ಬಾಹುಬಲಿ'ಯನ್ನು ಬಗ್ಗುಬಡಿದ 'KGF'- 2 ಬಗ್ಗೆ ಈ ವಿಚಾರಗಳು ನಿಮಗೆ ಗೊತ್ತಾ?
ಪ್ರಶಾಂತ್ ನೀಲ್ ನಿರ್ದೇಶನದ 'KGF' ಸರಣಿ ಸಿನಿಮಾಗಳು ಬರೆದ ದಾಖಲೆ ಒಂದೆರಡಲ್ಲ. ರಾಕಿಭಾಯ್ ಆರ್ಭಟವನ್ನು ಅಭಿಮಾನಿಗಳು ಇನ್ನು ಮರೆತ್ತಿಲ್ಲ. ಹಲವು ವಿಚಾರಗಳಲ್ಲಿ ರಾಜಮೌಳಿ ನಿರ್ದೇಶನದ 'ಬಾಹುಬಲಿ' ಸರಣಿಯನ್ನು ಹಿಂದಿಕ್ಕಿ 'KGF' ದಾಖಲೆ ಬರೆದಿತ್ತು. ಖುದ್ದು ರಾಜಮೌಳಿ, ಪ್ರಭಾಸ್ 'KGF' ಆರ್ಭಟಕ್ಕೆ ಶಾಕ್ ಆಗಿದ್ದರು.
ಸರಿಯಾಗಿ 2 ವರ್ಷದ ಹಿಂದೆ ಎಲ್ಲಲ್ಲೂ 'KGF' ಫೀವರ್ ಜೋರಾಗಿತ್ತು. ಮಧ್ಯರಾತ್ರಿಯಿಂದಲೇ ಸಿನಿಮಾ ನೋಡಲು ಪ್ರೇಕ್ಷಕರು ಮುಗಿಬಿದ್ದರು. ಕರ್ನಾಟಕ ಮಾತ್ರವಲ್ಲ ದೇಶಾದ್ಯಂತ ಸಿನಿಮಾ ಬಾಕ್ಸಾಫೀಸ್ ಶೇಕ್ ಮಾಡಿತ್ತು. ಅಚ್ಚರಿ ಎನ್ನುವಂತೆ ಹಿಂದಿ ಬೆಲ್ಟ್‌ನಲ್ಲಿ ಸಿನಿಮಾ ದಾಖಲೆ ಬರೀತು. ರಾಕಿ ಭಾಯ್ ಆರ್ಭಟಕ್ಕೆ ತಮಿಳುನಾಡಿನಲ್ಲಿ 'ಬೀಸ್ಟ್' ಸಿನಿಮಾ ಮಕಾಡೆ ಮಲಗಿಬಿಡ್ತು. ಥಿಯೇಟರ್‌ಗಳಲ್ಲಿ ರಾಕಿ, ರಾಕಿ ಎನ್ನುವ ಜೈಕಾರ ಮಾರ್ದನಿಸಿತ್ತು.

'ಬಾಹುಬಲಿ' ಮೂಲಕ ಪ್ಯಾನ್ ಇಂಡಿಯಾ, ಸೀಕ್ವೆಲ್ ಕಾನ್ಸೆಪ್ಟ್ ಹೊಸ ರೀತಿಯಲ್ಲಿ ಚಿತ್ರರಂಗಕ್ಕೆ ಪರಿಚಯಿಸಿತ್ತು. ಅದನ್ನು ಮತ್ತೊಂದು ಹಂತಕ್ಕೆ ಕೊಂಡೊಯ್ದಿದ್ದು ಮಾತ್ರ 'KGF' ಸರಣಿ. ಇನ್ನು 'ಬಾಹುಬಲಿ' ಕಲಾವಿದರು, ತಂತ್ರಜ್ಞರು, ಬಜೆಟ್ ಎಲ್ಲಾ ವಿಚಾರದಲ್ಲೂ ಕನ್ನಡದ 'KGF' ಚಿಕ್ಕದು ಎನಿಸಿತ್ತು. ಆದರೆ ತೆರೆಮೇಲೆ ಮ್ಯಾಜಿಕ್ ಮಾತ್ರ 'ಬಾಹುಬಲಿ' ಮೀರಿಸಿಬಿಟ್ಟಿತ್ತು. ಪ್ರಶಾಂತ್ ನೀಲ್ ಟೇಕಿಂಗ್, ಯಶ್ ಪರ್ಫಾರ್ಮನ್ಸ್ ಜನ ಇನ್ನು ಮರೆತ್ತಿಲ್ಲ.
ತೆಲುಗು ಪ್ರೇಕ್ಷಕರು ಕೂಡ ರಾಕಿ ಭಾಯ್ ಆರ್ಭಟಕ್ಕೆ ಚಿತ್ರಕ್ಕೆ ಶರಣಾಗಿಬಿಟ್ಟರು. ಕನ್ನಡದ ಹೆಮ್ಮೆಯ ಸಿನಿಮಾ ಬಾಕ್ಸಾಫೀಸ್‌ನಲ್ಲಿ ಕೂಡ 'ಬಾಹುಬಲಿ'ಯನ್ನು ಹಿಂದಿಕ್ಕಿತ್ತು. ಒಟ್ಟಾರೆ ಕಲೆಕ್ಷನ್ ವಿಚಾರದಲ್ಲಿ 'KGF-2'ಗಿಂತ ಬಾಹುಬಲಿ'-2 ಮುಂದಿದೆ. ಆದರೆ ಕಲೆಕ್ಷನ್ ಮಾಡಿದ ವೇಗ, ಕ್ರೇಜ್ ವಿಚಾರಕ್ಕೆ ಬಂದರೆ 'KGF-2' ಮೊದಲ ಸ್ಥಾನದಲ್ಲಿ ನಿಲ್ಲುತ್ತದೆ.
ಅಂದಹಾಗೆ 'KGF-2' ಚಿತ್ರ ನಿರ್ಮಾಣ, ರಿಲೀಸ್, ಕಲೆಕ್ಷನ್ ವಿಚಾರದಲ್ಲಿ ಸಾಕಷ್ಟು ಇಂಟ್ರೆಸ್ಟಿಂಗ್ ಸಂಗತಿಗಳಿವೆ. ಅದರಲ್ಲಿ ಕೆಲವು ಸಂಗತಿಗಳನ್ನು ನೋಡೋಣ ಬನ್ನಿ.

ಟೀಸರ್ ದಾಖಲೆ
2 ವರ್ಷಗಳ ಹಿಂದೆ ಯಶ್ ಹುಟ್ಟುಹಬ್ಬದ ಸಂಭ್ರಮದಲ್ಲಿ 'KGF-2' ಟೀಸರ್ ರಿಲೀಸ್ ಆಗಿತ್ತು. ಆ ಸಣ್ಣ ಝಲಕ್ ನೀಡಿದ ಕಿಕ್ ಆ ಬಳಿಕ ಮತ್ಯಾವುದೇ ಸಿನಿಮಾ ಟೀಸರ್ ಕೊಟ್ಟಿಲ್ಲ. ಆ ಟೀಸರ್ ಕಟ್, ಬಿಜಿಎಂ ಇವತ್ತಿಗೂ ಸಿನಿರಸಿಕರ ಮನಸಿನಲ್ಲಿ ಉಳಿದುಬಿಟ್ಟಿದೆ. ಇನ್ನು 24 ಗಂಟೆಗಳಲ್ಲಿ ಅತಿಹೆಚ್ಚು ವೀವ್ಸ್ ಸಾಧಿಸಿ ಅಲ್ಲಿಯವರೆಗಿನ ದಾಖಲೆಗಳನ್ನು 'KGF-2' ಟೀಸರ್ ಅಳಿಸಿತ್ತು.
ಯಶ್ ಡೈಲಾಗ್ಸ್
'KGF' ಚಿತ್ರದಲ್ಲಿ ಯಶ್ ಬರೀ ಹೀರೊ ಆಗಿ ನಟಿಸಲಿಲ್ಲ. ತಮಗೆ ಬೇಕಾದಂತೆ ಚಿತ್ರವನ್ನು ತಿದ್ದಿ ತೀಡಿದರು. ಚಿತ್ರಕಥೆ, ಡೈಲಾಗ್ಸ್ ಎಲ್ಲಾ ವಿಚಾರದಲ್ಲೂ ಗಮನ ಹರಿಸಿದ್ದರು. 'KGF-2' ಚಿತ್ರದ ಕೆಲ ಡೈಲಾಗ್‌ಗಳನ್ನು ಯಶ್ ಬರೆದುಕೊಂಡಿದ್ದರು. ಇದನ್ನು ನಿರ್ದೇಶಕ ಪ್ರಶಾಂತ್ ನೀಲ್ ಕೂಡ ಒಪ್ಪಿಕೊಳ್ಳುತ್ತಾರೆ.
'KGF-2' ಬಜೆಟ್
'ಬಾಹುಬಲಿ'ಗಿಂತ ಯಾಕೆ 'KGF' ಸಿನಿಮಾ ದೊಡ್ಡದು ಎಂದರೆ ಮುಖ್ಯವಾಗಿ ಬಜೆಟ್. ಬಹಳ ಅದ್ಧೂರಿಯಾಗಿ ಮೂಡಿ ಬಂದಿದ್ದ ಚಿತ್ರವನ್ನು ಬಹಳ ಕಡಿಮೆ ಬಜೆಟ್‌ನಲ್ಲಿ ನಿರ್ಮಿಸಿದ್ದರು ಎಂದರೆ ನಂಬಲೇಬೇಕು. ಕನ್ನಡದ ಮಟ್ಟಿಗೆ ಅದು ಹೈ ಬಜೆಟ್ ಸಿನಿಮಾ ಆಗಿರಬಹುದು. ಆದರೆ ಬಾಲಿವುಡ್, ಟಾಲಿವುಡ್‌ಗೆ ಹೋಲಿಸಿದರೆ ಚಿಕ್ಕ ಬಜೆಟ್ ಸಿನಿಮಾ ಆಗಿತ್ತು. 'KGF'-2 ಚಿತ್ರವನ್ನು ಅಂದಾಜು 100 ಕೋಟಿ ರೂ. ಬಜೆಟ್‌ನಲ್ಲಿ ನಿರ್ಮಿಸಿದ್ದರು ಅಂದ್ರೆ ನಂಬಲೇಬೇಕು.
ಅಧೀರ ಲುಕ್
'KGF' ಮೊದಲ ಭಾಗದಲ್ಲಿ ಅಧೀರ ಯಾರು ಎನ್ನುವುದನ್ನು ರಿವೀಲ್ ಮಾಡಿರಲಿಲ್ಲ. ಆ ಪಾತ್ರದಲ್ಲಿ ಸಂಜಯ್ ದತ್ ನಟಿಸಬೇಕು ಎನ್ನುವುದು ನೀಲ್ ಆಸೆಯಾಗಿತ್ತು. ಚಾಪ್ಟರ್-1 ಸಕ್ಸಸ್ ಬಳಿಕ ಎಲ್ಲರೂ ಸೀಕ್ವೆಲ್‌ನಲ್ಲಿ ನಟಿಸೋಕೆ ಒಪ್ಪುವಂತಾಯಿತು. ಇನ್ನು ಅಧೀರ ಪಾತ್ರದಲ್ಲಿ ಸಂಜು ಬಾಬ ಲುಕ್ ಬಹಳ ಇಂಟ್ರೆಸ್ಟಿಂಗ್ ಆಗಿತ್ತು. ಆದರೆ ಹಾಲಿವುಡ್ 'ವೈಕಿಂಗ್ಸ್' ಸರಣಿಯ ಪಾತ್ರದಿಂದ ಪ್ರೇರಣಗೊಂಡು ಆ ಲುಕ್ ಟ್ರೈ ಮಾಡಲಾಗಿತ್ತು. ಇದೀಗ ಪ್ರಶಾಂತ್ ನೀಲ್ ಆರಂಭದಲ್ಲೇ ಹೇಳಿದ್ದರು.
ಹಿಂದಿ ವರ್ಷನ್ ದಾಖಲೆ
ಹೇಳಿ ಕೇಳಿ 'KGF' ಕನ್ನಡ ಸಿನಿಮಾ. ಆದರೆ ಸೀಕ್ವೆಲ್ ಸಂಪೂರ್ಣವಾಗಿ ಹಿಂದಿ ಸಿನಿಮಾ ಎನ್ನುವಂತೆ ದಾಖಲೆ ಬರೀತು. 21 ದಿನಗಳಲ್ಲಿ ಎಲ್ಲಾ ಬಾಲಿವುಡ್ ಸಿನಿಮಾಗಳ ದಾಖಲೆ ಮುರಿದು ಮೊದಲ ಸ್ಥಾನಕ್ಕೇರಿತ್ತು. 'ದಂಗಲ್' ದಾಖಲೆಯೂ ಧೂಳಿಪಟವಾಗಿತ್ತು. 'KGF' -2 ಹಿಂದಿ ವರ್ಷನ್ 21 ದಿನಗಳಲ್ಲಿ 391.65 ಕೋಟಿ ರೂ. ಕಲೆಕ್ಷನ್ ಮಾಡಿತ್ತು. 'ದಂಗಲ್' 387 ಕೋಟಿ ರೂ. ಅಷ್ಟೆ ಬಾಚಿತ್ತು.
10,000 ಸ್ಕ್ರೀನ್‌ಗಳಲ್ಲಿ ರಿಲೀಸ್
ಬಾಲಿವುಡ್ ಸಿನಿಮಾಗಳೇ 4 ಸಾವಿರ 5 ಸಾವಿರ ಸ್ಕ್ರೀನ್‌ಗಳಲ್ಲಿ ಬಿಡುಗಡೆಯಾಗುತ್ತಿದ್ದ ಸಮಯ ಅದು. ಆದರೆ 'KGF' -2 ವಿಶ್ವದಾದ್ಯಂತ ಬರೋಬ್ಬರಿ 10,000 ಸ್ಕ್ರೀನ್‌ಗಳಲ್ಲಿ ಬಿಡುಗಡೆಯಾಗಿದ್ದಾಗಿ ವರದಿಯಾಗಿತ್ತು. ಉತ್ತರ ಭಾರತದಲ್ಲಿ 4,400, ದಕ್ಷಿಣ ಭಾರತದ 2,600 ಸ್ಕ್ರೀನ್‌ಗಳಲ್ಲಿ ರಾಕಿಭಾಯ್ ಆರ್ಭಟ ಶುರುವಾಗಿತ್ತು.
1200 ಕೋಟಿ ರೂ. ಗಳಿಕೆ
ಕನ್ನಡದ ಸಿನಿಮಾಗಳು 100 ಕೋಟಿ ರೂ. ಕಲೆಕ್ಷನ್ ಮಾಡುವುದೇ ಕಷ್ಟ ಎನ್ನುವ ಸಮಯದಲ್ಲಿ 'KGF'-1 ಸಿನಿಮಾ 250 ಕೋಟಿ ಬಾಚಿತ್ತು. ಬಳಿಕ ಸೀಕ್ವೆಲ್ 1200 ಕೋಟಿ ರೂ. ಗೂ ಅಧಿಕ ಗ್ರಾಸ್ ಕಲೆಕ್ಷನ್ ಮಾಡಿ ಹುಬ್ಬೇರಿಸಿತ್ತು. ಸದ್ಯಕ್ಕೆ ಈ ದಾಖಲೆ ಮುರಿಯುವುದು ಬೇರೆ ಯಾವುದೇ ಚಿತ್ರಕ್ಕೆ ಕಷ್ಟವಾಗಬಹುದು.


Click it and Unblock the Notifications











