twitter
    For Quick Alerts
    ALLOW NOTIFICATIONS  
    For Daily Alerts

    'ಛೇ, ಇಂಥಾ ಮೃದುಜೀವಿಗೆ ಈ ಶಿಕ್ಷೆ ನಿಜಕ್ಕೂ ಕ್ರೂರ'

    By ಮಂಡ್ಯ ರಮೇಶ್
    |

    ಒಂದಷ್ಟು ವರ್ಷಗಳ ಹಿಂದಿನ ಮಾತು. ಸ್ನಾನಕ್ಕೆಂದು ಟವೆಲ್ ಉಟ್ಟು ಹೊರಟಿದ್ದೆ. ಟಿವಿಯಲ್ಲಿ ಯಾವುದೋ ಚಿತ್ರ ಬರುತ್ತಿತ್ತು. ಪಾತ್ರಧಾರಿಯೊಬ್ಬ ತನ್ಮಯನಾಗಿ ನಟಿಸುತ್ತಿದ್ದ. ನನಗೆ ಅವನ ಚಲನೆ ವಿಸ್ಮಯ ಎನಿಸತೊಡಗಿತು. ಯಾರೀ ಹುಡುಗ, ಯಾವುದೀ ಚಿತ್ರ ಅಂತ ಹುಡುಕ ತೊಡಗಿದೆ. ಚಿತ್ರ 'ದಾಸವಾಳ'. ಆ ಹುಡುಗನ ನಂಬರ್ ಅನ್ನು ತಡಕಾಡಿ ಹುಡುಕಿ ಫೋನ್ ಮಾಡಿದೆ. 'ನಾನು ಮಂಡ್ಯ ರಮೇಶ್' ಅಂತ ಅಂದೆ. ಅವನು ದಿಗ್ಭ್ರಾಂತನಾಗಿ 'ಸರ್, ನೀವು, ಏನ್ಸಾರ್ ಇದು' ಅಂದ.

    'ದಾಸವಾಳ ಅಂತ ಚಿತ್ರ ನೋಡಿದೆ ಮಿತ್ರ, ಇವತ್ತಿನಿಂದ ನಾನು ನಿನ್ನ ಅಭಿಮಾನಿ. ಎಂಥಾ ಶ್ರೇಷ್ಠನಯ್ಯಾ ನೀನು' ಅಂತ ಮನತುಂಬಿ ಹೇಳಿದೆ. ಅವನು ತೀರಾ ಸಂತೋಷಪಟ್ಟು 'ಎಂಥಾ ಶುಭ ದಿನ ಕೊಟ್ಟಿರಿ ಸರ್, ಅದು ಹಳೆಯ ಚಿತ್ರ' ಅಂದ. 'ಪರ್ವಾಗಿಲ್ಲ ನಿನ್ನ ಅಭಿನಯ ನಿತ್ಯನೂತನವಾಗಿದೆ. ಇವತ್ತಲ್ಲ ನಾಳೆ ನ್ಯಾಷನಲ್ ಅವಾರ್ಡ್ ಗ್ಯಾರಂಟಿ!' ಅ೦ದೆ. ನಕ್ಕು, ಫೋನಿಟ್ಟ.

    ಹೋಟೆಲ್‌ನಲ್ಲಿ ಲೋಟ ತೊಳೆಯುತ್ತಿದ್ದ ಸಂಚಾರಿ ವಿಜಯ್ ರಾಷ್ಟ್ರಪ್ರಶಸ್ತಿ ಗೆದ್ದ ಮುಳ್ಳಿನ ಹಾದಿಯ ಪಯಣಹೋಟೆಲ್‌ನಲ್ಲಿ ಲೋಟ ತೊಳೆಯುತ್ತಿದ್ದ ಸಂಚಾರಿ ವಿಜಯ್ ರಾಷ್ಟ್ರಪ್ರಶಸ್ತಿ ಗೆದ್ದ ಮುಳ್ಳಿನ ಹಾದಿಯ ಪಯಣ

    ಕೆಲವೇ ದಿನಗಳಲ್ಲಿ ಕನ್ನಡಕ್ಕೆ ಮತ್ತೊಂದು ಗರಿ ಪ್ರಕಟವಾಯಿತು. 'ವಿಜಿ ನಟಿಸಿದ ನಾನು ಅವನಲ್ಲ ಅವಳು ಚಿತ್ರದ ನಟನೆಗೆ ರಾಷ್ಟ್ರ ಪ್ರಶಸ್ತಿ ದೊರಕಿತು.! ನಾನು ನನಗೇ ಪ್ರಶಸ್ತಿ ಬಂದಷ್ಟು ಸಂತೋಷದಿಂದ ಕುಣಿದಾಡಿದೆ. ಈ ಮಧ್ಯೆ ಅವನೊಂದಿಗೆ 'ಒಗ್ಗರಣೆ'ಯಲ್ಲಿ ನಟಿಸಿದೆ. ಅವನನ್ನು ಕಂಡಾಗಲೆಲ್ಲ ತೀರಾ ಆಪ್ತನೊಬ್ಬನ್ನನ್ನು ಕಂಡಷ್ಟು ಹಿತವಾಗುವುದು ಅಭ್ಯಾಸವಾಗಿಬಿಟ್ಟಿತ್ತು. ಮುಂದೆ ಓದಿ...

    ಮೈಸೂರಿಗೆ ಬಂದಾಗಲೇ ಮಾತನಾಡಲೇಬೇಕಿತ್ತು

    ಮೈಸೂರಿಗೆ ಬಂದಾಗಲೇ ಮಾತನಾಡಲೇಬೇಕಿತ್ತು

    ರಾಷ್ಟ್ರಪ್ರಶಸ್ತಿ ರೋಮಾಂಚನದಲ್ಲೇ ನಟನದ 'ರಜಾಮಜಾ' ಶಿಬಿರದಲ್ಲಿ ಅವನನ್ನು ಅವನ ಗುರು ಎನ್ ಮಂಗಳಾ ಸಮ್ಮುಖದಲ್ಲಿ ಅದ್ಧೂರಿಯಾಗಿ ಅಭಿನಂದಿಸಲಾಯಿತು. ಸಂಕೋಚದಿಂದ ಮುದುರಿ ಹೋಗಿದ್ದ. ಹೆಗ್ಗೋಡಿನ ನೀನಾಸಂನಲ್ಲಿ 'ಒಗ್ಗರಣೆ' ವಿಶೇಷ ಪ್ರದರ್ಶನ ಮುಗಿಸಿ ರಾತ್ರಿ ಕಾರಿನಲ್ಲಿ ನಾನು, ಅವನು, ಅರವಿಂದ್ ಕುಪ್ಲಿಕರ್ ಮಾತಾಡಿದ್ದೇ ಮಾತಾಡಿದ್ದು. ತೀರಾ ಸಂತೋಷದ ಘಳಿಗೆಗಳು ಅವು. ಅಲ್ಲಿಂದಾಚೆ ಅವನು ಮೈಸೂರಿಗೆ ಬಂದಾಗಲೆಲ್ಲಾ ಶೂಟಿಂಗ್ ನಂತರ ಭೇಟಿಯಾಗಿ ನಮ್ಮ ಹುಡುಗರಿಗೆ ಕ್ಲಾಸ್ ಮಾಡಿ, ಒಳ್ಳೆ ಊಟ ಮಾಡಿ, ಸಿಕ್ಕಾಪಟ್ಟೆ ಮಾತನಾಡಿ ಹೋಗದಿದ್ದರೆ ಅವನಿಗೆ ಸಮಾಧಾನವೇ ಇರುತ್ತಿರಲಿಲ್ಲ.

    ಓದಿನ ಹವ್ಯಾಸ ಚೆನ್ನಾಗಿತ್ತು

    ಓದಿನ ಹವ್ಯಾಸ ಚೆನ್ನಾಗಿತ್ತು

    ಮೊನ್ನೆ ಮೊನ್ನೆ ಮಕ್ಕಳ ಮಿನ್ಕಾಣ್ಕೆ ಶಿಬಿರ ಉದ್ಘಾಟಿಸಿ ಮಕ್ಕಳೊಂದಿಗೆ ಮಾತನಾಡಿ ರಂಗಭೂಮಿಯ ಮಹತ್ವವನ್ನು ತಿಳಿ ಹೇಳಿದ. ಓದಿನ ಹವ್ಯಾಸ ಚೆನ್ನಾಗಿತ್ತು. ಒಳ್ಳೊಳ್ಳೇ ಬಟ್ಟೆ ಹಾಕಿ ಸುಂದರವಾಗಿ ಕಾಣುವ ಗುಣಗಳಿತ್ತು. ಜೊತೆಗೆ ಪಾತ್ರ ಆಯ್ಕೆಯಲ್ಲಿ ತೀರಾ ಚ್ಯೂಸಿಯಾಗಿದ್ದ. ಪಾತ್ರ ಮಾಡುವಾಗ ಆ ಪಾತ್ರದಲ್ಲಿ ಪೂರ್ಣ ಕರಗಿಹೋಗುವುದಕ್ಕೆಬೇಕಾದ ಎಲ್ಲ ಪೂರ್ವಸಿದ್ಧತೆಯನ್ನ ಶಿಸ್ತಿನಿಂದ ಮಾಡಿಕೊಳ್ಳುತ್ತಿದ್ದ. ಅದನ್ನೂ ಚಾಚೂ ತಪ್ಪದೆ ಅನುಸರಿಸುತ್ತಿದ್ದ.

    ಸಂಚಾರಿ ವಿಜಯ್ ಕೈಯಲ್ಲಿದ್ದ ಮುಂದಿನ ಚಿತ್ರಗಳ ವಿವರಸಂಚಾರಿ ವಿಜಯ್ ಕೈಯಲ್ಲಿದ್ದ ಮುಂದಿನ ಚಿತ್ರಗಳ ವಿವರ

    ಅದಕ್ಕೆ ದೊಡ್ಡ ಸಾಕ್ಷಿ

    ಅದಕ್ಕೆ ದೊಡ್ಡ ಸಾಕ್ಷಿ

    ಈಚೆಗೆ ಆತನೊಂದಿಗೆ ಅಭಿನಯಿಸಿದ 'ತಲೆದಂಡ' ಅತ್ಯಂತ ಮಹತ್ವಾಕಾಂಕ್ಷಿ ಚಿತ್ರ. ಚಿತ್ರದಲ್ಲಿ ಆತ ತೋರಿದ ಶ್ರದ್ಧೆ ,ಇಡೀ ಚಿತ್ರದಲ್ಲಿ ಆತ ನಟಿಸಿರುವ ಅಭಿನಯದ ಉತ್ಕೃಷ್ಟತೆಯ ಪರಾಕಾಷ್ಠೆ ಕಂಡು ನಾನು ಬೆರಗಾಗಿಬಿಟ್ಟಿದ್ದೇನೇ. ಅವನ ಜೀವನದ ಮತ್ತೊಂದು ಮಹಾ ಮೈಲುಗಲ್ಲು 'ತಲೆದಂಡ' ಚಿತ್ರದ ಅಭಿನಯ.

    ಉಸಿರು ತಂಡದ ಸದಸ್ಯನಾಗಿದ್ದ

    ಉಸಿರು ತಂಡದ ಸದಸ್ಯನಾಗಿದ್ದ

    ಜಾಗತಿಕ ಸಿನಿಮಾ, ವೆಬ್ ಸಿರೀಸ್ ಗಳ ಮುಕ್ತ ಚರ್ಚೆ ಅವನೊಂದಿಗೆ ಸಾಧ್ಯವಿತ್ತು. ಅಭಿನಯ ಪದ್ಧತಿಗಳ, ಹೊಸ ಅವಿಷ್ಕಾರಗಳ ಕುರಿತು ಸದಾ ಚಿಂತಿಸುತ್ತಿದ್ದ. ಹೇರಳವಾದ ಬದುಕಿನ ಅನುಭವ. ಅವಮಾನ, ಹೋರಾಟ, ಗೆಲುವು ....ಮತ್ತೆ ಹುಡುಕಾಟ. ಈ ಹಾದಿಯಲ್ಲಿ ಇವನಷ್ಟು 'ಸಜ್ಜನಿಕೆ'ಯ ಹುಡುಗನನ್ನು ಈಚಿನ ದಿನಗಳಲ್ಲಿ ನಾನು ಕಂಡದ್ದಿಲ್ಲ. ಅಪಾರ ಜೀವನ್ಮುಖಿ. ಕೋವಿಡ್ ಕಷ್ಟಕಾಲದಲ್ಲಿ ಆತ ಸಾಮಾನ್ಯರಿಗೆ 'ಉಸಿರು' ನೀಡಲು ಉಸಿರುಗಟ್ಟಿ ಶ್ರಮಿಸುತ್ತಿದ್ದ.

    ಹುಷಾರು ಕಣೋ ಎಂದಿದ್ದೆ

    ಹುಷಾರು ಕಣೋ ಎಂದಿದ್ದೆ

    'ಸಿಕ್ಕಾಪಟ್ಟೆ ಸುತ್ತಾಡ್ತಿದ್ದೀ ಮಗಾ, ಹುಷಾರು ಕಣೋ... ಬೇಗ ಮದುವೆಯಾಗಲೇ, ನಿನಗೊಂದು ಲಗಾಮು ಬೇಕು!' ಅ೦ತ ಛೇಡಿಸಿದ್ದಿದೆ. ಅಷ್ಟು ಆಪ್ತವಾಗಿದ್ದ. ಅವನೊಂದಿಗಿನ ಅಪರೂಪದ ರಾತ್ರಿಯೂಟಗಳಲ್ಲಿ ಸಾಹಿತ್ಯ, ಸಂಗೀತ, ಅಭಿನಯ, ಸಿನಿಮಾಗಳ ಚರ್ಚೆ, ತಮಾಷೆಗಳ ಜೊತೆಗೆ ಗಂಭೀರ ಆಶಯದ ಅನೇಕ ಕನಸುಗಳನ್ನು ಕ೦ಡಿದ್ದ ಆಶಾವಾದಿ. ಮಧುರ ಹಾಡುಗಾರ, ಸಹೃದಯಿ, ಅವನ ನಗುವಿನಲ್ಲಿ ಮಗುತನವಿತ್ತು. ಮುಂದಿದ್ದವರನ್ನು ಮೆಲುದನಿಯ ಮುಗುಳ್ನಗುವಿನಲ್ಲಿ ಮಾತನಾಡಿಸುತ್ತಲೇ ಮೋಹಿತರನ್ನಾಗಿ ಮಾಡುತ್ತಿದ್ದ ಮಧುರವಾದ ಯುವಕ ಆತ.

    ಕರಾಳ ದಿನ ಇದು

    ಕರಾಳ ದಿನ ಇದು

    ಅವನ ಸ್ನೇಹದಲ್ಲಿ ಕೋಪ, ಅಸಹನೆ, ತಿರಸ್ಕಾರ, ವ್ಯಂಗ್ಯ ಕುಹಕ ನುಡಿ ಇಲ್ಲವೇ ಇಲ್ಲ... ತಮಾಷೆಯಿತ್ತು, ಗೇಲಿ ಇರಲಿಲ್ಲ. ಗೆಳೆಯರನ್ನು, ಹಿರಿಯರನ್ನು ಗೌರವಿಸುವುದು ಅವನಿಗೆ ಸಹಜವಾಗೇ ಸಿದ್ಧಿಸಿತ್ತು. ಛೇ, ಇಂಥಾ ಮೃದುಜೀವಿಗೆ ಈ ಶಿಕ್ಷೆ ನಿಜಕ್ಕೂ ಕ್ರೂರ. ನೆನೆದೊಡನೆ ಕಣ್ತುಂಬುವ ಈ ಘಳಿಗೆಗಳು ಮರುಕಳಿಸದಿರಲಿ. ದುಗುಡವಿಕ್ಕುವ ಈ ರಾತ್ರಿಗಳು ಯಾವ ಮಿತ್ರರ ಬದುಕಲ್ಲೂ ಬಾರದಿರಲಿ. ಅಭಿನಯ- ವ್ಯಕ್ತಿತ್ವ ಎರಡರಲ್ಲೂ ಘನತೆ ತೋರಿದ ಕನ್ನಡ ಮಣ್ಣಿನ ಅಪರೂಪದ ತಮ್ಮನೊಬ್ಬ ಕಳೆದುಹೋದ ಕರಾಳ ದಿನ ಇದು. ಕರುಳು ಕತ್ತರಿಸುವ ಈ ಕಳವಳಗಳು ಕರಗಿ ಹೋಗಲಪ್ಪ...

    Recommended Video

    ನಗುಮೊಗದ ಸಂಚಾರಿ ವಿಜಯ್ ಜೀವನಚರಿತ್ರೆ | Filmibeat Kannada
    ಕ್ಷಮಿಸಿ ಬಿಡು ಗೆಳೆಯ

    ಕ್ಷಮಿಸಿ ಬಿಡು ಗೆಳೆಯ

    'ದೇವರೇ ಆ ಮನೆಯವರಿಗೆ ಸಂತೈಸುವ ಶಕ್ತಿಯೂ ನಮಗಿಲ್ಲದೇ ಹೋಯಿತೆ... ಛೇ, ಎದುರಿಸುವ ಪರಿಯೇ ತೋರುತ್ತಿಲ್ಲ. ಕ್ಷಮಿಸಿ ಬಿಡು, ಗೆಳೆಯ. ತುಂಬ ದಿನ ಕಾಡುತ್ತಿ ನೀನು. ನಡುವಿನ ಈ ಧಿಡೀರ್ ನಿರ್ಗಮನ ಮನಕಲಕಿದೆ ಮಿತ್ರ' ಎಂದು ಮಂಡ್ಯ ರಮೇಶ್ ಭಾವುಕತೆ ವ್ಯಕ್ತಪಡಿಸಿದರು.

    English summary
    Kannada senior Actor Mandya Ramesh share his deepest thoughts on Sanchari Vijay
    Tuesday, June 15, 2021, 8:41
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X