ಬೇಡರ ಕಣ್ಣಪ್ಪ to ಶಿವಲೀಲೆ: ಶಿವರಾತ್ರಿ ಜಾಗರಣೆಗೆ ಹೇಳಿಮಾಡಿಸಿದ ಶಿವಭಕ್ತಿ ಪ್ರದಾನ ಕನ್ನಡ ಸಿನಿಮಾಗಳು
ಶಿಶಿರ ಋತುವಿನ ಮಾಘ ಮಾಸದ ಕೃಷ್ಣ ಪಕ್ಷ ಬಹುಳ ಚತುರ್ದಶಿಯಂದು ಆಚರಿಸುವ ಶಿವರಾತ್ರಿ ಹಬ್ಬಕ್ಕೆ ವಿಶೇಷ ಸ್ಥಾನವಿದೆ. ಇಂದು ಜನರು ಪೂಜೆ, ಉಪವಾಸ ಮಾಡಿ, ರಾತ್ರಿಯಿಡೀ ಜಾಗರಣೆ ಮಾಡಿ ಶಿವನನ್ನು ಆರಾಧಿಸುವ ಸಂಪ್ರದಾಯವಿದೆ. ಎಲ್ಲಡೆ ಶಿವರಾತ್ರಿ ಹಬ್ಬದ ಸಂಭ್ರಮ ಮನೆ ಮಾಡಿದೆ. ಈ ದಿನ ಬಿಲ್ವಾರ್ಚನೆ, ರುದ್ರಾಭಿಷೇಕ, ಶಿವನಾಮ ಧ್ಯಾನಗಳ ಮೂಲಕ ಶಿವನನ್ನು ಸ್ತುತಿಸಲಾಗುತ್ತದೆ. ರಾತ್ರಿಯಿಡೀ ಶಿವನ ಆಲಯಗಳಲ್ಲಿ ಶಿವನಾಮ ಸ್ಮರಣೆ ಜೊತೆ ಜಾಗರಣೆ ನಡೆಯುತ್ತದೆ.
ಜನರು ಶ್ರದ್ಧಾಭಕ್ತಿಯಿಂದ ಶಿವನನ್ನು ಪೂಜಿಸಿ ಜಾಗರಣೆ ಮಾಡುತ್ತಾರೆ. ಜಾಗರಣೆ ಮಾಡಲು ರಾತ್ರಿಯಿಡೀ ಶಿವನ ಧ್ಯಾನ ಮಾಡಲು ಕನ್ನಡದಲ್ಲಿ ಹಲವು ಶಿವಭಕ್ತಿ ಪ್ರದಾನ ಸಿನಿಮಾಗಳಿವೆ. 'ಬೇಡರ ಕಣಪ್ಪ' ಚಿತ್ರದಿಂದ 'ಶ್ರೀಮಂಜುನಾಥ'ವರೆಗೂ ಮಹಾದೇವನ ಸುತ್ತಾ ಸುತ್ತುವ ಕಥೆಗಳಿರುವ ಸಿನಿಮಾಗಳನ್ನು ನೋಡಬಹುದು. ಕೇವಲ ಬಿಲ್ವಪತ್ರೆಯನ್ನು ಅರ್ಪಿಸಿ ಆರಾಧಿಸಿದರೂ ಶಿವನು ಪ್ರಸನ್ನನಾಗಿ ಭಕ್ತರು ಕೇಳಿದ್ದನ್ನು ಕೊಡುತ್ತಾನೆ ಎನ್ನುವ ನಂಬಿಕೆ ಇದೆ. ಇಂತಹ ಶಿವನ ಮಹಿಮೆಯನ್ನು ಕನ್ನಡ ಸಿನಿಮಾಗಳಲ್ಲಿ ಸೊಗಸಾಗಿ ಕಟ್ಟಿಕೊಡಲಾಗಿದೆ.
ಕನ್ನಡದಲ್ಲಿ ಶಿವಭಕ್ತಿ ಪ್ರದಾನ ಸಿನಿಮಾಗಳಲ್ಲಿ ಡಾ. ರಾಜ್‌ಕುಮಾರ್ ಹೆಚ್ಚು ನಟಿಸಿದ್ದಾರೆ. 'ಬೇಡರ ಕಣ್ಣಪ್ಪ' ಚಿತ್ರದಲ್ಲಿ ಅಣ್ಣಾವ್ರ ಅಭಿನಯವನ್ನು ಮರೆಯೋಕೆ ಸಾಧ್ಯವಿಲ್ಲ. ಆ ಶಿವನ ಕೃಪೆಯಿಂದಲೇ ಡಾ. ರಾಜ್‌ಕುಮಾರ್ ಕನ್ನಡ ಚಿತ್ರರಂಗದ ಅನಭಿಷಿಕ್ತ ದೊರೆಯಾಗಿ ಮೆರೆದರು ಎಂದರೂ ಅತಿಶಯೋಕ್ತಿ ಆಗುವುದಿಲ್ಲ.

ಶಿವನಿಗೆ ಕಣ್ಣು ಕೊಟ್ಟ ಕಣ್ಣಪ್ಪ
ಅದಾಗಲೇ ಒಂದೆರಡು ಸಿನಿಮಾಗಳಲ್ಲಿ ಸಣ್ಣಪುಟ್ಟ ಪಾತ್ರಗಳಲ್ಲಿ ನಟಿಸಿದ್ದ ಡಾ. ರಾಜ್‌ಕುಮಾರ್ 'ಬೇಡರ ಕಣ್ಣಪ್ಪ' ಚಿತ್ರದ ಮೂಲಕ ಹೀರೊ ಆಗಿದ್ದರು. ಈ ಚಿತ್ರದಲ್ಲಿ ಕಣ್ಣಪ್ಪನ ಪಾತ್ರದಲ್ಲಿ ಅಣ್ಣಾವ್ರ ಅಭಿನಯ ಮನಮುಟ್ಟುವಂತಿತ್ತು. ತನ್ನ ಅಮಾಯಕತೆಯಿಂದ ಶಿವನನ್ನೇ ಗೆದ್ದ ಕಣ್ಣಪ್ಪನ ಕಥೆ ಜನಜನಿತ. ಆ ಕಥೆಯನ್ನು ಅಷ್ಟೇ ಪರಿಣಾಮಕಾರಿಯಾಗಿ ಹೆಚ್.ಎಲ್. ಎನ್ ಸಿಂಹ ತೆರೆಗೆ ತಂದಿದ್ದರು. ಆ ಸಿನಿಮಾ ಮೂಲಕ ಅಣ್ಣಾವ್ರು ಕನ್ನಡ ಸಿನಿರಸಿಕರ ಮನಸ್ಸಿಗೆ ಲಗ್ಗೆ ಇಟ್ಟರು.

ರಾವಣನ ಗರ್ವ ಅಡಗುವ 'ಭೂಕೈಲಾಸ'
ಡಾ. ರಾಜ್‌ಕುಮಾರ್ ನಟನೆಯ ಮತ್ತೊಂದು ಶಿವಭಕ್ತಿ ಪ್ರದಾನ ಸಿನಿಮಾ 'ಭೂಕೈಲಾಸ'. ಕೆ. ಶಂಕರ್ ಈ ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದರು. ಶಿವನ ಪರಮ ಭಕ್ತನಾದ ರಾವಣ ತನ್ನ ಭಕ್ತಿಯಿಂದ ಮೂರು ಲೋಕವನ್ನು ಗೆಲ್ಲಬೇಕು ಎಂದುಕೊಳ್ಳುತ್ತಾನೆ. ಭಕ್ತರು ಕೇಳಿದ್ದನ್ನು ಕೊಡುವ ಶಿವ ರಾವಣ ಕೇಳಿದ ವರಗಳನ್ನು ಕೊಡುತ್ತಾನೆ. ಮುಂದೇನಾಗುತ್ತದೆ ಅನ್ನುವ ಕಥೆ ಚಿತ್ರದಲ್ಲಿದೆ. ರಾವಣಸುರನ ಪಾತ್ರದಲ್ಲಿ ಅಣ್ಣಾವ್ರು ಪರಕಾಯ ಪ್ರವೇಶ ಮಾಡಿದ್ದರು.

ಶಿವನೇ ಸತ್ಯ ಎಂದ 'ಹರಿಶ್ಚಂದ್ರ'
ಸತ್ಯ ಪಾಲನೆಗೆ ಹೆಸರಾದ ಇಕ್ಷ್ವಾಕು ವಂಶದ ದೊರೆ ರಾಜ ಹರಿಶ್ಚಂದ್ರನ ಕಥೆ. ಡಾ. ರಾಜ್‌ಕುಮಾರ್ ಮತ್ತೊಮ್ಮೆ ತಮ್ಮ ಮನೋಜ್ಞ ಅಭಿನಯದಿಂದ ಹರಿಶ್ಚಂದ್ರನ ಪಾತ್ರದಲ್ಲಿ ಗೆದ್ದರು. ತನ್ನ ಧೃಡ ನಿಶ್ಚಯ ಹಾಗೂ ಶಿವಭಕ್ತಿಯಿಂದ ವಿಶ್ವಾಮಿತ್ರನ ಪರೀಕ್ಷೆಗಳಲ್ಲಿ ಹರಿಹರಿಶ್ಚಂದ್ರ ಹೇಗೆ ಗೆಲ್ಲುತ್ತಾನೆ ಎನ್ನುವುದನ್ನು ಈ ಚಿತ್ರದಲ್ಲಿ ಸೊಗಸಾಗಿ ಕಟ್ಟಿಕೊಡಲಾಗಿತ್ತು. ಪಂಡರಿಬಾಯಿ, ಉದಯ್‌ಕುಮಾರ್, ನರಸಿಂಹ ರಾಜು, ಎಂ. ಪಿ ಶಂಕರ್‌ರಂತಹ ಘಟಾನುಘಟಿ ಕಲಾವಿದರು ಈ ಚಿತ್ರದಲ್ಲಿ ನಟಿಸಿದ್ದಾರೆ. ಕೆಲ ವರ್ಷಗಳ ಹಿಂದೆ ಈ ಚಿತ್ರವನ್ನು ಹೊಸ ತಂತ್ರಜ್ಞಾನದಲ್ಲಿ ಹೊಸ ರೂಪದಲ್ಲಿ ಮರುಬಿಡುಗಡೆ ಮಾಡಲಾಗಿತ್ತು.

ಭಕ್ತ ಸಿರಿಯಾಳನ ಶಿವಭಕ್ತಿ
ಲೋಕೇಶ್- ಆರತಿ ನಟನೆಯ 'ಭಕ್ತ ಸಿರಿಯಾಳ' ಮತ್ತೊಂದು ಕ್ಲಾಸಿಕ್ ಭಕ್ತಿ ಪ್ರಧಾನ ಸಿನಿಮಾ. ಹುಣಸೂರು ಕೃಷ್ಣಮೂರ್ತಿ ಬಹಳ ಸೊಗಸಾಗಿ ಸಿನಿಮಾ ತೆರೆಗೆ ತಂದಿದ್ದರು. ಶಿವಭಕ್ತನಾದ ಸಿರಿಯಾಳನ ಕಥೆ ಪ್ರೇಕ್ಷರಿಗೆ ಇಷ್ಟವಾಗಿತ್ತು. ಸಿರಿಯಾಳನನ್ನು ಪರೀಕ್ಷೆಗೆ ಒಡ್ಡುವ ರುದ್ರಶಿವ ಕೊನೆಗೆ ಸಿರಿಯಾಳನ ಭಕ್ತಿ ಮೆಚ್ಚಿ ಒಲಿಯುತ್ತಾನೆ.

ದ್ವಿಭಾಷಾ ಚಿತ್ರ 'ಶ್ರೀಮಂಜುನಾಥ'
ಕೆ. ರಾಘವೇಂದ್ರ ರಾವ್ ನಿರ್ದೇಶನದ 'ಶ್ರೀಮಂಜುನಾಥ' ಮತ್ತೊಂದು ಜನಪ್ರಿಯ ಶಿವಭಕ್ತಿ ಸಿನಿಮಾ. ಕನ್ನಡ ಮತ್ತು ತೆಲುಗಿನಲ್ಲಿ ಏಕಕಾಲಕ್ಕೆ ಈ ಸಿನಿಮಾ ನಿರ್ಮಾಣವಾಗಿತ್ತು. ಚಿರಂಜೀವಿ ಶಿವನನಾಗಿ ಮೀನಾ ಪಾರ್ವತಿಯಾಗಿ ನಟಿಸಿದ್ದರು. ಅರ್ಜುನ್ ಸರ್ಜಾ, ಸೌಂದರ್ಯ ಮಂಜುನಾಥ, ಕಾತ್ಯಾಯನಿ ಆಗಿ ಕಾಣಿಸಿಕೊಂಡಿದ್ದರು. ಈ ಸಿನಿಮಾದಲ್ಲೂ ಭಕ್ತ ಸಿರಿಯಾಳನ ಕಥೆಯ ಛಾಯೆ ಅಲ್ಲಲ್ಲಿ ಕಾಣುತ್ತದೆ.

ಹತ್ತಾರು ಶಿವಭಕ್ತಿ ಚಿತ್ರಗಳು
ಇನ್ನು ಶಿವಶರಣೆ ನಂಬಿಕ್ಕ, ಶಿವಭಕ್ತ ಮಾರ್ಕಂಡೇಯ, ಓಹಿಲೇಶ್ವರ, ಶ್ರೀಶೈಲ ಮಹಾತ್ಮೆ, ಶ್ರೀ ಧರ್ಮಸ್ಥಳ ಮಹಾತ್ಮೆ, ಸ್ವರ್ಣ ಗೌರಿ, ಶಿವರಾತ್ರಿ ಮಹಾತ್ಮೆ, ಪಾರ್ವತಿ ಕಲ್ಯಾಣ, ಗಂಗೆ ಗೌರಿ, ಶಿವಕನ್ಯೆ, ಶಿವ ಕೊಟ್ಟ ಸೌಭಾಗ್ಯ, ಶಿವಮೆಚ್ಚಿನ ಕಣ್ಣಪ್ಪ, ಶಿವಲೀಲೆ, ಭಕ್ತ ಶಂಕರ ಸೇರಿದಂತೆ ಸಾಕಷ್ಟು ಕನ್ನಡ ಸಿನಿಮಾಗಳಲ್ಲಿ ಶಿವನ ಮಹಿಮೆಯನ್ನು ಸಾರಲಾಗಿದೆ.


Click it and Unblock the Notifications











