twitter
    For Quick Alerts
    ALLOW NOTIFICATIONS  
    For Daily Alerts

    ನಿವೇದಿತಾ ಜೈನ್: ಕಾಡುವ ಈಕೆಯ 'ಆಕಸ್ಮಿಕ ಸಾವು' ನೀವಂದುಕೊಂಡಂತೆ ನಡೆದಿರಲಿಲ್ಲ...!

    |

    ಅವತ್ತು ಭಾನುವಾರ. ಮೇ 17, 1998ನೇ ಇಸವಿ. ಇವತ್ತಿನಷ್ಟು ಬೆಂಗಳೂರು ಬೆಳೆದಿರಲಿಲ್ಲ. ರಾಜರಾಜೇಶ್ವರಿ ನಗರ ಅಂತೂ ಇನ್ನೂ ಶೈಶಾವಸ್ಥೆಯಲ್ಲಿತ್ತು. ಸುತ್ತಲೂ ಬೆಳೆದು ನಿಂತ ಮರಗಳು, ಅಲ್ಲೊಂದು ಇಲ್ಲೊಂದು ಮನೆಗಳು. ಮಹಡಿ ಮನೆಗಳ ಸಂಖ್ಯೆಯೂ ಕಡಿಮೆ ಇತ್ತು. ಅಂತಹ ಮನೆಗಳ ಪೈಕಿ ಅದೊಂದು ಮನೆಯ ಎರಡನೇ ಮಹಡಿಯಿಂದ ಕೃಶಗೊಂಡಿದ್ದ, ಬೆಳ್ಳಗ್ಗಿದ್ದ ದೇಹವೊಂದು ದೊಪ್ಪೆಂದು ಕೆಳಕ್ಕೆ ಬಿತ್ತು.

    ಹಾಗೆ ಬಿದ್ದಾಕೆಯ ಹೆಸರು ನಿವೇದಿತಾ ಜೈನ್. ಆಕೆಯನ್ನು ಕೆಲವು ತಿಂಗಳ ಹಿಂದಷ್ಟೆ ಹಿರಿಯ ಸಿನೆಮಾ ಪತ್ರಕರ್ತ ಸತ್ಯಮೂರ್ತಿ ಆನಂದೂರು ಭೇಟಿ ಆಗಿದ್ದರು. ಯಾವುದೋ ಕೆಲಸಕ್ಕಾಗಿ ಆಕೆಯನ್ನು ಮನೆಯಲ್ಲಿಯೇ ಮೀಟ್ ಮಾಡಲು ಹೋಗಿದ್ದರು. "ಧಾರಾವಾಹಿಯೊಂದರ ಕುರಿತು ಮಾತುಕತೆಗಾಗಿ ನಿವೇದಿತಾ ಜೈನ್ ಭೇಟಿ ಆಗಲು ಹೋಗಿದ್ದೆವು. ಆಕೆ ರೂಮಿನಿಂದ ನಿಧಾನವಾಗಿ ನಡೆದು ಬಂದು ಎದುರಿಗೆ ಕುಳಿತಳು. ಮುಖದಲ್ಲಿ ಒಂದು ಸಣ್ಣ ಭಾವನೆಯೂ ಕಾಣಲಿಲ್ಲ. ಅತ್ಯಂತ ನಿರ್ಲಿಪ್ತ ಅಂತ ಅನ್ನಿಸುವ ಆಕೆಯ ಹಾವಭಾವ ಕಂಡು ನಮಗೇ ಗಾಬರಿ ಅನ್ನಿಸಿತ್ತು. ಯಾಕೋ ಈಕೆ ಹೆಚ್ಚು ದಿನ ಬದುಕುವುದಿಲ್ಲ ಅಂತ ಅವತ್ತೇ ಅನ್ನಿಸಿತ್ತು,'' ಎಂದು ನೆನಪಿಸಿಕೊಳ್ಳುತ್ತಾರೆ ಸತ್ಯಮೂರ್ತಿ ಆನಂದೂರು.

    Kannada Actress Nivedita Jain Death Mystery

    ಸುಳ್ಳಾಗದ ಪತ್ರಕರ್ತರ ಗ್ರಹಿಕೆ:

    ಸತ್ಯಮೂರ್ತಿ ಅವರೊಳಗಿದ್ದ ಪತ್ರಕರ್ತನ ಗ್ರಹಿಕೆ ಸುಳ್ಳಾಗಲಿಲ್ಲ. ಅವರ ಭೇಟಿಯಾಗಿ ಮೂರು ತಿಂಗಳೊಳಗೆ ನಿವೇದಿತಾ ಜೈನ್ ಮನೆಯ ಎರಡನೇ ಮಹಡಿಯಿಂದ ಕೆಳಕ್ಕೆ, ತಲೆಕೆಳಗಾಗಿ ಒಂದು ಭಾನುವಾರ ಬಿದ್ದಿದ್ದಳು. ಸುತ್ತಲೂ ಜನ ಸೇರಿದರು. ಮನೆಯವರೂ ನೆರೆದರು. ಆಕೆಯನ್ನು ಮಲ್ಯ ಆಸ್ಪತ್ರೆಗೆ ತಂದು ಅಡ್ಮಿಟ್ ಮಾಡಿದರು. ಮುಂದಿನ 24 ದಿನಗಳ ಕಾಲ ನಿವೇದಿತಾ ಕೋಮಾದಲ್ಲಿಯೇ ಕಳೆದಳು. ಯಾರು ಬಂದು ಎದುರಿಗೆ ನಿಂತರೂ ಗುರುತು ಹಿಡಿಯುತ್ತಿರಲಿಲ್ಲ. ಮೊದಲೇ ನಿರ್ಲಿಪ್ತಳಾಗಿದ್ದ ಆಕೆ ಆಸ್ಪತ್ರೆಯ ಹಾಸಿಗೆಯಲ್ಲಿಯೂ ಅತ್ಯಂತ ಹಾಗೆಯೇ ಕಳೆದಳು. ಜೂನ್ 10ನೇ ತಾರೀಖು ಬೆಳಗ್ಗೆ 11 ಗಂಟೆಗೆ ರೌಂಡ್ಸ್‌ಗೆ ಡಾಕ್ಟರ್‌ ಬರುವ ಹೊತ್ತಿಗೆ ನಿವೇದಿತಾ ಜೈನ್‌ ಕೊನೆಯ ಉಸಿರು ಎಳೆದುಕೊಂಡಳು, ಅಷ್ಟೆ. ಹಾಗೆ, ಕನ್ನಡ ಜನಪ್ರಿಯ ನಟಿಯರ ಸಾಲಿನಲ್ಲಿದ್ದ 19 ವರ್ಷದ ಪುಟ್ಟ ಜೀವವೊಂದು ಅಂತ್ಯ ಕಂಡಿತ್ತು.

    ಕನ್ನಡದ ಮೊದಲ ವಾಕ್ಚಿತ್ರದ ನಟಿ ಎಸ್ ಕೆ ಪದ್ಮಾದೇವಿ ನಿಧನಕನ್ನಡದ ಮೊದಲ ವಾಕ್ಚಿತ್ರದ ನಟಿ ಎಸ್ ಕೆ ಪದ್ಮಾದೇವಿ ನಿಧನ

    ಗಾಂಧಿ ನಗರಕ್ಕೆ 'ಕ್ಯಾಟ್‌ವಾಕ್‌':

    ಇದಕ್ಕೂ ಎರಡು ವರ್ಷ ಮುಂಚೆ, ಅಂದರೆ 1996ರಲ್ಲಿ ನಿವೇದಿತಾ ಜೈನ್ ಕನ್ನಡ ಚಿತ್ರರಂಗ ಪ್ರವೇಶಿಸಿದ್ದಳು. ಅವತ್ತಿಗೆ ಹೆಸರುವಾಸಿಗಳಾಗಿದ್ದ ಮಾಲಾಶ್ರೀ, ಸುಧಾರಾಣಿ, ಶೃತಿ, ತಾರಾ, ಪ್ರೇಮ ತರಹದ ಕನ್ನಡದ ಯುವ ನಟಿಯರ ಸಾಲಿನಲ್ಲಿ ಆಕೆಯೂ ಸ್ಥಾನ ಪಡೆದುಕೊಂಡಿದ್ದಳು. ಆಗತಾನೆ 'ಮಿಸ್ ಬೆಂಗಳೂರು' ಪಟ್ಟವನ್ನೂ ಗೆದ್ದುಕೊಂಡು ಬಂದಿದ್ದ 17 ವರ್ಷ ಬಾಲಕಿ ತನ್ನ ಮೊದಲ ಚಿತ್ರದ ಮೂಲಕವೇ ಭವಿಷ್ಯದ ಭರವಸೆ ಮೂಡಿಸಿದ್ದಳು. ಡಾ. ರಾಜ್ ಕುಮಾರ್ ಕುಟುಂಬದ ಸಿನಿ ನಿರ್ಮಾಣ ಸಂಸ್ಥೆ ಆಕೆಯನ್ನು ಚಂದನವನಕ್ಕೆ ಪರಿಚಯಿಸಿದ್ದು ವ್ಯರ್ಥವಾಗುವುದಿಲ್ಲ ಎಂದು ಎಲ್ಲರೂ ಅಂದುಕೊಂಡಿದ್ದರು.

    Kannada Actress Nivedita Jain Death Mystery

    ಗೆಲ್ಲುವ ಕುದುರೆ:

    ರಾಘವೇಂದ್ರ ರಾಜ್ ಕುಮಾರ್ ನಟಿಸಿದ್ದ 'ಶಿವರಂಜಿನಿ' ಚಿತ್ರ ನಿವೇದಿತಾ ಜೈನ್ ನಟಿಸಿದ ಮೊದಲ ಸಿನೆಮಾವಾಗಿತ್ತು. ನಂತರ ಶಿವರಾಜ್ ಕುಮಾರ್ ಅಭಿನಯದ 'ಶಿವಸೈನ್ಯ'ದಲ್ಲಿ ನಿವೇದಿತಾ ಛಾಪು ಮೂಡಿಸಿದ್ದಳು. ನಟಿಸಿದ ಮೊದಲ ಎರಡೂ ಸಿನೆಮಾಗಳು ಗಲ್ಲಾ ಪೆಟ್ಟಿಗೆಯಲ್ಲಿ ಭರ್ಜರಿ ಹಣವನ್ನು ಕಲೆಹಾಕಿದ್ದವು. ನಿವೇದಿತಾಗೂ ದೊಡ್ಡ ಹೆಸರು ತಂದುಕೊಟ್ಟಿದ್ದವು. ಇನ್ನೇನು ಕನ್ನಡ ಚಿತ್ರರಂಗ ಓಡುವ ಹೊಸ ಕುದುರೆಯೊಂದನ್ನು ಪಡೆದುಕೊಂಡಿತು ಎಂದು ವಿಶ್ಲೇಷಣೆಗಳು ನಡೆದವು. ನಿವೇದಿತಾ ಜೈನ್ ರ್ಯಾಂಪ್‌ ವಾಕ್‌ ಕಾರಿಡಾರ್‌ನಿಂದ ಗಾಂಧಿ ನಗರಕ್ಕೆ ಅನಾಯಾಸದ ಹೆಜ್ಜೆಗಳನ್ನು ಇಡಲು ಇಷ್ಟು ಸಾಕಾಗಿತ್ತು.

    ಚಂದನವನದ ಮಹಾನಟಿ ಎಲ್.ವಿ.ಶಾರದಾ ಅವರ ಒಂದಷ್ಟು ವಿವರಚಂದನವನದ ಮಹಾನಟಿ ಎಲ್.ವಿ.ಶಾರದಾ ಅವರ ಒಂದಷ್ಟು ವಿವರ

    ಚಿಕ್ಕ ವಯಸ್ಸಿಗೆ ಹಿಟ್ ಚಿತ್ರಗಳೂ, ಅವತ್ತಿನ ಸ್ಟಾರ್‌ ನಟರ ಜತೆಗೆ ಆರಂಭವಾದ ಸಿನಿ ಪಯಣ, ಹರಿದು ಬರಲಾರಂಭಿಸಿದ ಅವಕಾಶಗಳು ಆಕೆಯನ್ನು ದೊಡ್ಡ ಮಟ್ಟದ ನಟಿಯನ್ನಾಗಿ ರೂಪಿಸುವ ಹಾದಿಯಲ್ಲಿ ಕೊಂಡೊಯ್ಯುತ್ತದೆ ಎಂಬುದು ನಂಬಿಕೆಯಾಗಿತ್ತು. ಆದರೆ, ಕೇವಲ 700 ದಿನಗಳ ಅಂತರದಲ್ಲಿ ನಿವೇದಿತಾ ತನ್ನದೇ ಮನೆಯ ಮಹಡಿಯಿಂದ ಕೆಳಗ್ಗೆ ಬಿದ್ದು, ಕೋಮಾಕ್ಕೆ ಜಾರಿ, ಅಲ್ಲಿಂದ ಇಹಲೋಕವನ್ನೇ ತ್ಯಜಿಸಿದ್ದಳು. ಯಾಕೆ ಹೀಗಾಯಿತು?

    ಮನೆಯವರ ಹೇಳಿಕೆಯಲ್ಲೇ ಗೊಂದಲ:

    ಇವತ್ತು ದುರಂತ ಅಂತ್ಯ ಕಂಡ ನಟಿಯರ ಪಟ್ಟಿಯಲ್ಲಿ ಬಹುಶಃ ಅತ್ಯಂತ ಕಿರಿಯ ವಯಸ್ಸಿನ ನಟಿ ನಿವೇದಿತಾ ಜೈನ್. ಆಕೆ ಯಾಕೆ ಹೀಗೆ ಅಕಾಲಿಕ ಸಾವುಗೀಡಾದಳು? ಎಂಬ ಪ್ರಶ್ನೆಗೆ ಇವತ್ತಿಗೂ ಸರಿಯಾದ ಒಂದು ಉತ್ತರ ಸಿಗುವುದಿಲ್ಲ. ಇದಕ್ಕೆ ಮೂಲ ಕಾರಣ, ಆಕೆಯದ್ದೇ ಕುಟುಂಬ. ನಿವೇದಿತಾ ಮಲ್ಯ ಆಸ್ಪತ್ರೆಯಲ್ಲಿದ್ದ ದಿನಗಳಲ್ಲಿ ಅವತ್ತಿಗೆ ಹೆಚ್ಚು ಪ್ರಚಲಿತದಲ್ಲಿದ್ದ ಟ್ಯಾಬ್ಲಾಯ್ಡ್‌ ಪತ್ರಿಕೆಗಳಲ್ಲಿ ಪುಟಗಟ್ಟಲೆ ವರದಿಗಳು ಮೂಡಿ ಬಂದಿದ್ದವು. ಎಲ್ಲಾ ಗೊಂದಲಗಳನ್ನೂ ಅವು ವರದಿ ರೂಪದಲ್ಲಿ ದಾಖಲಿಸಿದ್ದವು.

    Kannada Actress Nivedita Jain Death Mystery

    'ನಿವೇದಿತಾ ರ್ಯಾಂಪ್ ವಾಕ್‌ ಪ್ರಾಕ್ಟೀಸ್‌ ಮಾಡುವಾಗ ಕಾಲು ಜಾರಿ ಕೆಳಗ್ಗೆ ಬಿದ್ದಳು' ಎಂದು ಮೊದಲು ಆಕೆಯ ಕುಟುಂಬ ವರ್ಗ ಮಾಧ್ಯಮಗಳಿಗೆ ತಿಳಿಸಿತು. ದಾಖಲಾಗಿರುವ ಇನ್ನೊಂದು ಹೇಳಿಕೆಯಲ್ಲಿ, 'ಆಕೆ ಡಾನ್ಸ್‌ ಪ್ರಾಕ್ಟೀಸ್ ಮಾಡುವಾಗ ಮಹಡಿಯಿಂದ ಕಾಲು ಜಾರಿದಳು' ಎಂದು ಅವಳದ್ದೇ ಕುಟುಂಬ ಮೂಲಗಳು ಗೊಂದಲದ ಹೇಳಿಕೆ ನೀಡಿದವು. ಇವುಗಳ ನಡುವೆ ಪೋಲಿಸರು ಇದೊಂದು ಅಸಹಜ ಸಾವು ಅಂತ ಕರೆದಾದರೂ, ಹೆಚ್ಚಿನ ತನಿಖೆಗೆ ಇಳಿಯಲು ಹೋಗಲಿಲ್ಲ. ಚಿಕ್ಕ ವಯಸ್ಸಿನ ನಟಿಯ ಸಾವು ಹೀಗೆ ಗೊಂದಲದಲ್ಲಿಯೇ ಮುಚ್ಚಿ ಹೋಯಿತು.

    ವರದಿ ಮತ್ತು ಬಂದ ಬೆದರಿಕೆಗಳು:

    "ಅವತ್ತು ನಿವೇದಿತಾ ಸಾವು ಆಕಸ್ಮಿಕವೇ ಇರಬಹುದು ಎಂದು ಎಲ್ಲರಿಗೂ ಅನ್ನಿಸಿತ್ತು. ಆದರೂ ಆಕೆಯ ಸಾವಿಗೆ ಆ ಕಾಲದ ಪ್ರತಿಷ್ಠಿತ ನಟರು ಹಾಗೂ ನಿರ್ದೇಶಕರು ಕಾರಣ ಎಂದು ನಾನು ವರದಿ ಬರೆದಿದ್ದೆ. ಇದರಿಂದ ಬೆದರಿಕೆಯನ್ನೂ ಎದುರಿಸಬೇಕಾಗಿ ಬಂದಿತ್ತು,'' ಎಂದು ನೆನಪು ಮಾಡಿಕೊಳ್ಳುತ್ತಾರೆ ಸತ್ಯಮೂರ್ತಿ ಆನಂದೂರು.

    ಶಂಕರ್ ನಾಗ್ ಅವರನ್ನ ಪರಿಚಯಿಸಿದ್ದ ನಿರ್ಮಾಪಕ ಲಕ್ಷ್ಮಿಪತಿ ವಿಧಿವಶಶಂಕರ್ ನಾಗ್ ಅವರನ್ನ ಪರಿಚಯಿಸಿದ್ದ ನಿರ್ಮಾಪಕ ಲಕ್ಷ್ಮಿಪತಿ ವಿಧಿವಶ

    ಹೊರಗೆ ಇಷ್ಟೆಲ್ಲಾ ನಡೆಯುತ್ತಿರುವ ಸಮಯದಲ್ಲಿ ಗಾಂಧಿ ನಗರದಲ್ಲಿ ಮಾತ್ರ ಬೇರೆಯದ್ದೇ ಮಾತುಗಳು ನಿವೇದಿತಾ ಜೈನ್ ಸಾವಿನ ಸುತ್ತ ಹರಿದಾಡುತ್ತಿದ್ದವು. ಶಿವರಂಜನಿ, ಶಿವಸೈನ್ಯ ನಂತರ ನಿವೇದಿತಾ ನಟಿಸಿದ ಯಾವ ಚಿತ್ರಗಳೂ ಹಿಟ್ ಆಗಲಿಲ್ಲ. ಇದರಿಂದಾಗಿ ಆಕೆ ಖಿನ್ನತೆಗೆ ಒಳಗಾಗಿದ್ದಳು ಎಂಬುದು ಆಕೆಯ ಸಾವಿಗೆ ಸಮರ್ಥನೆ ರೂಪದಲ್ಲಿ ಆ ಕಾಲದಲ್ಲಿ ಕೇಳಿ ಬಂತು.

    ಎರಡು ಹಿಟ್ ಚಿತ್ರಗಳು, ನಂತರ ನಾಲ್ಕೈದು ಫ್ಲಾಪ್ ಚಿತ್ರಗಳು ಒಬ್ಬ ನಟಿಯನ್ನು ಸಾವಿಗೆ ತಳ್ಳುವ ಖಿನ್ನತೆಗೆ ದೂಡುತ್ತವಾ? ಒಪ್ಪಿಕೊಳ್ಳಲು ಕಷ್ಟ ಎನ್ನಿಸುವ ಈ ಥಿಯರಿ ಆಚೆಗೆ ಹೆಚ್ಚಿನ ಮಾಹಿತಿ ಇವತ್ತಿಗೂ ನಿವೇದಿತಾ ಸಾವಿನ ವಿಚಾರದಲ್ಲಿ ಸಿಗುವುದಿಲ್ಲ. ಮನೆಯವರೇ ನೀಡಿದ ಗೊಂದಲದ ಹೇಳಿಕೆಗಳು ಪ್ರಕರಣ ಇವತ್ತಿಗೂ ನಿಗೂಢ ಅಂತ ಅನ್ನಿಸಲು ಕಾರಣವಾಯಿತು.

    ಒಟ್ಟಾರೆ, ಕನ್ನಡದ ನಟಿಯರ ಸಾಲಿನಲ್ಲಿ ಬೇರೆಯದೇ ಸ್ಥಾನ ಪಡೆಯಬಹುದಾದ ಎಲ್ಲವನ್ನೂ ಅರ್ಹತೆಗಳಿದ್ದ ನಟಿಯೊಬ್ಬಳು ಚಿಕ್ಕ ವಯಸ್ಸಿನಲ್ಲಿಯೇ ಹೊರಟು ಹೋಗಿದ್ದು ಸಿನಿ ಲೋಕದ ಮಾಯೆಯಂತೆಯೇ ಇವತ್ತಿಗೂ ಕಾಣಿಸುತ್ತಿದೆ.

    English summary
    Shivaranjini, Shiva Sainya, Nee Moodida Mallige Fame actress Nivedita Jain died in 1998 in very short period. what is the truth behind this death?
    Tuesday, November 5, 2019, 12:02
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X