ತಿಂಗಳ ಕಾಲ ಯಶ್ ಅಭಿಮಾನಿಗಳಿಗೆ ಸಾಲು ಸಾಲು ಹಬ್ಬ: ಆದರೆ ಆ ಆಸೆ ಮಾತ್ರ ಈಡೇರುತ್ತಲೇ ಇಲ್ಲ!
ರಾಕಿಂಗ್ ಸ್ಟಾರ್ ಅಭಿಮಾನಿಗಳು ಯಶ್19 ಅಪ್‌ಡೇಟ್ ಕೇಳಿ ಕೇಳಿ ಸುಮ್ಮನಾಗಿದ್ದಾರೆ. ಇತ್ತೀಚೆಗೆ ಬಿಜಿಎಸ್ ಉತ್ಸವದಲ್ಲಿ ಭಾಗಿಯಾಗಿದ್ದ ಯಶ್ ಸದ್ಯಕ್ಕೆ ಅಪ್‌ಡೇಟ್ ಇಲ್ಲ ಎನ್ನುವ ಅರ್ಥದಲ್ಲೇ ಮಾತನಾಡಿದ್ದಾರೆ. 'KGF'- 2 ಸಿನಿಮಾ ಬಂದೋಗಿ ಒಂದೂವರೆ ವರ್ಷ ಕಳೆದರೂ ಮುಂದಿನ ಸಿನಿಮಾ ಬಗ್ಗೆ ಯಶ್ ಸುಳಿವು ಬಿಟ್ಟುಕೊಟ್ಟಿಲ್ಲ. ಆದರೆ ತೆರೆಮರೆಯಲ್ಲಿ ಅದಕ್ಕಾಗಿ ಭರ್ಜರಿ ಕಸರತ್ತು ನಡೆಸುತ್ತಿದ್ದಾರೆ.
'KGF' ಸರಣಿ ಬಳಿಕ ಅದನ್ನು ಮೀರಿಸುವಂತಹ ಚಿತ್ರಕ್ಕಾಗಿ ಯಶ್ ಪ್ಲ್ಯಾನ್ ಮಾಡುತ್ತಿದ್ದಾರೆ. ಹಾಲಿವುಡ್ ರೇಂಜ್‌ಗೆ ಸಿನಿಮಾ ತೆರೆಗೆ ತರುವ ಸಾಧ್ಯತೆಯಿದೆ. ಅದೇ ಕಾರಣಕ್ಕೆ ಅಭಿಮಾನಿಗಳು ನೆಚ್ಚಿನ ನಟನ ಮುಂದಿನ ಸಿನಿಮಾ ಡೀಟೈಲ್ಸ್‌ಗಾಗಿ ಕಾಯುತ್ತಿದ್ದಾರೆ. ಸಿನಿಮಾ ಯಾವಾಗಾದ್ರೂ ಮಾಡಿ, ಕೊನೆ ಪಕ್ಷ ಯಾರೊಟ್ಟಿಗೆ ಮಾಡ್ತೀರಾ? ಅನ್ನೋದನ್ನಾದರೂ ಹೇಳಿ ಎಂದು ಕೇಳುತ್ತಿದ್ದಾರೆ.

ಅನ್ನ ಸಂಪೂರ್ಣವಾಗಿ ಬೇಯುವವರೆಗೂ ಬಡಿಸಬಾರದು. ಮುಂದಿನ ಸಿನಿಮಾ ವಿಚಾರಗಳೆಲ್ಲಾ ಪಕ್ಕಾ ಆದ್ಮೇಲೆ ಹೇಳ್ತೀನಿ ಎಂದು ರಾಕಿಂಗ್ ಸ್ಟಾರ್ ಹೇಳುತ್ತಾ ಬರುತ್ತಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಹ್ಯಾಷ್‌ಟ್ಯಾಗ್ ಯಶ್19 ಸದಾ ಕಾಲ ಟ್ರೆಂಡ್‌ನಲ್ಲಿರುತ್ತದೆ. ಕಳೆದ ವರ್ಷ ಯಶ್ ಹುಟ್ಟುಹಬ್ಬಕ್ಕೆ ಮುಂದಿನ ಸಿನಿಮಾ ಅಪ್‌ಡೇಟ್ ಸಿಗುತ್ತೆ ಎಂದು ಕೆಲವರು ಅಂದುಕೊಂಡಿದ್ದರು. ಆದರೆ ಈ ಬಗ್ಗೆ ಸುದೀರ್ಘ ಪತ್ರ ಬರೆದಿದ್ದ ಯಶ್, ಸ್ವಲ್ಪ ಸಮಯ ಕೊಡಿ ಎಂದಿದ್ದರು.
ಬಳಿಕ ಯಗಾದಿ, ವರಮಹಾಲಕ್ಷ್ಮಿ ಹಬ್ಬ, ದಸರಾ, ದೀಪಾವಳಿ ಸಂಭ್ರಮದಲ್ಲಿ ಅಪ್‌ಡೇಟ್ ಬರುತ್ತೆ ಎಂದು ಅಭಿಮಾನಿಗಳು ಕಾದಿದ್ದೇ ಬಂತು. ಅದರ ಸುಳಿವು ಸಿಗಲಿಲ್ಲ. ಇತ್ತೀಚೆಗೆ ಈ ಬಗ್ಗೆ ಮಾತನಾಡಿದ್ದ ಯಶ್, ನಾನು ಯಾವುದೇ ಅನೌನ್ಸ್‌ಮೆಂಟ್ ಅಂತ ಹೇಳಲಿಲ್ಲ. ಯಾರೋ ಕೆಲವರು ಪ್ರತಿ ಹಬ್ಬಕ್ಕೆ ಅಪ್‌ಡೇಟ್, ಅಪ್‌ಡೇಟ್ ಅಂದ್ರು. ಇದರಿಂದ ನಿಮ್ಮ ತಾಳ್ಮೆ ಕಮ್ಮಿಯಾಗಿದೆ ಅಷ್ಟೆ ಎಂದಿದ್ದರು.
ಮುಂದಿನ ಒಂದು ತಿಂಗಳ ಕಾಲ ಯಶ್ ಅಭಿಮಾನಿಗಳು ಸಾಲು ಸಾಲು ಸಂಭ್ರಮಾರಣೆಗೆ ಸಿದ್ಧರಾಗಿದ್ದಾರೆ. ಡಿಸೆಂಬರ್ ಮೊದಲ ವಾರ ಯಶ್ ಮಗಳು ಐರಾ ಹುಟ್ಟುಹಬ್ಬ. 2ನೇ ವಾರದಲ್ಲಿ ಯಶ್- ರಾಧಿಕಾ ಪಂಡಿತ್ ಮದುವೆ ವಾರ್ಷಿಕೋತ್ಸವ. ಕೊನೆ 2 ವಾರ ಯಶ್ ನಟನೆಯ 3 ಸೂಪರ್ ಹಿಟ್ ಸಿನಿಮಾಗಳ ವಾರ್ಷಿಕೋತ್ಸವ ಇದೆ. ಕೊನೆಗೆ ಜನವರಿ 8ಕ್ಕೆ ರಾಕಿಂಗ್ ಸ್ಟಾರ್ ಹುಟ್ಟಹಬ್ಬ ಬರಲಿದೆ. ಅದೇ ದಿನ ಯಶ್19 ಅಪ್‌ಡೇಟ್ ಸಿಗುತ್ತಾ? ಎಂದು ಮತ್ತೊಂದು ಅಭಿಮಾನಿಗಳು ಕಾದು ಕೂತಿದ್ದಾರೆ.
ಯಶ್ ನಟನೆಯ 'ಮಿ & ಮಿ ರಾಮಾಚಾರಿ' ಸಿನಿಮಾ 2014 ಡಿಸೆಂಬರ್ 25ರಂದು ರಿಲೀಸ್ ಆಗಿತ್ತು. ಈ ವರ್ಷ ಸಿನಿಮಾ 9 ವರ್ಷ ಪೂರೈಸಲಿದೆ. 2015 ಡಿಸೆಂಬರ್ 24ಕ್ಕೆ ಬಂದಿದ್ದ ಸಿನಿಮಾ 8ನೇ ವರ್ಷದ ವಾರ್ಷಿಕೋತ್ಸವ ಆಚರಿಸಿಕೊಳ್ಳಲಿದೆ. ಇನ್ನು 2018 ಡಿಸೆಂಬರ್ 21ರಂದು ತೆರೆಗಪ್ಪಳಿಸಿದ್ದ 'KGF' ಮೊದಲ ಭಾಗ 5 ವರ್ಷ ಪೂರೈಸಲಿದೆ.
'KGF' ಸರಣಿ ಸಿನಿಮಾಗಳಿಗಾಗಿ ಯಶ್ ಬರೋಬ್ಬರಿ ಐದಾರು ವರ್ಷ ವ್ಯಯಿಸಿದರು. ಕೋವಿಡ್ ಕಾರಣದಿಂದ ಸೀಕ್ವೆಲ್ ತೆರೆಗೆ ಬರುವುದು ತಡವಾಯಿತು. ಇಷ್ಟ ತಡವಾದರೂ ಮುಂದಿನ ಸಿನಿಮಾ ಯಾವುದೇ ಎನ್ನುವ ಬಗ್ಗೆ ಹೇಳುತ್ತಿಲ್ಲ ಎಂದು ಅಭಿಮಾನಿಗಳು ಬೇಸರಿಸಿಕೊಂಡಿದ್ದಾರೆ. ಇದೇ ವಿಚಾರ ಸೋಶಿಯಲ್ ಮೀಡಿಯಾದಲ್ಲಿ ಭಾರೀ ಚರ್ಚೆ ಆಗುತ್ತಿದೆ. ಕೆವಿಎನ್ ಪ್ರೊಡಕ್ಷನ್ಸ್ ಬ್ಯಾನರ್‌ನಲ್ಲಿ ರಾಕಿಂಗ್ ಸ್ಟಾರ್ ಮುಂದಿನ ಸಿನಿಮಾ ನಿರ್ಮಾಣವಾಗುತ್ತದೆ ಎನ್ನುವ ಊಹಾಪೋಹ ಇದೆ. ಇತ್ತೀಚೆಗೆ 'ಅನಿಮಲ್' ಸಿನಿಮಾ ಸುದ್ದಿಗೋಷ್ಠಿಯಲ್ಲಿ ನಿರ್ಮಾಪಕ ವೆಂಕಟ್ ಕೋಂನಕಿಗೆ ಇದೇ ಪ್ರಶ್ನೆ ಎದುರಾಯಿತು. ಆದರೆ ಅವರು ಈ ಬಗ್ಗೆ ಮಾತನಾಡಲಿಲ್ಲ. ಅದನ್ನು ಬೇರೆ ವೇದಿಕೆಯಲ್ಲಿ ಮಾತನಾಡೋಣ ಎಂದು ನುಣುಚಿಕೊಂಡುಬಿಟ್ಟರು.


Click it and Unblock the Notifications











