ಚಿತ್ರವೊಂದಕ್ಕೆ ವಜ್ರಮುನಿ ಪಡೆಯುತ್ತಿದ್ದ ಸಂಭಾವನೆ ಎಷ್ಟು? ಅಪ್ಪನ ಬಗ್ಗೆ ವಿಶ್ವನಾಥ್ ವಜ್ರಮುನಿ ಮಾತು
ಕನ್ನಡ ಚಿತ್ರರಂಗ ಕಂಡ ಅದ್ಭುತ ಪ್ರತಿಭೆ ವಜ್ರಮುನಿ. ತಮ್ಮ ವಿಲನ್ ಪಾತ್ರಗಳಿಂದ ಇವತ್ತಿಗೂ ಕನ್ನಡ ಸಿನಿರಸಿಕರ ಎದೆಯಲ್ಲಿ ದಿಗಿಲು ಹುಟ್ಟಿಸುವ ನಟ. ಕನ್ನಡದ ಖ್ಯಾತ ಖಳನಟರ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿ ವಜ್ರಮುನಿ ನಿಲ್ಲುತ್ತಾರೆ. ನೂರಾರು ಸಿನಿಮಾಗಳಲ್ಲಿ ನೆಗೆಟಿವ್ ಪಾತ್ರಗಳಲ್ಲಿ ನಟಿಸಿ ಗಮನ ಸೆಳೆದವರು. ಅಣ್ಣಾವ್ರು ಹಾಗೂ ವಜ್ರಮುನಿ ಕಾಂಬಿನೇಷನ್ ಸಿನಿಮಾಗಳನ್ನು ಮರೆಯೋಕೆ ಸಾಧ್ಯವಿಲ್ಲ.
ರಂಗಭೂಮಿ ಮೂಲಕ ವಜ್ರಮುನಿ ಚಿತ್ರರಂಗ ಪ್ರವೇಶಿಸಿದ್ದರು. ಬರೀ ಕಣ್ಣುಗಳಲ್ಲೇ ಎದುರಿಗಿದ್ದವರನ್ನು ನಡುಗಿಸುತ್ತಿದ್ದ ಅವರ ಅಭಿನಯಕ್ಕೆ ಮನಸೋಲದವರಿಲ್ಲ. ವಜ್ರಮುಣಿ ಬಳಿಕ ಅವರ ಕುಟುಂಬದಿಂದ ಯಾರು ಚಿತ್ರರಂಗಕ್ಕೆ ಬರಲಿಲ್ಲ. ಮಕ್ಕಳು ಬಣ್ಣದಲೋಕಕ್ಕೆ ಬರುವುದು ಬೇಡ ಎನ್ನುವುದು ಅವರ ನಿರ್ಧಾರವಾಗಿತ್ತು. ಪುತ್ರ ವಿಶ್ವನಾಥ್ ನರ್ಸರಿ ಬ್ಯುಸಿನೆಸ್‌ನಲ್ಲಿ ತೊಡಗಿಸಿಕೊಂಡಿದ್ದಾರೆ. ಸುದ್ದಿಮನೆ ಯೂಟ್ಯೂಬ್ ಚಾನಲ್ ಸಂದರ್ಶನದಲ್ಲಿ ತಂದೆ ವಜ್ರಮುನಿ ಬಗ್ಗೆ ಸಾಕಷ್ಟು ವಿಚಾರಗಳನ್ನು ವಿಶ್ವನಾಥ್ ಹಂಚಿಕೊಂಡಿದ್ದಾರೆ.

ಇವತ್ತು ಸಿನಿಮಾ ಕಲಾವಿದರಿಗೆ ಕೋಟಿಗಟ್ಟಲೆ ಸಂಭಾವನೆ ಕೊಡುತ್ತಾರೆ. ಸಂಭಾವನೆ ಸಂಪೂರ್ಣವಾಗಿ ಕೊಡುವವರೆಗೂ ಚಿತ್ರೀಕರಣಕ್ಕೆ ಬರಲ್ಲ, ಡಬ್ಬಿಂಗ್ ಮಾಡಲ್ಲ ಎಂದು ಪಟ್ಟು ಹಿಡಿದು ವಸೂಲಿ ಮಾಡುವವರು ಇದ್ದಾರೆ. ಆದರೆ ದಶಕಗಳ ಹಿಂದೆ ಕೊಟ್ಟಷ್ಟು ಸಂಭಾವನೆ ಪಡೆದು ಕಲಾವಿದರು ನಟಿಸುತ್ತಿದ್ದರು. ಕೆಲವರಿಗೆ ಸಂಪೂರ್ಣ ಸಂಭಾವನೆ ಕೊಡುತ್ತಿರಲಿಲ್ಲ. ವಜ್ರಮುನಿ ಅವರಿಗೂ ಕೂಡ ಇದೇ ರೀತಿ ಸಾಕಷ್ಟು ಬಾರಿ ಮೋಸ ಆಗಿದೆ ಎಂದು ವಿಶ್ವನಾಥ್ ಹೇಳಿದ್ದಾರೆ. "ನಮ್ಮ ತಂದೆಗೆ ಚಿತ್ರವೊಂದಕ್ಕೆ 40 ಸಾವಿರದಿಂದ 50 ಸಾವಿರ ಸಂಭಾವನೆ ಸಿಕ್ಕಿತ್ತು. ಅದೇ ಹೆಚ್ಚು. ಲಕ್ಷಗಳಲ್ಲಿ ಸಂಭಾವನೆ ಬರಲಿಲ್ಲ. ಎಷ್ಟೋ ಸಿನಿಮಾಗಳಿಗೆ ಅರ್ಧ ಸಂಭಾವನೆ ಮಾತ್ರ ಕೊಟ್ಟಿದ್ರು" ಎಂದು ನೆನಪಿಸಿಕೊಂಡಿದ್ದಾರೆ.
ಡಾ. ರಾಜ್‌ಕುಮಾರ್ ಯಾವುದೇ ಸಿನಿಮಾ ಮಾಡುವಾಗ ಕಲಾವಿದರು ಯಾರ್ಯಾರು ಎಂದು ಕೇಳುತ್ತಿದ್ರು. ಮೊದ್ಲು ವಜ್ರಮುನಿ ಕಾಲ್‌ಶೀಟ್ ತಗೊಂಡು ಬಾ, ಬಳಿಕ ನನ್ನ ಕಾಲ್‌ಶೀಟ್ ಕೊಡ್ತೀನಿ ಎನ್ನುತ್ತಿದ್ದರು. ಅವರಿಬ್ಬರ ಬಾಂಧವ್ಯ ಆ ರೀತಿ ಇತ್ತು ಎಂದು ವಿಶ್ವನಾಥ್ ವಜ್ರಮುನಿ ಹೇಳಿದ್ದಾರೆ. ಘಂಟೆಗಳ ಕಾಲ ಅಪ್ಪ ನಾಟಕದ ಡೈಲಾಗ್ ಅಭ್ಯಾಸ ಮಾಡ್ತಿದ್ರಂತೆ, ನೀರಲ್ಲಿ ಕೂತು ಡೈಲಾಗ್ ಉಚ್ಚಾರ ಮಾಡುವುದನ್ನು ಕಲಿಯುತ್ತಿದ್ದರಂತೆ. ಅಂತಹ ಡೈಲಾಗ್ ಈಗ ಯಾರು ಹೇಳ್ತಾರೆ. ಅದೆಲ್ಲ ಬಹಳ ಕಷ್ಟ ಎಂದು ವಿಶ್ವನಾಥ್ ತಿಳಿಸಿದ್ದಾರೆ.

ಸಾಮಾನ್ಯವಾಗಿ ಪೋಷಕ ಕಲಾವಿದರಿಗೆ ಸರಿಯಾದ ಸಂಭಾವನೆ ಸಿಗಲ್ಲ. ಆದಾಯ ಇರಲ್ಲ. ಚಿತ್ರರಂಗದವರು, ಸರ್ಕಾರದವರು ನಮ್ಮನ್ನು ನಿರ್ಲಕ್ಷಿಸುತ್ತಿದ್ದಾರೆ ಎನ್ನುವ ಮಾತುಗಳು ಕೇಳಿಬರುತ್ತದೆ. ಇದೇ ವಿಚಾರದ ಬಗ್ಗೆ ವಿಶ್ವನಾಥ್ ಬಳಿ ಕೇಳಿದಾಗ "ನಮ್ಮ ತಂದೆ ಅಂತಹ ಮಾತುಗಳನ್ನು ಕೇಳಲು ಇಷ್ಟ ಇರಲಿಲ್ಲ. ಅವ್ರು ಅಫೋಲೊ ಆಸ್ಪತ್ರೆಗೆ ಸೇರಿದಾಗ ಸರ್ಕಾರದಿಂದ ಅನುದಾನ ಸಿಗುತ್ತೆ ಅಪ್ಲೇ ಮಾಡಿ ಎಂದು ಮುಖಂಡರು ಒಬ್ರು ಬಂದು ಹೇಳಿದ್ರು. ಆದ್ರೆ ಒಪ್ಪಲಿಲ್ಲ. ಅಪ್ಪ ನಿಧನರಾದಾಗ ಅಂಬರೀಶ್, ರಾಮಲಿಂಗಾರೆಡ್ಡಿ ಸೇರಿದಂತೆ ಸಾಕಷ್ಟು ಜನ ಬಂದಿದ್ರು. ಬೇರೆ ಕಡೆ ಅಂತ್ಯ ಸಂಸ್ಕಾರ ಮಾಡೋಣ ಅಂದ್ರು. ಬೇಡ ನಮ್ಮ ಜಾಗದಲ್ಲೇ ಮಾಡ್ತೀವಿ ಎಂದ್ವಿ.
ಇವತ್ತಿಗೂ ಶಿವಣ್ಣ ಜೊತೆ ಆತ್ಮೀಯ ಒಡನಾಟವಿದೆ. ಅವರ ಮನೆ ಕಾರ್ಯಕ್ರಮಗಳಿಗೆ ಹೋಗುತ್ತೀವಿ. ಪುನೀತ್ ರಾಜ್‌ಕುಮಾರ್ ಮನೆ ಗೃಹಪ್ರವೇಶಕ್ಕೂ ಹೋಗಿದ್ದೆ ಎಂದು ವಿಶ್ವನಾಥ್ ವಜ್ರಮುನಿ ಹೇಳಿದ್ದಾರೆ. ಅಪ್ಪನಿಗೆ ದೊಡ್ಡ ಅಭಿಮಾನಿ ಬಳಗ ಇತ್ತು. ತಂದೆ 100 ಸಿನಿಮಾ ಪೂರೈಸಿದಾಗ ಟೌನ್ ಹಾಲ್‌ನಲ್ಲಿ ಕಾರ್ಯಕ್ರಮ ನಡೀತು. ಅಣ್ಣಾವ್ರು ಸೇರಿದಂತೆ ಸಾಕಷ್ಟು ಜನ ಬಂದಿದ್ರು. ಅಂದು ದೊಡ್ಡ ಸಂಖ್ಯೆಯಲ್ಲಿ ಅಭಿಮಾನಿಗಳು ಜನ ಜಮಾಯಿಸಿದ್ದರು. ಇವತ್ತಿಗೂ ಉತ್ತರ ಕರ್ನಾಟಕ ಭಾಗದಿಂದ ಸಾಕಷ್ಟು ಅಭಿಮಾನಿಗಳು ಬರ್ತಾರೆ ಎಂದು ವಿಶ್ವನಾಥ್ ವಿವರಿಸಿದ್ದಾರೆ.


Click it and Unblock the Notifications