10 Years of Kendasampige; ಕಲ್ಟ್ ಕ್ಲಾಸಿಕ್ 'ಕೆಂಡಸಂಪಿಗೆ' ಕಥೆ ಹುಟ್ಟಿದ್ದೇಗೆ? ಸೀಕ್ವೆಲ್ ಯಾಕೆ ಬರಲೇಯಿಲ್ಲ?
ದುನಿಯಾ ಸೂರಿ ನಿರ್ದೇಶನದ ಸಿನಿಮಾಗಳಲ್ಲಿ 'ಕೆಂಡ ಸಂಪಿಗೆ' ಮರೆಯುವಂತಿಲ್ಲ. ಹೊಸ ಪ್ರತಿಭೆಗಳನ್ನು ಮುಖ್ಯಭೂಮಿಕೆಯಲ್ಲಿ ಬಳಸಿಕೊಂಡು ಅದ್ಭುತ ತಂತ್ರಜ್ಞರ ಬಳಗ ಕಟ್ಟಿಕೊಂಡು ಸೂರಿ ತೆರೆಗೆ ತಂದಿದ್ದ ಸಿನಿಮಾ ಇದು. ಕಡಿಮೆ ಬಜೆಟ್‌ನಲ್ಲಿ ನಿರ್ಮಾಣವಾಗಿದ್ದ ಸಿನಿಮಾ ಕಲ್ಟ್ ಕ್ಲಾಸಿಕ್ ಎನಿಸಿಕೊಂಡಿದೆ. ಈ ಕ್ರೈಂ ಥ್ರಿಲ್ಲರ್ ಸಿನಿಮಾ ಈಗ 10 ವರ್ಷ ಪೂರೈಸಿದೆ.
'ಅಣ್ಣಾ ಬಾಂಡ್' ಹಾಗೂ 'ಕಡ್ಡಿಪುಡಿ' ಸಿನಿಮಾಗಳು ನಿರೀಕ್ಷಿತಮಟ್ಟದಲ್ಲಿ ಗೆಲ್ಲಲಿಲ್ಲ. ಆಗ ಸುರೇಂದ್ರನಾಥ್ ಕೊಟ್ಟ ಕಥೆಯ ಎಳೆ ಇಟ್ಟುಕೊಂಡು ಸೂರಿ 'ಕೆಂಡ ಸಂಪಿಗೆ' ಸಿನಿಮಾ ಮಾಡುವ ಸಾಹಸಕ್ಕೆ ಕೈ ಹಾಕಿದ್ದರು. ರಾಜೇಶ್ ನಟರಂಗ ಹಾಗೂ ಮಾಸ್ತಿ ಉಪ್ಪಾರಳಿ ಜೊತೆ ಸೇರಿ ಚಿತ್ರಕಥೆ ಬರೆದು ಚಿತ್ರ ನಿರ್ದೇಶನಕ್ಕೆ ಮುಂದಾಗಿದ್ದರು. ನಾಯಕ, ನಾಯಕಿಯ ಹುಡುಕಾಟ ನಡೆದಿತ್ತು. ಕೆಲವರ ಆಡಿಷನ್ ಕೂಡ ಮಾಡಿದ್ದರು. ಅಂತಿಮವಾಗಿ ಸಂತೋಷ್ ಹಾಗೂ ಶ್ವೇತಾ ಕಾಮತ್ ಆಯ್ಕೆ ಆಗಿದ್ದರು.

ಶ್ರೀಮಂತರ ಮನೆ ಹುಡುಗಿ ಗೌರಿ(ಮಾನ್ವಿತಾ ಕಾಮತ್) ಹಾಗೂ ಬಡ ಅನಾಥ ಹುಡುಗ ರವೀಂದ್ರ(ವಿಕ್ಕಿ) ಪ್ರೀತಿ ಬೀಳುವುದು. ತಾಯಿಗೆ ಮಗಳು ಬಡ ಹುಡುಗನ್ನು ಪ್ರೀತಿಸುವುದು ಇಷ್ಟವಿರುವುದಿಲ್ಲ. ಇಬ್ಬರನ್ನು ದೂರ ಮಾಡುವ ಕೆಲಸವನ್ನು ತಾಯಿ ಪೊಲೀಸರಿಗೆ ವಹಿಸುತ್ತಾಳೆ. ಮುಂದೆ ವಿಕ್ಕಿ ಡ್ರಗ್ ಕೇಸ್‌ನಲ್ಲಿ ಸಿಕ್ಕಿಕೊಳ್ಳುವಂತಾಗುತ್ತದೆ. ಒಂದು ಕೊಲೆ ಕೇಸ್ ಕೂಡ ಸುತ್ತಿಕೊಳ್ಳುತ್ತದೆ. ಅದರಿಂದ ತಪ್ಪಿಸಿಕೊಳ್ಳಲು ಇಬ್ಬರೂ ಓಡಲು ಶುರು ಮಾಡುತ್ತಾರೆ. ಅಲ್ಲಿಂದ ಮುಂದೆ ರವೀಂದ್ರ ಹಾಗೂ ಗೌರಿಯ 7 ದಿನಗಳ ಹಾಡುಪಾಡು ಈ ಸಿನಿಮಾ ಕಥೆ.
'ಕೆಂಡಸಂಪಿಗೆ' ಸಿನಿಮಾ 10 ವರ್ಷ ಪೂರೈಸಿರುವ ಸಂತಸವನ್ನು ಬರಹಗಾರ ಮಾಸ್ತಿ ಉಪ್ಪಾರಳಿ ಫಿಲ್ಮಿಬೀಟ್ ಕನ್ನಡ ಜೊತೆ ಹಂಚಿಕೊಂಡಿದ್ದಾರೆ. ಆ ಸಿನಿಮಾ ಶುರುವಾಗಿದ್ದು ಹೇಗೆ ಎಂದು ಮೆಲುಕು ಹಾಕಿದ್ದಾರೆ. "ಸೂರಿ ಮೇಕಿಂಗ್ ಸ್ಟೈಲ್ ನೋಡಿ ಮೆಚ್ಚಿಕೊಂಡಿದ್ದ ಸುರೇಂದ್ರನಾಥ್ ಒಂದು ಸ್ಟೋರಿಲೈನ್ ಹೇಳಿದ್ರು. ಕಡಿಮೆ ಬಜೆಟ್ ಸಿನಿಮಾ ಆಗಿರುವುದರಿಂದ ನಿರ್ಮಾಪಕರು ಬೇಡ, ನಾವೇ ಮಾಡೋಣ ಎಂದು ಸಿನಿಮಾ ಆರಂಭಿಸಿದ್ದೆವು" ಎಂದು ಮಾಸ್ತಿ ನೆನಪು ಮಾಡಿಕೊಂಡಿದ್ದಾರೆ.

"ರಾಜೇಶ್ ನಟರಂಗ ಅವ್ರ ಸ್ನೇಹಿತರೊಬ್ಬರು ಚಿತ್ರ ನಿರ್ಮಾಣಕ್ಕೆ ಹಣ ಹಾಕಲು ಬಂದರು. ಸೂರಿ ಸಂಭಾವನೆ ಬೇಡ ನಾನು ನಿರ್ಮಾಣದಲ್ಲಿ ತೊಡಗಿಸಿಕೊಳ್ತೀನಿ ಅಂದ್ರು. ರಾಜೇಶ್ ನಟರಂಗ ಕೂಡ ಕೈಜೋಡಿಸಿದ್ರು. ಹೀಗೆ ಮೂವರು ನಿರ್ಮಾಪಕರಾಗಿ ಸಿನಿಮಾ ಶುರುವಾಯಿತು. ನಟ ನಟಿಯರ ಪಾತ್ರಗಳಿಗೆ ಕೆಲವರನ್ನು ಆಡಿಷನ್ ಮಾಡಿದ್ದೆವು. ಎಲ್ಲರೂ ಹೀರೊ ಗುಣ ಇರುವವರು ಇದ್ರು. ಆದ್ರೆ ನಾನು ನಮ್ಮ ಕಥೆಗೆ ಹೀರೊ ಬೇಡ, ಬಡ ಹುಡುಗ, ಸೀದಾಸಾದಾ ಹುಡುಗ ಆಗಬೇಕು ಅಂದೆ. ಸೂರಿ ಬಳಿ ಅಸೋಸಿಯೇಟ್ ಆಗಿದ್ದ ಸಂತೋಷ್ ರೀತಿಯ ಹುಡುಗ ಆಗಿರ್ಬೇಕು ಅಂದೆ" ಎಂದು ವಿಕ್ಕಿ ನಾಯಕನಾಗಿ ಆಯ್ಕೆ ಆಗಿದ್ದನ್ನು ಮಾಸ್ತಿ ಬಿಚ್ಚಿಟ್ಟಿದ್ದಾರೆ.
ನಾಯಕನ ಬಳಿಕ ನಾಯಕಿ ಪಾತ್ರಕ್ಕೂ ಒಂದಷ್ಟು ನಟಿಯರನ್ನು ನೋಡಿ ಆಡಿಷನ್ ಮಾಡುವ ಪ್ರಯತ್ನ ಮಾಡಿದ್ವಿ. "ಶ್ರೀಮಂತರ ಮನೆ ಹುಡುಗಿ ರೀತಿ ಕಾಣುವ ಹುಡುಗಿ ಬೇಕಿತ್ತು. ಬಳಿ ಮಂಗಳೂರಿನ ಎಫ್‌ಎಫ್ ನಿರೂಪಕಿ ಒಬ್ಬರು ಇದ್ದಾರೆ ಅಂದಾಗ ಆಕೆಯನ್ನು ಕರೆಸಿದ್ವಿ. ಆಕೆಗೆ ಆಡಿಷನ್ ಕೊಟ್ರು. ಆಗ ವಿಕ್ಕಿ ಹಾಗೂ ಮಾನ್ವಿತಾ ಇಬ್ಬರನ್ನು ಸೇರಿಸಿ ಒಂದು ವೀಡಿಯೋ ಮಾಡಿದ್ವಿ. ಅಪ್ಪು ಸರ್ ಸೂರಿ ಅವರಿಗೆ ಕೊಟ್ಟಿದ್ದ 5D ಕ್ಯಾಮರಾದಲ್ಲಿ ವೀಡಿಯೋ ಮಾಡಿದ್ವಿ. ಆಮೇಲೆ ಇವರಿಬ್ಬರು ನಾಯಕ, ನಾಯಕಿ ಎಂದು ಫಿಕ್ಸ್ ಆಗಿದ್ರು. ಮೊದಲ ದಿನ ಮೊದಲ ಶಾಟ್ ನಮ್ಮ ಮೇಲೆ ಚಿತ್ರೀಕರಿಸಿದ್ರು" ಎಂದು ಮಾಸ್ತಿ ಆ ದಿನಗಳಿಗೆ ಜಾರಿದ್ದಾರೆ.
ಸೂರಿ ಬಳಿ ಕಾರ್ ಡ್ರೈವರ್ ಆಗಿದ್ದ ವಿಕ್ಕಿ 'ಕೆಂಡಸಂಪಿಗೆ' ಹೀರೊ ಆದ್ರು ಅಂತೆಲ್ಲಾ ಆ ಸುದ್ದಿ ಆಗಿತ್ತು. ಅದೆಲ್ಲಾ ಸುಳ್ಳು. ವಿಕ್ಕಿ ಯೋಗರಾಜ್ ಭಟ್ರು, ಸೂರಿ ಬಳಗದಲ್ಲಿ ಗುರ್ತಿಸಿಕೊಂಡಿದ್ದ. ಅಸೋಸಿಯೇಟ್ ಡೈರೆಕ್ಟರ್ ಆಗಿದ್ದ. ಸೂರಿ ಅವರೊಟ್ಟಿಗೆ ಓಡಾಡುವಾಗ ನಾವೆಲ್ಲಾ ಕಾರ್ ಓಡಿಸುತ್ತಿದ್ವಿ. ಅದೇ ರೀತಿ ಸಂತೋಷ್ ಕೂಡ ಕಾರ್ ಓಡಿಸಿದ್ದ ಅಷ್ಟೇ. ಸೂರಿಗೆ ಕಪ್ಪು ಶರ್ಟ್ ಅಂದ್ರೆ ಇಷ್ಟ. ಹಾಗಾಗಿ ಕಪ್ಪು ಶರ್ಟ್ ಹಾಗೂ ನೀಲಿ ಜೀನ್ಸ್ ಹಾಕಿಕೊಳ್ಳುವಂತೆ ಹೇಳಿದ್ದೆ ಎಂದು ಮಾಸ್ತಿ ಹೇಳಿದ್ದಾರೆ.
'ಕೆಂಡಸಂಪಿಗೆ' ತಂತ್ರಜ್ಞರ ಸಿನಿಮಾ ಎನಿಸಿಕೊಳ್ತು. ಸೂರಿ ಅವರಿಗೆ ಹೊಸಬರ ಜೊತೆ ಕೆಲಸ ಮಾಡುವುದು ಸುಲಭ ಅನ್ನಿಸುತ್ತದೆ. 'ದುನಿಯಾ' ಬಳಿಕ 'ಕೆಂಡಸಂಪಿಗೆ' ಅಂತಹ ಹೆಸರು ತಂದುಕೊಡ್ತು. 'ಕಾಗೆ ಬಂಗಾರ' ಸಿನಿಮಾ ಮಾಡೋಕೆ ಇನ್ನು ಆಗ್ಲಿಲ್ಲ. 'ಕೆಂಡಸಂಪಿಗೆ' ಕಥೆಯಲ್ಲಿ ಕಂತೆ ಕಂತೆ ದುಡ್ಡಿತ್ತು. ನೋಟ್ ಬ್ಯಾನ್ ಆಗಿ ಎಲ್ಲಾ ಬದಲಾಯ್ತು. ಈಗಿನ ಕಾಲಕ್ಕೆ ಅದನ್ನು ಕಟ್ಟಿಕೊಡುವುದು ಕಷ್ಟ. ಆಗಿನ ಕಾಲಘಟ್ಟಕ್ಕೆ ಹೋಗಬೇಕು. 'ಪಾಪ್‌ಕಾರ್ನ್ ಮಂಕಿಟೈಗರ್'ನಲ್ಲಿ ಸಣ್ಣ ಎಳೆ ತರಲು ಪ್ರಯತ್ನಿಸಿದ್ರು ಎಂದು ಮಾಸ್ತಿ ತಿಳಿಸಿದ್ದಾರೆ.
ಕಲ್ಟ್ ಸಿನಿಮಾ ಅನ್ನಿಸಿಕೊಳ್ತು. ಅಬ್ಬಬ್ಬಾ ಎನ್ನುವ ಕಲೆಕ್ಷನ್ ಆಗ್ಲಿಲ್ಲ. ಹಾಕಿದ್ದ ಹಣಕ್ಕೆ ಮೋಸವಾಗಲಿಲ್ಲ. ತಕ್ಕಮಟ್ಟಿಗೆ ಲಾಭ ಬಂತು. ಆದರೆ 'ದುನಿಯಾ', 'ಜಾಕಿ' ಬಳಿಕ ಸೂರಿಗೆ ಒಳ್ಳೆ ಹೆಸರು ತಂದುಕೊಟ್ಟಿತ್ತು ಎಂದು ಮಾಸ್ತಿ ವಿಶ್ಲೇಷಿಸಿದ್ದಾರೆ.


Click it and Unblock the Notifications











