ಹ್ಯಾಟ್ರಿಕ್ ಹೀರೋ ಶಿವಣ್ಣ ಸಿಡಿಸಿದ ಎ.ಕೆ.47ಗೆ 25 ವರ್ಷ...!
ಎದೆ ಹಾಲುಂಡು ಎದೆ ಬಗೆದವರ ಕ್ಷಮಿಸುವುದುಂಟೆ, ಬೆಳೆಸುವುದುಂಟೆ.. ಬೇಲಿಗೆ ಮದ್ದು ಹಾಕದೇ ಇದ್ರೆ ನೆರಳಿನ ಮರವು ಉಳಿಯುವುದುಂಟೆ.. ನಾದ್ರ ಬ್ರಹ್ಮ ಹಂಸಲೇಖ ಸಾಹಿತ್ಯ ಮತ್ತು ಸಂಗೀತದಲ್ಲಿ ಹೊರ ಹೊಮ್ಮಿದ್ದ ಈ ಹಾಡನ್ನ ಮರೆಯಲು ಹೇಗೆ ಸಾಧ್ಯ..? ಜೂನ್ 18, 1999ರಂದು ಕರುನಾಡಿನೆಲ್ಲೆಡೆ ಮೊಳಗಿದ ಈ ಹಾಡು, ಬೇರೆ ಯಾವ ಸಿನಿಮಾದ್ದಲ್ಲ. ಬದಲಿಗೆ ಡಾ.ಶಿವರಾಜ್ ಕುಮಾರ್ ಮತ್ತು ಓಂ ಪ್ರಕಾಶ್ ರಾವ್ ಕಾಂಬಿನೇಷನ್ನಿನ ಬೆಸ್ಟ್ ಸಿನಿಮಾಗಳ ಪೈಕಿ ಎ.ಕೆ. 47 ಚಿತ್ರದ್ದು. ಈ ಚಿತ್ರಕ್ಕೀಗ 25ರ ಹರೆಯ.
ಸರಿಯಾಗಿ 25 ವರ್ಷದ ಹಿಂದೆ ಇದೇ ದಿನದಂದು ತೆರೆಗೆ ಬಂದ ಈ ಸಿನಿಮಾ, ಶಿವಣ್ಣ ಮತ್ತು ಓಂ ಪ್ರಕಾಶ್ ರಾವ್ ಜೋಡಿಯ ಎರಡನೇ ಸಿನಿಮಾ ಆಗಿತ್ತು. ಸಿಂಹದ ಮರಿ ಚಿತ್ರದಲ್ಲಿ ಜತೆಯಾಗಿದ್ದ ಶಿವಣ್ಣ ಮತ್ತು ಓಂ ಪ್ರಕಾಶ್ ಜೋಡಿ ಆನಂತರ ಎ.ಕೆ 47 ಮೂಲಕ ಮತ್ತೊಮ್ಮೆ ಚಂದನವನದಲ್ಲಿ ಕಮಾಲು ಮಾಡಿತ್ತು. ಆ ಕಾಲದಲ್ಲಿಯೇ 175 ದಿನ ಯಶಸ್ವಿ ಪ್ರದರ್ಶನವನ್ನು ಕಂಡಿತ್ತು ಎ.ಕೆ.47.

ಇನ್ನು ಎ ಖ್ಯಾತಿಯ ಚಾಂದಿನಿ ನಾಯಕಿಯ ಪಾತ್ರವನ್ನ ನಿರ್ವಹಿಸಿದ್ದರು. ಬಾಲಿವುಡ್ ನಟ ಓಂ ಪುರಿ ಕೂಡ ಮನೋಜ್ಞವಾಗಿ ಅಭಿನಯಿಸಿದ್ದರು. ಗಿರೀಶ್ ಕಾರ್ನಾಡ್, ಆಶಿಶ್ ವಿದ್ಯಾರ್ಥಿ, ಈ ಚಿತ್ರದ ತೂಕವನ್ನ ಇನ್ನೂ ಹೆಚ್ಚಿಸಿದ್ದರು. ಎ.ಕೆ. 47 ಚಿತ್ರದ ಅಭಿನಯಕ್ಕೆ ಡಾ.ಶಿವರಾಜ್ ಕುಮಾರ್ ಫಿಲ್ಮ್ ಫೇರ್ ಪ್ರಶಸ್ತಿಯನ್ನು ಕೂಡ ಬಾಚಿಕೊಂಡಿದ್ದರು. ಎ.ಕೆ. 47 ಚಿತ್ರವನ್ನು ರಾಮು ತಮ್ಮ ಬ್ಯಾನರ್ ನಲ್ಲಿ ನಿರ್ಮಿಸಿ ನಿರೀಕ್ಷೆಗೂ ಮೀರಿದ ಲಾಭ ಗಳಿಸಿದ್ದರು.
ಇನ್ನೂ.. ನಿಮಗೆ ಗೊತ್ತು, ಎ.ಕೆ.47 ಡಾ.ಶಿವರಾಜ್ ಕುಮಾರ್ ಅಭಿನಯದ 50ನೇ ಸಿನಿಮಾ. ಆದರೆ.. ನಿಮಗೆ ಗೊತ್ತಾ, ಕನ್ನಡ ಮತ್ತು ತೆಲುಗಿನಲ್ಲಿ ಏಕಕಾಲಕ್ಕೆ ಆ ಕಾಲದಲ್ಲಿಯೇ ನಿರ್ಮಾಣವಾದ ಈ ಸಿನಿಮಾದ ತೆಲುಗು ಅವತರಣಿಕೆಯಲ್ಲಿ ಶಿವರಾಜ್ ಕುಮಾರ್ ಪಾತ್ರದಲ್ಲಿ ಡೈಲಾಗ್ ಕಿಂಗ್ ಸಾಯಿಕುಮಾರ್ ಆಕ್ಟ್ ಮಾಡಿದ್ದರು.
ಆರಂಭದಲ್ಲಿ ತೆಲುಗಿನಲ್ಲಿ ಈ ಪಾತ್ರಕ್ಕೆ ಸಾಯಿಕುಮಾರ್ ಸೂಕ್ತವಾಗಲ್ಲ ಅನ್ನುವ ಅಭಿಪ್ರಾಯ ವ್ಯಕ್ತವಾಗಿತ್ತಾದರೂ ರಾಮು ಅವರ ಒತ್ತಾಸೆಯಿಂದ ಸಾಯಿಕುಮಾರ್ ತೆಲುಗಿನಲ್ಲಿ ನಾಯಕನ ಪಾತ್ರಕ್ಕೆ ಬಣ್ಣ ಹಚ್ಚಿದರು.

ಮುಂಬೈನಲ್ಲಿ ಹೆಚ್ಚು ಕಡಿಮೆ ಎರಡು ತಿಂಗಳು ಚಿತ್ರೀಕರಣಗೊಂಡ ಚಿತ್ರ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದ್ದ ಈ ಚಿತ್ರ DTS ಆದ ಕನ್ನಡದ ಮೊದಲ ಚಿತ್ರ ಕೂಡ ಹೌದು. ಇಷ್ಟೇ ಅಲ್ಲ ಕನ್ನಡ ಚಿತ್ರರಂಗದಲ್ಲಿ ವಿನೈಲ್ ಫ್ಲೆಕ್ಸ್ ಗಳನ್ನ ಹಾಕುವ ಟ್ರೆಂಡ್ ಶುರುವಾಗಿದ್ದು ಕೂಡ ಇದೇ ಸಿನಿಮಾದಿಂದ.
ಇನ್ನೂ.. ಇತ್ತೀಚೆಗಷ್ಟೇ ಕಣ್ಮರೆಯಾದ ಕಾವೇರಿ ಚಿತ್ರಮಂದಿರದ ಎದುರು ಹಾಕಲಾಗಿದ್ದ ವಿನೈಲ್ ಫೋಸ್ಟರ್‌ನ್ನ ನೋಡಲೆಂದೇ ಡಾ.ರಾಜ್ ಕುಮಾರ್ ದಿನಕ್ಕೆ ಎರಡು ಮೂರು ಬಾರಿಯಾದರೂ ತಮ್ಮ ಕಾರಿನಲ್ಲಿ ಕಾವೇರಿ ಚಿತ್ರಮಂದಿರದ ಸುತ್ತ ಮುತ್ತ ಪ್ರದಕ್ಷಣೆಯನ್ನೂ ಹಾಕುತ್ತಿದ್ದರು.
ಹೀಗೆ ಹತ್ತಾರು ದಾಖಲೆ ಬರೆದು, ಹತ್ತಾರು ವಿಶೇಷತೆಗಳನ್ನೊಂದಿದ್ದ ಈ ಚಿತ್ರ ಯಾವುದೇ ಕಾರಣಕ್ಕೂ ಗೆಲ್ಲಲ್ಲ ಎಂಬ ಕುಹುಕದ ಮಾತುಗಳನ್ನ ಬಿಡುಗಡೆಗೆ ಮುನ್ನ ಗಾಂಧಿನಗರದ ಮಂದಿ ಮಾತನಾಡಿದ್ದರು. ಓಂ ಪ್ರಕಾಶ್ ರಾವ್ ಅವರನ್ನ ನಂಬಿ ಕೋಟ್ಯಂತರ ಹಣ ಸುರಿದಿರುವ ರಾಮು, ಬೀದಿಗೆ ಬರುವುದು ಖಚಿತ ಎಂಬ ಭವಿಷ್ಯವನ್ನೂ ಹೇಳಿದ್ದರು. ಆದರೆ..ಇದ್ಯಾವುದಕ್ಕೂ ತಲೆ ಕೆಡಿಸಿಕೊಳ್ಳದ ರಾಮು ಮತ್ತು ಓಂ ಪ್ರಕಾಶ್ ರಾವ್ ಶ್ರದ್ಧೆ ಭಕ್ತಿಯಿಂದ ಸಿನಿಮಾ ಮಾಡ್ತಾ ಹೋದರು. ಮುಂದಾಗಿದ್ದು ಇತಿಹಾಸ.


Click it and Unblock the Notifications











