ಮುಂಬೈನಲ್ಲಿ ಆಫೀಸ್ ಬಾಯ್ ಆಗಿದ್ದ ದಿನಗಳನ್ನು ನೆನೆದ ರಿಷಬ್ ಶೆಟ್ಟಿ
ಚಿತ್ರರಂಗದಲ್ಲಿ ರಾತ್ರೋ ರಾತ್ರಿ ಹೀರೊ ಆದವರು, ಜೀರೋ ಆದವರು ಇದ್ದಾರೆ. ಎಷ್ಟು ಬೇಗ ಇಲ್ಲಿ ಗಳಿಸಬಹುದೋ ಅಷ್ಟೇ ಬೇಗ ಕಳೆದುಕೊಳ್ಳುವ ಅವಕಾಶವೂ ಇದೆ. ಅಂತಮವಾಗಿ ಪರಿಶ್ರಮ, ಅದೃಷ್ಟ ಮಾತ್ರ ಇಲ್ಲಿದೆ ಕೈ ಹಿಡಿಯುತ್ತದೆ. ಒಂದ್ಕಾಲದಲ್ಲಿ ಮುಂಬೈನಲ್ಲಿ ಆಫೀಸ್ ಬಾಯ್ ಆಗಿ ಕೆಲಸ ಮಾಡಿದ್ದ ರಿಷಬ್ ಶೆಟ್ಟಿ ಈಗ 'ಕಾಂತಾರ- 1' ಸಿನಿಮಾ ಮೂಲಕ ದಾಖಲೆ ಬರೆಯುತ್ತಿದ್ದಾರೆ.
ಪ್ರೈವೇಟ್ ಜೆಟ್‌ನಲ್ಲಿ ಚಿತ್ರದ ಪ್ರಚಾರಕ್ಕಾಗಿ ಮುಂಬೈ, ಹೈದರಾಬಾದ್, ಚೆನ್ನೈ, ಕೊಚ್ಚಿನ್‌ಗೆ ಸುತ್ತಾಡುತ್ತಿದ್ದಾರೆ. ಶೀಘ್ರದಲ್ಲೇ ಮತ್ತೆ ಪ್ರಚಾರಕ್ಕಾಗಿ ಮುಂಬೈ ಫ್ಲೈಟ್ ಏರುವ ಸಾಧ್ಯತೆಯಿದೆ. ಅಂದು ಮುಂಬೈನಲ್ಲಿ ಚಿತ್ರನಿರ್ಮಾಪಕರೊಬ್ಬರ ಬಳಿ ಆಫೀಸ್ ಆಗಿ ಡ್ರೈವರ್ ಆಗಿ ಕೆಲಸ ಮಾಡಿದ್ದ ರಿಷಬ್ ಶೆಟ್ಟಿ ಸುದ್ದಿಗೋಷ್ಠಿಗಾಗಿ ಈಗ ಮುಂಬೈ ಮಾಧ್ಯಮದವರು ಕಾಯುವಂತಾಗಿದೆ. ಒಂದೇ ಒಂದು ಸಂದರ್ಶನ ಕೊಡಿ ಎಂದು ಕೇಳುವಂತಾಗಿದೆ.

ಕಳೆದ ವಾರ ಮುಂಬೈಗೆ ತೆರಳಿದ್ದ ರಿಷಬ್ ಶೆಟ್ಟಿ ತಮ್ಮ ಹಳೆಯ ದಿನಗಳನ್ನು ಮೆಲುಕು ಹಾಕಿದ್ದಾರೆ. "ನಾನು ಅಂಧೇರಿ ಪಶ್ಚಿಮದಲ್ಲಿರುವ ಒಂದು ನಿರ್ಮಾಣ ಸಂಸ್ಥೆಯಲ್ಲಿ ಆಫೀಸ್ ಬಾಯ್ ಆಗಿ ನಿರ್ಮಾಪಕರ ಕಾರು ಚಾಲಕನಾಗಿದ್ದೆ. ಸಿನಿಮಾ ಏನೆಲ್ಲಾ ಮಾಡಬಹುದು ಎಂದು ನೀವು ಊಹಿಸಬಹುದು. ಒಂದು ಚಿತ್ರ ಮಾಡುವುದರಿಂದ ನನಗೆ ಇಷ್ಟೊಂದು ಖ್ಯಾತಿ, ಪ್ರೀತಿ ಹಾಗೂ ಆಶೀರ್ವಾದ ಸಿಗುತ್ತವೆ ಎಂದು ನಾನು ಎಂದಿಗೂ ಯೋಚಿಸಿರಲಿಲ್ಲ. ಆ ನಿರ್ಮಾಣ ಸಂಸ್ಥೆಯ ಬಳಿಯ ರಸ್ತೆಯಲ್ಲಿ ವಡಾ ಪಾವ್ ತಿನ್ನುವಾಗ, ನಾನು ಇಲ್ಲಿಯವರೆಗೆ ಬರುತ್ತೇನೆ ಎಂದು ಊಹಿಸಿರಲಿಲ್ಲ. ನಾನು ತುಂಬಾ ಕೃತಜ್ಞನಾಗಿದ್ದೇನೆ" ಎಂದು ಮಾಧ್ಯಮಗಳ ಮುಂದೆ ರಿಷಬ್ ಶೆಟ್ಟಿ ಹೇಳಿದ್ದಾರೆ.
ಇದೇ ವಿಚಾರದದ ಬಗ್ಗೆ ರೆಡ್ ಎಫ್‌ಎಂ ಹಿಂದಿ ಯೂಟ್ಯೂಬ್ ಚಾನಲ್ ಸಂದರ್ಶನದಲ್ಲಿ ರಿಷಬ್ ಶೆಟ್ಟಿ ನೆನಪು ಮಾಡಿಕೊಂಡಿದ್ದರು. "2004ರಲ್ಲಿ ನಾನು ಸಹ ನಿರ್ದೇಶಕನಾಗಿ ಚಿತ್ರರಂಗಕ್ಕೆ ಬಂದಿದ್ದೆ. ಇಂಡಸ್ಟ್ರಿಯಲ್ಲಿ ಉಳಿದುಕೊಳ್ಳಲು ಸಣ್ಣಪುಟ್ಟ ಬ್ಯುಸಿನೆಸ್ ಮಾಡುತ್ತಿದ್ದೆ. 2008ರಲ್ಲಿ ಸಹ ನಿರ್ದೇಶಕನ ಕೆಲಸ ಇರಲಿಲ್ಲ. ಯಾವುದೇ ಕೆಲಸ ಇರಲಿಲ್ಲ, ಆಗ ಒಂದು ಚಿತ್ರಕ್ಕೆ ಲೋಕಲ್ ಕೊರ್ಡಿನೇಟರ್ ಕೆಲಸ ಸಿಕ್ತು. ಆ ಸಿನಿಮಾ ಬಿಡುಗಡೆ ಆಗಲಿಲ್ಲ. ಆದರೆ ನನ್ನ ಕೆಲಸ ನೋಡಿ ಮುಂಬೈಗೆ ಬಂದು ಕೆಲಸ ಮಾಡಲು ಹೇಳಿದ್ರು" ಎಂದು ರಿಷಬ್ ತಿಳಿಸಿದ್ದಾರೆ.

ಕರಾವಳಿಯ ಸಾಕಷ್ಟು ಜನ ಮುಂಬೈನಲ್ಲಿ ಬಂದು ಕೆಲಸ ಮಾಡುತ್ತಿದ್ದಾರೆ. ನಮ್ಮ ಸಂಬಂಧಿಕರು ಕೂಡ ಇಲ್ಲಿದ್ದಾರೆ. ಸರಿ ನೋಡೊಣ ಎಂದು ಬಂದೆ. ಮುಂಬೈಗೂ ಶೆಟ್ಟಿಗಳಿಗೂ ಸಂಬಂಧ ಚೆನ್ನಾಗಿದೆ ಅಲ್ವಾ ಅಂತ ಬಂದೆ. "ನಾನು ನಿರ್ದೇಶಕ ಆಗಬೇಕು. ಅದನ್ನು ಕಲಿಯಲು ಅವಕಾಶ ಕೊಟ್ರೆ ಬರ್ತೀನಿ ಅಂದೆ. ಖಂಡಿತ ಬನ್ನಿ ಅಂದ್ರು. ಇಲ್ಲಿ ಬಂದು ಮೂರ್ನಾಲ್ಕು ತಿಂಗಳು ಕೆಲಸ ಮಾಡ್ದೆ. ಆಫೀಸ್ ಬಾಯ್ ಆಗುವಂತಾಗಿತ್ತು. ನಿರ್ಮಾಪಕರ ಕಾರ್ ಡ್ರೈವಿಂಗ್ ಮಾಡ್ತಿದ್ದೆ" ಎಂದು ರಿಷಬ್ ಶೆಟ್ಟಿ ವಿವರಿಸಿದ್ದಾರೆ.
ನಿರ್ದೇಶಕನಾಗುವ ಕನಸು ಕಂಡು ಚಿತ್ರರಂಗಕ್ಕೆ ಬಂದಿದ್ದ ರಿಷಬ್ ಶೆಟ್ಟಿ ಸಾಕಷ್ಟು ಅವಮಾನ ಎದುರಿಸಿ ಬಳಿಕ ಹಂತ ಹಂತವಾಗಿ ಬೆಳೆದು ಬಂದರು. ಹೀರೊ ಆಗುವ ಆಸೆ ಇದ್ದರೂ ನಮ್ಮನ್ನು ಯಾರು ಹೀರೊ ಆಗಿ ನೋಡ್ತಾರೆ, ನಿರ್ದೇಶಕನಾಗೋಣ ಎಂದುಕೊಂಡಿದ್ದರು. ಆದರೆ ನಟನೆ ಕೂಡ ಕೈ ಹಿಡಿಯಿತು. 'ಬೆಲ್‌ಬಾಟಂ', 'ಹೀರೊ' ಚಿತ್ರಗಳು ಹಿಟ್ ಆಗಿದ್ದವು. 'ಕಾಂತಾರ' ಸರಣಿ ಸಿನಿಮಾ ದೊಡ್ಡ ಯಶಸ್ಸು ತಂದುಕೊಟ್ಟಿತ್ತು. ಪ್ಯಾನ್ ಇಂಡಿಯಾ ಸ್ಟಾರ್ ಆಗಿಬಿಟ್ಟರು. ಈಗ ಪರಭಾಷಾ ಫಿಲ್ಮ್ ಮೇಕರ್ಸ್ ಕೂಡ ರಿಷಬ್ ಕಾಲ್‌ಶೀಟ್ ಪಡೆಯಲು ಕ್ಯೂ ನಿಂತಿದ್ದಾರೆ.


Click it and Unblock the Notifications











