ಪುನೀತ್ ಕಥೆ ಕೇಳಿ ಇಷ್ಟಪಟ್ಟಿದ್ದ 'ಕಾಂತಾರ' ಚಿತ್ರ ರಿಷಬ್ ಶೆಟ್ಟಿ ಮಾಡುವಂತಾಗಿದ್ದೇಕೆ?
3 ವರ್ಷಗಳ ಹಿಂದೆ ರಿಷಬ್ ಶೆಟ್ಟಿ ನಿರ್ದೇಶಿಸಿ ನಟಿಸಿದ್ದ 'ಕಾಂತಾರ' ಸಿನಿಮಾ ಬ್ಲಾಕ್‌ಬಸ್ಟರ್ ಹಿಟ್ ಆಗಿ ಈಗ ಪ್ರೀಕ್ವೆಲ್ ಪ್ರೇಕ್ಷಕರ ಮುಂದೆ ಬರ್ತಿದೆ. ಎಲ್ಲಾ ಅಂದುಕೊಂಡಂತೆ ಆಗಿದ್ದರೆ 'ಕಾಂತಾರ' ಚಿತ್ರದಲ್ಲಿ ಪುನೀತ್ ರಾಜ್‌ಕುಮಾರ್ ನಟಿಸಬೇಕಿತ್ತು. ಅವರು ಕಥೆ ಕೇಳಿ ನಟಿಸೋಕೆ ಒಪ್ಪಿದ್ದರು. ಆದರೆ ಬಳಿಕ ರಿಷಬ್ ಶೆಟ್ಟಿ ತಾವೇ ಚಿತ್ರದಲ್ಲಿ ನಟಿಸುವಂತಾಗಿತ್ತು.
ಅಪ್ಪು ಅಗಲಿಕೆ ನೋವಿನಿಂದ ಅಭಿಮಾನಿಗಳು ಇನ್ನು ಹೊರ ಬಂದಿಲ್ಲ. ಪುನೀತ್ ರಾಜ್‌ಕುಮಾರ್ ಇಂದು ಇದ್ದಿದ್ದರೆ 'ಕಾಂತಾರ'-1 ಸಂಭ್ರಮದಲ್ಲಿರುತ್ತಿದ್ದರು. ಎಲ್ಲರನ್ನು ಪ್ರೋತ್ಸಾಹಿಸುತ್ತಿದ್ದ ಅಪ್ಪು ಬಹುನಿರೀಕ್ಷಿತ 'ಕಾಂತಾರ'-1 ಚಿತ್ರವನ್ನು ನೋಡಿ ತಂಡದ ಬೆಂಬಲಕ್ಕೆ ನಿಲ್ಲುತ್ತಿದ್ದರು. ಯುಕೆಯಲ್ಲಿ ನಿರ್ಮಾಪಕಿ ಅಶ್ವಿನಿ ಪುನೀತ್ ರಾಜ್‌ಕುಮಾರ್ ಅಕ್ಟೋಬರ್ 1ರಂದು ಸಿನಿಮಾ ವೀಕ್ಷಿಸುವ ಸಾಧ್ಯತೆಯಿದೆ. 'ಕಾಂತಾರ' ಚಿತ್ರದಲ್ಲಿ ಅಪ್ಪು ನಟಿಸಿದ್ದರೆ ಹೇಗಿರುತ್ತಿತ್ತು ಎಂದು ಅಭಿಮಾನಿಗಳು ಕಲ್ಪಿಸಿಕೊಳ್ಳುತ್ತಲೇ ಇದ್ದಾರೆ. 'ಕಾಂತಾರ'-1 ಬಿಡುಗಡೆ ಹೊಸ್ತಿಲಲ್ಲಿ ಅಭಿಮಾನಿಗಳು ಅವರನ್ನು ನೆನಪಿಸಿಕೊಳ್ಳುತ್ತಿದ್ದಾರೆ.

ಸಾಕಷ್ಟು ಸಂದರ್ಶನಗಳಲ್ಲಿ ಪುನೀತ್ ಅವರಿಗೆ ಕಥೆ ಹೇಳಿದ್ದ ಬಗ್ಗೆ ರಿಷಬ್ ಶೆಟ್ಟಿ ಮಾತನಾಡಿದ್ದಾರೆ. 'ಕಾಂತಾರ' ಕಥೆಯಲ್ಲಿ ತಾವೇ ನಟಿಸಬೇಕು ಎಂದು ರಿಷಬ್ ಶೆಟ್ಟಿ ಅಂದುಕೊಂಡಿದ್ದರು. ಆದರೆ ನಿರ್ದೇಶನದ ಜೊತೆ ನಟನೆ ಕಷ್ಟ ಎಂದು ಭಾವಿಸಿದ್ದರು. ಹಾಗಾಗಿ ಬೇರೆ ಯಾರಾದರೂ ಮಾಡಿದರೆ ಚೆನ್ನಾಗಿರುತ್ತದೆ ಎಂದು ನಿರ್ಮಾಪಕ ವಿಜಯ್ ಕಿರಗಂದೂರ್ ಅವರ ಬಳಿ ಚರ್ಚಿಸಿದಾಗ ಪುನೀತ್ ರಾಜ್‌ಕುಮಾರ್ ಹೆಸರು ಬಂದಿತ್ತು. ಅಪ್ಪು ಸರ್‌ಗೆ ಸಿನಿಮಾ ಮಾಡೋಕೆ ನಾನು ಸಿದ್ಧ ಎಂದು ಕೂಡಲೇ ರಿಷಬ್ ಫೋನ್ ಮಾಡಿ ಕಥೆ ಹೇಳಿದ್ದರು. ಪುನೀತ್ ಕೂಡ ಕಥೆ ಒಪ್ಪಿ ಮಾಡೋಣ, ನಾನು ಡೇಟ್ಸ್ ಹೊಂದಿಸಿಕೊಳ್ತೀನಿ ಎಂದಿದ್ದರು. ಈ ಬಗ್ಗೆ ರಿಷಬ್ ಪತ್ನಿ ಪ್ರಗತಿ ಈ ಹಿಂದೆ ಪಬ್ಲಿಕ್ ಟಿವಿ ಸಂದರ್ಶನದಲ್ಲಿ ಹೇಳಿದ್ದರು.
"ಅಪ್ಪು ಸರ್ ಕಥೆ ಕೇಳಿ ಬಹಳ ಇಷ್ಟಪಟ್ಟಿದ್ದರು. ಆದರೆ ಚಿತ್ರದಲ್ಲಿ ಮಂಗಳೂರು ಭಾಷೆ, ಕೋಲ, ಕಂಬಳ ಇದೆಲ್ಲವನ್ನು ಅಭ್ಯಾಸ ಮಾಡಬೇಕು. ಅದಕ್ಕೆ ಬಹಳ ಸಮಯ ಬೇಕಿತ್ತು. ಅದೇ ಸಮಯಕ್ಕೆ 'ದ್ವಿತ್ವ' ಸಿನಿಮಾ ಮಾಡುವ ಮಾತುಕತೆ ಆಗಿತ್ತು. ಹಾಗಾಗಿ ಕಾಯುವುದು ಬೇಡ ರಿಷಬ್ ಅಂದುಕೊಂಡಿದ್ರು. ಆಗ ಸ್ವತಃ ಅಪ್ಪು ಸರ್, ಇಲ್ಲ ರಿಷಬ್ ನೀವೇ ಮಾಡಿ ಎಂದಿದ್ರು. 'ಭಜರಂಗಿ- 2' ಈವೆಂಟ್‌ನಲ್ಲಿ ಕೂಡ ರಿಷಬ್ ಜೊತೆ ಮಾತನಾಡಿ ಸಿನಿಮಾ ಹೇಗೆ ಬಂದಿದೆ ಎಂದು ವಿಚಾರಿಸಿದ್ದರು. ಖಂಡಿತ ಅಪ್ಪು ಸರ್ ಆಶೀರ್ವಾದ ಸಿನಿಮಾ ಮೇಲಿದೆ. ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಸಿನಿಮಾ ಬಂದಾಗ ಎಲ್ಲರನ್ನು ಮನೆಗೆ ಕರೆದು ಮೆಚ್ಚುಗೆ ವ್ಯಕ್ತಪಡಿಸಿದ್ರು" ಎಂದು ಪ್ರಗತಿ ಶೆಟ್ಟಿ ಹೇಳಿದ್ದರು.
ಒಂದು ವೇಳೆ ಅಪ್ಪು ಸರ್ 'ಕಾಂತಾರ' ಚಿತ್ರದಲ್ಲಿ ನಟಿಸಿದ್ದರೆ ಕೆಲ ಬದಲಾವಣೆಗಳನ್ನು ಮಾಡಿಕೊಳ್ಳುತ್ತಿದ್ದೆ ಎಂದು ರಿಷಬ್ ಶೆಟ್ಟಿ ಪಬ್ಲಿಕ್ ಟಿವಿ ಸಂದರ್ಶನದಲ್ಲೇ ಹೇಳಿದ್ದರು. "ಅಣ್ಣಾವ್ರ ರೀತಿ ಅಪ್ಪು ಸರ್ ಸರಳ, ಸಜ್ಜನ ರೀತಿಯಲ್ಲಿ ಆದರ್ಶವಾಗಿ ಬದುಕಿದವರು. ಸಿನಿಮಾಗಳಲ್ಲಿ ಕೂಡ ಅದೇ ರೀತಿ ಕಾಣಿಸಿಕೊಳ್ಳುತ್ತಿದ್ದರು. ಅವರ ಇಮೇಜ್ ಬೇರೆ. ಶಿವನ ಪಾತ್ರಕ್ಕೆ ಬೀಡಿ ಸೇದುವುದು ಸೇರಿದಂತೆ ಕೆಲ ಅಭ್ಯಾಸಗಳಿವೆ. ಅದನ್ನೆಲ್ಲಾ ಚಿತ್ರದಲ್ಲಿ ತರುತ್ತಿರಲಿಲ್ಲ. ಅದನ್ನು ಅಪ್ಪು ಸರ್ ಜೊತೆ ಚರ್ಚಿಸಿದ್ದೆ" ಎಂದು ಹೇಳಿದ್ದರು.
'ಕಾಂತಾರ- 1' ಸಿನಿಮಾ ಬಿಡುಗಡೆಗೆ 3 ದಿನ ಬಾಕಿಯಿದೆ. ಈಗಾಗಲೇ ಅಡ್ವಾನ್ಸ್ ಬುಕ್ಕಿಂಗ್ ಶುರುವಾಗಿ ಭರ್ಜರಿ ರೆಸ್ಪಾನ್ಸ್ ಸಿಕ್ತಿದೆ. 30 ದೇಶಗಳಲ್ಲಿ ಸಿನಿಮಾ ಬಿಡುಗಡೆ ಆಗ್ತಿದ್ದು ಒಂದು ದಿನ ಮುನ್ನ ಪೇಯ್ಡ್ ಪ್ರೀಮಿಯರ್ ಶೋಗಳು ನಡೆಯಲಿದೆ. ಚಿತ್ರದ ಮೊದಲ ಹಾಡು ಬಿಡುಗಡೆಯಾಗಿ ಸದ್ದು ಮಾಡ್ತಿದೆ.


Click it and Unblock the Notifications











