ಪ್ಯಾನ್ ಇಂಡಿಯಾ ಮಟ್ಟದಲ್ಲಿ ಸದ್ದು ಮಾಡಿದ್ದ ಕನ್ನಡ ಚಿತ್ರರಂಗದಲ್ಲೀಗ ಬರೀ ವಿವಾದ; ಸ್ಯಾಂಡಲ್‌ವುಡ್ ಗತಿಯೇನು?
ಇದೇ ಎರಡು ವರ್ಷಗಳ ಹಿಂದೆ ಕನ್ನಡ ಚಿತ್ರರಂಗದ ಮೇಲೆ ಇಡಿ ಭಾರತೀಯ ಚಿತ್ರರಂಗವೇ ಕಣ್ಣು ಇಟ್ಟಿತ್ತು. 'ಕೆಜಿಎಫ್ 2' ಸಿನಿಮಾ ಬಳಿಕವಂತೂ ಸ್ಯಾಂಡಲ್‌ವುಡ್ ಅನ್ನು ಹೊಗಳುವುದನ್ನು ಕಂಡು ಕನ್ನಡಿಗರು ಕಾಲರ್ ಎತ್ತಿಕೊಂಡು ಓಡಾಡಿದ್ದರು. 'ಕಾಂತಾರ' ರಿಲೀಸ್ ಆದ್ಮೇಲೆ ಕನ್ನಡಿಗರಿಗೆ ಸಿಗುವ ಮರ್ಯಾದೆ ದುಪ್ಪಟ್ಟಾಗಿತ್ತು. ಬ್ಯಾಕ್ ಟು ಬ್ಯಾಕ್ ಪ್ಯಾನ್ ಇಂಡಿಯಾ ಸಿನಿಮಾ ರಿಲೀಸ್ ಆಗಿ ಬೇರೆ ಚಿತ್ರರಂಗಕ್ಕೆ ಭಯ ಬೀಳಿಸಿದ್ದವು.
ರಕ್ಷಿತ್ ಶೆಟ್ಟಿಯ '777 ಚಾರ್ಲಿ' ಪ್ಯಾನ್ ಇಂಡಿಯಾ ರಿಲೀಸ್ ಆಯ್ತು. ಕಿಚ್ಚ ಸುದೀಪ್ ನಟನೆ 'ವಿಕ್ರಾಂತ್ ರೋಣ' ಪ್ಯಾನ್ ಇಂಡಿಯಾ ಲೆವೆಲ್‌ನಲ್ಲಿ ಸೌಂಡ್ ಮಾಡಿತ್ತು. ಇವನ್ನೆಲ್ಲ ನೋಡಿದ್ಮೇಲೆ ಇನ್ಮುಂದೆ ಕನ್ನಡ ಸಿನಿಮಾಗಳು ಪ್ಯಾನ್ ಇಂಡಿಯಾ ಲೆವೆಲ್‌ನಲ್ಲಿ ಶೈನ್ ಆಗೋದು ಕನ್ನಡಿಗರ ಕಣ್ಮುಂದೆ ಎದ್ದು ಕಾಣತ್ತಿತ್ತು. ಆದರೆ, ಈ ಸಂಭ್ರಮ ಹೆಚ್ಚು ದಿನ ಉಳಿಯಲಿಲ್ಲ.

ಪ್ಯಾನ್ ಇಂಡಿಯಾ ಮಟ್ಟದಲ್ಲಿ ಸದ್ದು ಮಾಡಿದ ಕೊನೆಯ ಕನ್ನಡ ಸಿನಿಮಾ 'ಕಾಂತಾರ'. 2022, ಸೆಪ್ಟೆಂಬರ್‌ನಲ್ಲಿ ಈ ಸಿನಿಮಾ ರಿಲೀಸ್ ಆಗಿತ್ತು. ಅಲ್ಲಿಂದ ಇಲ್ಲಿಗೆ ಸುಮಾರು ಎರಡು ವರ್ಷ ಆಯ್ತು. ಇಂತಹದ್ದೊಂದು ಸಕ್ಸಸ್ ಅನ್ನು ಕನ್ನಡ ಚಿತ್ರರಂಗ ಇದೂವರೆಗೂ ನೋಡಿಯೇ ಇಲ್ಲ. ಇನ್ನೇನು 2024ರ ಸೆಕೆಂಡ್ ಹಾಫ್‌ನಲ್ಲಾದರೂ ಸರಿ ಹೋಗಬಹುದು ಅನ್ನೋ ಆಶಾಭಾವನೆ ಇತ್ತು. ಆದರೆ, ಅದ್ಯಾಕೋ ಬರೀ ವಿವಾದಗಳೇ ಎದ್ದು ಕಾಣುತ್ತಿವೆ.
ಕನ್ನಡ ಚಿತ್ರರಂಗ ಮೊದಲಿನಂತೆ ಇಲ್ಲ. ಕನ್ನಡದ ಕಲಾವಿದರಿಗೆ, ತಂತ್ರಜ್ಞರಿಗೆ, ಯಾರಿಗೂ ಇಷ್ಟು ವರ್ಷ ಕಟ್ಟಿದ ಚಿತ್ರರಂಗದ ಮರ್ಯಾದೆ ಲೆಕ್ಕಕ್ಕೇ ಇಲ್ಲ. ಈ ಚಿತ್ರರಂಗವನ್ನು ಉಳಿಸಬೇಕು. ಇದರಿಂದಲೇ ನಮ್ಮ ಹೊಟ್ಟೆ ತುಂಬುತ್ತಿದೆ ಅನ್ನೋದು ಮರೆತು ಹೋದಂತಿದೆ. ಇನ್ನು ಜೂನ್ ತಿಂಗಳಂತೂ ಬರೀ ವಿವಾದಗಳಿಂದಲೇ ತುಂಬಿ ಹೋಗಿದೆ. ಬರೀ ವಿಚ್ಚೇದನ, ಅಫೇರ್, ವಿವಾದ, ದರ್ಶನ್ ಬಂಧನದಂತಹ ಪ್ರಕರಣಗಳೇ ಹೆಚ್ಚಾಗಿವೆ.
ಕನ್ನಡ ಚಿತ್ರರಂಗ ನಿಧಾನವಾಗಿ ಮುಳುಗುತ್ತಿದೆ. ಸಿನಿಮಾ ನೋಡುವುದಕ್ಕೆ ಪ್ರೇಕ್ಷಕರು ಥಿಯೇಟರ್‌ಗಳಿಗೆ ಬರುತ್ತಿಲ್ಲ. ಕನ್ನಡ ಸಿನಿಮಾಗಳ ಬಗ್ಗೆ ಆಸಕ್ತಿಯನ್ನೇ ಕಳೆದುಕೊಳ್ಳುತ್ತಿದ್ದಾರೆ. ಈ ವರ್ಷ ಒಂದೇ ಒಂದು ಸಿನಿಮಾ 100 ಕೋಟಿ ಕ್ಲಬ್ ಸೇರುವುದಿರಲಿ, ಇದೂವರೆಗೂ ಬಿಡುಗಡೆಯಾಗಿರುವ ಎಲ್ಲಾ ಸಿನಿಮಾಗಳ ಬಾಕ್ಸಾಫೀಸ್ ಸೇರಿಸಿದರೂ ನೂರು ಕೋಟಿ ಆಗಿಲ್ಲ. ಇಂತಹ ಪರಿಸ್ಥಿತಿಯಲ್ಲಿ ದರ್ಶನ್ ಬಂಧನ, ಯುವ ರಾಜ್‌ಕುಮಾರ್ ವಿಚ್ಚೇದನದಂತಹ ಪ್ರಕರಣಗಳು ಕನ್ನಡ ಚಿತ್ರರಂಗದ ಘನತೆಯನ್ನು ರಾಷ್ಟ್ರ ಮಟ್ಟದಲ್ಲಿ ಹರಾಜು ಹಾಕಿವೆ.

ಕನ್ನಡ ಚಿತ್ರರಂಗದ ಪರಿಸ್ಥಿತಿ ಹೇಗಿದೆ ಅಂದರೆ? ಎಲ್ಲರನ್ನೂ ಕಂಟ್ರೋಲ್ ಮಾಡುವುದಕ್ಕೆ ಫಿಲ್ಮ್ ಚೇಂಬರ್ ಅನ್ನೋ ಅಂಗಸಂಸ್ಥೆ ಇದೆ. ಅದಕ್ಕೀಗ ಪವರ್ ಅನ್ನೋದೇ ಇಲ್ಲ. ಸೂಪರ್‌ಸ್ಟಾರ್‌ಗಳು ಅಲ್ಲಿಗೆ ಹೋಗುವುದೂ ಇಲ್ಲ. ಫಿಲ್ಮ್ ಚೇಂಬರ್ ಮಾತನ್ನು ಕೇಳುವುದೂ ಇಲ್ಲ. ಅಷ್ಟೇ ಯಾಕೆ, ಚಿತ್ರರಂಗದಲ್ಲಿರುವ ಹಿರಿಯ ಕಲಾವಿದರ ಮಾತನ್ನು ಕೇಳುವ ಸ್ಥಿತಿಯಲ್ಲೂ ಯಾರು ಇಲ್ಲ. ಅದಕ್ಕೆ ಅವರೂ ಸೈಲೆಂಟ್ ಮೋಡ್‌ಗೆ ಜಾರಿದ್ದಾರೆ.
ದರ್ಶನ್ ಅಂತಹ ಸೂಪರ್‌ಸ್ಟಾರ್ ಕೊಲೆ ಪ್ರಕರಣದಲ್ಲಿ ಆರೋಪಿ ಸ್ಥಾನದಲ್ಲಿ ನಿಲ್ಲುವುದು ಅಂದರೆ ಏನು ಚಿಕ್ಕ ವಿಷಯವೇ? ತೆರೆಮೇಲೆ ಜೀವನದ ಬಗ್ಗೆ, ಜೀವದ ಬಗ್ಗೆ ಮಾತಾಡುವ ನಟ, ಒಂದು ಜೀವ ಹೋಗುವುದಕ್ಕೆ ಪ್ರತ್ಯಕ್ಷವಾಗಿಯೋ, ಪರೋಕ್ಷವಾಗಿಯೋ ಕಾರಣನಾಗಿದ್ದಾರೆ. ಈಗ ಈ ನಟ ತನ್ನ ಮುಂದಿನ ಸಿನಿಮಾಗಳಲ್ಲಿ ಇನ್ನೇನು ಸಂದೇಶ ಕೊಡುವುದಕ್ಕೆ ಸಾಧ್ಯ? ಸಂದೇಶ ಹೊತ್ತು ಬಂದರೆ, ಜನರು ಒಪ್ಪುತ್ತಾರಾ?
ಇನ್ನು ವಿವಾದಗಳಿಂದ ದೂರವಿದ್ದವರು ದೊಡ್ಮನೆ ಹೀರೊಗಳು. ಕುಟುಂಬ, ಸಂಸಾರದ ಮಹತ್ವವನ್ನು ತೆರೆಮೇಲಷ್ಟೇ ಅಲ್ಲ. ತೆರೆಯ ಹಿಂದೆಯೂ ತೋರಿಸಿಕೊಟ್ಟವರು. ಇಂತಹ ಕುಟುಂಬದ ಕುಡಿ, ಈಗತಾನೇ ಚಿತ್ರರಂಗಕ್ಕೆ ಕಾಲಿಟ್ಟ ಯುವ ರಾಜ್‌ಕುಮಾರ್ ವಿಚ್ಚೇದನ ಪ್ರಕರಣ ದೊಡ್ಮನೆ ಹೀರೋಗಳ ಸಿನಿಮಾಗಳನ್ನು ಮೆಚ್ಚುವ ಮನಸ್ಸುಗಳಿಗೆ ನೋವುಂಟು ಮಾಡಿದೆ. ಇನ್ನು ಯುವ ತೆರೆಮೇಲೆ ಕೌಟುಂಬಿಕ ಮೌಲ್ಯಗಳನ್ನು ಹೇಳುವುದಕ್ಕೆ ಸಾಧ್ಯವೇ?
ಇತ್ತ ಚಂದನ್ ಶೆಟ್ಟಿ ಹಾಗೂ ನಿವೇದಿತಾ ವಿಚ್ಚೇದನ ಕೂಡ ಹೀಗೆ. ಒಟ್ಟಿನಲ್ಲಿ ಕನ್ನಡ ಚಿತ್ರರಂಗ ಉಳಿಸುವ ಬಗ್ಗೆ ಯಾರಿಗೂ ಗಮನವಿದ್ದಂತೆ ಇಲ್ಲ. ಇತ್ತೀಚೆಗೆ ವಿವಾದಗಳಲ್ಲಿ ಮುಳುಗಿ ಹೋಗಿರುವ ಸ್ಯಾಂಡಲ್‌ವುಡ್ ಮತ್ತೆ ಗರ್ವದಿಂದ ತಲೆ ಎತ್ತಿ ನಿಲ್ಲುವುದು ಯಾವಾಗ? ಸಿನಿಪ್ರಿಯರಿಗೆ ಒಳ್ಳೊಳ್ಳೆ ಸಿನಿಮಾಗಳು ಸಿಗೋದ್ಯಾವಾಗ?


Click it and Unblock the Notifications











