ಲಾರಿ ಕ್ಲೀನರ್ ಆಗಿದ್ದ ಈ ವ್ಯಕ್ತಿ ಈಗ ಕನ್ನಡ ಚಿತ್ರರಂಗದ ಹೀರೊ
ಚಿತ್ರರಂಗದಲ್ಲಿ ಗುರ್ತಿಸಿಕೊಳ್ಳಬೇಕು, ಹೀರೊ ಆಗಬೇಕು, ಹೀರೋಯಿನ್ ಆಗಬೇಕು, ನಿರ್ದೇಶಕ ಆಗಬೇಕು ಅಂತ ಸಾಕಷ್ಟು ಜನ ಕನಸು ಕಾಣುತ್ತಾರೆ. ಆದರೆ ಹೀಗೆ ಕನಸು ಕಂಡು ಬಂದವರೆಲ್ಲಾ ಗೆಲ್ಲೋಕೆ ಸಾಧ್ಯವಾಗಿಲ್ಲ. ಸಾಕಷ್ಟು ಜನ ಪರಿಶ್ರಮ ಇದ್ದರೂ ಅದೃಷ್ಟ ಇಲ್ಲದೇ ಸೋತಿರುವುದು ಇದೆ. ಕೆಲವರು ಬರೀ ಅದೃಷ್ಟದಿಂದಲೇ ಗೆದ್ದವರು ಇಲ್ಲಿದ್ದಾರೆ.
ಬಸ್ ಡ್ರೈವರ್ ಮಗ ಯಶ್ ಈಗ ಪ್ಯಾನ್ ಇಂಡಿಯಾ ಸ್ಟಾರ್ ಆಗಿದ್ದಾರೆ. ನೂರಾರು ಕೋಟಿ ಆಸ್ತಿ ಸಂಪಾದಿಸಿದ್ದಾರೆ. ಹೀಗೆ ಯಾವುದೇ ಹಿನ್ನೆಲೆ ಇಲ್ಲದೇ ಬಂದವರು ಚಿತ್ರರಂಗದಲ್ಲಿ ಗುರ್ತಿಸಿಕೊಂಡಿದ್ದಾರೆ. ಬಸ್ ಕಂಡೆಕ್ಟರ್ ಆಗಿದ್ದ ಶಿವಾಜಿ ರಾವ್ ಗಾಯಕ್‌ವಾಡ್ ಮುಂದೆ ಸೂಪರ್ ಸ್ಟಾರ್ ರಜನಿಕಾಂತ್ ಆಗಿ ಬೆಳೆದಿದ್ದು ರೋಚಕ. ಹೀಗೆ ಚಿತ್ರರಂಗದಲ್ಲಿ ಸಾಧಿಸಿದವರ ಹಿನ್ನಲೆ ಬೇರೆ ಬೇರೆ ರೀತಿ ಇರುತ್ತದೆ.

ಲಾರಿ ಕ್ಲೀನರ್ ಆಗಿದ್ದ ವ್ಯಕ್ತಿ ಇವತ್ತು ನೂರಕ್ಕೂ ಅಧಿಕ ಕನ್ನಡ ಸಿನಿಮಾಗಳಲ್ಲಿ ನಟಿಸಿದ್ದಾರೆ. ಹಾಸ್ಯನಟನಾಗಿ ಚಿತ್ರರಂಗಕ್ಕೆ ಬಂದವರು ಬಳಿಕ ಹೀರೊ ಆಗಿ ಗೆದ್ದಿದ್ದಾರೆ. ಲಾರಿ ಕ್ಲೀನರ್ ಆಗಿದ್ದ ವ್ಯಕ್ತಿ ಮತ್ಯಾರೂ ಅಲ್ಲ ನಟ ಶರಣ್. ಹೌದು ಈ ವಿಚಾರವನ್ನು ಸ್ವತಃ ಅವರೇ ಸೋಶಿಯಲ್ ಮೀಡಿಯಾ ಖಾತೆಗಳಲ್ಲಿ ಬರೆದುಕೊಂಡಿದ್ದಾರೆ. ಖ್ಯಾತ ನಟಿ ಶ್ರುತಿ ಸಹೋದರ ಶರಣ್ ಚಿತ್ರರಂಗಕ್ಕೆ ಬಂದಿದ್ದು ಗೊತ್ತೇಯಿದೆ. ಆದರೆ ಅದಕ್ಕೂ ಮುನ್ನ ಅವರು ಲಾರಿ ಕ್ಲೀನರ್ ಕೆಲಸ ಮಾಡುತ್ತಿದ್ದರಂತೆ.
"ಚಿತ್ರರಂಗಕ್ಕೆ ಕಾಲಿಡುವ ಮುನ್ನ , ಕೆಲಸ ಹುಡುಕುತ್ತಿದ್ದ ಸಮಯ. ನನ್ನಲ್ಲಿದ್ದ ಸಾಮರ್ಥ್ಯ ಅರಿಯುವ ಮುನ್ನ , ಕೆಲ ಸಮಯ ಲಾರಿ ಕ್ಲೀನರ್ ಆಗಿ ಕೆಲ್ಸ ಮಾಡಿದ್ದುಂಟು. ಆಗ ಲಾರಿ ಕೊಳ್ಳುವ ಕನಸು ಕಂಡಿದ್ದೂ ಉಂಟು. ಆದರೇ ಲಾರಿಯಲ್ಲಿ ಶುರುವಾದ ನನ್ನ ಪಯಣ ಬೆಳ್ಳಿ ಪರದೆಯ ಮೇಲೆ ಬಂದು ನಿಂತಿರುವುದು ಕಂಡರೆ ಆ ಭಗವಂತನ ಲೀಲೆಗೆ " ಎಂದು ನಟ ಶರಣ್ ಬರೆದುಕೊಂಡಿದ್ದಾರೆ.
1996ರಲ್ಲಿ ಬಂದ 'ಪ್ರೇಮ ಪ್ರೇಮ ಪ್ರೇಮ' ಚಿತ್ರದ ಸಣ್ಣ ಪಾತ್ರದಲ್ಲಿ ಶರಣ್ ಮೊದಲಿಗೆ ನಟಿಸಿದ್ದರು. ಬಳಿಕ ಸಾಲು ಸಾಲು ಸಿನಿಮಾಗಳಲ್ಲಿ ಹಾಸ್ಯನಟನಾಗಿ ಪ್ರೇಕ್ಷಕರನ್ನು ರಂಜಿಸಿದ್ದರು. 2012ರಲ್ಲಿ ಬಂದ 'ರ್ಯಾಂಬೊ' ಚಿತ್ರದ ಮೂಲಕ ಹೀರೊ ಆಗಿ ಬಡ್ತಿ ಪಡೆದರು. ಅಂದಹಾಗೆ ಇದು ಶರಣ್ ನಟಿಸಿದ 100ನೇ ಸಿನಿಮಾ. ಅದೇ ಚಿತ್ರದ ಮೂಲಕ ನಿರ್ಮಾಪಕರು ಆಗಿದ್ದರು.
ಮುಂದೆ 'ವಿಕ್ಟರಿ', 'ಜೈ ಲಲಿತಾ' ಹೀಗೆ ಶರಣ್ ಹೀರೊ ಆಗಿ ನಟಿಸಲು ಆರಂಭಿಸಿದರು. ನಡು ನಡುವೆ ಹಾಸ್ಯ ಕಲಾವಿದನಾಗಿಯೂ ಮಿಂಚಿದರು. 'ಅಧ್ಯಕ್ಷ' ಚಿತ್ರದಿಂದ ದೊಡ್ಡ ಬ್ರೇಕ್ ಸಿಕ್ತು. ಆ ಬಳಿಕ ಹಾಸ್ಯ ಪಾತ್ರಗಳನ್ನು ಬಿಟ್ಟು ಹೀರೊ ಆಗಿ ನಟಿಸಲು ಮುಂದುವರೆಸಿದರು. ಎರಡು ವರ್ಷದ ಹಿಂದೆ ಬಂದ 'ಗುರುಶಿಷ್ಯರು' ಚಿತ್ರ ದೊಡ್ಡ ಸಕ್ಸಸ್ ಕೊಟ್ಟಿತ್ತು. ಈ ಚಿತ್ರದಲ್ಲೂ ಹಾಸ್ಯವೇ ಪ್ರಧಾನವಾಗಿತ್ತು. ಆದರೆ ಕೊನೆ ಕೊನೆಗೆ ಒಂದು ಗಂಭೀರ ವಿಚಾರವನ್ನು ಚಿತ್ರದಲ್ಲಿ ಹೇಳಲಾಗಿತ್ತು.
ಇತ್ತೀಚೆಗೆ 'ಅವತಾರ ಪುರುಷ' ಸರಣಿ ಸಿನಿಮಾಗಳಲ್ಲಿ ಶರಣ್ ನಟಿಸಿದರು. ಕಾಮಿಡಿ ಹಾರರ್ ಜಾನರ್ ಸಿನಿಮಾ ಅಷ್ಟಾಗಿ ಸದ್ದು ಮಾಡಲಿಲ್ಲ. 'ಛೂ ಮಂತರ್' ಶರಣ್ ನಟಿಸಿದ ಕೊನೆಯ ಸಿನಿಮಾ. ಮತ್ತಷ್ಟು ವಿಭಿನ್ನ ಸಿನಿಮಾಗಳ ಮೂಲಕ ಪ್ರೇಕ್ಷಕರ ಮುಂದೆ ಬರಲು ಮನಸ್ಸು ಮಾಡಿದ್ದಾರೆ.


Click it and Unblock the Notifications











