"ಪ್ರಶಸ್ತಿಗಳು ಬರಲ್ಲ..'ತಗೋ'ಬೇಕು.. ಹೇಳಿದ್ರೆ ಯಾರಿಗೆಲ್ಲಾ ತೊಂದರೆ ಆಗುತ್ತೋ ಗೊತ್ತಿಲ್ಲ.. ಬಹಳ ಲಾಬಿ ನಡೆಯುತ್ತೆ"
ಬಹುಭಾಷಾ ನಟ ಕಿಶೋರ್ ಇತ್ತೀಚೆಗೆ ತಮ್ಮ ಹೇಳಿಕೆಗಳಿಂದಲೂ ಬಹಳ ಸುದ್ದಿಯಲ್ಲಿ ಇದ್ದಾರೆ. ಸಿನಿಮಾಗಳಲ್ಲಿ ನಟಿಸುವುದರ ಜೊತೆಗೆ ಪ್ರಸಕ್ತ ವಿದ್ಯಮಾನಗಳ ಬಗ್ಗೆ ಮಾತನಾಡುತ್ತಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಚರ್ಚೆ ಹುಟ್ಟುಹಾಕುತ್ತಿದ್ದಾರೆ. ಉರಿಗೌಡ, ನಂಜೇಗೌಡ ವಿವಾದ, ನಟ ಚೇತನ್ ಅಹಿಂಸಾ ವಿಸಾ ರದ್ದು ವಿಚಾರ, ಜಂತರ್ ಮಂತರ್‌ನಲ್ಲಿ ನಡೆಯುತ್ತಿರುವ ಕುಸ್ತಿಪಟುಗಳ ಹೋರಾಟದ ಬಗ್ಗೆಯೂ ನಟ ಕಿಶೋರ್ ಪ್ರತಿಕ್ರಿಯಿಸಿದ್ದರು.
ಕಳೆದ ವರ್ಷ ಬಿಡುಗಡೆಯಾದ 'ಕಾಂತಾರ' ಚಿತ್ರದಲ್ಲಿ ಫಾರೆಸ್ಟ್ ಆಫೀಸರ್ ಪಾತ್ರದಲ್ಲಿ ಕಿಶೋರ್ ಅಬ್ಬರಿಸಿದ್ದರು. ಇತ್ತೀಚೆಗೆ ಬಂದ 'ಪೊನ್ನಿಯಿನ್ ಸೆಲ್ವನ್- 2' ಚಿತ್ರದ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. 'ಕಂಠಿ' ಚಿತ್ರದ ಮೂಲಕ ಚಿತ್ರರಂಗಕ್ಕೆ ಬಂದ ಕಿಶೋರ್ ಇದೀಗ ದಕ್ಷಿಣ ಭಾರತದ ಬಹುಬೇಡಿಕೆಯ ನಟ ಎನಿಸಿಕೊಂಡಿದ್ದಾರೆ. ಸ್ಟಾರ್ ನಿರ್ದೇಶಕರು ತಮ್ಮ ಸಿನಿಮಾಗಳಲ್ಲಿ ಕಿಶೋರ್‌ಗಾಗಿ ಒಳ್ಳೆ ಪಾತ್ರಗಳನ್ನು ಕೊಡುತ್ತಿದ್ದಾರೆ. ಸಿನಿಮಾಗಳ ಜೊತೆ ಜೊತೆ ಬನ್ನೇರುಘಟ್ಟ ಸಮೀಪದ ಕರಿಯಪ್ಪನ ದೊಡ್ಡಿ ಗ್ರಾಮದಲ್ಲಿ ಕಿಶೋರ್ ತೋಟ ಮಾಡಿಕೊಂಡಿದ್ದಾರೆ.

ಎಷ್ಟೇ ದೊಡ್ಡ ನಟನಾದರೂ ಕೃಷಿ ಅಂದ್ರೆ ಅವರಿಗೆ ಪಂಚಪ್ರಾಣ. ಹಾಗಾಗಿ ತಮ್ಮ ಬಿಡುವಿನ ಸಮಯವನ್ನು ಕಿಶೋರ್ ರೈತನಾಗಿ ತೋಟದಲ್ಲಿ ಕಳೆಯುತ್ತಾರೆ. ತಮ್ಮ ಖಡಕ್ ಲುಕ್, ಗಡಸು ಧ್ವನಿ, ಅದ್ಭುತ ಅಭನಯದಿಂದ ಕಿಶೋರ್ ಸ್ಟಾರ್‌ಗಳ ಸಿನಿಮಾಗಳಲ್ಲಿ ಅವಕಾಶ ಗಿಟ್ಟಿಸಿಕೊಂಡಿದ್ದಾರೆ. ರಜನಿಕಾಂತ್, ಕಮಲ್ ಹಾಸನ್‌ರಂತಹ ಸ್ಟಾರ್‌ಗಳ ಜೊತೆ ತೆರೆಹಂಚಿಕೊಂಡಿದ್ದಾರೆ. ಆದರೆ ಕಿಶೋರ್ ಅವರಿಗೆ ಪ್ರಶಸ್ತಿಗಳು ಬಂದಿರೋದು ಕಮ್ಮಿ. ಈ ಬಗ್ಗೆ ಅವರು ತಮ್ಮ ಅಭಿಪ್ರಾಯ ಬಿಚ್ಚಿಟ್ಟಿದ್ದಾರೆ.
ಪ್ರಶಸ್ತಿಗಳು ಬರಲ್ಲ..'ತಗೋ'ಬೇಕು
ಕಿಶೋರ್‌ಗೆ ನಟಿಸಿದ ಮೊದಲ ಚಿತ್ರದಲ್ಲೇ ಅತ್ಯುತ್ತಮ ಪೋಷಕ ನಟ ರಾಜ್ಯ ಪ್ರಶಸ್ತಿ ಸಿಕ್ಕಿತ್ತು. 'ಕಂಠಿ' ಹಾಗೂ 'ರಾಕ್ಷಸ' ಚಿತ್ರಗಳ ನಟನೆಗಾಗಿ 2004ರಲ್ಲಿ ಪ್ರಶಸ್ತಿ ಪಡೆದುಕೊಂಡಿದ್ದರು. ಈ ಬಗ್ಗೆ ಟೋಟಲ್ ಕನ್ನಡ ಮೀಡಿಯಾ ಸಂದರ್ಶನದಲ್ಲಿ ಮಾತನಾಡಿರುವ ಕಿಶೋರ್ "ಪ್ರಶಸ್ತಿಗಳು ಬರಲ್ಲ..'ತಗೋ'ಬೇಕು" ಎಂದಿದ್ದಾರೆ. "ಇದೆಲ್ಲಾ ಹೇಳಿದರೆ ಯಾರಿಗೆ ತೊಂದರೆ ಆಗುತ್ತೆ ಅಂತ ಗೊತ್ತಿಲ್ಲ. ಆದರೆ ಪ್ರಶಸ್ತಿಗಾಗಿ ಲಾಬಿ ನಡೆಯುತ್ತಲೇ ಇದೆ" ಎಂದು ವಿವರಿಸಿದ್ದಾರೆ.
ನನಗೆ ಬಹಳ ಮುಜುಗರ ಆಗ್ತಿತ್ತು
"ನಾನು ಬಂದ ಸಮಯದಲ್ಲೇ ಪ್ರಶಸ್ತಿಗಾಗಿ ದುಡ್ಡು, ಲಾಬಿ ಎಲ್ಲಾ ಶುರುವಾಯಿತು. ಗೊತ್ತಿಲ್ಲ, ಈಗ ಕೊಡುವ ಅವಾರ್ಡ್‌ಗಳನ್ನು ನೋಡಿದರೆ ಅದರ ಹಿಂದೆ ಏನಾಗಿರಬಹುದು ಅಂತ ಯೋಚಿಸಿದರೆ ನಿಜವಾಗಿಯೂ ಅನುಮಾನ ಬರುತ್ತೆ. ನಮ್ಮ ಸ್ನೇಹಿತ ಬಾಬು ಅಂತ. ಅವರಿಗೆ ಚಿತ್ರರಂಗದಲ್ಲಿ ಕಾಂಟ್ಯಾಕ್ಟ್ ಚೆನ್ನಾಗಿತ್ತು. ಎಲ್ಲಾ ಕಡೆ ಕರೆದುಕೊಂಡು ಹೋಗಿ ಕೇಳಿ, ನಾನು ಈ ಸಿನಿಮಾದಲ್ಲಿ ಆಕ್ಟ್ ಮಾಡಿದ್ದೀನಿ ಅಂತ ಹೇಳಿ ಎನ್ನುತ್ತಿದ್ದರು. ನನಗೆ ಬಹಳ ಮುಜುಗರ. ಹಿಂದೆ ಆಗ್ತಿತ್ತು. ಆದರೆ ಸ್ನೇಹಿತನ ಕೇಳುತ್ತಿದ್ದೆ.

ಸ್ಟಾರ್ಸ್ ಅವಾರ್ಡ್‌ಗೆ ತಲೆ ಕೆಡಿಸಿಕೊಳ್ಳಲ್ಲ
"ಎಲ್ಲಾ ಕಡೆ ಇದು ಸಾಮಾನ್ಯ. ನಾನು ಆಕ್ಟ್ ಮಾಡಿದ್ದೀನಿ, ಸ್ವಲ್ಪ ನೋಡಿ ಅಂತ ಜ್ಯೂರಿಗಳಿಗೆ ಜ್ಞಾಪಿಸೋದು ಇದೆ. ಇದೇ ರೀತಿ ಆ ವರ್ಷ ಪೋಷಕ ನಟ ಪ್ರಶಸ್ತಿಗೆ ಬಹಳ ಬೇಡಿಕೆ ಇತ್ತು. ಕಾಂಪಿಟೇಷನ್ ಜಾಸ್ತಿ. ಯಾಕಂದ್ರೆ ಪೋಷಕ ನಟ ಅಂದ್ರೆ, ಹಾಸ್ಯ ಕಲಾವಿದರು, ಸಹ ನಟರು, ಖಳ ನಟರು ಬರ್ತಾರೆ. ಎಲ್ಲರೂ ಅದೇ ಕ್ಯಾಟಗರಿಯಲ್ಲಿ ಇರ್ತಾರೆ. ಸಾಮಾನ್ಯವಾಗಿ ಒಳ್ಳೆ ಕಲಾವಿದರೆಲ್ಲಾ ಆ ವಿಭಾಗದಲ್ಲಿರ್ತಾರೆ. ನಟ ಪ್ರಶಸ್ತಿಗೆ ಸ್ಟಾರ್‌ಗಳು, ಹೀರೊಗಳು ಇರ್ತಾರೆ. ಸ್ಟಾರ್ಸ್ ಅವಾರ್ಡ್ ಬಗ್ಗೆ ತಲೆ ಕೆಡಿಸಿಕೊಳ್ಳಲ್ಲ. ಹಾಗಾಗಿ ಅಲ್ಲಿ ಪೈಪೋಟಿ ಕಮ್ಮಿ. ಆದರೆ ಈ ವಿಭಾಗದಲ್ಲಿ ಪೈಪೋಟಿ ಹೆಚ್ಚು.
ರಂಗಾಯಣ ರಘುಗೆ ಪ್ರಶಸ್ತಿ ಸಿಕ್ಕಿತ್ತು
"ಆ ವರ್ಷ ಸ್ಪರ್ಧೆಯಲ್ಲಿ ದೊಡ್ಡ ದೊಡ್ಡ ದಿಗ್ಗಜ ನಟರಿದ್ದರು. ರಂಗಾಯಣ ರಘು, ಶ್ರೀನಿವಾಸ್ ಮೂರ್ತಿ, ಅವಿನಾಶ್ ಇದ್ದರು. ಅವಿನಾಶ್ ಅವರಿಗೆ ನಮ್ಮ 'ಕಂಠಿ' ಚಿತ್ರಕ್ಕೆ ಅವಾರ್ಡ್ ಕೊಡ್ಲೇಬೇಕಿತ್ತು. 'ರಾಕ್ಷಸ' ಚಿತ್ರದಿಂದ ರಂಗಾಯಣ ರಘು ಇದ್ದರು. ಅದ್ಭುತವಾಗಿ ಮಾಡಿದ್ದರು. ಫೈನಲ್ ಆಗಿ ಅವರಿಗೆ ಫಿಕ್ಸ್ ಆಗಿತ್ತು ಅನ್ನಿಸುತ್ತೆ. ನಂತರ ಅವರೇ ಬಿಟ್ಟುಕೊಟ್ರು ಅಂತ ಕೇಳ್ಪಟ್ಟೆ. ಜ್ಯೂರಿಗಳ ಬಳಿ ರಿಕ್ವೆಸ್ಟ್ ಮಾಡಿ ಹೊಸ ಹುಡುಗ ಅಂತನ ರಿಕ್ವೆಸ್ಟ್ ಮಾಡಿದ್ದರು. ಅದರ ಹಿಂದಿನ ವರ್ಷ ಕೂಡ ರಘು ಅವರಿಗೆ ಪ್ರಶಸ್ತಿ ಸಿಕ್ಕಿತ್ತು. ಹಾಗಾಗಿ ಅವ್ರು ಬಿಟ್ಟು ಕೊಟ್ಟಿದ್ದಕ್ಕೆ ನನಗೆ ಬಂತು."
ಅವಾರ್ಡ್‌ಗಳೇ ಬೇಡ ಅನ್ನಿಸುತ್ತೆ
"ಅದನ್ನೆಲ್ಲಾ ನೋಡಿದ್ಮೇಲೆ ಅವಾರ್ಡ್‌ಗಳೇ ಬೇಡ ಎನಿಸಿಬಿಡ್ತು. ಕೆಲವೊಮ್ಮೆ ಒಳ್ಳೆ ಜ್ಯೂರಿ ಇದ್ದಾಗ ಏನು ತೊಂದರೆ ಇಲ್ಲದೇ ಇದ್ದಾಗ, ರಾಜಕೀಯ ನಡೆಯದೇ ಇದ್ದಾಗ ಅರ್ಹರಿಗೆ ಸಿಗುತ್ತದೆ. ಎಲ್ಲಾ ಅವಾರ್ಡ್‌ಗಳು ಇದೇ ರೀತಿ ಕೊಡ್ತಾರೆ ಅನ್ನೋಕೆ ಸಾಧ್ಯವಿಲ್ಲ. ಆದರೆ ನನಗೆ ಸಾಕಾಯಿತು. ಆ ನಂತರ ಯಾವ ಅವಾರ್ಡ್ ಕೂಡ ಸಿಕ್ಕಿಲ್ಲ. ಸಿಕ್ಕಿಲ್ಲ ಅನ್ನುವುದಕ್ಕಿಂತ ಪ್ರಶಸ್ತಿ ಪಡೆಯುವಂತ ಅಭಿನಯ ಮಾಡಿಲ್ಲ ಅನ್ನಿಸುತ್ತೆ" ಎಂದು ಕಿಶೋರ್ ಹೇಳಿದ್ದಾರೆ.


Click it and Unblock the Notifications











