'ಉಪೇಂದ್ರ' ಚಿತ್ರದಲ್ಲಿ ರವೀನಾ ಬದಲು ಐಶ್ ನಟಿಸ್ಬೇಕಿತ್ತು; ಎ. ಆರ್ ರಹಮಾನ್ ಟ್ಯೂನ್ ಹಾಕಬೇಕಿತ್ತು!
ರಿಯಲ್ ಸ್ಟಾರ್ ಬ್ಲಾಕ್‌ಬಸ್ಟರ್ ಸಿನಿಮಾಗಳಲ್ಲಿ 'ಉಪೇಂದ್ರ' ಕೂಡ ಒಂದು. 25 ವರ್ಷಗಳ ಹಿಂದೆ ಈ ಸಿನಿಮಾ ಭಾರೀ ಸಂಚಲನ ಸೃಷ್ಟಿಸಿತ್ತು. ಕನ್ನಡ ಮಾತ್ರವಲ್ಲದೇ ತೆಲುಗಿನಲ್ಲೂ ಸಿನಿಮಾ ತೆರೆಕಂಡು ಗೆದ್ದಿತ್ತು. ಉಪ್ಪಿ ತಮ್ಮದೇ ಹೆಸರಿಟ್ಟು ಸಿನಿಮಾ ಮಾಡಿ ಕಮಾಲ್ ಮಾಡಿದ್ದರು.
ರವೀನಾ ಟಂಡನ್, ಪ್ರೇಮಾ, ದಾಮಿನಿ 'ಉಪೇಂದ್ರ' ಚಿತ್ರದಲ್ಲಿ ಮೂವರು ನಾಯಕಿಯರಾಗಿ ಮಿಂಚಿದ್ದರು. ಬಹಳ ವಿಭಿನ್ನ ಕಥೆ ಹೇಳಿ ರಿಯಲ್ ಸ್ಟಾರ್ ಎಲ್ಲರ ಹುಬ್ಬೇರಿಸಿದ್ದರು. ಅದಾಗಲೇ 'ಎ' ಸೂಪರ್ ಹಿಟ್ ಬೆನ್ನಲ್ಲೇ 'ಉಪೇಂದ್ರ' ಕೂಡ ಗೆದ್ದು ಸದ್ದು ಮಾಡಿತ್ತು. ಗುರುಕಿರಣ್ ಸಂಗೀತದ ಸಿನಿಮಾ ಆಲ್ಬಮ್ ಹಿಟ್ ಆಗಿತ್ತು. ಆ ಚಿತ್ರದ ಹಾಡುಗಳನ್ನು ಇವತ್ತಿಗೂ ಸಿನಿರಸಿಕರು ಮರೆತ್ತಿಲ್ಲ.

25 ವರ್ಷಗಳ ಬಳಿಕ 'ಕರಿಮಣಿ ಮಾಲೀಕ ನಾನಲ್ಲ' ಎಂದು 'ಉಪೇಂದ್ರ' ಚಿತ್ರದ ಹಾಡು ಟ್ರೆಂಡ್ ಹುಟ್ಟಾಕ್ಕಿದ್ದು ಗೊತ್ತೇಯಿದೆ. ಇದೀಗ ಚಿತ್ರವನ್ನು ರೀ-ರಿಲೀಸ್ ಮಾಡುವ ಪ್ರಯತ್ನ ನಡೀತಿದೆ. ಬುಧವಾರ(ಸೆಪ್ಟೆಂಬರ್ 18) ರಿಯಲ್ ಸ್ಟಾರ್ ಹುಟ್ಟುಹಬ್ಬಕ್ಕೆ ಸಿನಿಮಾ ಹೊಸ ರೂಪದಲ್ಲಿ ತೆರೆಗೆ ಬರ್ತಿದೆ. ಈಗಾಗಲೇ ಅಡ್ವಾನ್ಸ್ ಬುಕ್ಕಿಂಗ್ ಶುರುವಾಗಿದ್ದು ಕೆಲ ಶೋಗಳ ಟಿಕೆಟ್ಸ್ ಸೋಲ್ಡೌಟ್ ಆಗೋಗಿದೆ. ಈ ಕಲ್ಟ್ ಸಿನಿಮಾ ಕ್ರೇಜೇ ಅಂಥಾದ್ದು.
'ಉಪೇಂದ್ರ' ಸಿನಿಮಾ ಸುತ್ತಾ ಸಾಕಷ್ಟು ಇಂಟ್ರೆಸ್ಟಿಂಗ್ ಸಂಗತಿಗಳಿವೆ. ಸಿನಿಮಾ ಮತ್ತೆ ತೆರೆಗೆ ಬರುತ್ತಿರುವ ಹಿನ್ನೆಲೆಯಲ್ಲಿ ನಿರ್ಮಾಪಕರಾದ ಶಿಲ್ಪ ಶ್ರೀನಿವಾಸ್ ಸಾಕಷ್ಟು ವಿಚಾರಗಳನ್ನು ಹಂಚಿಕೊಳ್ಳುತ್ತಿದ್ದಾರೆ. ಚಿತ್ರದಲ್ಲಿ ಕೀರ್ತಿ ಎನ್ನುವ ಮುಖ್ಯವಾದ ಪಾತ್ರಕ್ಕೆ ಬಾಲಿವುಡ್ ನಟಿ ರವೀನಾ ಟಂಡನ್ ಬಣ್ಣ ಹಚ್ಚಿದ್ದರು. 'ಮಸ್ತ್ ಮಸ್ತ್ ಹುಡುಗಿ ಬಂದ್ಲು' ಅಂತ ಒಂದು ಸ್ಪೆಷಲ್ ಸಾಂಗ್ ಕೂಡ ಇತ್ತು. ಆ ಪಾತ್ರದಲ್ಲಿ ರವೀನಾ ನಟಗೆ ಗಮನ ಸೆಳೆದಿತ್ತು.
ಮೊದಲಿಗೆ ಕೀರ್ತಿ ಪಾತ್ರಕ್ಕೆ ಉಪ್ಪಿನ ಐಶ್ವರ್ಯ ರೈ ಅವರನ್ನು ಆಯ್ಕೆ ಮಾಡಿದ್ದರಂತೆ. ಈ ಪಾತ್ರವನ್ನು ಆಕೆ ಮಾಡಿದರೆ ಚೆನ್ನಾಗಿರುತ್ತದೆ ಎಂದುಕೊಂಡಿದ್ದರಂತೆ. ಪಾತ್ರಕ್ಕೆ ಆಕೆಯನ್ನು ಸಂಪರ್ಕಿಸುವ ಕೆಲಸವೂ ನಡೆದಿತ್ತು. ಆಗಿನ್ನು ಐಶ್ ಚಿತ್ರರಂಗಕ್ಕೆ ಬಂದಿದ್ದ ಹೊಸತು. ಸಾಲದ್ದಕ್ಕೆ ಕರಾವಳಿ ಬೆಡಗಿ. ಆದರೆ ಡೇಟ್ಸ್ ಇಲ್ಲದ ಕಾರಣ ಆಕೆ ನಟಿಸೋಕೆ ಒಪ್ಪಿಲಿಲ್ಲ ಎಂದು ನಿರ್ಮಾಪಕ ಶಿಲ್ಪ ಶ್ರೀನಿವಾಸ್ ಫಿಲ್ಮ್ ಬೀಟ್‌ಗೆ ಮಾಹಿತಿ ನೀಡಿದ್ದಾರೆ.

ಉಪ್ಪಿ ನಿರ್ದೇಶಿಸಿ ನಟಿಸಿದ್ದ 'ಎ' ಚಿತ್ರಕ್ಕೆ ಗುರುಕಿರಣ್ ಟ್ಯೂನ್ ಹಾಕಿದ್ದರು. ಚಿತ್ರದ ಎಲ್ಲಾ ಹಾಡುಗಳು ಹಿಟ್ ಆಗಿತ್ತು. ಆದರೆ 'ಉಪೇಂದ್ರ' ಚಿತ್ರಕ್ಕೆ ರಿಯಲ್ ಸ್ಟಾರ್ ಹೊಸ ತಂಡ ಕಟ್ಟುವ ಲೆಕ್ಕಾಚಾರದಲ್ಲಿದ್ದರು. ಹಾಗಾಗಿ ಎ. ಆರ್ ರಹಮಾನ್ ಮ್ಯೂಸಿಕ್ ಕಂಪೋಸ್ ಮಾಡಿದ್ದರೆ ಚೆನ್ನಾಗಿರುತ್ತದೆ ಎಂದುಕೊಂಡಿದ್ದರು. 'ರೋಜಾ' ಚಿತ್ರಕ್ಕೆ ಟ್ಯೂನ್ ಹಾಕಿ ರಹಮಾನ್ ದೇಶಾದ್ಯಂತ ಸದ್ದು ಮಾಡಿದ್ದರು. ಹಾಗಾಗಿ ಅವರನ್ನು ಕನ್ನಡಕ್ಕೆ ಕರೆತರುವ ಪ್ರಯತ್ನ ನಡೆದಿತ್ತು.
'ಉಪೇಂದ್ರ' ಚಿತ್ರಕ್ಕೆ ಮ್ಯೂಸಿಕ್ ಮಾಡುವಂತೆ ನಿರ್ಮಾಪಕ ಶಿಲ್ಪ ಶ್ರೀನಿವಾಸ್ ಚೆನ್ನೈಗೆ ಹೋಗಿ ಎ. ಆರ್ ರಹಮಾನ್ ಅವರೊಟ್ಟಿಗೆ ಚರ್ಚಿಸಿದ್ದರು. ಬರೀ ಗೈಲಿ ಹೋಗುವುದು ಬೇಡ ಎಂದು ಸಣ್ಣ ಫ್ರಿಡ್ಜ್ ಅನ್ನು ಉಡುಗೊರೆಯಾಗಿ ಕೊಟ್ಟು ಮಾತನಾಡಿ ಬಂದಿದ್ದರು. ಆದರೆ ಬೇರೆ ಸಿನಿಮಾಗಳಲ್ಲಿ ರಹಮಾನ್ ಬ್ಯುಸಿ ಇದ್ದರಂತೆ. ಇತ್ತ ಉಪ್ಪಿ ಬೇಗ ಸಿನಿಮಾ ಮಾಡುವ ಧಾವಂತದಲ್ಲಿದ್ದರು. ಹಾಗಾಗಿ ಕೊನೆಗೆ ಮತ್ತೆ ಗುರುಕಿರಣ್ ಕೈಯಲ್ಲಿ ಟ್ಯೂನ್ ಹಾಕಿಸಿದ್ದರು.
ಅಂದಾಜು ಮೂರೂವರೆ ಕೋಟಿ ರೂ. ಬಜೆಟ್‌ನಲ್ಲಿ 'ಉಪೇಂದ್ರ' ಸಿನಿಮಾ ನಿರ್ಮಾಣವಾಗಿತ್ತು. 4 ಪಟ್ಟು ಆದಾಯ ಗಳಿಸಿ ಸಿನಿಮಾ ಗೆದ್ದಿತ್ತು. ಉಪ್ಪಿ ಮತ್ತವರ ತಂಡಕ್ಕೆ 17 ಲಕ್ಷ ರೂ. ಸಂಭಾವನೆಯಾಗಿ ಕೊಟ್ಟಿದ್ದೆ ಎಂದು ನಿರ್ಮಾಪಕರು ನೆನಪಿಸಿಕೊಂಡಿದ್ದಾರೆ. 'ಉಪೇಂದ್ರ' ಸಿನಿಮಾ ಮತ್ತೆ ತೆರೆಗೆ ಬರುತ್ತಿರುವುದು ಅಭಿಮಾನಿಗಳ ಸಂತಸಕ್ಕೆ ಕಾರಣವಾಗಿದೆ.


Click it and Unblock the Notifications











