Kariya Re-release: ಅವತ್ತು ಥಿಯೇಟರ್‌ನಿಂದ 'ಕರಿಯ' ಚಿತ್ರ ಕಿತ್ತು ಹಾಕಿದ್ಯಾರು? 2ನೇ ಬಾರಿ ರಿಲೀಸ್ ಆಗಿದ್ದೇಕೆ?
ನಟ ದರ್ಶನ್ ಜೈಲಿನಲ್ಲಿದ್ದಾರೆ. ಇಂತಹ ಸಮಯದಲ್ಲೇ ಅವರು ನಟಿಸಿದ ಸೂಪರ್ ಹಿಟ್ 'ಕರಿಯ' ಸಿನಿಮಾ ಮರು ಬಿಡುಗಡೆಗೆ ಸಜ್ಜಾಗುತ್ತಿದೆ. ಜೋಗಿ ಪ್ರೇಮ್ ನಿರ್ದೇಶನದ 'ಕರಿಯ' ಸಿನಿಮಾ ದಶಕಗಳ ಹಿಂದೆ ಬಾಕ್ಸಾಫೀಸ್ ಶೇಕ್ ಮಾಡಿತ್ತು. ಎರಡೆರಡು ಬಾರಿ ರಿಲೀಸ್ ಆಗಿ ದಾಖಲೆ ಬರೆದಿತ್ತು.
ಮೊದಲಿಗೆ ಬಿಡುಗಡೆಯಾಗಿದ್ದ ಚಿತ್ರಕ್ಕೆ ಮಧ್ಯದಲ್ಲಿ ಸಮಸ್ಯೆ ಎದುರಾಗಿತ್ತು. ಹಾಗಾಗಿ ಮತ್ತೊಮ್ಮೆ ಚಿತ್ರವನ್ನು ತೆರೆಗೆ ತರಲಾಗಿತ್ತು. ಆಗ ಸತತ ಒಂದು ವರ್ಷ ಸಿನಿಮಾ ಪ್ರದರ್ಶನ ಕಂಡು ಹಿಟ್ ಆಗಿತ್ತು. ಅದರಲ್ಲೂ ಚಿತ್ರದ ಹಾಡುಗಳು ಇವತ್ತಿಗೂ ಅಭಿಮಾನಿಗಳು ಫೇವರಿಟ್ ಎನಿಸಿಕೊಂಡಿದೆ. 'ಮೆಜೆಸ್ಟಿಕ್' ಸಕ್ಸಸ್ ಬಳಿಕ ದರ್ಶನ್ ನಟಿಸಿದ ಒಂದೆರಡು ಚಿತ್ರಗಳು ಸದ್ದು ಮಾಡಿಲಿಲ್ಲ. ಆದರೆ 'ಕರಿಯ' ಹಿಟ್ ಆಗಿ ದರ್ಶನ್ ಕರಿಯರ್‌ಗೆ ಭದ್ರ ಬುನಾದಿ ಆಗಿತ್ತು.

2 ವರ್ಷಗಳ ಹಿಂದೆ ಫಿಲ್ಮಿಬೀಟ್ ಸಂದರ್ಶನದಲ್ಲಿ ನಿರ್ದೇಶಕ ಪ್ರೇಮ್ 'ಕರಿಯ' ಚಿತ್ರದ ಬಗ್ಗೆ ಸಾಕಷ್ಟು ಸಂಗತಿ ಹಂಚಿಕೊಂಡಿದ್ದರು. ಮೊದಲಿಗೆ ಸಿನಿಮಾ ಬಿಡುಗಡೆ ಆಗಿದ್ದಾಗ 56 ದಿನ ಪ್ರದರ್ಶನ ಕಂಡಿತ್ತು. ಬಳಿಕ 2ನೇ ಬಾರಿ ತೆರೆಕಂಡು ಸತತ 365 ದಿನ ಓಡಿ ಸದ್ದು ಮಾಡಿತ್ತು. ನಟ ದರ್ಶನ್‌ಗೆ ದೊಡ್ಡ ಮಾಸ್ ಅಭಿಮಾನಿಗಳನ್ನು ಹುಟ್ಟು ಹಾಕಿತು.
"ಆಗ ಸಿನಿಮಾ ಪ್ರದರ್ಶನ ವಿಚಾರದಲ್ಲಿ ಬಹಳ ರಾಜಕೀಯ ಇತ್ತು. ನಮ್ಮ 'ಕರಿಯ' ಸಿನಿಮಾ ಚೆನ್ನಾಗಿ ಪ್ರದರ್ಶನ ಕಾಣುತ್ತಿತ್ತು. ಆದರೆ ಅದನ್ನು ಕಿತ್ತು ಹಾಕಿ ಬೇರೆ ಸಿನಿಮಾ ರಿಲೀಸ್ ಮಾಡಿದ್ದರು. ಮೊದಲಿಗೆ ಸಿನಿಮಾ ಹಕ್ಕು ರಜಸ್ಸು ಕಂಬೈನ್ಸ್ ಬಳಿ ಇತ್ತು. ಬಳಿಕ ಇಕ್ಬಾಲ್ ಫಿಲ್ಮ್ಸ್ ಸಂಸ್ಥೆ ತೆಗೆದುಕೊಂಡರು. ಚೆನ್ನಾಗಿ ಪ್ರಚಾರ ಮಾಡಿ 2ನೇ ಬಾರಿ ರಿಲೀಸ್ ಮಾಡಿದರು. ಸಿನಿಮಾ ಹಿಟ್ ಆಗಿ ಭರ್ಜರಿ ಕಲೆಕ್ಷನ್ ಮಾಡಿತ್ತು" ಎಂದು ಪ್ರೇಮ್ ಹೇಳಿದ್ದರು.

"ಅವತ್ತಿನ ಕಾಲಕ್ಕೆ 'ಕರಿಯ' ಸಿನಿಮಾ 2.50 ಕೋಟಿ ರೂ. ಕಲೆಕ್ಷನ್ ಮಾಡಿತ್ತು. ವಿತರಕ ಇಕ್ಬಾಲ್ ಜೀವನವೇ ಆ ಚಿತ್ರದಿಂದ ಬದಲಾಗಿಬಿಟ್ಟಿತು. ಅದರಿಂದ ಸಾಕ ತೀರಿಸಿ ಮನೆ ತೆಗೆದುಕೊಂಡಿದ್ದರು. ಇದನ್ನು ಅವ್ರೇ ನನ್ನ ಬಳಿ ಹೇಳುತ್ತಿದ್ದರು. 'ಕರಿಯ' ಹಿಟ್ ಬಳಿಕ ಒಂದಷ್ಟು ಟೀಕೆಗಳು ಬಂದವು. ರೌಡಿಸಂ ಸಿನಿಮಾ ಮಾಡಿ ಅದೃಷ್ಟದಿಂದ ಗೆದ್ದ ಎಂದರು. ಅದನ್ನೇ ಸವಾಲಾಗಿ ಸ್ವೀಕರಿಸಿ ಹೊಸಬರ ತಂಡ ಕಟ್ಟಿಕೊಂಡು 'ಎಕ್ಸ್‌ಕ್ಯೂಸ್‌ಮಿ' ಎನ್ನುವ ಮ್ಯೂಸಿಕಲ್ ಲವ್ ಸ್ಟೋರಿ ಮಾಡಿ ತೋರಿಸಿದೆ" ಎಂದಿದ್ದರು.
'ಕರಿಯ' ಚಿತ್ರದ ಎಲ್ಲಾ ಹಾಡು ಹಿಟ್. ಅದರಲ್ಲಿ 'ಕೆಂಚಾಲೋ ಮಂಚಾಲೊ' ಅಭಿಮಾನಿಗಳ ಫೇವರಿಟ್. ಈ ಹಾಡಿನ ಸಾಹಿತ್ಯದ ಬಗ್ಗೆಯೂ ಪ್ರೇಮ್ ಮಾತನಾಡಿದ್ದರು. "ನಾನು ಮೊದಲ ಎರಡು ಸಾಲು ಬರೆದುಕೊಂಡಿದ್ದೆ. ಅದೇ ಬೇಕು ಎಂದು. ಗುರುಕಿರಣ್ ಸರ್ ಮನೆಯಲ್ಲಿ ಪ್ರತಿದಿನ ಬೆಳಗ್ಗೆ 5 ಗಂಟೆಗೆ ಟ್ಯೂನ್ ಹಾಕಲು ಕೂರುತ್ತಿದ್ದೆವು"
"ಗಾಂಧಿನಗರದಲ್ಲಿ ಬಾಲರಾಜ್ ಸರ್ ಆಫೀಸ್ ಇತ್ತು. ಅಲ್ಲಿ ಒಂದು ಸೇಠು ಹುಡುಗಿ ನಮ್ಮನ್ನ ನೋಡಿಕೊಂಡು ಓಡಾಡುತ್ತಿದ್ದಳು. ನಮ್ಮ ಹುಡುಗರು ರೇಗಿಸುತ್ತಿದ್ದರು. ನಾನು ನಾಗೇಂದ್ರ ಪ್ರಸಾದ್ ಅವರ ಬಳಿ 'ಕೆಂಚಾಲೋ ಮಂಚಾಲೊ' ಲಿರಿಕ್ಸ್ ಬರೆಸ್ತಿದ್ದೆ. ಅವ್ರು ಚೆನ್ನಾಗಿ ಬರೆದಿದ್ದರು. ಸೇಠು ಹುಡುಗಿ ಬುಟ್ಟಿಗೆ ಬೀಳ್ತಾ ಇದೆ ಅಂತಾ ಏನಾದರೂ ಬರೀರಿ ಅಂದೆ. ಕೂಡಲೇ ಅದೇ ಲೈನ್‌ಗೆ 'ಎತ್ತಾಕ್ಕೊಂಡ್ ಓಡೋಗೋ ಐಡಿಯಾ ಇದೆ' ಅಂತ ಅವ್ರು ಸೇರಿಸಿದ್ರು. ಹೀಗೆ ಸಾಲುಗಳು ಹುಟ್ಟಿಕೊಳ್ತು" ಎಂದಿದ್ದರು.
'ಕರಿಯ' ಚಿತ್ರದ ಟೈಟಲ್ ರೋಲ್‌ನಲ್ಲಿ ದರ್ಶನ್ ನಟಿಸಿದ್ದರು. ನಾಯಕಿಯಾಗಿ ಅಭಿನಯಶ್ರೀ ಮಿಂಚಿದ್ದರು. ಇನ್ನುಳಿದಂತೆ ಮೈಕೋ ನಾಗರಾಜ್, ಉಮೇಶ್ ಪುಂಗ, ಬಿ. ಜಯಶ್ರೀ ಸೇರಿದಂತೆ ಹಲವರು ನಟಿಸಿದ್ದರು. ಆನೇಕಲ್ ಬಾಲರಾಜ್ ನಿರ್ಮಾಣದ ಚಿತ್ರಕ್ಕೆ ಗುರುಕಿರಣ್ ಮ್ಯೂಸಿಕ್ ಕಂಪೋಸ್ ಮಾಡಿದ್ದರು. ಎಂ. ಆರ್ ಶ್ರೀನು ಛಾಯಾಗ್ರಹಣವಿತ್ತು. ಆಗಸ್ಟ್ 30ಕ್ಕೆ 4K ವರ್ಷನ್‌ನಲ್ಲಿ 'ಕರಿಯ' ಸಿನಿಮಾ ಮತ್ತೆ ತೆರೆಗೆ ಬರ್ತಿದೆ.


Click it and Unblock the Notifications











