ಪತ್ನಿ ಉಂಗುರ ಮಾರಿ ಮನೆಬಿಟ್ಟ ನರಸಿಂಹರಾಜು ಮುಂದೆ ಹಾಸ್ಯ ಚಕ್ರವರ್ತಿ ಆಗಿ ಬೆಳೆದಿದ್ದೇಗೆ?
ಬಾಲ ಕಲಾವಿದರಾಗಿ ರಂಗಭೂಮಿ ಪ್ರವೇಶಿಸಿದ ನರಸಿಂಹರಾಜು ಮುಂದೆ ಕನ್ನಡ ಚಿತ್ರರಂಗದ ಖ್ಯಾತ ಹಾಸ್ಯನಟನಾಗಿ ಗುರ್ತಿಸಿಕೊಂಡರು. ಟಿಪಟೂರಿನಲ್ಲಿ ಹುಟ್ಟಿಬೆಳೆದ ನರಸಿಂಹ ರಾಜು ಆರಂಭದಲ್ಲಿ ಗುಬ್ಬಿ ಕಂಪನಿ ಸೇರಿದಂತೆ ಕೆಲ ಕಂಪನಿಗಳ ನಾಟಕಗಳಲ್ಲಿ ನಟಿಸುತ್ತಿದ್ದಾರೆ. 'ಬೇಡರ ಕಣ್ಣಪ್ಪ' ಚಿತ್ರದಲ್ಲಿ ಅಣ್ಣಾವ್ರ ಜೊತೆ ನರಸಿಂಹ ರಾಜು ಕೂಡ ಚಿತ್ರರಂಗಕ್ಕೆ ಬಂದರು.
ನರಸಿಂಹರಾಜು ನಾಟಕಗಳಲ್ಲಿ ನಟಿಸುವುದು ತಂದೆಗೆ ಇಷ್ಟವಿರಲಿಲ್ಲ. ಒಮ್ಮೆ ತಂದೆ ಬೈದಿದ್ದಕ್ಕೆ ಕೋಪಿಸಿಕೊಂಡು ಚಿಕ್ಕಮಗಳೂರಿನಲ್ಲಿ ನಾಟಕ ಮಾಡಲು ಹೊರಟರು. ಅಂದು ತಂದೆ ಮೇಲೆ ಮುನಿಸಿಕೊಂಡು ನಾಟಕ ಮಾಡಲು ಹೋದ ನರಸಿಂಹರಾಜು ಮುಂದೆ ಮತ್ತೆ ತಿಪಟೂರಿಗೆ ಹೋಗಲೇ ಇಲ್ಲ. ಅಂದು ಚಿಕ್ಕಮಗಳೂರಿಗೆ ಹೋಗಲು ಪತ್ನಿಯ ಕೈಲಿದ್ದ ಉಂಗುರ ಮಾರಿದ್ದರು. ಮುಂದೆ ಕನ್ನಡ ಚಿತ್ರರಂಗ ಪ್ರವೇಶಿಸಿ ಹಾಸ್ಯಚಕ್ರವರ್ತಿ ಬಿರುದು ಪಡೆದರು.

ಕನ್ನಡ ಚಿತ್ರರಂಗದಲ್ಲಿ ಸಾಕಷ್ಟು ಜನ ಹಾಸ್ಯ ಕಲಾವಿದರು ಬಂದು ಹೋಗಿದ್ದಾರೆ. ಆದರೆ ಮೊದಲ ಸ್ಟಾರ್ ಕಾಮೆಡಿಯನ್ ಅನ್ನಿಸಿಕೊಂಡವರು ನರಸಿಂಹರಾಜು. ಡಾ. ರಾಜ್‌ಕುಮಾರ್ ಕೂಡ ಹಾಸ್ಯ ಚಕ್ರವರ್ತಿಯ ಅಭಿಮಾನಿ ಆಗಿದ್ದರು. ಇನ್ನು ಅಣ್ಣಾವ್ರು- ನರಸಿಂಹರಾಜು ಜೋಡಿ ಕನ್ನಡ ಸಿನಿಮಾಗಳಲ್ಲಿ ಮೋಡಿ ಮಾಡಿತ್ತು. 250ಕ್ಕೂ ಅಧಿಕ ಸಿನಿಮಾಗಳಲ್ಲಿ ಅವರು ನಟಿಸಿ ಗೆದ್ದಿದ್ದರು. ಹಲವರಿಗೆ ಚಿತ್ರರಂಗದಲ್ಲಿ ಗಾಡ್ ಫಾದರ್ ಆಗಿದ್ದರು.
ಡಾ. ರಾಜ್‌ಕುಮಾರ್ ಜೊತೆ ಬಹಳ ಆತ್ಮೀಯ ಒಡನಾಟ ಹೊಂದಿದ್ದ ನರಸಿಂಹರಾಜು ಒಮ್ಮೆ ಮುಸಿನಿಕೊಂಡಿದ್ದು ಇದೆ. ಕನ್ನಡದ ಚಾರ್ಲಿ ಚಾಪ್ಲಿನ್ ಎಂದು ಹೆಸರಾಗಿದ್ದರು. 'ಬೇಡರ ಕಣ್ಣಪ್ಪ' ಬಳಿಕ 'ರಾಣಿ ಹೊನ್ನಮ್ಮ', 'ರಣಧೀರ ಕಂಠೀರವ', 'ಜೇನು ಗೂಡು', 'ವೀರಕೇಸರಿ', 'ಗೋವಾದಲ್ಲಿ ಸಿಐಡಿ 999', 'ಕುಲ ಗೌರವ', 'ಕಸ್ತೂರಿ ನಿವಾಸ', 'ಶರಪಂಜರ' ಹೀಗೆ ಹಲವು ಸಿನಿಮಾಗಳಲ್ಲಿ ನಟಿಸಿ ನರಸಿಂಹರಾಜು ಪ್ರೇಕ್ಷಕರನ್ನು ರಂಜಿಸಿದ್ದರು.
ನರಸಿಂಹರಾಜು ಕ್ರೇಜ್ ಹೇಗಿತ್ತು ಅಂದ್ರೆ ಕನ್ನಡದಲ್ಲಿ ಬಹಳ ಬೇಗ 100 ಸಿನಿಮಾದಲ್ಲಿ ನಟಿಸಿದ ಸಾಧನೆ ಮಾಡಿದ್ದರು. ಇನ್ನು ಚೆನ್ನೈನಲ್ಲಿ ಅವತ್ತಿನ ಕಾಲಕ್ಕೆ ಮನೆ ಕಟ್ಟಿಸಿದ್ದರು. ಮೊದಲು ಮನೆಗೆ ಫೋನ್ ಸಂಪರ್ಕ ಪಡೆದವರು ನರಸಿಂಹರಾಜು. ಮೊದಲು ಟ್ಯಾಕ್ಸ್ ಕಟ್ಟಿದ ಕನ್ನಡ ನಟ ಕೂಡ ಅವರು. ಹೀಗೆ ಸಾಕಷ್ಟು ಮೊದಲುಗಳಿಗೆ ನರಸಿಂಹರಾಜು ನಾಂದಿ ಹಾಡಿದ್ದರು.

ಉಬ್ಬು ಹಲ್ಲು, ಸಣಕಲು ದೇಹದ ನರಸಿಂಹರಾಜು ತಮ್ಮ ನ್ಯೂನ್ಯತೆಗಳನ್ನೇ ಪ್ಲಸ್ ಮಾಡಿಕೊಂಡು ಪ್ರೇಕ್ಷಕರನ್ನು ನಗಿಸುತ್ತಿದ್ದರು. ನಾಟಕಗಳಲ್ಲಿ ಹಾಸ್ಯ ಪಾತ್ರಗಳನ್ನು ಮಾಡುತ್ತಿದ್ದವರು ಮುಂದೆ ಸಿನಿಮಾಗಳಲ್ಲಿ ಅದನ್ನು ಮುಂದುವರೆಸಿದ್ದರು. ತಂದೆ ರೀತಿಯಲ್ಲೇ ನರಸಿಂಹ ರಾಜು ಕೂಡ ಕೋಪಿಷ್ಟರಾಗಿದ್ದರು. ಹಾಗಾಗಿ ಕೆಲವರ ಜೊತೆ ಭಿನ್ನಾಭಿಪ್ರಾಯಗಳು ಏರ್ಪಟ್ಟಿತ್ತು.
ಮೊದಲಿಗೆ ನಾಟಕ ಅಂದ್ರೆ ಪೌರಾಣಿಕ, ಐತಿಹಾಸಿಕ ಕಥೆಗಳು ಇರುತ್ತಿದ್ದವು. ಮುಂದೆ ಸಿನಿಮಾಗಳಲ್ಲಿ ಕೂಡ ಅದೇ ಕಥೆ ಇರುತ್ತಿತ್ತು. ಪೌರಾಣಿಕ ನಾಟಕಗಳಲ್ಲಿ ಹೆಚ್ಚು ನಟಿಸಿದ್ದ ನರಸಿಂಹರಾಜು ಮುಂದೆ ಸಾಮಾಜಿಕ ಕಥಾಹಂದರದ ಸಿನಿಮಾಗಳಲ್ಲಿ ನಟಿಸಿ ಮೋಡಿ ಮಾಡಿದರು. ತಮ್ಮ ಕಾಮಿಡಿ ಟೈಮಿಂಗ್‌ನಿಂದ ಪ್ರೇಕ್ಷಕರು ಹೊಟ್ಟೆ ಹುಣ್ಣಾಗುವಂತೆ ನಗಿಸಿದರು.
ಹಿರಿಯ ಮಗ ಶ್ರೀಕಾಂತ್ ಅಂದ್ರೆ ನರಸಿಂಹರಾಜು ಅವರಿಗೆ ಬಹಳ ಅಕ್ಕರೆ. ಆದರೆ ಶ್ರೀಕಾಂತ್ ರಸ್ತೆ ಅಪಘಾತದಲ್ಲಿ ತೀರಿಕೊಂಡಿದ್ದ. ಮಗನ ಸಾವಿನ ನೋವಿನಿಂದ ನರಸಿಂಹರಾಜು ಹೊರ ಬರಲೇಯಿಲ್ಲ. ಮಗ ಅಗಲಿದ 8 ವರ್ಷಗಳ ಬಳಿಕ 1979ರ ಜುಲೈ 20ರ ಮುಂಜಾನೆ 4.30ರ ಸುಮಾರಿಗೆ ತೀವ್ರ ಹೃದಯಾಘಾತದಿಂದ ನರಸಿಂಹರಾಜು ಕೊನೆಯುಸಿರೆಳೆದಿದ್ದರು. ಆಗ ಅವರಿಗೆ 55 ವರ್ಷ ವಯಸ್ಸಾಗಿತ್ತು.


Click it and Unblock the Notifications











