"ಅಯ್ಯೋ ಅಪಾರ್ಥ ಮಾಡ್ಕೊಂಡ್ಬಿಟ್ರೋ ಏನೋ"; ಉಮೇಶ್ ಟಾಪ್-5 ಕಾಮಿಡಿ ಸೀನ್ಸ್
ಹಾಸ್ಯ ನಟ ಎಂ. ಎಸ್ ಉಮೇಶ್ ಬಾರದ ಲೋಕಕ್ಕೆ ಪಯಣ ಬೆಳೆಸಿದ್ದಾರೆ. ಆದರೆ ತಮ್ಮ ಸಿನಿಮಾಗಳು ಹಾಗೂ ಪಾತ್ರಗಳ ಮೂಲಕ ಪ್ರೇಕ್ಷಕರ ಮನಸ್ಸಿನಲ್ಲಿ ಜಾಗ ಮಾಡಿಕೊಂಡಿದ್ದಾರೆ. ಒಂದಕ್ಕಿಂತ ಒಂದು ವಿಭಿನ್ನ ಪಾತ್ರಗಳಲ್ಲಿ ನಟಿಸಿ ಪ್ರೇಕ್ಷಕರನ್ನು ನಗಿಸಿದ್ದಾರೆ. ಉಮೇಶ್ ಅಲ್ಲೊಂದು ಇಲ್ಲೊಂದು ಗಂಭೀರ ಪಾತ್ರದಲ್ಲಿ ನಟಿಸಿದ್ದು ಇದೆ.
ಕಾಮಿಡಿ ಅಷ್ಟು ಸುಲಭ ಅಲ್ಲ. ಅದರಲ್ಲೂ ಡಬಲ್ ಮೀನಿಂಗ್ ಇಲ್ಲದೇ ಸಭ್ಯ ರೀತಿಯಲ್ಲಿ ಜನರನ್ನು ನಗಿಸುವುದು ಕಷ್ಟದ ಕೆಲಸ. ತಮ್ಮ ವಾಯ್ಸ್ ಮಾಡ್ಯುಲೇಷನ್, ಆಂಗಿಕ ಅಭಿನಯ, ಕಾಮಿಡಿ ಟೈಮಿಂಗ್ ಹಾಸ್ಯ ಕಲಾವಿದರಿಗೆ ಬಹಳ ಮುಖ್ಯ. ಇನ್ನು ತಮ್ಮ ನ್ಯೂನ್ಯತೆಗಳನ್ನೇ ಪ್ಲಸ್ ಮಾಡಿಕೊಂಡು ಹಾಸ್ಯ ಕಲಾವಿದರು ಗೆಲ್ಲುತ್ತಾರೆ. ಬಾಲ್ಯದಲ್ಲೇ ರಂಗಭೂಮಿಯಲ್ಲಿ ಗುರ್ತಿಸಿಕೊಂಡಿದ್ದ ಉಮೇಶ್ ನಟನೆಯ ಪಟ್ಟುಗಳನ್ನು ಕಲಿತಿದ್ದರು. ಅದು ಅವರಿಗೆ ಮುಂದೆ ಪ್ರಯೋಜನಕ್ಕೆ ಬಂದಿತ್ತು.

ಹಲವು ಹಿಟ್ ಸಿನಿಮಾಗಳಲ್ಲಿ ತಮ್ಮ ಹಾಸ್ಯದಿಂದ ಉಮೇಶ್ ಪ್ರೇಕ್ಷಕರ ಮನಸ್ಸಿನಲ್ಲಿ ಉಳಿದುಬಿಟ್ಟಿದ್ದಾರೆ. ಅಂತಹ ಟಾಪ್ 5 ಕಾಮಿಡಿ ಸೀನ್ಸ್ ಯಾವುವು ಮುಂದೆ ನೋಡಿ.
1. ಗೋಲ್‌ಮಾಲ್ ರಾಧಾಕೃಷ್ಣ
ಉಮೇಶ್ ಅಂದಾಕ್ಷಣ ತಟ್ಟನೆ ನೆನಪಾಗುವುದು ಈ ಚಿತ್ರ. ಸೀತಾಪತಿ(ಉಮೇಶ್)ಯಾಗಿ ಪ್ರಸಾದ್(ಸಿಹಿ ಕಹಿ ಚಂದ್ರು) ಅವರ ಪತ್ನಿ(ಉಮಾಶ್ರೀ)ಯನ್ನು ತಬ್ಬಿಕೊಂಡು ಬಳಿಕ ಪೇಚಾಡುವ ಪಾತ್ರ ಇದು. ನನ್ನ ಹೆಂಡ್ತಿ ಉಟ್ಟುಕೊಂಡಿದ್ದ ಸೀರೆ ನಿಮ್ಮ ಉಟ್ಟುಕೊಂಡಿದ್ರು. ಗೊತ್ತಿಲ್ಲದೇ ನಿಮ್ಮ ಹೆಂಡ್ತಿಯನ್ನು ನನ್ನ ಹೆಂಡ್ತಿ ಅಂತ ತಿಳ್ಕೊಂಡು ತಬ್ಬಿಕೊಂಡುಬಿಟ್ಟೆ, ಬೇಕು ಅಂತ ನಿಮ್ಮ ಹೆಂಡ್ತಿಯನ್ನು ತಬ್ಬಿಕೊಂಡೆ ಎಂದು ಪದೇ ಪದೆ ಹೇಳಿ ಕ್ವಾಟ್ಲೆ ಕೊಡುವ ಪಾತ್ರ ಅದಾಗಿತ್ತು. 'ಮಾರಿಕಣ್ಣು ಹೋರಿಮ್ಯಾಗೆ' ಚಿತ್ರದಲ್ಲಿ ಕೂಡ ಇದೇ ಕಾಮಿಡಿ ಮುಂದುವರೆಸಿದ್ದರು.

2. ಗುರು ಶಿಷ್ಯರು
ದ್ವಾರಕೀಶ್ ನಿರ್ಮಿಸಿ, ನಟಿಸಿದ್ದ 'ಗುರು ಶಿಷ್ಯರು' ಚಿತ್ರದಲ್ಲಿ ಖ್ಯಾತ ಹಾಸ್ಯನಟರ ದಂಡೇ ಇತ್ತು. ರಾಜಗುರು ಪೂರ್ಣಾನಂದಯ್ಯ ಶಿಷ್ಯರ ಗುಂಪಿನಲ್ಲಿ ಉಮೇಶ್ ಕೂಡ ಒಬ್ಬರಾಗಿದ್ದರು. ಸೋಮೇಶ್ವರ ಪಾತ್ರದಲ್ಲಿ ನಟಿಸಿ ಕಮಾಲ್ ಮಾಡಿದ್ದರು. ಈ ಚಿತ್ರದ ಎಲ್ಲಾ ಸನ್ನಿವೇಶಗಳು ಸೂಪರ್. ಗುರುಗಳ ಸೇವೆ ಮಾಡಲು ನಂದಿ(ದ್ವಾರಕೀಶ್), ವಿಶ್ವ(ಶಿವರಾಂ) ಒಂದೊಂದು ಕಾಲು ಒತ್ತಲು ಶುರು ಮಾಡಿದರೆ ಎಡಗೈ ಒತ್ತುತ್ತಾ ಸೋಮೇಶ್ವರ(ಉಮೇಶ್) ಮಿಂಚಿದ್ದರು.
3. ಮಂಗಳಸೂತ್ರ
ಮನೆ ಓನರ್ ಆಗಿ 'ಮಂಗಳಸೂತ್ರ' ಚಿತ್ರದಲ್ಲಿ ಬ್ಯಾಂಕ್ ಜನಾರ್ಧನ್ ತಲೆ ತಿನ್ನುವ ಪಾತ್ರದಲ್ಲಿ ಉಮೇಶ್ ಗಮನ ಸೆಳೆದಿದ್ದರು. ಟೆನ್ನಿಸ್ ಕೃಷ್ಣ ಕೂಡ ಬಂದು ತಗ್ಲಾಕಿಕೊಂಡು ಸಮಸ್ಯೆಗೆ ಸಿಲುಕುವ ಸನ್ನಿವೇಶ ಇದೆ.
4. ಬನ್ನಿ ಒಂದ್ಸಲ ನೋಡಿ
ಕೆಲವೇ ಸನ್ನಿವೇಶಗಳಲ್ಲಿ ನಟಿಸಿದ್ರು, ಉಮೇಶ್ ತಮ್ಮ ಪಾತ್ರಗಳ ಮೂಲಕ ನೆನಪಿನಲ್ಲಿ ಉಳಿದುಕೊಳ್ಳುತ್ತಿದ್ದರು. 'ಬನ್ನಿ ಒಂದ್ಸಲ ನೋಡಿ' ಚಿತ್ರದಲ್ಲಿ ರಮೇಶ್ ಭಟ್ ತಂದೆಯ ಪಾತ್ರದಲ್ಲಿ ಮಿಂಚಿದ್ದರು. ಅಂಧನ ಪಾತ್ರದಲ್ಲಿ ಹಾಸ್ಯದ ಹೊನಲು ಹರಿಸಿದ್ದರು.
5. ಗೆಲುವಿನ ಸರದಾರ
ರಾಘವೇಂದ್ರ ರಾಜ್‌ಕುಮಾರ್ ನಟನೆಯ 'ಗೆಲುವಿನ ಸರದಾರ' ಚಿತ್ರದಲ್ಲಿ ಕೂಡ ಉಮೇಶ್ ಅವರಿಗೆ ಒಳ್ಳೆ ಪಾತ್ರ ಸಿಕ್ಕಿತ್ತು. ಪತ್ನಿ(ಬಿ. ಜಯಾ)ಗೆ ಕಥೆ ಬರೆಯುವ ಹುಚ್ಚು. ಅದರಿಂದ ಪೇಚಾಡುವ ಪತಿಯ ಪಾತ್ರದಲ್ಲಿ ಉಮೇಶ್ ಪ್ರೇಕ್ಷಕರನ್ನು ನಗಿಸಿದ್ದರು.
ಇದೆಲ್ಲಾ ಜಸ್ಟ್ ಸ್ಯಾಂಪಲ್. ಇಂತಹ ಸಾಕಷ್ಟು ಪಾತ್ರಗಳಲ್ಲಿ ಉಮೇಶ್ ಪ್ರೇಕ್ಷಕರನ್ನು ರಂಜಿಸಿದ್ದರು. 300ಕ್ಕೂ ಅಧಿಕ ಸಿನಿಮಾಗಳಲ್ಲಿ ನಟಿಸಿ ಗೆದ್ದಿದ್ದರು. ತಮಿಳು ಚಿತ್ರರಂಗದಿಂದ ಕರೆ ಬಂದರೂ ಹೋಗದೇ ಕನ್ನಡ ಸಿನಿಮಾಗಳಲ್ಲಿ ಮಾತ್ರ ನಟಿಸಿ ಕೊಡುಗೆ ನೀಡಿದ್ದಾರೆ. ಉಮೇಶ್ ಅವರ ಅಗಲಿಕೆ ಕನ್ನಡ ಚಿತ್ರರಂಗಕ್ಕೆ ತುಂಬಲಾರದ ನಷ್ಟವೇ ಸರಿ.


Click it and Unblock the Notifications











