ನಾಟಕದಲ್ಲಿ ತಪ್ಪು ಡೈಲಾಗ್ ಹೇಳಿದ್ದಕ್ಕೆ ಕಪಾಳಮೋಕ್ಷ, 56 ನಿದ್ದೆ ಮಾತ್ರೆ ನುಂಗಿ ಕಲ್ಪನಾ ಆತ್ಮಹತ್ಯೆ
ಕನ್ನಡ ಚಿತ್ರರಂಗದಲ್ಲಿ ಮಿಂಚಿ ಮರೆಯಾದ ಅದ್ಭುತ ಪ್ರತಿಭೆಗಳಲ್ಲಿ ಮಿನುಗು ತಾರೆ ಕಲ್ಪನಾ ಅವರನ್ನು ಮರೆಯೋಕೆ ಸಾಧ್ಯವಿಲ್ಲ. ಆಕೆ ಬದುಕಿದ್ದು ಕೇವಲ 36 ವರ್ಷ. ಇನ್ನು 15 ವರ್ಷಗಳ ಸಿನಿ ಬದುಕಿನಲ್ಲಿ 75ಕ್ಕೂ ಅಧಿಕ ಸಿನಿಮಾಗಳಲ್ಲಿ ನಟಿಸಿ ಮೋಡಿ ಮಾಡಿದ್ದರು. ಕನ್ನಡ ಸಿನಿರಸಿಕರ ಮನಸ್ಸಿನಲ್ಲಿ ಶಾಶ್ವತ ಸ್ಥಾನ ಪಡೆದುಬಿಟ್ಟರು.
ನಾಟಕಗಳಲ್ಲಿ ಬಣ್ಣ ಹಚ್ಚಿ ನಟನೆಯ ಪಟ್ಟುಗಳನ್ನು ಕಲಿತ ಕಲ್ಪನಾ ಮುಂದೆ 'ಸಾಕು ಮಗಳಾಗಿ' ಚಿತ್ರರಂಗಕ್ಕೆ ಬಂದರು. ಕಲ್ಪನಾ ತೆರೆಮೇಲೆ ಮೇಲೆ ಅಥವಾ ರಂಗದ ಮೇಲೆ ಇದ್ದರೆ ಬೇರೆ ಕಲಾವಿದರೆಲ್ಲಾ ಗೌಣವಾಗಿಬಿಡುತ್ತಿದ್ದರು. ತಮ್ಮ ಅಮೋಘ ನಟನೆಯಿಂದ ಎಲ್ಲರನ್ನು ಕಲ್ಪನಾ ಮರೆಸಿಬಿಟುತ್ತಿದ್ದರು. ಹಲವು ಸೂಪರ್ ಹಿಟ್ ಸಿನಿಮಾಗಳಲ್ಲಿ ನಟಿಸಿದ ಮಿನುಗು ತಾರೆ ಕೊನೆಗೆ ಆತ್ಮಹತ್ಯೆ ಮಾಡಿಕೊಂಡು ಜೀವ ಬಿಟ್ಟರು.

ಗಟ್ಟಿಗಿತ್ತಿಯಾಗಿದ್ದ ಕಲ್ಪನಾ ಯಾಕೆ ಆತ್ಮಹತ್ಯೆ ಮಾಡಿಕೊಂಡರು ಎನ್ನುವುದು ಇನ್ನು ನಿಗೂಢವಾಗಿಯೇ ಇದೆ. ಆಕೆ ತಾನಾಗಿಯೇ ಸಾವಿಗೆ ಶರಣಾಗಿರಬಹುದು. ಆದರೆ ಅಂತಾದೊಂದು ದುಡುಕಿನ ನಿರ್ಧಾರ ಕೈಗೊಳ್ಳಲು ಕಾರಣವೇನು ಇನ್ನುವುದು ಮಾತ್ರ ಉತ್ತರ ಸಿಗದ ಪ್ರಶ್ನೆ. ಆಕೆಗೆ ಆಪ್ತರಾಗಿದ್ದವರಿಗೆ ಕೂಡ ಈ ಬಗ್ಗೆ ಬಹಳ ಗೊಂದಲವಿದೆ. ಒಟ್ಟಾರೆ ಕಲ್ಪನಾ ಹೀಗೆ ಬಂದು ಹಾಗೆ ಹೋಗಿಬಿಟ್ಟರು. ಕೆಲ ದುರಂತ ಪಾತ್ರಗಳಲ್ಲಿ ನಟಿಸಿದ್ದ ಆಕೆಯ ಬದುಕು ಕೂಡ ಅದೇರೀತಿ ಅಂತ್ಯವಾಗಿದ್ದು ವಿಪರ್ಯಾಸ.
ಮಾನಸಿಕ ಖಿನ್ನತೆಯಿಂದ ನರಳುತ್ತಿದ್ದ ನಟಿ ಕಲ್ಪನಾ 1979 ಮೇ 12 ರಂದು ಬೆಳಗಾವಿಯ ಸಂಕೇಶ್ವರ ಹತ್ತಿರದ ಐಬಿಯಲ್ಲಿ ನಿಧನರಾಗಿದ್ದರು. 56 ನಿದ್ದೆ ಮಾತ್ರೆಗಳನ್ನು ನುಂಗಿ ಆಕೆ ಆತ್ಮಹತ್ಯೆ ಮಾಡಿಕೊಂಡಿದ್ದರು. ಆರೋಗ್ಯ ಸಮಸ್ಯೆ, ಆರ್ಥಿಕ ಸಂಕಷ್ಟ ಹಾಗೂ ಪ್ರೇಮ ವೈಫಲ್ಯಗಳಿಂದ ಆಕೆ ಆತ್ಮಹತ್ಯೆ ಮಾಡಿಕೊಳ್ಳುವ ಕೆಟ್ಟ ನಿರ್ಣಯ ಕೈಗೊಂಡರು ಎಂದು ಹೇಳಲಾಗುತ್ತದೆ. ಮಾನಸಿಕವಾಗಿ ಜರ್ಜರಿತರಾಗಿದ್ದ ಮಿನುಗು ತಾರೆ ಅದರಿಂದ ಹೊರಬರಲೇಯಿಲ್ಲ.

ನಟಿ ಕಲ್ಪನಾ ತಮ್ಮ ನಟನೆ ಹಾಗೂ ಬದುಕಿನಲ್ಲಿ ಎಷ್ಟರ ಮಟ್ಟಿಗೆ ಮಗ್ನರಾಗುತ್ತಿದ್ದರು ಎಂದರೆ ಆಕೆ ಹೊರಗಡೆ ಮಾತನಾಡುವಾಗಲೂ ನಟಿಸುವಂತೆ ಭಾಸವಾಗುತ್ತಿತ್ತು. ಸುಂದರ ಪಾತ್ರಗಳಲ್ಲಿ ನಟಿಸಿದರೂ ಆಕೆಯ ಬದುಕು ಅಷ್ಟು ಸುಂದರವಾಗಿರಲಿಲ್ಲ. ನಟ-ನಟಿಯರು ತೆರೆಮೇಲೆ ಕಾಣಿಸಿಕೊಂಡಷ್ಟು ಸುಂದರವಾಗಿ ಅವರ ಜೀವನ ಇರುವುದಿಲ್ಲ. ಬಣ್ಣ ಹಚ್ಚಿ ನಟಿಸಿದರೆ ಬಹಳ ದುಡ್ಡು ಬರುತ್ತದೆ ಮತ್ತೇನ್ನೇನು ಬೇಕು ಎಂದು ಕೇಳಿದರೆ ಅದಕ್ಕೆ ಉತ್ತರವಿಲ್ಲ.
ಒಂದ್ಕಾಲದಲ್ಲಿ ಲೇಡಿ ಸೂಪರ್ ಸ್ಟಾರ್ ಆಗಿ ಮೆರೆದ ಕಲ್ಪನಾಗೆ 1977ರ ವೇಳೆಗೆ ಅವಕಾಶಗಳು ಕಮ್ಮಿ ಆಗುತ್ತದೆ. ಆಕೆ ಸಿಕ್ಕಾಪಟ್ಟೆ ಬೋಲ್ಡ್ ಆಗಿ ಇರುತ್ತಿದ್ದರು. ಮಾಡ್ರನ್ ಡ್ರೆಸ್ ತೊಡುತ್ತಿದ್ದರು. ತಪ್ಪು ಅನ್ನಿಸಿದ್ದನ್ನು ಕಡ್ಡಿ ತುಂಡಾದಂತೆ ಹೇಳಿಬಿಡುತ್ತಿದ್ದರು. ಸ್ವಪ್ರತಿಷ್ಠೆ ಹೆಚ್ಚಾಗತೊಡಗಿತ್ತು. ಅದನ್ನು ಅಹಂಕಾರ, ದುರಂಹಕಾರ ಎಂದು ಕೆಲವರು ಭಾವಿಸಿದ್ದರು. ಆ ವರ್ಷ ಅವಕಾಶಗಳು ಕಮ್ಮಿ ಆಗಿ ಮತ್ತೆ ನಾಟಕಗಳ ಕಡೆ ಕಲ್ಪನಾ ಮುಖ ಮಾಡಿದ್ದರು.
ಗುಡಿಗೇರಿ ಬಸವರಾಜ ಜೊತೆ ನಟಿಸುತ್ತಿದ್ದ ನಾಟಕಗಳು ಜನಮನ್ನಣೆ ಪಾತ್ರವಾಗುತ್ತಿತ್ತು. 1978ರ ಬಳಿಕ ಸಿನಿಮಾ ಅವಕಾಶ ಸಿಗಲಿಲ್ಲ. ಅದೇ ಸಮಯದಲ್ಲಿ ಆರ್ಥಿಕ ಸಂಕಷ್ಟ ಸೇರಿ ನಾನಾ ರೀತಿ ನೋವು ಎದುರಿಸುವಂತಾಗಿತ್ತು. ನಿಧಾನವಾಗಿ ಆಕೆ ಖಿನ್ನತೆಗೆ ಜಾರಿ ನಿದ್ರೆ ಮಾತ್ರೆ ಸೇವಿಸುವ ಅಭ್ಯಾಸ ಮಾಡಿಕೊಂಡಿದ್ದರು. ಅದೊಂದು ದಿನ ನಾಟಕದ ವೇಳೆ ವೇದಿಕೆ ಮೇಲೆ ನಡೆದ ಘಟನೆ ಆಕೆಯನ್ನು ಬಹಳವಾಗಿ ನೋಯಿಸಿತ್ತು.
ಕಲ್ಪನಾ ಸಾಯುವ ಹಿಂದಿನ ದಿನ ಬೆಳಗಾವಿ ಬಳಿಯ ಸಂಕೇಶ್ವರದಲ್ಲಿ ನಾಟಕವಿತ್ತು. ಅದು 'ಕುಮಾರ ರಾಮ' ನಾಟಕ. ಗುಡಗೇರಿ ಬಸವರಾಜು ಕುಮಾರರಾಮನ ಪಾತ್ರ ಮಾಡಿದರೆ ಕಲ್ಪನಾ ಮಲತಾಯಿಯ ಪಾತ್ರದಲ್ಲಿ ನಟಿಸಿದ್ದರು. ಆದರೆ ನಾಟಕದಲ್ಲಿ ನಟಿಸುವ ವೇಳೆಗೆ ಆಕೆ ಅನ್ಯಮನಸ್ಕರಾಗಿದ್ದರು. ನಾಟಕ ಮಾಡುವ ವೇಳೆ ತಪ್ಪಾಗಿ ಡೈಲಾಗ್ ಹೇಳಿದ್ದರು. ಕುಮಾರರಾಮ ನನಗೆ ಹಸಿವಾಗಿದೆ ಎಂದು ಹೇಳಿದಾಗ ಪ್ರತಿಯಾಗಿ ರೊಟ್ಟಿ ತಿನ್ನು ಎಂದು ಹೇಳಬೇಕಿತ್ತು. ಆದರೆ ಕಲ್ಪನಾ ಹುಲ್ಲು ತಿನ್ನು ಎಂದುಬಿಟ್ಟಿದ್ದರಂತೆ.
ಕಲ್ಪನಾ ಡೈಲಾಗ್ ಕೇಳಿ ನಾಟಕ ನೋಡುತ್ತಿದ್ದವರು ಬಿದ್ದು ಬಿದ್ದು ನಕ್ಕಿದ್ದಾರೆ. ಕೂಡಲೇ ಬಸವರಾಜು ಕೋಪದಿಂದ "ಹೌದು ನಾನು ಹಸು, ಹುಲ್ಲು ಕೊಡು" ಎಂದು ರಂಗದ ಮೇಲೆ ಕೂಗಾಡಿದ್ದರು. ಜನರ ಕೇಕೆ ಜೋರಾಗಿಬಿಟ್ಟಿತ್ತು. ಅವಮಾನದಿಂದ ಬ್ಯಾಕ್‌ಸ್ಟೇಜ್‌ಗೆ ಹೋಗಿದ್ದ ಬಸವರಾಜು, ನಟಿ ಕಲ್ಪನಾ ಕೆನ್ನೆಗೆ ಹೊಡೆದುಬಿಟ್ಟಿದ್ದರು. ನಾಟಕ ನಡೆಯುತ್ತಿದ್ದ ಜಾಗದಿಂದ ವೇಷ ಸಹ ಬದಲಿಸದೇ ಕಲ್ಪನಾ ತಾವು ಉಳಿದುಕೊಂಡಿದ್ದ ಗೋಟೂರು ಐಬಿಗೆ ಹೋಗಿದ್ದರು. ಬೆಳಗ್ಗೆ ಅವರ ಆತ್ಮಹತ್ಯೆ ವಿಚಾರ ಗೊತ್ತಾಗಿತ್ತು.
ಕಲ್ಪನಾ 1943ರಲ್ಲಿ ಹುಟ್ಟಿದ ಶರತ್ ಲತಾ ಮೂಲತಃ ಕಾಸರಗೂಡಿನ ಉಪ್ಪಳದ ಬೇಕೂರಿನವರು. ಯಾವುದೇ ರಂಗಭೂಮಿ, ಸಿನಿಮಾ ಹಿನ್ನೆಲೆ ಇಲ್ಲದಿದ್ದರೂ ನಟಿಯಾಗುವ ಕನಸು ಕಂಡು ಬಣ್ಣದಲೋಕಕ್ಕೆ ಬಂದವರು. ರಾಜ್ ಕುಮಾರ್, ಕಲ್ಯಾಣ್ ಕುಮಾರ್, ಉದಯ ಕುಮಾರ್, ರಾಜೇಶ್, ಅನಂತ್ ನಾಗ್ ಸೇರಿದಂತೆ ಅವತ್ತಿನ ಕಾಲದ ಸ್ಟಾರ್ ನಟರ ಜೊತೆಗೆ ತೆರೆಹಂಚಿಕೊಂಡು ಗೆದ್ದಿದ್ದರು. 'ಬೆಳ್ಳಿಮೋಡ', 'ಗೆಜ್ಜೆಪೂಜೆ', 'ಕಪ್ಪು ಬಿಳುಪು', 'ಶರಪಂಜರ', 'ಉಯ್ಯಾಲೆ', 'ಎರಡು ಕನಸು', 'ಗಂಧದಗುಡಿ', 'ಬಯಲುದಾರಿ' ಕಲ್ಪನಾ ನಟಿಸಿದ ಕೆಲ ಹಿಟ್ ಚಿತ್ರಗಳು.


Click it and Unblock the Notifications











