ರಾಕಿಂಗ್ ಸ್ಟಾರ್ ಯಶ್ ಅವರ ಅದ್ವೀತಿಯ ಸಾಧನೆಯ ಹಿಂದೆ ಇದೆ ರಾಧಿಕಾ ಪಂಡಿತ್ ಮಾಡಿದ ತ್ಯಾಗ..!
ಚಿತ್ರರಂಗಕ್ಕೆ ಬಂದ ದಿನದಿಂದ ಸೋಲು-ಗೆಲುವು ಹೊರತಾಗಿ ಶಿಸ್ತನ್ನೂ ಮೈಗೂಡಿಸಿಕೊಂಡು ಬಂದವರು ಯಶ್. ಸಿನಿಮಾ ಬದುಕಿನಂತೆಯೇ ವ್ಯೆಯಕ್ತಿಕ ಬದುಕನ್ನೂ ಕೂಡ ಕರಾರುವಕ್ಕಾದ ಪ್ಲಾನುಗಳ ಮೂಲಕ ರೂಪಿಸಿಕೊಂಡ ಯಶ್ ಅವರ ಈ ಯಶಸ್ಸಿನ ಹಿಂದೆ ಪತ್ನಿ ರಾಧಿಕಾ ಪಂಡಿತ್ ಅವರ ಪಾಲು ಇದೆ ಅಂದರೆ ಅದು ಅತಿಶಯೋಕ್ತಿಯಲ್ಲ.
ಹೌದು, ನಿಮಗೆ ಗೊತ್ತಿರಲಿ.. ಸಾಮಾನ್ಯವಾಗಿ ಅಪಾರ ಜನಪ್ರಿಯತೆ ದಕ್ಕಿದ ಸಮಯದಲ್ಲಿ, ಚಿತ್ರರಂಗದಲ್ಲಿ ನಾಯಕ ಇರಲಿ ಅಥವಾ ನಾಯಕಿಯೇ ಇರಲಿ ಮದುವೆಯ ಬಂಧನಕ್ಕೊಳಗಾಗುವುದು ಅಪರೂಪ. ತುಂಬಾ ಜನ ಸದ್ಯ ಕೈ ತುಂಬಾ ಕೆಲಸ ಇದೆ. ಜೊತೆಯಲ್ಲಿ ಹಣ ಕೂಡ ಸಿಕ್ತಿದೆ. ಇಂತಹ ಸಮಯದಲ್ಲಿ ಸದ್ಯಕ್ಕೆ ವೃತ್ತಿ ಜೀವನದ ಕಡೆ ಗಮನ ಕೊಟ್ಟರಾಯಿತು ಎಂದು ತಮ್ಮ ವ್ಯೆಯಕ್ತಿಕ ಬದುಕಿನ ಖುಷಿಯ ಕ್ಷಣಗಳನ್ನು ಮುಂದೂಡುತ್ತಲೇ ಇಲ್ಲಿ ಬರುತ್ತಾರೆ. ಆದರೆ, ರಾಧಿಕಾ ಪಂಡಿತ್ ಮಾತ್ರ ಇದಕ್ಕೆ ತದ್ವಿರುದ್ದ.

ಯಾಕೆಂದರೆ ತಮ್ಮ ವೃತ್ತಿ ಬದುಕಿನಲ್ಲಿ ಕೀರ್ತಿಯ ಶಿಖರಕ್ಕೇರಿದಾಗ ಯಶ್ ಜೊತೆ ರಾಧಿಕಾ ಪಂಡಿತ್ ಮದುವೆಯಾದರು. ಮಿಸ್ಟರ್ & ಮಿಸಸ್ ರಾಮಾಚಾರಿ ಅಭೂತಪೂರ್ವ ಯಶಸ್ಸನ್ನು ಕಂಡಿತ್ತು. ದೊಡ್ಮನೆ ಹುಡುಗ ಚಿತ್ರ ಕೂಡ ಗೆದ್ದಿತ್ತು. ಮನಸು ಮಾಡಿದ್ದರೆ ರಾಧಿಕಾ ಇನ್ನೂ ಹತ್ತಾರು ಚಿತ್ರಗಳನ್ನು ಮಾಡಬಹುದಿತ್ತು. ಆ ವಿಪುಲ ಅವಕಾಶ ಕೂಡ ಇತ್ತು.
ಆದರೆ, ಮದುವೆಯ ಬಂಧನಕ್ಕೊಳಗಾದ ರಾಧಿಕಾ ಪಂಡಿತ್ ಚಿತ್ರರಂಗದಿಂದ ಅಂತರ ಕಾಪಾಡಿಕೊಂಡರು. ತಮ್ಮ ವೃತ್ತಿ ಬದುಕನ್ನೇ ತ್ಯಾಗ ಮಾಡಿ ಕುಟುಂಬದ ಜವಾಬ್ದಾರಿಗಳನ್ನು ವಹಿಸಿಕೊಂಡರು. ಆ ನಂತರ ಮುದ್ದಾದ ಎರಡು ಮಕ್ಕಳಾದ ಮೇಲೆ ಮಕ್ಕಳ ಲಾಲನೆ-ಪಾಲನೆಯ ಕಡೆ ಹೆಚ್ಚೆಚ್ಚು ಗಮನ ವಹಿಸಿದರು. ಯಶ್ ಅವರ ಪ್ರತಿಯೊಂದು ಹೆಜ್ಜೆಯನ್ನು ಕೂಡ ರಾಧಿಕಾ ಪಂಡಿತ್ ಬೆಂಬಲಿಸಿದರು. ಪತ್ನಿಯ ಈ ಸಹಕಾರ ಇಲ್ಲದಿದ್ದರೆ ಕೆ.ಜಿ.ಎಫ್ ಎಂಬ ಮಹಾಯಜ್ಞಕ್ಕೆ ಹೆಚ್ಚು ಕಡಿಮೆ ಐದಾರು ವರ್ಷ ಕದಲದೇ ಪಟ್ಟು ಹಿಡಿದು ಕೂರಲು ಯಶ್‌ಗೆ ಖಂಡಿತ ಸಾಧ್ಯವಾಗುತ್ತಿರಲಿಲ್ಲ ಎನ್ನುವುದು ಕೆಜಿಎಫ್ ಗರ್ಭದಲ್ಲಿದ್ದ ಚಿನ್ನದ ನಿಕ್ಷೇಪದಂಥಾದ್ದೇ ಪರಮ ಸತ್ಯ.

ಖುದ್ದು ಯಶ್ ಕೂಡ ಈ ಮಾತನ್ನು ಒಪ್ಪುತ್ತಾರೆ. ಯಾಕೆಂದರೆ ಹಿಂದೊಮ್ಮೆ ಖುದ್ದು ಯಶ್ , ರಾಧಿಕಾ ಪಂಡಿತ್ ಅವರು ಮಾಡಿದ ತ್ಯಾಗದ ಬಗ್ಗೆ ಮಾತನಾಡಿದ್ದರು. ಅವಳು ಕೂಡ ನಟಿ, ಕಲಾವಿದೆಯಾಗಿ ಕೆಲಸ ಬಿಟ್ಟು ಮನೆಯಲ್ಲಿ ಕೂತುಕೊಳ್ಳುವುದು ಹೇಗಿರುತ್ತದೆ ಎಂದು ನಾನು ಅರ್ಥ ಮಾಡಿಕೊಳ್ಳಬಲ್ಲೆ. ಮಕ್ಕಳಿಗೆ ಜನ್ಮ ಕೊಡುವುದು, ಆಮೇಲೆ ಮಕ್ಕಳನ್ನು ನೋಡಿಕೊಳ್ಳುವುದು ಸುಲಭವಾದ ಕೆಲಸ. ಬೆಳಗ್ಗೆಯಿಂದ ಸಂಜೆವರೆಗೂ ಮಕ್ಕಳನ್ನು ನೋಡಿಕೊಳ್ಳುತ್ತಲೇ ಇರಬೇಕು. 10-15 ನಿಮಿಷ ಮಕ್ಕಳನ್ನು ನೋಡುವುದು ಎಷ್ಟು ಕಷ್ಟ ಅಂತ ಗೊತ್ತಾಗಿದೆ" ಎಂದು ಹೇಳಿದ್ದರು. ನಟಿಯಾದರೂ ಚಿತ್ರರಂಗದಲ್ಲಿ ಏನಾಗುತ್ತಿದೆ ಎಂದು ತಿಳಿಯುತ್ತ ಬ್ರೇಕ್ ಪಡೆದು ಮನೆಯಲ್ಲಿ ಕುಳಿತಿರುವುದು ಸುಲಭವಲ್ಲ ಎಂದು ಕೂಡ ಯಶ್ ಹೇಳಿದ್ದರು
ಇನ್ನೂ..ಅವಕಾಶ, ಗೆಲುವು, ಹಣ, ಜನಪ್ರಿಯತೆ ಎಲ್ಲ ಜೊತೆಯಾಗುತ್ತಿದ್ದಂತೆ ಅನೇಕರು ತಮ್ಮನ್ನು ತಾವು ಕಳೆದುಕೊಂಡು ಯದ್ವಾ ತದ್ವಾ ನಡೆದುಕೊಳ್ಳುತ್ತಾರೆ. ಆದರೆ, ಯಶ್ ಮಾತ್ರ ದಿಕ್ಕು ತಪ್ಪಲಿಲ್ಲ. ಯಾಕೆಂದರೆ ಎಚ್ಚರಿಸಲು ಪಕ್ಕದಲ್ಲಿ ರಾಧಿಕಾ ಪಂಡಿತ್ ಇದ್ದರು. ಇದಕ್ಕೆ ಒಂದು ಉದಾಹರಣೆ ಎಂಬಂತೆ ಕನ್ನಡವನ್ನು ಸುಲಲಿತವಾಗಿ ಮಾತನಾಡುವ ಯಶ್ ಅವರಿಗೆ ಮೊದಲು ಬೇರೆ ಭಾಷೆ ಅಷ್ಟಾಗಿ ಬರುತ್ತಿರಲಿಲ್ಲ. ಅದರಲ್ಲಿಯೂ ಇಂಗ್ಲೀಷ್ ಕಬ್ಬಿಣದ ಕಡಲೆಯಾಗಿತ್ತು. ಆದರೆ ಈಗ ಯಶ್ ಎಲ್ಲ ಭಾಷೆಯನ್ನು ಅರಳು ಉರಿದಂತೆ ಮಾತನಾಡುತ್ತಾರೆ. ಅದಕ್ಕೆ ಕಾರಣ ಬೇರೆ ಯಾರು ಅಲ್ಲ ಬದಲಿಗೆ ಅವರ ಪತ್ನಿ ರಾಧಿಕಾ ಪಂಡಿತ್ ಅವರೇ ಕಾರಣ.

ಇನ್ನೂ.. ಸಾಮಾನ್ಯಕ್ಕೆ ಗಂಡ ಹೆಂಡತಿ ಒಂದೇ ವೃತ್ತಿಯಲ್ಲಿದ್ದರೆ ಆಗಾಗ ಈಗೋ ಕ್ಲ್ಯಾಶುಗಳು ನಡೆಯುವ ಸಾಧ್ಯತೆ ಇರುತ್ತೆ. ಜಗಳವಾಗುವ ಸಾಧ್ಯತೆ ಕೂಡ ಇರುತ್ತೆ. ಆದರೆ ಯಶ್ ಮತ್ತು ರಾಧಿಕಾ ಪಂಡಿತ್ ಆಗಾಗ ಜಗಳವಾಡುತ್ತಾರೆ ಹೊರತು ತಮ್ಮ ದಾಂಪತ್ಯದಲ್ಲಿ ಇಬ್ಬರು ಅಂಹಕಾರಕ್ಕೆ ಜಾಗವನ್ನು ನೀಡಿಲ್ಲ. ಈ ವರ್ಷದ ಆರಂಭದಲ್ಲಿ ಖುದ್ದು ರಾಧಿಕಾ ಪಂಡಿತ್ ಈ ಮಾತನ್ನು ಅಭಿಮಾನಿಯೋರ್ವರು ಪ್ರಶ್ನೆ ಕೇಳಿದಾಗ ಹೇಳಿದ್ದರು. ನಮ್ಮ ನಡುವೆ ಕೂಡ ಜಗಳ, ವಾಗ್ವಾದ ನಡೆಯುತ್ತಿರುತ್ತದೆ. ಅದು ಎಲ್ಲಾ ರಿಲೇಷನ್‌ಶಿಪ್‌ನಲ್ಲಿ ಕಾಮನ್ ಎಂದು ನನಗೆ ಅನ್ನಿಸುತ್ತದೆ. ಕೊನೆಯದಾಗಿ ಜಗಳವಲ್ಲ, ಅದನ್ನು ಹೇಗೆ ಪ್ಯಾಚ್‌ಅಪ್ ಮಾಡಿಕೊಳ್ಳುತ್ತೇವೆ ಎನ್ನುವುದು ನಿಮ್ಮನ್ನು ಮತ್ತಷ್ಟು ಹತ್ತಿರವಾಗಿಸುತ್ತದೆ, ಗಟ್ಟಿಗೊಳಿಸುತ್ತದೆ. ಎಲ್ಲಾ ಮುಗಿದ ಮೇಲೆ ಈಗೋ/ಜಡ್ಜ್‌ಮೆಂಟ್‌ಗಳಿಗೆ ದಾಂಪತ್ಯ ಜೀವನದಲ್ಲಿ ಜಾಗ ಇರಬಾರದು ಅಲ್ಲವೇ ಎಂದಿದ್ದರು ರಾಧಿಕಾ ಪಂಡಿತ್. ಇಷ್ಟೇ ಅಲ್ಲ "ಸ್ನೇಹ ಎಲ್ಲಾ ಬಾಂಧವ್ಯಗಳ ಬುನಾದಿ. ಅದು ಗಂಡ, ಹೆಂಡತಿ ಅಥವಾ ಪೋಷಕರೇ ಆಗಿರಲಿ, ಸ್ನೇಹ ಬಹಳ ಮುಖ್ಯ ಎನ್ನುವ ಮೂಲಕ ಸುಖ ಸಂಸಾರದ ಸೂತ್ರವನ್ನು ರಾಧಿಕಾ ಪಂಡಿತ್ ಹೇಳಿದ್ದರು.
ರಾಧಿಕಾ ಪಂಡಿತ್ ಅವರ ಈ ಮಾತು, ಅವರಲ್ಲಿರುವ ಪ್ರಬುದ್ದತೆ, ಮನೆಯ ಕಡೆ ಅವರು ನೀಡುವ ಗಮನ, ಇವೆಲ್ಲೆದರಿಂದನೇ ನೆಮ್ಮದಿಯಾಗಿರುವ ಯಶ್, ಯಾವ ಚಿಂತೆ ಇಲ್ಲದೇ ತಮ್ಮ ಗುರಿ ಮತ್ತು ಯೋಜನೆಗಳ ಕಡೆಗೆ ಗಮನ ಹರಿಸುತ್ತಿದ್ದಾರೆ. ಇನ್ನೂ ಎತ್ತರಕ್ಕೆ ಎರಬೇಕೆಂದು ಹುರುಪಿನಲ್ಲಿ ಶ್ರದ್ಧೆಯಿಂದ ಕೆಲಸವನ್ನು ಮಾಡುತ್ತಿದ್ದಾರೆ. ಯಾಕೆಂದರೆ ಯಾರೇ ಇರಲಿ ಎಷ್ಟೇ ಆತ್ಮ ವಿಶ್ವಾಸ ಇದ್ದರೂ, ಯಾವುದಕ್ಕೂ ತಲೆ ಕೆಡಿಸಿಕೊಳ್ಳದೇ ಇದ್ದರೂ ಒಂದಿಲ್ಲೊಂದು ಸಮಸ್ಯೆಯಾದಾಗ ಗಲಿಬಿಲಿಯಾಗುತ್ತಾರೆ. ಚಿಂತೆ ಮಾಡುತ್ತಾರೆ. ಈ ಅನುಭವ ಯಶ್ ಅವರಿಗೆ ಆದಾಗೆಲ್ಲ ಆ ಗೊಂದಲದಿಂದ ಹೊರಗೆ ತರಬಲ್ಲ ಶಕ್ತಿ ರಾಧಿಕಾ ಪಂಡಿತ್ ಅವರಲ್ಲಿ ಇದೆ. ಹೀಗೆ ತಮ್ಮ ವೃತ್ತಿ ಬದುಕಿನ ಬಗ್ಗೆ ಆಲೋಚನೆ ಮಾಡದೇ ಯಶ್ ಗೆ ಸದಾ ಕಾಲ ಬೆಂಬಲವನ್ನು ರಾಧಿಕಾ ನೀಡಿದ್ದರಿಂದನೇ ಇವತ್ತು ಯಶ್ ನ್ಯಾಷನಲ್ ಸ್ಟಾರ್ ಆಗಿ ಹೊರ ಹೊಮ್ಮಲು ಸಾಧ್ಯವಾಗಿದ್ದು. ಒಟ್ನಲ್ಲಿ ಎಲ್ಲ ಯಶಸ್ವಿ ಪುರುಷರ ಹಿಂದೆ ಮಹಿಳೆಯ ಶಕ್ತಿ ಇರುತ್ತದೆ ಎಂಬ ಮಾತೊಂದಿದೆ. ಈ ಮಾತು ಯಶ್ ಮತ್ತು ರಾಧಿಕಾ ಪಂಡಿತ್ ವಿಚಾರದಲ್ಲಿ ನಿಜಾ. ನೀವೇನಂತೀರಾ..?


Click it and Unblock the Notifications











