ಒಂದು ಕೆಜಿ ಟೊಮೆಟೊ ಬೆಲೆ ಎಷ್ಟು ಎಂಬ ಪ್ರಶ್ನೆಗೆ ಉತ್ತರಿಸಲು ಸುದೀಪ್ ಮಗಳು ತಬ್ಬಿಬ್ಬು!
ಇತ್ತೀಚೆಗೆ ನಟ ಕಿಚ್ಚ ಸುದೀಪ್ ಮಗಳು ಸಾನ್ವಿ ಸಿಕ್ಕಾಪಟ್ಟೆ ಟ್ರೋಲ್ ಆಗಿದ್ದರು. ಸರಿಗಮಪ ವೇದಿಕೆಗೆ ಬಂದಿದ್ದ ಸಾನ್ವಿ ಹೆಚ್ಚು ಇಂಗ್ಲೀಷ್‌ನಲ್ಲೇ ಮಾತನಾಡಿದ್ದರು. ಸುದೀಪ್ ಮಗಳಿಗೆ ಕನ್ನಡ ಕಲಿಸಿಲ್ವಾ? ಎಂದು ಕೆಲವರು ವ್ಯಂಗ್ಯವಾಡಿದ್ದರು. ಕನ್ನಡ ವೇದಿಕೆಯ ಕನ್ನಡ ಕಾರ್ಯಕ್ರಮದಲ್ಲಿ ಬರೀ ಇಂಗ್ಲೀಷ್‌ನಲ್ಲಿ ಮಾತನಾಡಿದರೆ ಹೇಗೆ? ಎಂದು ಕುಟುಕಿದ್ದರು.
ಸಾಕಷ್ಟು ಜನ ಸಾನ್ವಿ ಪರ ವಹಿಸಿ ಮಾತನಾಡಿದ್ದರು. ಆಕೆ ವೇದಿಕೆಯಲ್ಲಿ ಹಾಡಿದ್ದು ಕನ್ನಡ ಹಾಡು ಅಲ್ಲವೇ, ಅದಕ್ಕಿಂತ ಕನ್ನಡಾಭಿಮಾನ ಬೇಕಾ? ಮೊಸರಲ್ಲಿ ಕಲ್ಲು ಹುಡುಕುವ ಕೆಲಸ ಯಾಕೆ? ಚಿಕ್ಕ ಹುಡುಗಿ, ಮುಂದೆ ಇಂತಹ ತಪ್ಪು ಆಗುವುದಿಲ್ಲ, ಚಿಕ್ಕಂದಿನಿಂದ ಕಾನ್ವೆಂಟ್‌ನಲ್ಲಿ ಓದಿ ಬೆಳೆದ ಹುಡುಗಿ ಸಾನ್ವಿ. ಹಾಗಾಗಿ ಸಹಜವಾಗಿಯೇ ಇಂಗ್ಲೀಷ್ ಬಂದುಬಿಡುತ್ತದೆ ಏನು ಮಾಡೋಕ್ಕಾಗಲ್ಲ ಎಂದು ಸಾನ್ವಿ ಪರ ಬ್ಯಾಟ್ ಬೀಸಿದ್ದರು.

ಸ್ಟಾರ್ ಕಿಡ್ ಸಾನ್ವಿ ಅಪ್ಪ ಅಮ್ಮನ ಮುದ್ದಿನ ಮಗಳು. ಚಿಕ್ಕಂದಿನಿಂದ ತಂದೆ ಜೊತೆ ಸಾಕಷ್ಟು ಕಾರ್ಯಕ್ರಮಗಳಲ್ಲಿ ಭಾಗವಹಿಸುತ್ತಾ ಬಂದಿದ್ದಾರೆ. ಹಾಗಾಗಿ ಆಕೆ ಎಲ್ಲೇ ಹೋದರು ಅಭಿಮಾನಿಗಳು ಗುರುತು ಹಿಡಿಯುತ್ತಾರೆ. ಮುಗಿಬಿದ್ದು ಜೊತೆ ನಿಂತು ಫೋಟೋ ತೆಗೆಸಿಕೊಳ್ಳಲು ಮುಂದಾಗುತ್ತಾರೆ. ಒಳ್ಳೆ ಗಾಯಕಿ ಕೂಡ ಆಗಿರುವ ಸಾನ್ವಿ ಶೀಘ್ರದಲ್ಲೇ ಚಿತ್ರರಂಗದಲ್ಲಿ ಮಿಂಚಲು ಸಿದ್ಧರಾಗಿದ್ದಾರೆ.
ಅತ್ತೆ ಮಗ ಸಂಚಿತ್ ಸಂಜೀವ್ ನಟನೆಯ 'ಜಿಮ್ಮಿ' ಚಿತ್ರದ ಟೈಟಲ್ ಟೀಸರ್‌ಗೆ ಸಾನ್ವಿ ಹಾಡಿದ್ದರು. ಇನ್ನು 'ದಬಾಂಗ್- 3' ಚಿತ್ರದ ಹಾಡೊಂದಕ್ಕೆ ಟ್ರ್ಯಾಕ್ ಕೂಡ ಹಾಡಿದ್ದೆ. ಅದನ್ನು ಸಲ್ಮಾನ್ ಖಾನ್ ಬಹಳ ಮೆಚ್ಚಿದ್ದರು ಎಂದು ಸ್ವತಃ ಸಾನ್ವಿ ಇತ್ತೀಚೆಗೆ ಹೇಳಿಕೊಂಡಿದ್ದರು. ಹೈದರಾಬಾದ್ ಅನ್ನಪೂರ್ಣ ಆಕ್ಟಿಂಗ್ ಸ್ಕೂಲ್‌ನಲ್ಲಿ ಸಾನ್ವಿ ನಟನೆಯ ತರಬೇತಿ ಪಡೆದಿದ್ದಾರೆ. ನನಗೆ ನಾಯಕಿಯಾಗಿ ನಟಿಸೋಕೆ ಇಷ್ಟವಿಲ್ಲ, ಸಾಕಷ್ಟು ಜನ ಅಭಿಮಾನಿಗಳು ನೆಗೆಟಿವ್ ರೋಲ್ ಸೂಟ್ ಆಗುತ್ತದೆ. ಅಂಥದ್ದೇ ಪಾತ್ರ ಮಾಡಿ ಎನ್ನುತ್ತಾರೆ. ಅಂತಹ ಅವಕಾಶ ಸಿಕ್ಕರೆ ನೋಡೋಣ ಎಂದಿದ್ದರು.
ಮೊದಲೇ ಹೇಳಿದಂತೆ ಸಾನ್ವಿ ಬಹಳ ಮುದ್ದಿನ ಮಗಳು. ಯಾವತ್ತು ದಿನಸಿ, ತರಕಾರಿ ತರೋಕೆ ಮಾರ್ಕೆಟ್‌ಗೆ ಹೋಗೋದು ಕೂಡ ಕಮ್ಮಿ ಎಂದು ಸಂದರ್ಶನವೊಂದರಲ್ಲಿ ಸಾನ್ವಿ ಹೇಳಿದ್ದಾರೆ. ಒಂದು ಕೆಜಿ ಟೊಮೆಟೊ ಬೆಲೆ ಎಷ್ಟು ಗೊತ್ತಾ? ಎಂದು ನಿರೂಪಕಿ ಪ್ರಶ್ನೆ ಕೇಳಿದ್ದಾರೆ. ಆದರೆ ಉತ್ತರಿಸೋಕೆ ಸಾನ್ವಿ ಬಹಳ ಕಷ್ಟಪಟ್ಟಿದ್ದಾರೆ. ನನಗೆ ಗೊತ್ತಿಲ್ಲ, ಅಂದಾಜು 200 ರೂಪಾಯಿ, 150 ರೂಪಾಯಿ ಅಥವಾ 100 ರೂಪಾಯಿ ಇರಬಹುದಾ? ಎಂದು ಸಾನ್ವಿ ಹೇಳಿದ್ದಾರೆ.
ಮಾತು ಮುಂದುವರೆಸಿರುವ ನಿರೂಪಕಿ "ಪುಣ್ಯ, ಕೆಜಿ ಟೊಮೆಟೊ 500 ರೂಪಾಯಿ ಎಂದು ನೀವು ಹೇಳಿದ್ದರೆ ಸಮಸ್ಯೆ ಆಗುತ್ತಿತ್ತು" ಎಂದು ನಕ್ಕಿದ್ದಾರೆ. ಏಯ್ ಟೊಮೆಟೊ ಕೆಜಿಗೆ 500 ರೂಪಾಯಿ ಯಾಕೆ ಇರುತ್ತೆ ಬಿಡಿ ಎಂದು ಹೇಳಿ ಸಾನ್ವಿ ಅದಕ್ಕೆ ಫುಲ್‌ಸ್ಟಾಪ್ ಇಟ್ಟಿದ್ದಾರೆ. ಅರೇ ಒಂದು ಕೆಜಿ ಟೊಮೊಟೊ ಬೆಲೆ ಎಷ್ಟು ಅಂತ ಹೇಳುವುದಕ್ಕೂ ಸಾನ್ವಿ ಕಷ್ಟಪಡ್ತಾರಲ್ಲ, ಎಂದು ಕೆಲವರು ಕಾಮೆಂಟ್ ಮಾಡುತ್ತಿದ್ದಾರೆ.
ಇನ್ನು ನಟ ಸುದೀಪ್ 'ಮ್ಯಾಕ್ಸ್' ಸಿನಿಮಾ ಸಕ್ಸಸ್ ಬಳಿಕ 'ಬಿಲ್ಲ ರಂಗ ಬಾಷ' ಸಿನಿಮಾ ಆರಂಭಿಸಲು ಮುಂದಾಗಿದ್ದಾರೆ. ಇತ್ತೀಚೆಗೆ ಸಿಸಿಎಲ್ ಸರಣಿಯಲ್ಲಿ ಯಶಸ್ವಿಯಾಗಿ ಕರ್ನಾಟಕ ಬುಲ್ಡೋಜರ್ಸ್ ತಂಡವನ್ನು ಅವರು ಮುನ್ನಡೆಸಿದ್ದರು. 'ಮ್ಯಾಕ್ಸ್' ಸೀಕ್ವೆಲ್ ಮಾಡಲು ಮನಸ್ಸು ಮಾಡಿದ್ದಾರೆ. ಆದಷ್ಟು ಬೇಗ ಹೊಸ ಸಿನಿಮಾ ಆರಂಭಿಸಿ ಬೇಗ ರಿಲೀಸ್ ಮಾಡಿ ಎಂದು ಅಭಿಮಾನಿಗಳು ಕೇಳುತ್ತಿದ್ದಾರೆ. ಏಪ್ರಿಲ್‌ನಲ್ಲೇ 'ಬಿಲ್ಲ ರಂಗ ಬಾಷ' ಚಿತ್ರ ಸೆಟ್ಟೇರುವ ಸಾಧ್ಯತೆಯಿದೆ.


Click it and Unblock the Notifications











