ನನ್ನ ಕ್ಲಾಸ್‌ಮೇಟ್ ಹುಡ್ಗಿ ಅವತ್ತು ಇನ್ವಿಜಿಲೇಟರ್ ಆಗಿ ಬಂದ್ಲು, ಅವ್ಳ ಮಾತು ಕೇಳಿ ಎಕ್ಸಾಂ ಬರೀಲಿಲ್ಲ; ಕೋಮಲ್
ನವರಸ ನಾಯಕ ಜಗ್ಗೇಶ್ ಸಹೋದರ ಕೋಮಲ್ ಕೂಡ ಕನ್ನಡ ಸಿನಿಮಾಗಳಲ್ಲಿ ಮೋಡಿ ಮಾಡಿದವರು. ಒಂದ್ಕಾಲದಲ್ಲಿ ಹಾಸ್ಯ ಪಾತ್ರಗಳಲ್ಲಿ ನಟಿಸುತ್ತಿದ್ದವರು ಬಳಿಕ ಹೀರೊ ಆಗಿ ಕೂಡ ಅದೃಷ್ಟ ಪರೀಕ್ಷಿಸಿಕೊಂಡಿದ್ದರು. 'ತೆನಾಲಿ ಡಿಎ ಎಲ್‌ಎಲ್‌ಬಿ' ಸಿನಿಮಾ ಮೂಲಕ ಮತ್ತೆ ಪ್ರೇಕ್ಷಕರನ್ನು ರಂಜಿಸಲು ಕೋಮಲ್ ಸಿದ್ಧತೆ ನಡೆಸಿದ್ದಾರೆ.
ಚಿತ್ರದಲ್ಲಿ ಕೋಮಲ್ ವಕೀಲನ ಪಾತ್ರದಲ್ಲಿ ನಟಿಸುತ್ತಿದ್ದಾರೆ. ನಿಜ ಜೀವನದಲ್ಲಿ ಕೂಡ ಅವರು ಎಲ್‌ಎಲ್‌ಬಿ ಮುಗಿಸಿ ವಕೀಲರಾಗಿಬೇಕಿತ್ತು. ತಂದೆಗೆ ಕೋಮಲ್ ಅವರನ್ನು ವಕೀಲನಾಗಿ ಮಾಡುವ ಆಸೆಯಿತ್ತು. ಅವರು ಕೂಡ ವಿದ್ಯಾಭ್ಯಾಸದಲ್ಲಿ ಮುಂದಿದ್ದರು. ದ್ವಿತೀಯ ವರ್ಷ ಎಎಲ್‌ಬಿ ಓದುವಾಗಲೇ ಅಣ್ಣನ ಜೊತೆ 'ಸೂಪರ್ ನನ್ಮಗ' ಚಿತ್ರದ ಪಾತ್ರವೊಂದರಲ್ಲಿ ನಟಿಸಿದ್ದರು. ಬಳಿಕ ಸಾಲು ಸಾಲು ಸಿನಿಮಾಗಳಲ್ಲಿ ಬಣ್ಣ ಹಚ್ಚಲು ಆರಂಭಿಸಿದರು. ಸಿನಿಮಾ ಕಡೆ ಮುಖ ಮಾಡಿದ ಬಳಿಕ ಓದಿನ ಕಡೆ ಹೆಚ್ಚು ಗಮನ ಹರಿಸಲಿಲ್ಲ.

ಕೋಮಲ್ ಅವತ್ತು ಸಿನಿಮಾ ಕಡೆ ಬರದೇ ಎಲ್‌ಎಲ್‌ಬಿ ಮುಗಿಸಿ ವಕೀಲನಾಗಿದ್ದರೆ ಇವತ್ತು ಜಡ್ಜ್ ಆಗಿ ಇರುತ್ತಿದ್ದ ಎಂದು ಜಗ್ಗೇಶ್ ಬೇಸರ ವ್ಯಕ್ತಪಡಿಸಿದ್ದಾರೆ. 'ತೆನಾಲಿ ಡಿಎ ಎಲ್‌ಎಲ್‌ಬಿ' ಚಿತ್ರದ ಮುೂಹೂರ್ತ ಸಮಾರಂಭದಲ್ಲಿ ಭಾಗಿ ಆಗಿ ಈ ವಿಚಾರವನ್ನು ಜಗ್ಗೇಶ್ ಹೇಳಿದ್ದರು. ಅವನ ಸಹಪಾಠಿಗಳೆಲ್ಲಾ ಇವತ್ತು ಜಡ್ಜ್‌ಗಳಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಕೋಮಲ್ ಕೂಡ ಅದೇ ಸ್ಥಾನದಲ್ಲಿ ಇರಬೇಕಿತ್ತು ಎಂದಿದ್ದಾರೆ. ಇದೇ ವಿಚಾರವಾಗಿ ಕೋಮಲ್ ಇಂಟ್ರೆಸ್ಟಿಂಗ್ ಸಂಗತಿ ಬಿಚ್ಚಿಟ್ಟಿದ್ದಾರೆ. ಯಾಕೆ ಓದು ಅರ್ಧಕ್ಕೆ ನಿಲ್ಲಿಸಿದ್ದು ಎನ್ನುವುದನ್ನು ವಿಶ್ವವಾಣಿ ಯೂಟ್ಯೂಬ್ ಚಾನಲ್ ಸಂದರ್ಶನದಲ್ಲಿ ವಿವರಿಸಿದ್ದಾರೆ.
ನಾನು ವಿದ್ಯಾಭ್ಯಾಸದಲ್ಲಿ ಬಹಳ ಮುಂದಿದ್ದೆ. 2ನೇ ವರ್ಷ ಎಲ್‌ಎಲ್‌ಬಿ ಮುಗಿಸಿ ರಜೆ ಸಮಯದಲ್ಲಿ 'ಸೂಪರ್ ನನ್ಮಗ' ಚಿತ್ರದಲ್ಲಿ ಮೊದಲ ಬಾರಿ ನಟಿಸಿದ್ದೆ ಎಂದು ಕೋಮಲ್ ನೆನಪಿಸಿಕೊಂಡಿದ್ದಾರೆ. "ಸಿನಿಮಾ ಬಿಡುಗಡೆಯಾದಾಗ ಸ್ನೇಹಿತರೆಲ್ಲಾ ನೋಡಿ ಮೆಚ್ಚಿಕೊಂಡ್ರು. ಅದು ನನ್ನ ತಲೆಯಲ್ಲಿ ಕೂತುಬಿಡ್ತು. ಬಳಿಕ 'ಶಿವಣ್ಣ', 'ಮಿಲ್ಟ್ರಿ ಮಾವ' ಚಿತ್ರಗಳಲ್ಲಿ ನಟಿಸಿದೆ. 'ಮಿಲ್ಟ್ರಿ ಮಾವ' ಸಿನಿಮಾ ಪೋಸ್ಟರ್ ನಮ್ಮ ಕಾಲೇಜ್ ಮುಂದೆ ಹಾಕಿದ್ದರು. ಅದ್ರಲ್ಲಿ ನನ್ನ ಫೋಟೊಗಳನ್ನು ನೋಡಿ ಸ್ನೇಹಿತರೆಲ್ಲಾ ಮಾತನಾಡಿದ್ರು.. ಅದು ನನ್ನ ತಲೆಗೆ ಹತ್ತಿಬಿಡ್ತು. ಹಾಗಾಗಿ ಓದಿನ ಕಡೆ ಗಮನ ಕಮ್ಮಿ ಆಯ್ತು" ಎಂದು ತಿಳಿಸಿದ್ದಾರೆ.

ಬಳಿಕ ಪರೀಕ್ಷೆ ಸರಿಯಾಗಿ ಬರೆಯದೇ ಹಿಂದೆಬಿದ್ದೆ. 5ನೇ ವರ್ಷದಲ್ಲಿ 4 ಸಬ್ಜೆಕ್ಟ್ ಅಲ್ಲಿ 1 ಕ್ಲಿಯರ್ ಮಾಡ್ದೆ, ಇನ್ನು 3 ಬಾಕಿ ಉಳೀತು ಎಂದು ಕೋಮಲ್ ಹೇಳಿದ್ದಾರೆ. "9ರಿಂದ 10 ವರ್ಷಗಳ ಬಳಿಕ ನನ್ನ ಸ್ನೇಹಿತರೆಲ್ಲಾ ವಕೀಲರಾಗಿದ್ರು.. ನನ್ನನ್ನು ಎಕ್ಸಾಂ ಕಟ್ಟಿ ಬರೆಯೋಕೆ ಹೇಳಿದ್ರು.. ಪರೀಕ್ಷೆ ಬರೆಯಲು ಹೋದಾಗ ನನ್ನ ಕ್ಲಾಸ್‌ಮೇಟ್ ಹುಡುಗಿ ಒಬ್ಳು ಇನ್ವಿಜಿಲೇಟರ್ ಆಗಿ ಬಂದ್ಲು.. ನನ್ನ ನೋಡಿ ಓಹ್ ಮೈ ಗಾಡ್ ಯೂ ಸ್ಟಿಲ್ ರೈಟಿಂಗ್ ಎಕ್ಸಾಂ ಅಂದ್ಲು. ಅದನ್ನು ಕೇಳಿ ನನಗೆ ಅರಗಿಸಿಕೊಳ್ಳಲು ಸಾಧ್ಯವಾಗ್ಲಿಲ್ಲ. ಇನ್ನು ಓದ್ತಿದ್ದೀಯಾ, ಅಂತಹ ಪೆದ್ದನಾ ನೀನು ಎನ್ನುವಂತೆ ಮಾತಾಡಿಬಿಟ್ಲು. ನ್ಯಾನ್ಸಿ ಅಂತ ಆಕೆ ಹೆಸ್ರು, ಈಗ ದೊಡ್ಡ ಅಡ್ವೊಕೇಟ್ ಆಗಿದ್ದಾರೆ. ಆ ಮಾತು ಕೇಳಿ ಪರೀಕ್ಷೆ ಬರೆಯದೇ ಬಂದುಬಿಟ್ಟೆ, ಆ ಸಣ್ಣ ಈಗೋ ಕಾರಣಕ್ಕೆ ಪರೀಕ್ಷೆ ಬರೆಯಲಿಲ್ಲ. ಬರೆದು ಪಾಸ್ ಆಗಿದ್ರೆ ನಾನು ಅಡ್ವೋಕೇಟ್ ಆಗಿ ಇರ್ತಿದ್ರೆ" ಎಂದಿದ್ದಾರೆ.
ದೊಡ್ಡ ಅಡ್ವೋಕೇಟ್ ಆಗ್ತಿದ್ನೋ ಇಲ್ವೋ, ಅಡ್ವೊಕೇಟ್ ಅಂತೂ ಆಗಿರ್ತಿದ್ದೆ. ನಾನು ದೊಡ್ಡ ಜಡ್ಜ್ ಆಗಬೇಕಿತ್ತು ಅಂತ ಅಣ್ಣ ಶಾಸ್ತ್ರ ನೋಡಿ ಹೇಳ್ತಾರೆ. ಜಡ್ಜ್ ಆಗುವುದೆಲ್ಲಾ ಅಷ್ಟು ಸುಲಭ ಅಲ್ಲ. ಒಟ್ನಲ್ಲಿ ಓದಿನಲ್ಲಿ ನಾನು ಮುಂದಿದ್ದೆ. ಆದರೆ ಸಿನಿಮಾ ಹುಚ್ಚು ಹತ್ತಿಸಿಕೊಂಡು ಹಿಂದೆಬಿದ್ದೆ ಎಂದು ಕೋಮಲ್ ವಿವರಿಸಿದ್ದಾರೆ.


Click it and Unblock the Notifications