"ನನ್ನ ಹೆಸ್ರು ನಾಗರಕಟ್ಟೆ ಶಂಕರ.. ಉರುಫ್ ಶಂಕರ್ ನಾಗ್": ಶಂಕ್ರಣ್ಣನ ಆಕಾಶವಾಣಿ ಕೊನೆ ಸಂದರ್ಶನ ಭಾಗ-1
ಕನ್ನಡ ಚಿತ್ರರಂಗಕ್ಕೆ ಮಿಂಚಿನಂತೆ ಬಂದು ಹೋದವರು ಶಂಕರ್ ನಾಗ್. ನಿಜಕ್ಕೂ ಅವರ ಜೀವನ 'ಮಿಂಚಿನ ಓಟ'. ಕಂಡ ಕನಸುಗಳೆಲ್ಲಾ ನನಸಾಗುವ ಮುನ್ನ ಶಂಕರ್ ಬಾರದ ಲೋಕಕ್ಕೆ ಪಯಣ ಬೆಳೆಸಿಬಿಟ್ಟರು. ಕರಾಟೆ ಕಿಂಗ್ ಇದ್ದಿದ್ದರೆ 69ನೇ ವರ್ಷದ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿದ್ದರು.
ಶಂಕರ್ ನಾಗ್ ಹುಟ್ಟುಹಬ್ಬದ ದಿನ ಅಭಿಮಾನಿಗಳು ಅವರನ್ನು ನೆನಪು ಮಾಡಿಕೊಳ್ಳುತ್ತಿದ್ದಾರೆ. ಕೇವಲ 12 ವರ್ಷಗಳ ಸಿನಿ ಬದುಕಿನಲ್ಲಿ 80ಕ್ಕೂ ಅಧಿಕ ಸಿನಿಮಾಗಳಲ್ಲಿ ನಟಿಸಿ ಗೆದ್ದರು. ನಟನಾಗಿ ಮಾತ್ರವಲ್ಲದೇ ನಿರ್ದೇಶಕನಾಗಿಯೂ ಛಾಪು ಮೂಡಿಸಿದರು. ಶಂಕ್ರಣ್ಣನನ್ನು ಅಭಿಮಾನಿಗಳು ಇಂದಿಗೂ ಮರೆತ್ತಿಲ್ಲ. ಆಟೋಗಳ ಮೇಲೆ ಕರಾಟೆ ಕಿಂಗ್ ಫೋಟೊಗಳು ರಾರಾಜಿಸುತ್ತಲೇ ಇದೆ. 1990, ಸೆಪ್ಟೆಂಬರ್ 30ರಂದು ಶಂಕರ್ ನಾಗ್ ಚಿತ್ರದುರ್ಗದ ಅನಗೋಡು ಬಳಿ ರಸ್ತೆ ಅಪಘಾತದಲ್ಲಿ ಕೊನೆಯುಸಿರೆಳೆದರು.

ಕನ್ನಡದ ಸುದ್ದಿ ವಾಹಿನಿಗಳು ಯಾವುದು ಇಲ್ಲದ ಕಾಲದಲ್ಲಿ ಶಂಕರ್‌ನಾಗ್ ಆಕಾಶವಾಣಿಗೆ ವಿಶೇಷ ಸಂದರ್ಶನ ನೀಡಿದ್ದರು. ತಮ್ಮ ಕತೆಯನ್ನು ಹೇಳುತ್ತಾ ಹಾಡುಗಳನ್ನು ಕೇಳಿಸುವ ಕಾರ್ಯಕ್ರಮ ನಡೆಸಿಕೊಟ್ಟಿದ್ದರು. ಆ ಸಂದರ್ಶನದಲ್ಲಿ ಶಂಕ್ರಣ್ಣನ ಮಾತುಗಳನ್ನು ಮುಂದೆ ಓದಿ.
"ಅರೆರೆರೆ ಕ್ಷಮಿಸಿ, ನಿಮ್ಮ ಕಡೆ ಗಮನ ಹರಿಯಲಿಲ್ಲ. ಅಂದ್ರೆ ನಿಮ್ಮ ರೇಡಿಯೋ ಟ್ರಾನ್ಸಿಸ್ಟರ್ ಆನ್ ಆಗಿರಬಹುದು ಎನ್ನುವ ಯೋಚನೆನೇ ಬರಲಿಲ್ಲ ನೋಡಿ. ಅದಕ್ಕೆ ನನ್ನ ಪಾಡಿಗೆ ಹಾಡು ಹಾಡುತ್ತಿದ್ದೆ. ಮತ್ತೆ ಕ್ಷಮಿಸಿ. ನಾನು ನನ್ನ ಪರಿಚಯ ಮಾಡಿಕೊಳ್ಳದೇ ಇದನ್ನೆಲ್ಲಾ ಹೇಳ್ತೀದ್ದೀನಿ. ನಿಮ್ಮಲ್ಲಿ ಯಾರದರೂ ಹೇಳಬಹುದು. ಪರಿಚಯದಲ್ಲಿ ಏನಿದೆ ಮಾರಾಯ ಅಂತ. ಇದೆ.. ಇದೆ.. ಪರಿಚಯ ಆದರೆ ನಾನು, ನೀವು ಹತ್ತಿರ ಆಗುತ್ತೀವಿ. ಅಂದರೆ ನನ್ನ ಮಾತು ಕೇಳಿದರೆ ನಿಮಗೆ, ನಿಮ್ಮ ಮಾತು ಕೇಳಿದರೆ ನನಗೆ ಒಂದು ರೀತಿ ಅನುಕಂಪಪೂರಿತ ವಾತಾರವರಣ ನಿರ್ಮಾಣವಾಗುತ್ತದೆ. ಅದಕ್ಕೆ ಪರಿಚಯ. ನನ್ನ ಹೆಸರು ನಾಗರಕಟ್ಟೆ ಶಂಕರ. ಉರುಫ್ ಶಂಕರ್ ನಾಗ್ ಅಂತ. ನಮಸ್ಕಾರ"
"ಬಹಳ ದಿನಗಳ ಬಳಿಕ ನಿಮ್ಮನ್ನು ಭೇಟಿ ಮಾಡುತ್ತಿದ್ದೀನಿ. ಏನು ಮಾಡುವುದು ಪ್ರಿಯ ಅಭಿಮಾನಿಗಳೇ. ಕೆಲಸ ಕೆಲಸ ಕೆಲಸ ಅಂತ ಊರೂರು ಸುತ್ತೋದೇ ಆಯ್ತು ವಿನಃ ಆಲ್ ಇಂಡಯಾ ಸ್ಟೇಷನ್ ಹತ್ತಿರ ಬರೋಕೆ ಆಗಲಿಲ್ಲ. ಅಂತು ಇವತ್ತು ನಿಮ್ಮಲ್ಲರ ಬಳಿ ಮಾತನಾಡುವ ಯೋಗ ಇತ್ತು. ಅದಕ್ಕೆ ಹಾಜರಾಗಿದ್ದೀನಿ"
"ನೋಡಿ ಸ್ವಾಮಿ ನಾವು ಹೀಗಿರೋದಕ್ಕೆ ಕಾರಣ ಒಂದಾನೊಂದು ಕಾಲ. ಅಂದರೆ ಗಿರೀಶ್ ಕಾರ್ನಾಡ್ ಅವರ ಚಿತ್ರ 'ಒಂದಾನೊಂದು ಕಾಲದಲ್ಲಿ'. ಆ ಸಿನ್ಮಾದಲ್ಲಿ ಕೆಲಸ ಮಾಡುವ ಅವಕಾಶ ಸಿಗುವ ಮುಂಚೆ ನಾನು ಬಹಳಷ್ಟು ನಾಟಕಗಳಲ್ಲಿ ಕೆಲಸ ಮಾಡುತ್ತಿದ್ದೆ. ಪಾತ್ರ, ನಿರ್ದೇಶನ, ಲೈಟಿಂಗ್, ಬ್ಯಾಕ್‌ಸ್ಟೇಜ್ ಎಲ್ಲಾ. ಬ್ಯಾಂಕ್‌ನಲ್ಲಿ ನೌಕರಿನೂ ಮಾಡ್ತಿದ್ದೆ. ಮ್ಯಾನೇಜರ್ ಅಲ್ಲ, ಅಕೌಂಟೆಂಟ್ ಅಲ್ಲ, ಓಸಿಯಾಗಿ. ಓಸಿ ರೀ, ಓಸಿ ಅಂದ್ರೆ ಗೊತ್ತಿಲ್ವಾ ನಿಮ್ಗೆ? ಆಡಿನರಿ ಕ್ಲರ್ಕ್. 'ಒಂದಾನೊಂದು ಕಾಲದಲ್ಲಿ' ಸಂಜೆ ಬ್ಯಾಂಕ್ ನೌಕರಿ ಮುಗಿಸಿ ನಾಟಕದ ರಿಹರ್ಸಲ್ ಮಾಡುತ್ತಿರುವಾಗ ಗಿರೀಶ್ ಕಾರ್ನಾಡ್ ಅವ್ರು ಬಂದ್ರು. ನೋಡಿದ್ರು. ಕೇಳಿದ್ರು, ಸಿನ್ಮಾದಲ್ಲಿ ಪಾರ್ಟ್ ಮಾಡ್ತಿಯೇನೋ ಹುಡುಗ ಅಂತ. ಸಿನಿಮಾ ಅಂದ್ರೆ ಸ್ವಲ್ಪ ಭಯ ಹೆದರಿಕೆ ಇದ್ದೇ ಇತ್ತು. ಆದರೂ ಧೈರ್ಯ ಮಾಡಿ, ಹೋ ಸಿನ್ಮಾ ತಾನೇ ಅದಕ್ಕೇನಂತೆ ಮಾಡೋಣ ಎಂದೆ. ದಾಂಡೇಲಿಯಲ್ಲಿ ಚಿತ್ರೀಕರಣ ಆರಂಭವಾಯಿತು."
"'ಒಂದಾನೊಂದು ಕಾಲದಲ್ಲಿ' ಸಿನಿಮಾ ಚಿತ್ರೀಕರಣ ಮುಗೀತು. ಡಬ್ಬಿಂಗ್ ಕುಡ ಆಯ್ತು. ಫಸ್ಟ್ ಪ್ರಿಂಟು ಆಚೆ ಬಂತು. ಪ್ರಿವ್ಯೂ ನೋಡಿದವರು ಪರವಾಗಿಲ್ವೇ ಈ ಹುಡುಗ ಸುಮಾರಾಗಿ ಅಭಿನಯ ಮಾಡ್ತಾನೆ ಅಂದ್ರು. ನನ್ನ ಈ ಹುಬ್ಬು ತಲೆಗೆ ಏರಿ ಕೂದಲಿಗೆ ಸಿಕ್ಕಾಕ್ಕಿಕೊಂಡುಬಿಡ್ತು. ಸಿನಿಮಾ ನಟ ಆಗ್ತೀನಿ ಎಂದು ಕನಸಿನಲ್ಲೂ ನಾನು ಅಂದುಕೊಂಡಿರಲಿಲ್ಲ. ರಜತ ಪರದೆಮೇಲೆ ಮೊದಲ ಬಾರಿ ನನ್ನನ್ನೇ ನಾನು ನೋಡ್ದಾಗ ಒಂಥರಾ ಅನ್ನುಸ್ತು. ಅಲ್ಲ ನನ್ನ ಮುಖ ಯಾಕೆ ಈ ತರ ಕಾಣಿಸ್ತಿದೆ. ಅದ್ಯಾಕೆ ನಡೆಯುವಾಗ ನನ್ನ ಕೈ ವಂಕು ವಂಕಾಗಿ ಎಲ್ಲೆಲ್ಲೋ ಹೋಗುತ್ತೆ ಎಕ್ಸೆಟ್ರಾ ಎಕ್ಸಟ್ರಾ ಯೋಚನೆ ಇದ್ದಾಗ ಅಬ್ಬಯ್ಯ ನಾಯ್ಡು ಅವ್ರ ಕಣ್ಣು ನನ್ನ ಮೇಲೆ ಬಿತ್ತು. 'ಸೀತಾರಾಮು' ಸಿನಿಮಾದಲ್ಲಿ ನಟಿಸೋ ಅವಕಾಶ ಕೊಟ್ಟರು. ಮೊದಲ ದಿನ ಚಿತ್ರೀಕರಣಕ್ಕೆ ಹೋದದಾ ನನ್ನ ಹೃದಯ ಅಲ್ಲೇ ನಿಂತುಬಿಡ್ತು"
"ಒಂದೇ ಒಂದು ಆಸೆಯು ಹಾಡಿನ ಚಿತ್ರೀಕರಣ ಮುಗಿಯೋ ಹೊತ್ತಿಗ ನಿಂತು ಹೋಗಿದ್ದ ನನ್ನ ಹೃದಯ ಆಚೆ ಬಂದುಬಿಡ್ತು ಅಂದ್ರೆ ಅತಿಶಯೋಕ್ತಿ ಆಗುವುದಿಲ್ಲ. ಯಾಕಂದರೆ ಚಿತ್ರೀಕರಣಕ್ಕೂ ಮುಂಚೆ ನಾನು ಎಲ್ಲೂ ಹಾಡಿರಲಿಲ್ಲ. ಡ್ಯಾನ್ಸ್ ಅಂದ್ರೆ ಏನು ಅಂತನೂ ಗೊತ್ತಿರಲಿಲ್ಲ. ನಿರ್ದೇಶಕ ಸೋಮಶೇಖರ್, ಡ್ಯಾನ್ಸ್ ಮಾಸ್ಟರ್ ಉಡುಪಿ ಜಯರಾಮ್ ಆಕ್ಷನ್ ಎಂದು ದಿದಿತ್ತೈ ದಿದ್ದಿತ್ತೈ ಸ್ಟೆಪ್ ಹಾಕೋ ಅಂದ್ರು, ನನ್ನ ಪ್ರಯತ್ನ ಮಾಡ್ದೆ ರೀ, ಆದರೆ ತೈ ಬರ್ಬೇಕಿದ್ದ ಜಾಗದಲ್ಲಿ ದಿ ಬರ್ತಿತ್ತು. ಕಾಲು ಸರಿ ಇದ್ದರೆ ಕೈ ಎಲ್ಲೆಲ್ಲೋ ಹೋಗುತ್ತಿತ್ತು. ಕೊನೆಗೆ ಸುಸ್ತಾಗಿ ಒಂದು ಮೂಲೆಗೆ ಹೋಗಿ ಸಿಗರೇಟ್ ಸೇದುತ್ತಾ ನಿಂತುಬಿಟ್ಟು. ಆಗ ನಾಯಕಿ ಮಂಜುಳ ಬಂದ್ರು, ಧೈರ್ಯ ಕೊಟ್ರು. ಮೊದಲ ಸಲ ಹಾಗೆ ಆಗುತ್ತೆ ಬಿಡಿ, ಮತ್ತೆ ಮಾಡಿದರೆ ಸರಿ ಹೋಗುತ್ತೆ ನೀವು ಬನ್ನಿ ಅಂದ್ರು. ಅವ್ರ ಪ್ರೋತ್ಸಾಹ, ಸಹಾಯ ನಾನು ಎಂದು ಮರೆಯುವಂತಿಲ್ಲ. ಬಳಿಕ ಹಲವು ಸಿನಿಮಾಗಳಲ್ಲಿ ನಟಿಸಿದೆ. ಇವತ್ತು ಅವರು ನಮ್ಮೊಂದಿಗಿಲ್ಲ"
"ಕೆಲವೊಮ್ಮೆ ಮಂಜುಳರಂತಹ ಒಳ್ಳೆ ನಟಿ ನಮ್ಮೊಂದಿಗೆ ಇಲ್ಲ ಎಂದರೆ ನಂಬಲು ಸಾಧ್ಯವಿಲ್ಲ. ಆದರೆ ಜೀವನ ಇರುವುದೇ ಹೀಗೆ ಅನ್ನಿಸುತ್ತದೆ. ಈ ಜೀವನ ಅನ್ನೋದು ಸೂರಾರು ಬಣ್ಣಗಳು ಕೂಡಿ ಎಷ್ಟು ವಿಶಾಲ ಎನಿಸುತ್ತೆ. ಅಷ್ಟೇ ಸಂಕುಚಿತ ಆಗಿಬಿಡುತ್ತದೆ. ಒಮ್ಮೆ ತಂಪಾಗಿ ಉದ್ದವಾಗಿ ಕಾಣಿಸುವ ಮೆತ್ತನೆಯ ಹಾಸಿಗೆ ಕ್ಷಣಗಳಲ್ಲಿ ಸುರಳಿಯಾಗಿ ಗತ ಕಾಲಕ್ಕೆ ಹೋಗಿ ಕುಳಿತುಬಿಡುತ್ತೆ. ಹೊಸ ರೂಪ, ಹೊಸ ಚೈತನ್ಯಾ ತಂದುಕೊಟ್ಟ ಅನುಭವಗಳು ಕೇವಲ ಕೇವಲ ಸುರಳಿ ಆಗಿಬಿಡ್ತು ಎನ್ನುವ ದುಃಖ ಕೂಡ ಆಗುತ್ತದೆ. ಆದರೆ ಜೀವನ ಮಾತ್ರ ನಡೆದೇ ನಡೆಯುತ್ತದೆ"
1988ರ ಜುಲೈನಲ್ಲಿ ಶಂಕರ್‌ನಾಗ್ ಈ ಆಕಾಶವಾಣಿ ಸಂದರ್ಶನ ನೀಡಿದ್ದರು. ಶಂಕ್ರಣ್ಣನ ಮಾತುಗಳು ಕೇಳಿದರೆ ಅವರ ಸರಳ, ಸಜ್ಜನ ವ್ಯಕ್ತಿತ್ವ ಎಂಥದ್ದು ಎನ್ನುವುದು ಗೊತ್ತಾಗುತ್ತಿದೆ.


Click it and Unblock the Notifications











