಧಿವಶರಾದರು. ಅದಾಗಲೇ ತಂದೆ-ತಾಯಿಯಿಂದ ದೂರಾಗಿ ಮಾನಸಿಕವಾಗಿ ನೊಂದಿದ್ದ ರಘುವೀರ್ ಗೆ ಈ ದುರಂತ ಬರಸಿಡಿಲಿನಂತೆ ಬಡಿಯಿತು.

  ಮಾನಸಿಕವಾಗಿ ನೊಂದಿದ್ದ ರಘುವೀರ್

  ಮಾನಸಿಕವಾಗಿ ನೊಂದಿದ್ದ ರಘುವೀರ್

  ನಟಿ ಸಿಂಧು ರನ್ನ ಮದುವೆಯಾಗಿ ಹನ್ನೊಂದು ವರ್ಷ ಕುಟುಂಬದಿಂದ ರಘುವೀರ್ ದೂರ ಇದ್ದರು. ಇತ್ತ ಸಿಂಧು ತೀರಿಕೊಂಡ ಬಳಿಕ ಮಾನಸಿಕವಾಗಿ ಘಾಸಿಗೊಂಡಿದ್ದ ರಘುವೀರ್ ಸೀದಾ ಮುಂಬೈಗೆ ಹಾರಿಬಿಟ್ಟರು. ಅಲ್ಲಿನ ಬೀದಿಗಳಲ್ಲಿ ರಘುವೀರ್ ಕಷ್ಟಪಡುತ್ತಿದ್ದ ವಿಷ್ಯ ಹೇಗೋ ತಂದೆಯನ್ನ ಮುಟ್ಟಿತು. ಬಳಿಕ ರಘುವೀರ್ ಮತ್ತು ಅವರ ತಂದೆ ಮುನಿಯಲ್ಲಪ್ಪ ಒಂದಾದರು. 2004 ರಲ್ಲಿ ತಂದೆ ಮಾತಿಗೆ ಬೆಲೆ ಕೊಟ್ಟು ಮತ್ತೆ ಅತ್ತೆ ಮಗಳನ್ನೇ ರಘುವೀರ್ ವರಿಸಿದರು. ಈ ದಂಪತಿಗೆ ಹೆಣ್ಣು ಮಗುವಿದೆ.

  ತುಂಬಾ ಡಿಪ್ರೆಸ್ ಆಗಿದ್ದೆ

  ತುಂಬಾ ಡಿಪ್ರೆಸ್ ಆಗಿದ್ದೆ

  ''ಸಿಂಧು ಸತ್ತ ಬಳಿಕ ನಂಗೆ ತಲೆ ಕೆಟ್ಟು ಹೋಗಿತ್ತು. ನಂಗ್ಯಾಕೆ... ಇನ್ನ ಸಿನಿಮಾನೂ ಬೇಡ, ಏನೂ ಬೇಡ ಅಂತ ಬೆಂಗಳೂರಲ್ಲಿ ಇರ್ಲಿಲ್ಲ. ಮದ್ರಾಸ್ ನಲ್ಲೂ ಇರ್ಲಿಲ್ಲ. ಸೀದಾ ಬಾಂಬೆಗೆ ಹೊರ್ಟು ಹೋದೆ. ತುಂಬಾ ಡಿಪ್ರೆಸ್ ಆಗಿದ್ದೆ. ಮನೆಗೆ ಹೋಗಿ ಮುಖ ತೋರಿಸೋಕೂ ಆಗ್ತಿರ್ಲಿಲ್ಲ'' ಅಂತ ಇಹಲೋಕ ತ್ಯಜಿಸುವ ಮುನ್ನ ನೀಡಿದ್ದ ಸಂದರ್ಶನವೊಂದರಲ್ಲಿ ರಘುವೀರ್ ಹೇಳಿಕೊಂಡಿದ್ದಾರೆ.

  ಫಾದರ್ ಇಲ್ಲ.. ಗಾಡ್ ಫಾದರ್ ಕೂಡ ಇಲ್ಲ.!

  ಫಾದರ್ ಇಲ್ಲ.. ಗಾಡ್ ಫಾದರ್ ಕೂಡ ಇಲ್ಲ.!

  ಮದುವೆ ಆದ ಮೇಲೆ 'ತುಂಗಭದ್ರ', 'ಮೌನ ಚಂದ್ರಮ', 'ನವಿಲೂರ ನೈದಿಲೆ', 'ಹೊಂಗಿರಣ', 'ನ್ಯಾಯಕ್ಕಾಗಿ ಸವಾಲ್' ಚಿತ್ರಗಳಲ್ಲಿ ರಘುವೀರ್ ನಟಿಸಿದ್ದರು. ಆದರೆ, ಇವುಗಳಲ್ಲಿ ಕೆಲವು ಅರ್ಧಕ್ಕೆ ನಿಂತು ಹೋದರೆ, ಮಿಕ್ಕವು ಹೇಳಹೆಸರಿಲ್ಲದಂತೆ ಮಾಯವಾದವು. ಫಾದರ್ ಮತ್ತು ಗಾಡ್ ಫಾದರ್ ಇಲ್ಲದೆ ರಘುವೀರ್ ಹೊತ್ತು ಊಟಕ್ಕೂ ಕಷ್ಟ ಪಟ್ಟರು.

  ಆಸೆ ಈಡೇರಿಸದ ಮುಗಿಲ ಚುಂಬನ

  ಆಸೆ ಈಡೇರಿಸದ ಮುಗಿಲ ಚುಂಬನ

  ಎರಡನೇ ಮದುವೆ ಆದ ಮೇಲೆ ರಘುವೀರ್ 'ಮುಗಿಲ ಚುಂಬನ' ಎಂಬ ಚಿತ್ರದಲ್ಲಿ ಅಭಿನಯಿಸಿದರು. ಸಾಲ ಮಾಡಿ, ಹೇಗೋ ಚಿತ್ರವನ್ನ ಕಂಪ್ಲೀಟ್ ಮಾಡಿದರು. ಆದ್ರೆ, ಅದನ್ನ ಕೊಂಡುಕೊಳ್ಳಲು ಯಾರೂ ಧೈರ್ಯ ಮಾಡಲಿಲ್ಲ. 'ಮುಗಿಲ ಚುಂಬನ' ಮೂಲಕ ಮರಳಿ ಫಾರ್ಮ್ ಗೆ ಬರಲು ರಘುವೀರ್ ಆಸೆ ಪಟ್ಟಿದ್ದರು. ಆದ್ರೆ, ಅದು ಈಡೇರಲೇ ಇಲ್ಲ. 'ಮುಗಿಲ ಚುಂಬನ' ಮಕಾಡೆ ಮಲಗಿತು.

  ಸಾಯುವಂತಹ ವಯಸ್ಸಲ್ಲ.!

  ಸಾಯುವಂತಹ ವಯಸ್ಸಲ್ಲ.!

  ದೊಡ್ಡ ಹೀರೋ ಆಗಲು ಚಿತ್ರರಂಗಕ್ಕೆ ಕಾಲಿಟ್ಟ ರಘುವೀರ್ ನಿಜ ಜೀವನ ಮಾತ್ರ ದುರಂತ. ವೈಯುಕ್ತಿಕ ಬದುಕಿನಲ್ಲಾದ ಕೆಲ ಘಟನೆಗಳಿಂದ ರಘುವೀರ್ ದುರಂತ ನಾಯಕನಾಗಿ ಉಳಿದರು. ಜೀವನದಲ್ಲಿ ತೀವ್ರ ಜಿಗುಪ್ಸೆ ಅನುಭವಿಸಿದ್ದ ರಘುವೀರ್ 46 ವರ್ಷ ವಯಸ್ಸಿಗೆ ಕೊನೆಯುಸಿರೆಳೆದರು. ರಘುವೀರ್ ರದ್ದು ಸಾಯುವಂತಹ ವಯಸ್ಸಲ್ಲ. ಆದ್ರೆ, ಕೆಲ ಘಟನೆಗಳಿಂದ ಅವರ ಮನಸ್ಸು ಹಿಂಡಿ ಹಿಪ್ಪೆ ಆಗಿತ್ತು.

  ಕಟ್ಟ ಕಡೆಯ ಸಂದರ್ಶನದಲ್ಲಿ ಆಡಿದ ಮಾತು

  ಕಟ್ಟ ಕಡೆಯ ಸಂದರ್ಶನದಲ್ಲಿ ಆಡಿದ ಮಾತು

  ''ಇವಾಗ ಅನಿಸುತ್ತೆ... ಅವತ್ತು ಸಿನಿಮಾಗೆ ಬರುವ ಬದಲು ನಾನು ಎಂಜಿನಿಯರ್ ಆಗ್ಬೇಕಿತ್ತು ಅಂತ. ಎಂಜಿನಿಯರ್ ಆಗಿದ್ದಿದ್ದರೆ, ಆರಾಮಾಗಿ ಎಸಿ ರೂಮ್ ನಲ್ಲಿ ಕೂತ್ಕೊಂಡು ಇರಬಹುದಿತ್ತು. ಸುಮ್ನೆ 15 ವರ್ಷ ವನವಾಸ ಪಟ್ಟೆ'' ಎಂದು ಸಾಯುವ ಕೆಲವೇ ಕೆಲವು ದಿನಗಳ ಹಿಂದೆಯಷ್ಟೇ ನೀಡಿದ್ದ ಸಂದರ್ಶನದಲ್ಲಿ ರಘುವೀರ್ ಹೇಳಿಕೊಂಡಿದ್ದರು. ಒಮ್ಮೊಮ್ಮೆ ತೆಗೆದುಕೊಳ್ಳುವ ನಿರ್ಧಾರದಿಂದ ಬದುಕು ಹೇಗೆಲ್ಲಾ ಬದಲಾಗುತ್ತೆ ನೋಡಿ...

  English summary
  Here is the detailed report on Kannada Actor Raghuveer's life story.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X