'ಕೃಷ್ಣನ್ ಲವ್ ಸ್ಟೋರಿ' ಸಿನಿಮಾ ಯಾರ ನಿಜ ಜೀವನದ ಕಥೆ ಗೊತ್ತಾ?
ಶಶಾಂಕ್ ನಿರ್ದೇಶನದಲ್ಲಿ ಅಜಯ್ ರಾವ್ ಹಾಗೂ ರಾಧಿಕಾ ಪಂಡಿತ್ ನಟನೆಯ 'ಕೃಷ್ಣನ್ ಲವ್ ಸ್ಟೋರಿ' ಸಿನಿಮಾ ಸೂಪರ್ ಹಿಟ್ ಆಗಿತ್ತು. ಉದಯ್ ಕೆ ಮೆಹ್ತಾ ಹಾಗೂ ಮೋಹ್ ನಾಯ್ಕ್ ಸಿನಿಮಾ ನಿರ್ಮಾಣ ಮಾಡಿದ್ದರು. ಶ್ರೀಧರ್ ವಿ. ಸಂಭ್ರಮ್ ಸಂಗೀತ ಚಿತ್ರಕ್ಕೆ ಪ್ಲಸ್ ಆಗಿತ್ತು.
ಒಂದು ನೈಜ ಘಟನೆಯ ಎಳೆಯನ್ನು ತೆಗೆದುಕೊಂಡು ನಿರ್ದೇಶಕ ಶಶಾಂಕ್ ಸಿನಿಮಾ ಮಾಡಿದ್ದರು. 'ಮೊಗ್ಗಿನ ಮೊನಸ್ಸು' ಸೂಪರ್ ಹಿಟ್ ಬೆನ್ನಲ್ಲೇ 'ಕೃಷ್ಣನ್ ಲವ್ ಸ್ಟೋರಿ' ಬಂದು ಗೆದ್ದಿತ್ತು. ಅಂದಹಾಗೆ ಈ ಸಿನಿಮಾ ಇದೀಗ 15 ವರ್ಷ ಪೂರೈಸಿದೆ. ಜೂನ್ 18, 2010ರಂದು ಈ ಸಿನಿಮಾ ತೆರೆಗೆ ಬಂದಿತ್ತು. ಈ ಸಂಭ್ರಮವನ್ನು ನಿರ್ದೇಶಕ ಶಶಾಂಕ್ ನೆನಪಿಸಿಕೊಂಡು ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದ್ದಾರೆ.

ಒಂದೇ ಹುಡುಗಿಯನ್ನು ಇಬ್ಬರು ಹುಡುಗರು ಪ್ರೀತಿಸುವುದು, ಅಥವಾ ಒಬ್ಬ ಹುಡುಗಿಯನ್ನು ಇಬ್ಬರು ಹುಡುಗಿಯರು ಪ್ರೀತಿಸುವ ಕಥೆಗಳನ್ನು ಕೇಳಿರುತ್ತೇವೆ, ನೋಡಿರುತ್ತೇವೆ. ಇಂತಹ ಕಥೆಗಳು ಸಿನಿಮಾಗಳಾಗಿ ಬಂದಿದೆ. 'ಕೃಷ್ಣನ್ ಲವ್ ಸ್ಟೋರಿ'ಯಲ್ಲಿ ಕೂಡ ಅದೇ ಹಳೇ ಸ್ಟೋರಿ ಇತ್ತು. ಆದರೆ ಅದು ವಿಭಿನ್ನವಾಗಿತ್ತು, ಬಹಳ ತಾಜಾ ಎನಿಸುವಂತಿತ್ತು. ಪ್ರೇಕ್ಷಕರ ನಿರೀಕ್ಷೆಯನ್ನು ಸುಳ್ಳಾಗಿಸುತ್ತಾ ಸಿನಿಮಾ ಆವರಿಸಿಕೊಂಡಿತ್ತು.
ಶಶಾಂಕ್ ಇಂಥಾದೊಂದು ಸಿನಿಮಾ ಮಾಡಲು ಅವರ ಸ್ನೇಹಿತ ಹರ್ಷನ ಬದುಕಿನಲ್ಲಿ ನಡೆದ ಕತೆಯೇ ಸ್ಫೂರ್ತಿ. 'ಮೊಗ್ಗಿನ ಮನಸ್ಸು' ಚಿತ್ರದಲ್ಲಿ ಹರ್ಷ ಸಣ್ಣದೊಂದು ಪಾತ್ರದಲ್ಲಿ ನಟಿಸಿದ್ದರು. ಒಮ್ಮೆ ನಿರ್ದೇಶಕ ಶಶಾಂಕ್ ಸ್ನೇಹಿತ ಹರ್ಷ ಜೊತೆ ಕೊಲ್ಲೂರು ದೇವಸ್ಥಾನಕ್ಕೆ ಹೋಗಿ ಬರುವಾಗ 'ಕೃಷ್ಣನ್ ಲವ್ ಸ್ಟೋರಿ' ಹುಟ್ಟಿತ್ತು. ಕಾರಿನಲ್ಲಿ ಸುಮ್ಮನೆ ಮಾತನಾಡುತ್ತಾ ಬರುವಾಗ ಹರ್ಷ ತಮ್ಮ ಲವ್ ಸ್ಟೋರಿ ಹೇಳಿದ್ದರು. ಅದನ್ನೇ ಆಧರಿಸಿ ಶಶಾಂಕ್ ಕಥೆ ಮಾಡಿದ್ದರು. ಮುಂದೆ ಹರ್ಷನ್ ಲವ್ ಸ್ಟೋರಿ ಕೃಷ್ಣ ಲವ್ ಸ್ಟೋರಿ ಆಗಿತ್ತು.
ಸಿನಿಮಾ ಬಿಡುಗಡೆ ಸಮಯದಲ್ಲಿ ಕೂಡ ಶಶಾಂಕ್ ಕಥೆ ಹುಟ್ಟಿದ ಬಗೆ ಹೇಳಿದ್ದರು. ಗೌರೀಶ್ ಅಕ್ಕಿ ಯೂಟ್ಯೂಬ್ ಚಾನಲ್ ಸಂದರ್ಶನದಲ್ಲಿ ಈ ಬಗ್ಗೆ ವಿವರವಾಗಿ ಹಿಂದೆ ಮಾತನಾಡಿದ್ದರು. "ನಾನು ಕಾರಿನಲ್ಲಿ ಬರ್ತಾ ಹರ್ಷನ ಹಳೇ ಲವ್ ಸ್ಟೋರಿ ಏನಾದರೆ ಇದ್ದೆ ಹೇಳೋ ಕೇಳೋಣ ಅಂದೆ. ಆಗ ಅವ್ನು ಅಯ್ಯೋ ಸರ್, ನಮ್ ಹುಡುಗಿ ನನಗೆ ಹಿಂದೆ ಕೈಕೊಟ್ಟುಬಿಟ್ಲು ಅಂದ. ಏನು ಕಥೆ ಅಂದಾಗ ಈ ಸ್ಟೋರಿ ರಿವೀಲ್ ಆಗಿತ್ತು" ಎಂದು ಶಶಾಂಕ್ ನೆನಪಿಸಿಕೊಂಡಿದ್ದರು.
"ಹರ್ಷನ ನಿಜಜೀವನದ ಕಥೆಯಲ್ಲಿ ಅವ್ನು ಒಂಉ ಹುಡುಗಿಯನ್ನು ಲವ್ ಮಾಡಿದ್ದ. ಬಳಿಕ ಆತನ ಸ್ನೇಹಿತ ಕೂಡ ಆಕೆಯನ್ನೇ ಲವ್ ಮಡಿದ್ದಾನೆ. ಒಮ್ಮೆ ಇದ್ದಕ್ಕಿದಂತೆ ಆ ಹುಡುಗಿ ಕಾಣೆಯಾಗಿದ್ದಳು. ಇವನ ಫ್ರೆಂಡ್ ಜೊತೆ ಓಡಿ ಹೋಗಿದ್ದಳು. ಇವನ ಜೊತೆ ಚೆನ್ನಾಗಿಯೇ ಇದ್ದು ಮತ್ತೊಬ್ಬನ ಜೊತೆ ಓಡಿ ಹೋಗಿ ಮದುವೆ ಆಗಿದ್ದಳಂತೆ. ಬಳಿಕ ಇವನಿಗೆ ಗೊತ್ತಾಗಿರುವ ವಿಷಯ, ಆ ಹುಡುಗ ಆರ್ಥಿಕವಾಗಿ ಚೆನ್ನಾಗಿದ್ದನಂತೆ. ಇವ್ನು ಕೆಲಸ ಕಾರ್ಯ ಇಲ್ಲದೇ ಓಡಾಡಿಕೊಂಡಿದ್ದ. ಹಾಗಾಗಿ ಆ ಹುಡುಗಿ ಇವನನ್ನು ಬಿಟ್ಟು ಅವನನ್ನು ಮದುವೆ ಆಗಿದ್ದಳು" ಎಂದು ಹರ್ಷನ ಕಥೆಯನ್ನು ಶಶಾಂಕ್ ಹೇಳಿದ್ದರು.
ಮುಂದೆ ಈ ಕಥೆ ಹೇಗೆ ಸಿನಿಮಾ ರೂಪ ಪಡೆಯಿತು. ಒರಿಜಿನಲ್ ಕಥೆಯಿಂದ ಸಿನಿಮಾ ಕಥೆಯಲ್ಲಿ ಏನೆಲ್ಲಾ ಬದಲಾವಣೆ ಆಯಿತು ಎಂದು ಶಶಾಂಕ್ ವಿವರಿಸಿದ್ದರು. "ಹೀಗೆ ಆ ಹುಡುಗಿನ ಜೊತೆ ಓಡಿ ಹೋಗಿದ್ದಾಗ ಅಪಘಾತವಾಗಿ ಆ ಹುಡುಗ ಗಾಯಗೊಂಡಿದ್ದ. ಈ ಬಳಿಕ ಹುಡುಗಿ ಮನೆಯಲ್ಲಿ ವಿಷಯ ಗೊತ್ತಾಗಿ ಕೇಸ್ ಆಗಿ ಆಕೆಯನ್ನು ಕರೆದುಕೊಂಡು ಬಂದು ಮಗನೊಬ್ಬನ ಜೊತೆ ಮದುವೆ ಮಾಡಿಸಿದ್ದರಂತೆ. ಹರ್ಷನ ದೃಷ್ಠಿಕೋನದಲ್ಲಿ ನೋಡಿದರೆ ಹುಡುಗಿ ದುಡ್ಡಿಗಾಗಿ ಇವನಿಗೆ ಕೈಕೊಟ್ಟು ಓಡಿ ಹೋಗಿದ್ದಳು. ಆದರೆ ಆ ಹುಡುಗಿಯ ದೃಷ್ಠಿಕೋನ ಏನಾಗಿತ್ತು. ಹುಡುಗಿ ಜಾಗದಲ್ಲಿ ನಿಂತು ನೋಡಿದಾಗ ಆಕೆ ಯಾಕೆ ದುಡ್ಡಿರುವನ ಜೊಯೆ ಓಡಿಹೋಗಿದ್ದಳು ಎನ್ನುವುದು ನನನೆ ಕಥೆ ಅನ್ನಿಸಿತು. ಅದನ್ನೇ ಸಿನಿಮಾ ಕಥೆಯಾಗಿ ಬದಲಾಯಿಸಿಕೊಂಡೆ" ಎಂದು ತಿಳಿಸಿದ್ದರು.


Click it and Unblock the Notifications











