ಪ್ರಶಾಂತ್ ನೀಲ್ ಮೇಲೆ ಅನಂತ್ ಸರ್ ಸಿಟ್ಟಾಗುತ್ತಿದ್ದರು.. ಯಾಕಂದ್ರೆ; ಮಾಳವಿಕಾ
ಬಹುಭಾಷಾ ನಟಿ ಮಾಳವಿಕಾ ಅವಿನಾಶ್ ಇವತ್ತಿಗೂ ಬಹು ಬೇಡಿಕೆ ನಟಿಯಾಗಿ ಗುರ್ತಿಸಿಕೊಂಡಿದ್ದಾರೆ. ಕನ್ನಡ ಮಾತ್ರವಲ್ಲದೇ ತೆಲುಗು, ತಮಿಳು ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ಪವರ್‌ಫುಲ್ ಪಾತ್ರಗಳಲ್ಲಿ ನಟಿಸಿ ಪ್ರೇಕ್ಷಕರ ಮನಗೆಲ್ಲುತ್ತಿದ್ದಾರೆ. 'KGF' ಸರಣಿ ಚಿತ್ರದ ಸಣ್ಣ ಪಾತ್ರದಲ್ಲಿ ಆಕೆಯ ನಟನೆಗೆ ಭಾರೀ ಮೆಚ್ಚುಗೆ ವ್ಯಕ್ತವಾಗಿತ್ತು.
ನಟಿಯಾಗಿ ಮಾತ್ರವಲ್ಲದೇ ಮಾಳವಿಕಾ ಅವಿನಾಶ್ ರಾಜಕೀಯರಂಗದಲ್ಲೂ ಗುರ್ತಿಸಿಕೊಂಡಿದ್ದಾರೆ. ಇತ್ತೀಚಿನ ವರ್ಷಗಳಲ್ಲಿ ತಮಿಳಿನ 'ಕೈದಿ' ಹಾಗೂ'ಎನಿಮಿ' ಸೇರಿದಂತೆ ಹಲವು ಸಿನಿಮಾಗಳಲ್ಲಿ ಬಣ್ಣ ಹಚ್ಚಿದ್ದರು. ರ್ಯಾಪಿಡ್ ರಶ್ಮಿ ಯೂಟ್ಯೂಬ್ ಸಂದರ್ಶನದಲ್ಲಿ ಮಾಳವಿಕಾ ಅವಿನಾಶ್ ಭಾಗಿ ಆಗಿದ್ದಾರೆ. ತಮ್ಮ ಸಿನಿಮಾ ಹಾಗೂ ವೈಯಕ್ತಿಕ ಜೀವನದ ಬಗ್ಗೆ ಸಾಕಷ್ಟು ಸಂಗತಿಗಳನ್ನು ಹಂಚಿಕೊಂಡಿದ್ದಾರೆ.

ಬಣ್ಣದ ಲೋಕಕ್ಕೆ ತಾವು ಬಂದಿದ್ದು ನಟನೆಯ ಎಬಿಸಿಡಿ ಕಲಿತಿದ್ದು ಎಲ್ಲವನ್ನು ವಿವರಿಸಿದ್ದಾರೆ. ಮುಖ್ಯವಾಗಿ 'KGF' ಸರಣಿ ಸಿನಿಮಾಗಳ ಇಂಪ್ಯಾಕ್ಟ್ ದೇಶ ವಿದೇಶಗಳಲ್ಲಿ ಹೇಗಿದೆ? ಎನ್ನುವ ಬಗ್ಗೆ ಮಾಳವಿಕಾ ಅವಿನಾಶ್ ಮಾತನಾಡಿದ್ದಾರೆ. 'KGF' ಚಿತ್ರದ ಸಣ್ಣ ಪಾತ್ರದಿಂದ ತಾವು ವಿದೇಶಕ್ಕೆ ಹೋದಾಗ ಅಲ್ಲಿನ ಜನ ಗುರ್ತಿಸಿದ್ದರ ಬಗ್ಗೆ ನೆನಪಿಸಿಕೊಂಡಿದ್ದಾರೆ. ಯಶ್ ಕನಸು ಹಾಗೂ ಪ್ರಶಾಂತ್ ನೀಲ್ ಕೆಲಸದ ಬಗ್ಗೆಯೂ ಪ್ರಸ್ತಾಪಿಸಿದ್ದಾರೆ.
'KGF' ಸಿನಿಮಾ ಮೂಲಕ ನಾವು ಬರೀ ಕರ್ನಾಟಕ ಬಿಟ್ಟು ಹೊರಗಡೆ ಹೋಗಿಲ್ಲ. ದೇಶ ವಿದೇಶಗಳಲ್ಲಿ ಕನ್ನಡ ಸಿನಿಮಾಗಳ ಬಗ್ಗೆ ಜನ ಮಾತನಾಡುವಂತಾಗಿದೆ. ನಾನು ದುಬೈನಲ್ಲಿ ತಮಿಳಿನ 'ಎನಿಮಿ' ಸಿನಿಮಾ ಚಿತ್ರೀಕರಣಕ್ಕೆ ಹೋಗಿದ್ದೆ. ಅಲ್ಲಿ ಒಂದಷ್ಟು ಪಾಕಿಸ್ತಾನದ ಜ್ಯೂನಿಯರ್ ಆರ್ಟಿಸ್ಟ್ ಬಂದಿದ್ದರು. ಅವರೆಲ್ಲಾ ನನ್ನನ್ನು ನೋಡಿ ಗುರ್ತಿಸಿ ನನ್ನ ಜೊತೆ ಫೋಟೊ ಕ್ಲಿಕ್ಕಿಸಿಕೊಂಡರು. ಸ್ಟಾರ್ ಹೀರೊಗಳಾದ ವಿಶಾಲ್, ಆರ್ಯ ಬಿಟ್ಟು ನನ್ನನನ್ನು ಗುರ್ತಿಸಿದ್ದು ನೋಡಿ ಅಚ್ಚರಿಯಾಯಿತು.
ನಾನು ಪ್ರಶಾಂತ್ ನೀಲ್‌ಗೆ ಫೋನ್ ಮಾಡಿ ಹೇಳಿದ್ದೆ. ಆಗ ಇನ್ನು 'KGF'-2 ಬಂದಿರಲಿಲ್ಲ. ಪಾರ್ಟ್-1 ನೋಡಿ ಅಂತಹ ಪ್ರತಿಕ್ರಿಯೆ ಸಿಕ್ಕಿತ್ತು. ಈಗ ಭಾಷೆಯ ಗಡಿದಾಟಿ ಕನ್ನಡ ಸಿನಿಮಾ ಕೂಡ ಹೆಸರು ಮಾಡಿದೆ ಎಂದು ಮಾಳವಿಕಾ ಹೇಳಿದ್ದಾರೆ. ಪ್ರಶಾಂತ್ ನೀಲ್ ಬಹಳ ಸ್ಟೈಲಿಶ್ ಹಾಗೂ ತಮಗೆ ಹೀಗೆ ಬೇಕು ಎಂದು ಪಟ್ಟು ಹಿಡಿಯುತ್ತಾರೆ.
ಪ್ರಶಾಂತ್ ನೀಲ್ ನಮಗೆ ಸಿಟ್ಟು ಬರುವಷ್ಟು ಸಲಹೆ ಕೊಡುತ್ತಾರೆ. ಒಂದೊಂದು ಟೇಕ್ ಕೂಡ 20- 30 ಸಲ ಮಾಡಿಸ್ತಾರೆ. ಅಷ್ಟರಮಟ್ಟಿಗೆ ಟಾಸ್ಕ್ ಮಾಸ್ಟರ್. ಪ್ರಶಾಂತ್ ನೀಲ್ ಹೇಗೆ ಅಂದರೆ ನೀವು ಎಷ್ಟೇ ದೊಡ್ಡ ಕಲಾವಿದರಾಗಿದ್ದರೂ ಹೊಸಬರಂತೆ ನೋಡುತ್ತಾರೆ. ನನಗೆ ನೀವು ಹೀಗೆ ನಟಿಸಬೇಕು ಎಂದು ಕೇಳುತ್ತಾರೆ. ಅನಂತ್ ನಾಗ್ ಸರ್ ಸಿಟ್ಟಾಗುತ್ತಿದ್ದರು. "ಎಷ್ಟೇ ಹೇಳಿದರೂ ಇವನಿಗೆ ಸಮಾಧಾನ ಆಗಲ್ಲ ಅಂತ".
ಮಾಳವಿಕಾ, ಅನಂತ್ ನಾಗ್ ಯಾರೆ ಆಗಿದ್ದರೂ ಪ್ರಶಾಂತ್ ನೀಲ್ ತಲೆ ಕೆಡಿಸಿಕೊಳ್ಳಲ್ಲ. ನನಗೆ ಹೀಗೆ ಬೇಕು, ಹೀಗೆ ಮಾಡಬೇಕು ಎನ್ನುತ್ತಿದ್ದರು. ತನಗೆ ಬೇಕು ಎನ್ನಿಸಿದ್ದು ಬರುವವರೆಗೂ ಬಿಡುತ್ತಿರಲಿಲ್ಲ ಎಂದು ಪ್ರಶಾಂತ್ ನೀಲ್ ಕೆಲಸದ ಬಗ್ಗೆ ಮಾಳವಿಕಾ ಮಾತನಾಡಿದ್ದಾರೆ. ಯೂರೋಪಿನ ಯಾವುದೇ ದೇಶದಲ್ಲಿ ಮಹಿಳೆಯೊಬ್ಬರು ತಮ್ಮನ್ನು ಗುರ್ತಿಸಿದ್ದು 'KGF' ಸಿನಿಮಾ ಸೀನ್ ತೋರಿಸಿ ಆಕೆ ಮಾತನಾಡಿದ್ದರ ಬಗ್ಗೆಯೂ ಮಾಳವಿಕಾ ವಿವರಿಸಿದ್ದಾರೆ.
ಅಂದಹಾಗೆ 'KGF'-2 ಚಿತ್ರದಿಂದ ಹಿರಿಯ ನಟ ಅನಂತ್ ನಾಗ್ ಹೊರ ಬಂದಿದ್ದರು. ಬಳಿಕ ಪ್ರಕಾಶ್ ರಾಜ್ ಅವರನ್ನು ಕರೆತಂದು ನೀಲ್ ಗೆದ್ದಿದ್ದರು. ಪ್ರಶಾಂತ್ ನೀಲ್ ಜೊತೆಗಿನ ಭಿನ್ನಾಭಿಪ್ರಾಯಗಳಿಂದಲೇ ಅನಂತ್ ನಾಗ್ ಸೀಕ್ವೆಲ್‌ನಲ್ಲಿ ನಟಿಸಲಿಲ್ಲ ಎನ್ನುವ ಮಾತುಗಳು ಕೇಳಿಬಂದಿತ್ತು.
'KGF' ಪಾರ್ಟ್ 1 ಬಳಿಕ ನಾನು ಯಶ್ ಜೊತೆ ಒಮ್ಮೆ ಮಾತನಾಡುತ್ತಿದ್ದೆ. ಈ ವೇಳೆ ನಿನ್ನ ಕರಿಯರ್‌ನಲ್ಲಿ ಹೀಗೆಲ್ಲಾ ಆಗುತ್ತದೆ ಎಂದು ನಿನಗೆ ಅನ್ನಿಸಿತ್ತಾ ಎಂದು ಕೇಳಿದ್ದೆ. ಖಂಡಿತ ಅಂದುಕೊಂಡಿದ್ದೆ ಎಂದು ಯಶ್ ಹೇಳಿದ್ದಾಗಿ ಮಾಳವಿಕಾ ವಿವರಿಸಿದ್ದಾರೆ. ಈಗಿನ ಕಾಲದಲ್ಲಿ ಕೆಲವರು ಅಷ್ಟು ಮುಂದಾಲೋಚನೆ ಮಾಡುತ್ತಾರೆ. ನಾನು ಭವಿಷ್ಯದ ಬಗ್ಗೆ ಅಷ್ಟೆಲ್ಲಾ ಯೋಚಿಸಲ್ಲ, ನನಗೆ ನಾಳೆ ಏನು? ಎನ್ನುವುದು ಗೊತ್ತಿಲ್ಲ ಎಂದಿದ್ದಾರೆ.


Click it and Unblock the Notifications











