twitter
    For Quick Alerts
    ALLOW NOTIFICATIONS  
    For Daily Alerts

    ಸ್ವಾತಂತ್ರ್ಯ ಸಂಗ್ರಾಮ ಮತ್ತು ಕರ್ನಾಟಕ: ಸಿನಿಮಾದವರಿಗೆ ಇದು ವಸ್ತುವೇ ಅಲ್ಲ!

    |

    ಭಾರತೀಯ ಚಿತ್ರರಂಗದಲ್ಲಿ ಅದರಲ್ಲೂ ವಿಶೇಷವಾಗಿ ಹಿಂದಿ ಸಿನಿಮಾದಲ್ಲಿ ಈಗ ಬಯೋಪಿಕ್‌ಗಳನ್ನು ಒಂದರ ಹಿಂದೊಂದರಂತೆ ತೆರೆಗೆ ತರಲಾಗುತ್ತಿದೆ. ಅದು ಮಾತ್ರವೇ ಅಲ್ಲ ಐತಿಹಾಸಿಕ ಘಟನೆಗಳನ್ನು ಆಧರಿಸಿದ ಸಿನಿಮಾಳು ಸಹ ಹಲವು ತೆರೆಗೆ ಬರುತ್ತಿವೆ. ಕಾರ್ಗಿಲ್ ಯುದ್ಧ ಕುರಿತು 'ಶೇರ್ಷಾ' 1979ರ ಭಾರತ-ಪಾಕ್ ಯುದ್ಧ ಕುರಿತ 'ಭುಜ್' ಸಿನಿಮಾಗಳು ಕೇವಲ ಎರಡು ದಿನಗಳ ಅಂತರದಲ್ಲಿ ಬಿಡುಗಡೆ ಆಗಿವೆ.

    ಹಿಂದಿ ಮಾತ್ರವೇ ಅಲ್ಲ ಇತರ ಹಲವು ಚಿತ್ರರಂಗಗಳಲ್ಲಿ ಆ ರಾಜ್ಯದ ಐತಿಹಾಸಿಕ ಘಟನೆಗಳು, ಹೋರಾಟಗಳನ್ನು ಆಧರಿಸಿ ಸಿನಿಮಾಗಳು ಇತ್ತೀಚೆಗೆ ಬರುತ್ತಿವೆ. ಇದೇ ಸಾಲಿಗೆ ಸೇರುವ ಮಲಯಾಳಂನ 'ಮರಕ್ಕರ್' ಸಿನಿಮಾ ಈಗಾಗಲೇ ರಾಷ್ಟ್ರಪ್ರಶಸ್ತಿ ಧಕ್ಕಿಸಿಕೊಂಡಿದೆ. ತೆಲುಗಿನ 'ಸೈರಾ ನರಸಿಂಹರೆಡ್ಡಿ' ದೊಡ್ಡ ಹಿಟ್ ಆಗಿದೆ. ಈಗ ತೆಲುಗಿನಲ್ಲಿ ನಿರ್ಮಾಣವಾಗುತ್ತಿರುವ 'ಆರ್ಆರ್ಆರ್'. ಇಂಥಹಾ ಉದಾಹರಣೆಗಳು ಸಾಕಷ್ಟಿವೆ.

    ಕರ್ನಾಟಕದಲ್ಲಿಯೂ ಅನೇಕ ಸಾಧಕರಿದ್ದಾರೆ. ಅನೇಕ ಐತಿಹಾಸಿಕ ಘಟನೆಗಳು ನಡೆದಿವೆ. ಅದರಲ್ಲಿಯೂ ಸ್ವಾತಂತ್ರ್ಯ ಹೋರಾಟಕ್ಕೆ ಕರ್ನಾಟಕದ್ದು ವಿಶೇಷ ಕೊಡುಗೆ ಇದೆ. ಆದರೆ ಇವೆಲ್ಲವೂ ಏಕೆ ನಮ್ಮ ಸಿನಿಮಾ ಕರ್ಮಿಗಳಿಗೆ ಕಾಣುತ್ತಿಲ್ಲ ಎಂಬುದು ದೊಡ್ಡ ಯಕ್ಷ ಪ್ರಶ್ನೆ. ಇಂದು ಸ್ವಾತಂತ್ರ್ಯ ದಿನವಾದ್ದರಿಂದ ಕರ್ನಾಟಕದ ಪ್ರಮುಖ ಸ್ವಾತಂತ್ರ್ಯ ಹೋರಾಟ ಮತ್ತು ಹೋರಾಟಗಾರರ ಬಗೆಗಿನ ಇಣುಕು ನೋಟ ಇಲ್ಲಿದೆ.

    ಕಿತ್ತೂರಿನ ಹೋರಾಟ ಅರಿಯದ ಕನ್ನಡಿಗರಿಲ್ಲ

    ಕಿತ್ತೂರಿನ ಹೋರಾಟ ಅರಿಯದ ಕನ್ನಡಿಗರಿಲ್ಲ

    ಕರ್ನಾಕಟದ ಸ್ವಾತಂತ್ರ್ಯ ಹೋರಾಟ ಎಂದೊಡನೆ ನೆನಪಿಗೆ ಬರುವುದು ಕಿತ್ತೂರು. ಕಿತ್ತೂರ ರಾಣಿ ಚೆನ್ನಮ್ಮನ ವೀರ ಹೋರಾಟ ತಿಳಿಯದ ಕನ್ನಡಿಗರು ಕಡಿಮೆ. 1961ರಲ್ಲಿ ಬಿ.ಆರ್.ಪಂತುಲು ಅವರು 'ಕಿತ್ತೂರು ಚೆನ್ನಮ್ಮ' ಹೆಸರಿನ ಸಿನಿಮಾ ಮಾಡಿದ್ದರು. ಅದಾದ ಬಳಿಕ ವೀರ ರಾಣಿಯ ಬಗ್ಗೆ ಸಿನಿಮಾಗಳು ಬಂದಂತಿಲ್ಲ. ಇನ್ನು ಕಿತ್ತೂರಿಗೆ ಸಂಬಂಧಿಸಿದ ವೀರ ಯೋಧ ಸಂಗೊಳ್ಳಿ ರಾಯಣ್ಣನ ಹೋರಾಟ ಸಾವಿಲ್ಲದ್ದು. ನಟ ದರ್ಶನ್ ಅಭಿನಯದ 'ಸಂಗೊಳ್ಳಿ ರಾಯಣ್ಣ' ದೊಡ್ಡ ಹಿಟ್ ಆಗಿದ್ದು ಒಂದು ಸಮಾಧಾನ.

    ಧೋಂಡಿಯ ವಾಘ್ ಎಂಬ ಹೋರಾಟದ ಹುಲಿ

    ಧೋಂಡಿಯ ವಾಘ್ ಎಂಬ ಹೋರಾಟದ ಹುಲಿ

    ಬ್ರಿಟೀಷರ ವಿರುದ್ಧ ಬಂಡಾಯ ಎದ್ದ ಮೊದಲಿಗರಲ್ಲಿ ಒಬ್ಬರು ಸಹ್ಯಾದ್ರಿಯ ಹುಲಿ ಧೋಂಡಿಯ ವಾಘ್. ಶಿವಮೊಗ್ಗದ ಚೆನ್ನಗಿರಿಯ ಧೋಂಡಿಯ ವಾಘ್‌ನ ವೀರತ್ವದ ಕತೆಗಳನ್ನು ಕೇಳಿ ಹೈದರನು ಸೈನ್ಯಕ್ಕೆ ಸೇರಿಸಿಕೊಂಡನು. ಅಲ್ಲಿ ತರಬೇತಿ ಪಡೆದು ಅಲ್ಲಿಂದ ಧಾರವಾಡಕ್ಕೆ ಹೋಗಿ ಅಲ್ಲಿ ಪಾಳೆ ಪಟ್ಟಣವನ್ನು ಕಟ್ಟಿದ. ನಂತರ ಆತನ ಕೀರ್ತಿ ಟಿಪ್ಪುವಿನ ಕಿವಿಗೆ ಬಿದ್ದು ಆತನನ್ನು ಸೈನ್ಯಕ್ಕೆ ಆಹ್ವಾನಿಸಿದ. ಆತ ಶ್ರೀರಂಗಪಟ್ಟಣಕ್ಕೆ ಹೊದಾಗ ಆತನನ್ನು ಬಲವಂತದಿಂದ ಇಸ್ಲಾಂ ಧರ್ಮಕ್ಕೆ ಮತಾಂತರ ಮಾಡಲಾಯಿತು. ಮತ್ತೆ ಅಲ್ಲಿಂದ ತಪ್ಪಿಸಿಕೊಂಡು ಪರಾರಿಯಾಗಿ ಬ್ರಿಟೀಷರೊಂದಿಗಿನ ಹೋರಾಟ ಮುಂದುವರೆಸಿದ. ಶಿವಮೊಗ್ಗವನ್ನು ಬ್ರಿಟೀಷರಿಂದ ಮುಕ್ತ ಮಾಡಿದ ಧೋಂಡಿಯಾ ವಾಘ್‌ನ ಆತನ ಉಪಟಳ ತಾಳಲಾರದೆ ಬ್ರಿಟೀಷರು ಲಾರ್ಡ್ ವೆಲ್ಲೆಸ್ಲಿ ನೇತೃತ್ವದಲ್ಲಿ ಸೈನ್ಯವೊಂದನ್ನು ಕಟ್ಟಿ ಧೋಂಡಿಯ ವಾಘ್‌ ವಿರುದ್ಧ ಹೋರಾಟಕ್ಕೆ ನಿಂತರು. ಆ ಕಾಲಕ್ಕೆ ಒಂದು ಲಕ್ಷ ಸಂಖ್ಯೆಯ ಸೈನ್ಯವನ್ನು ಕಟ್ಟಿದ್ದ ವಾಘ್. ಆತನನ್ನು ಎದುರಿಸುವುದು ಬ್ರಿಟೀಷರಿಗೂ ಸಾಹಸವಾಗಿಬಿಟ್ಟಿತ್ತು. ಕೊನೆಗೆ ಬ್ರಿಟೀಷರ ದೊಡ್ಡ ಸೈನ್ಯದೊಟ್ಟಿಗೆ ಶಿರಹಟ್ಟಿ ಸಮೀಪದ ಕೋನಗಲ್‌ನಲ್ಲಿ ನಡೆದ ಕಾದಾಟದಲ್ಲಿ ವಾಘ್ ಕೊನೆ ಉಸಿರೆಳೆದ.

    ಬಾದಾಮಿಯ ಸ್ವಾತಂತ್ರ್ಯ ಹೋರಾಟ

    ಬಾದಾಮಿಯ ಸ್ವಾತಂತ್ರ್ಯ ಹೋರಾಟ

    ಕಿತ್ತೂರಿನ ಹೋರಾಟದಷ್ಟೆ ಬಾದಾಮಿಯ ಸ್ವಾತಂತ್ರ್ಯ ಹೋರಾಟ ಮಹತ್ತರವಾದುದು. ಭಾರತದ ಪ್ರಥಮ ಸ್ವಾತಂತ್ರ್ಯ ಸಂಗ್ರಾಮ ನಡೆಯುವ ಮುನ್ನವೇ ಬಾದಾಮಿಯಲ್ಲಿ 1841ರಲ್ಲಿ ಬ್ರಿಟೀಷರ ವಿರುದ್ಧ ಸಂಗ್ರಾಮ ಏರ್ಪಟ್ಟಿತ್ತು. ಬಾದಾಮಿಯಲ್ಲಿ ನರಸಿಂಗ ದತ್ತಾತ್ರೆಯ ಬ್ರಿಟೀಷರ ವಿರುದ್ಧ ಸಮರ ಸಾರಿದ್ದ ದೊಡ್ಡ ದಳವೊಂದನ್ನು ಕಟ್ಟಿಕೊಂಡು ಬಾದಾಮಿ ಕೋಟೆಯನ್ನು ವಶಪಡಿಸಿಕೊಂಡು ಅದರ ಮೇಲೆ ಸತಾರಾದ ರಾಜನ ಬಾವುಟ ಹಾರಿಸಿದ್ದರು. ನಂತರ ಬೆಳಗಾವಿ, ಧಾರಾವಾಡಗಳಿಂದ ದೊಡ್ಡ ಸೈನ್ಯವನ್ನು ತರಿಸಿ ನರಸಿಂಗನ ದಳವನ್ನು ಸೋಲಿಸಿ ಆತನನ್ನು ಬಂಧಿಸಲಾಯಿತು. ಆದರೆ ನರಸಿಂಗರಾಯ ಅಂಧನಾದ್ದರಿಂದ ಆತನಿಗೆ ಮರಣದಂಡನೆ ಬದಲಿಗೆ ಜೀವಾವಧಿ ಶಿಕ್ಷೆ ನೀಡಲಾಗಿತ್ತು.

    ಹಲಗಲಿಯ ಬೇಡರ ಕೆಚ್ಚೆದೆಯ ಹೋರಾಟ

    ಹಲಗಲಿಯ ಬೇಡರ ಕೆಚ್ಚೆದೆಯ ಹೋರಾಟ

    ಹಲಗಲಿಯ ಬೇಡರು ಬ್ರಿಟೀಷರೆದುರು ಮಾಡಿದ ಹೋರಾಟ ಅಪ್ರತಿಮವಾದುದು. ಸಿನಿಮಾ ನಿರ್ಮಾಣಕ್ಕೆ ಹೇಳಿ ಮಾಡಿಸಿದಂತಹಾ ನಿಜ ಕತೆ ಇದು. 1857ರ ಪ್ರಥಮ ಸ್ವಾತಂತ್ರ್ಯ ಸಂಗ್ರಾಮದ ಬಳಿಕ ಬ್ರಿಟೀಷರಿಗೆ ಭಾರತೀಯರ ಮೇಲೆ ಅಪನಂಬಿಕೆ ಹೆಚ್ಚಾಯ್ತು. ಭಾರತೀಯರು ಆಯುಧ ಇಟ್ಟುಕೊಳ್ಳುವಂತಿಲ್ಲ ಎಂದು ಕಾನೂನು ಜಾರಿ ಮಾಡಿಬಿಟ್ಟರು. ಆದರೆ ಆಯುಧವೇ ಅನ್ನವಾಗಿದ್ದ ಬೇಡರು ಇದಕ್ಕೆ ತೀವ್ರವಾಗಿ ಪ್ರತಿಭಟಿಸಿದರು. ಆಯುಧ ಹೊಂದುವುದು ನಮ್ಮ ಆಜನ್ಮ ಸಿದ್ಧ ಹಕ್ಕು ಎಂದು ವಾದಿಸಿದರು. ಹಲಗಲಿಯ ನೆರೆಯ ಹಳ್ಳಿಗಳಾದ ಮಂಟೂರು, ಭೋಧಾನಿ, ಅಲಗುಂಡಿಗಳಿಂದಲೂ ಬೇಡರು ತಂಡತಂಡವಾಗಿ ಬಂದು ಹಲಗಲಿಯಲ್ಲಿ ಸೇರಿಬಿಟ್ಟರು. ಬ್ರಿಟೀಷರ ವಿರುದ್ಧ ಹೋರಾಟ ಘೋಷಿಸಿದರು. ಚಾಣಾಕ್ಷ ಬೇಡರ ಮುಂದೆ ಬ್ರಿಟೀಷ್ ಸೈನ್ಯ ಪರದಾಡಬಿಟ್ಟರು. ಹಲಗಲಿಯ ಮನೆಗಳ ಒಳಗೆ ಸೇರಿಕೊಂಡು ಚಾಕಚಕ್ಯತೆಯಿಂದ ಬೇಡ ಸಮುದಾಯದವರು ದಾಳಿ ಮಾಡಲಾರಂಭಿಸಿದರು. ಕೊನೆಗೆ ಕುಯುಕ್ತಿ ಬಳಸಿದ ಬ್ರಿಟೀಷ್ ಸೇನಾಧಿಪತಿ ಸೇಟರ್ ಮನೆಗಳಿಗೆ ಬೆಂಕಿ ಹಚ್ಚಿಸಿಬಿಟ್ಟ. ಆದರೆ ಹೋರಾಟ ನಿರತ ಬೇಡರು ಅದೆಷ್ಟು ಸ್ವಾಭಿಮಾನಿಳಂದರೆ ಹೊರಗೆ ಹೋಗಿ ಬ್ರಿಟೀಷರ ಮುಂದೆ ಮಂಡಿ ಊರುವುದಕ್ಕಿಂತಲೂ ಒಳಗಿದ್ದು ಬೂದಿಯಾಗುವುದು ಲೇಸೆಂದು ಮನೆಗಳ ಒಳಗೇ ಉಳಿದುಬಿಟ್ಟರು.

    ಸುರಪುರದ ವೆಂಕಟಪ್ಪನಾಯಕ

    ಸುರಪುರದ ವೆಂಕಟಪ್ಪನಾಯಕ

    ಒಂದು ಸಮಯದಲ್ಲಿ ರಾಜ್ಯವಾಗಿದ್ದ ಸುರಪುರ ಇಂದು ಯಾದಗಿರಿ ಜಿಲ್ಲೆಯಲ್ಲಿ ಪುಟ್ಟ ಗ್ರಾಮ. ವೆಂಕಟಪ್ಪನಾಯಕ ಎಂಬ ತರುಣ ಸುರಪುರವನ್ನು ಆಳುತ್ತಿದ್ದ ಅದಾಗಲೇ ಮರಾಠರು, ನಿಜಾಮರ ಕಾಟದಿಂದ ಸುರಪುರ ಆರ್ಥಿಕವಾಗಿ ದಿವಾಳಿಯಾಗಿತ್ತು ಆ ಸಮಯದಲ್ಲಿ ಬ್ರಿಟೀಷರು ಕರ ನೀಡುವಂತೆ ಒತ್ತಾಯ ಮಾಡಲಾರಂಭಿಸಿದರು. ಇದೇ ಸಮಯದಲ್ಲಿ ಡಾಲೌಸಿಗೆ ತೀಕ್ಷ್ಣವಾಗಿ ಪತ್ರ ಬರೆದ ವೆಂಕಪ್ಪನಾಯಕ ಬ್ರಿಟೀಷರ ವಿರುದ್ಧ ಅವರಿಗೇ ಅರಿಯದ ರೀತಿಯಲ್ಲಿ ದೊಡ್ಡ ಸೈನ್ಯವೊಂದನ್ನು ಸೇರಿಸಿದ್ದ. ಆದರೆ ವೆಂಕಟಪ್ಪನಾಯಕ ಸಲಹೆಗಾರನಾಗಿದ್ದ ವಾಗನಗೇರೆ ಭೀಮರಾಯ ಬ್ರಿಟೀಷರ ಪರ ನಿಂತು ಅವರಿಗೆ ಮಾಹಿತಿ ಸೋರಿಕೆ ಮಾಡಿ ಕೋಟೆಯ ಒಳಗೆ ಬರುವ ಕಳ್ಳದಾರಿಯನ್ನು ಬ್ರಿಟೀಷರಿಗೆ ಬಿಟ್ಟುಕೊಟ್ಟ. ವೆಂಕಟಪ್ಪನಾಯಕನಿಗೂ ದಿಕ್ಕೂ ತಪ್ಪಿಸಿ ಕೋಟೆ ಬಿಟ್ಟು ಓಡಿಹೋಗುವಂತೆ ಮಾಡಿದ. ತಾನೂ ವೆಂಕಟಪ್ಪನಾಯಕನ ಜೊತೆಗೆ ಹೋಗಿ ಮಧ್ಯದಾರಿಯಲ್ಲಿ ಅವನಿಂದ ಹಣ, ಆಭರಣ ದೋಚಿ ಪರಾರಿಯಾದ. ಬ್ರಿಟೀಷರ ಕೈಗೆ ಸಿಕ್ಕಿಹಾಕಿಕೊಂಡ ವೆಂಕಟಪ್ಪನಾಯಕ ಆತ್ಮಹತ್ಯೆಗೆ ಶರಣಾದ.

    ಮುಂಡರಗಿ ಭೀಮರಾವ್, ನರಗುಂದ ಬಾಬಾ ಸಾಹೇಬ್

    ಮುಂಡರಗಿ ಭೀಮರಾವ್, ನರಗುಂದ ಬಾಬಾ ಸಾಹೇಬ್

    ವಿದ್ಯಾವಂತ, ಸಾಹಸಿ, ತೀಕ್ಷ್ಣಮತಿಯಾಗಿದ್ದ ಮುಂಡರಗಿ ಭೀಮರಾವ್ ಬಳ್ಳಾರಿ, ಹರಪನಹಳ್ಳಿಗಳಲ್ಲಿ ತಹಶೀಲ್ದಾರ್ ಆಗಿ ಕೆಲಸ ಮಾಡಿದ್ದ. ಉತ್ತರ ಭಾರತದಲ್ಲಿ ನಡೆಯುತ್ತಿದ್ದ ಸ್ವಾತಂತ್ರ್ಯ ಸಂಗ್ರಾಮದ ಬಗ್ಗೆ ಅರಿವಿದ್ದ ಆತನಿಗೆ ಬ್ರಿಟೀಷರ ಕೈಯಡಿ ಕೆಲಸ ಮಾಡುವುದು ಇಷ್ಟವಿಲ್ಲದೆ ಹೆಮ್ಮಿಗೆಯ ಕೆಂಚನಗೌಡ, ಸೊರಟೂರಿನ ದೇಸಾಯಿ ಇನ್ನೂ ಹಲವು ಅನುಯಾಯಿಗಳನ್ನು ಸೇರಿಸಿಕೊಂಡು ಬ್ರಿಟೀಷರ ವಿರುದ್ಧ ಯುದ್ಧ ಸಾರಿದ. ಡಂಬಳದ ಖಜಾನೆ ಲೂಟಿ ಮಾಡಿದ. ಅಲ್ಲಿಂದ ಕೊಪ್ಪಳಕ್ಕೆ ಹೋಗಿ ಕೋಟೆಯನ್ನು ವಶಪಡಿಸಿಕೊಂಡ. ನಂತರ ಬ್ರಿಟೀಷರು ಬೆಳಗಾವಿ, ಧಾರವಾಡ, ಹೈದರಾಬಾದ್‌ಗಳಿಂದ ದೊಡ್ಡ ಸೈನ್ಯ ತರಿಸಿ ಕೊಪ್ಪಳದ ಮೇಲೆ ದಾಳಿ ಮಾಡಿದರು. ಕೊನೆಯ ವರೆಗೆ ಹೋರಾಡಿದ ಮುಂಡರಗಿ ಭೀಮರಾವ್ ಮದ್ದು-ಗುಂಡುಗಳು ಖಾಲಿಯಾಗಿ ಇನ್ನು ಸಿಕ್ಕಿ ಬೀಳುವುದು ಖಾಯಂ ಎಂದು ಗೊತ್ತಾದ ಮೇಲೆ ಆತ್ಮಹತ್ಯೆ ಮಾಡಿಕೊಂಡ. ನರಗುಂದ ಭಾಸ್ಕರ್‌ರಾವ್ ಅಥವಾ ಬಾಬಾಸಾಹೇಬ್ ದತ್ತು ಮಕ್ಕಳಿಗೆ ಆಸ್ತಿ ಹಕ್ಕಿಲ್ಲ ಎಂಬ ಡಾಲ್‌ಹೌಸಿಯ ಕಾನೂನಿನ ವಿರುದ್ಧ ಗುಪ್ತ ಹೋರಾಟ ಮಾಡಿದ ಕಾನೂನಿಗೆ ಮುಖ್ಯ ಕಾರಣಕರ್ತನಾದ ಮ್ಯಾನ್ಸನ್ ಎಂಬ ಬ್ರಿಟೀಷ್ ಅಧಿಕಾರಿಯ ಕೊಲೆ ಮಾಡಲಾಯಿತು. ಆದರೆ ಬಾಬಾರಾವ್ ತಂಡದಲ್ಲಿದ್ದವರೇ ಬ್ರಿಟೀಷರಿಗೆ ಗುಪ್ತ ಮಾಹಿತಿ ಒದಗಿಸುತ್ತಿದ್ದರೆಂಬುದು ಬಾಬಾಸಾಹೇಬ್‌ಗೆ ಗೊತ್ತಾಗಿ ನರಗುಂದದಲ್ಲಿ ಬ್ರಿಟೀಷರ ವಿರುದ್ಧ ಬಹಿರಂಗ ಹೋರಾಟ ಪ್ರಾರಂಭಿಸಿದ. ನರಗುಂದದಲ್ಲಿ ದೊಡ್ಡ ಕಾಳಗ ನಡೆದು ಕೊನೆಗೆ ಬಾಬಾಸಾಹೇಬ್ ಅಲ್ಲಿಂದ ತಪ್ಪಿಸಿಕೊಂಡ. ತೋರಗಲ್ ಕಾಡಿನಲ್ಲಿ ಬ್ರಿಟೀಷರಿಗೆ ಸೆರೆಯಾಗಿ ಆತನಿಗೆ ಮರಣದಂಡನೆ ವಿಧಿಸಲಾಯ್ತು.

    ಇನ್ನೂ ಹಲವು ಹೋರಾಟಗಾರರು ಇದ್ದಾರೆ

    ಇನ್ನೂ ಹಲವು ಹೋರಾಟಗಾರರು ಇದ್ದಾರೆ

    ಹೀಗೆ ಬರೆಯುತ್ತಾ ಸಾಗಿದರೆ ಇನ್ನೂ ಹಲವಾರು ಮಂದಿ ಕೆಚ್ಚೆದೆಯ ಹೋರಾಟಗಾರರು, ಯೋಧರು ಕನ್ನಡದಲ್ಲಿ ಸಿಗುತ್ತಾರೆ. ಈಸೂರು ದಂಗೆ, ಬೆಳಗಾವಿ ಕಾಂಗ್ರೇಶ್ ಅಧಿವೇಶನ, ಕಾನೂನು ಭಂಗ ಚಳವಳಿ, ಶಿವಪುರದ ಧ್ವಜ ಸತ್ಯಾಗ್ರಹ, ಹೈದರಾಲಿ ಮತ್ತು ಟಿಪ್ಪು ಸುಲ್ತಾನ್ ಮಾಡಿದ ಕೆಚ್ಚೆದೆಯ ಹೋರಾಟ ಹೀಗೆ ಹಲವಾರು ಪ್ರಮುಖ ಘಟನೆಗಳು, ಸ್ವಾತಂತ್ರ್ಯ ಹೋರಾಟಗಾರರ ಕತೆಗಳು ಕರ್ನಾಟಕದಲ್ಲಿವೆ. ಆದರೆ ನಮ್ಮ ಸಿನಿಮಾ ನಿರ್ದೇಶಕರಿಗೆ ಅವು ಸಿನಿಮಾ ಮಾಡಬಹುದಾದ ಕತೆಗಳಾಗಿ ಕಾಣಿಸುತ್ತಿಲ್ಲ ಎಂಬುದು ಕನ್ನಡ ಸಿನಿಮಾ ಪ್ರೇಕ್ಷಕರ ದುರಾದೃಷ್ಟ.

    English summary
    Many freedom fighters are in Karnataka. State Karnataka plays bg part in freedom fight but no film maker wants to do a movie about this.
    Sunday, August 15, 2021, 17:16
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X