ತಮ್ಮ ಚಿತ್ರಕ್ಕೆ ನೆಗೆಟಿವ್ ಕಾಮೆಂಟ್ಸ್ ಬಂದಾಗ ಅಪ್ಪು ಏನಂದಿದ್ರು ಗೊತ್ತಾ?
ಸ್ಯಾಂಡಲ್‌ವುಡ್‌ನಲ್ಲಿ 'ಮಾರ್ಟಿನ್' ಸಿನಿಮಾ ರಿವ್ಯೂ ವಿಚಾರ ವಿವಾದಕ್ಕೆ ಕಾರಣವಾಗಿದೆ. ಧ್ರುವ ಸರ್ಜಾ ನಟನೆಯ ಈ ಆಕ್ಷನ್ ಎಂಟರ್‌ಟೈನರ್ ಸಿನಿಮಾ ಕಳೆದ ವಾರ ತೆರೆಗೆ ಬಂದಿತ್ತು. ಎಪಿ ಅರ್ಜುನ್ ನಿರ್ದೇಶನದ ಚಿತ್ರಕ್ಕೆ ಪ್ರೇಕ್ಷಕರಿಗೆ ಮಿಶ್ರ ಪ್ರತಿಕ್ರಿಯೆ ಸಿಕ್ಕಿದೆ. ಕೆಲವರು ನೇರವಾಗಿಯೇ ಸಿನಿಮಾ ಚೆನ್ನಾಗಿಲ್ಲ ಎಂದಿದ್ದಾರೆ.
ಸೋಶಿಯಲ್ ಮೀಡಿಯಾದಲ್ಲಿ ಕೆಲವರು ಸಿನಿಮಾ ಬಗ್ಗೆ ರಿವ್ಯೂ ಮಾಡಿದ್ದಾರೆ. ಯೂಟ್ಯೂಬರ್ ಸುಧಾಕರ್ ಗೌಡ ಮಾಡಿದ ರಿವ್ಯೂ ವೀಡಿಯೋ ಬಗ್ಗೆ ಕೆಲವರು ಕೆಂಡಾಮಂಡಲವಾಗಿದ್ದರು. ತನಗೆ ಧ್ರುವ ಸರ್ಜಾ ಅಭಿಮಾನಿಗಳು ಬೆದರಿಕೆ ಹಾಕಿದ್ದಾರೆ ಎಂದು ಅವರು ಆರೋಪಿಸಿದ್ದಾರೆ. ಇನ್ನು ಆ ರಿವ್ಯೂ ವೀಡಿಯೋ ಡಿಲೀಟ್ ಮಾಡಿ ಕ್ಷಮೆ ಕೇಳಿದ್ದು ಆಯಿತು. ಬಳಿಕ ತಮಗೆ ಬೆದರಿಕೆ ಹಾಕಿದವರಿಗೆ ಸುಧಾಕರ್ ಸವಾಲು ಹಾಕಿದ್ದರು.

ಇನ್ನು 'ಮಾರ್ಟಿನ್' ಬಗ್ಗೆ ನೆಗೆಟಿವ್ ರಿವ್ಯೂ ಮಾಡಿರುವ ವೀಡಿಯೋಗಳನ್ನು ರಿಪೋರ್ಟ್ ಮಾಡಿ ಡಿಲೀಟ್ ಮಾಡಿಸುತ್ತಿದ್ದಾರೆ ಎನ್ನುವ ಆರೋಪವೂ ಕೇಳಿಬಂದಿದೆ. ಚಿತ್ರತಂಡವೇ ಇಂತಹ ರಿವ್ಯೂಗಳನ್ನು ಸಹಿಸೋಕೆ ಸಿದ್ಧವಿಲ್ಲ ಎನ್ನಲಾಗ್ತಿದೆ. ಇದೆಲ್ಲದರ ನಡುವೆ ದುಡ್ಡು ಕೊಟ್ಟು ಸಿನಿಮಾ ನೋಡುವ ಪ್ರೇಕ್ಷಕನಿಗೆ ತನ್ನ ಅಭಿಪ್ರಾಯ ತಿಳಿಸುವ ಸ್ವಾತಂತ್ರ ಇಲ್ಲವೇ? ಎನ್ನುವ ಚರ್ಚೆ ಶುರುವಾಗಿದೆ. ಸಿನಿಮಾ ಚೆನ್ನಾಗಿಲ್ಲ ಎಂದು ಹೇಳುವುದೇ ತಪ್ಪೇ? ಎಂದು ಕೆಲವರು ಪ್ರಶ್ನಿಸುತ್ತಾರೆ. ಸೋಶಿಯಲ್ ಮೀಡಿಯಾದಲ್ಲಿ ಈ ಬಗ್ಗೆ ಭಾರೀ ಚರ್ಚೆ ನಡೀತಿದೆ.
ಇತ್ತೀಚೆಗೆ ಚಿತ್ರ ನಿರ್ದೇಶಕ ಪ್ರಕಾಶ್ ರಾಜ್ ಮೇಹು ಸಹ ಫೇಸ್‌ಬುಕ್‌ನಲ್ಲಿ ಈ ಬಗ್ಗೆ ಬರೆದುಕೊಂಡಿದ್ದರು. ಅಣ್ಣಾವ್ರು ಸಿನಿಮಾ ವಿಮರ್ಶೆಯ ಬಗ್ಗೆ ಹೇಗೆ ಪ್ರತಿಕ್ರಿಯಿಸುತ್ತಿದ್ದರು ಎಂದು ನೆನಪಿಸಿಕೊಂಡಿದ್ದರು. ಡಾ. ರಾಜ್‌ಕುಮಾರ್ ಜೊತೆ ಬಹಳ ವರ್ಷಗಳ ಒಡನಾಟ ಅವರಿಗಿತ್ತು. 'ಶಬ್ದವೇದಿ' ಚಿತ್ರದ ಬಗ್ಗೆ ಗೌರಿ ಲಂಕೇಶ್ ಬೈದು ವಿಮರ್ಶೆ ಮಾಡಿದ್ದರಂತೆ. ಆಗ ಅಣ್ಣಾವ್ರು ಆ ಮಗು ಸರಿಯಾಗಿ ಬರೆದಿದೆ. ಸಾಧ್ಯವಾದರೆ ಆಕೆಯನ್ನು ಮನೆಗೆ ಕರೆಸಿ ಅಭಿನಂದಿಸಬೇಕು ಎಂದಿದ್ದರಂತೆ.

ನಟ ಪುನೀತ್ ರಾಜ್‌ಕುಮಾರ್ ಸಹ ಟೀಕೆಗಳನ್ನು ಸಕಾರಾತ್ಮಕವಾಗಿ ಸ್ವೀಕರಿಸುತ್ತಿದ್ದರು. ಅಪ್ಪು ನಟಿಸಿದ 'ನಿನ್ನಿಂದಲೇ' ಸಿನಿಮಾ ಹೀನಾಯವಾಗಿ ಸೋತಿತ್ತು. ಸೋಶಿಯಲ್ ಮೀಡಿಯಾ ಈಗಿನಷ್ಟು ಆಗ ಪ್ರಬಲವಾಗಿ ಇರಲಿಲ್ಲ. ಆಗಷ್ಟೆ ಫೇಸ್‌ಬುಕ್, ಟ್ವಿಟರ್ ಸದ್ದು ಮಾಡಲು ಆರಂಭಿಸಿದ್ದ ಸಮಯ ಅದು. ಈ ಚಿತ್ರದ ಬಗ್ಗೆ ಕೆಲವರು ನೆಗೆಟಿವ್ ಕಾಮೆಂಟ್ ಮಾಡಿದ್ದರು. ಈ ಬಗ್ಗೆ ಪತ್ರಿಕೆವೊಂದಕ್ಕೆ ನೀಡಿದ್ದ ಸಂದರ್ಶನದಲ್ಲಿ ಪುನೀತ್ ಮಾತನಾಡಿದ್ದರು.
"ಸಿನಿಮಾ ಚೆನ್ನಾಗಿದೆ, ಚೆನ್ನಾಗಿಲ್ಲ ಎಂದು ನಾನು ವೈಯಕ್ತಿವಾಗಿ ಹೇಳಲ್ಲ. ಆದರೆ ಜನರಿಗೆ ಸಿನಿಮಾ ಇಷ್ಟವಾಗುತ್ತಿಲ್ಲ ಎಂದರೆ ಅದರಲ್ಲಿ ಸತ್ಯ ಇದೆ ಎನ್ನುವುದನ್ನು ನಾನು ಒಪ್ಪುತ್ತೇನೆ. ಜನ ಸುಮ್ಮನೆ ಏನೂ ಹೇಳಲ್ಲ. ಸಿನಿಮಾ ಚೆನ್ನಾಗಿದ್ದಾಗ ಇಷ್ಟಪಟ್ಟು ಮಾತನಾಡಿದ್ದಾರೆ. ಹಣ ಕೊಟ್ಟು ಸಿನಿಮಾ ನೋಡುವವನಿಗೆ ಟೀಕಿಸುವ ಹಕ್ಕು ಇರುತ್ತದೆ. ಟೀಕೆಯನ್ನು ಮುಕ್ತವಾಗಿ ಸ್ವಾಗತಿಸೋಣ" ಎಂದಿದ್ದರು.
ಕೆಲವೊಮ್ಮೆ ಸಿನಿಮಾಗಳು ಸೋತಾಗ ನಿರ್ಮಾಪಕ, ನಿರ್ದೇಶಕರ ಮೇಲೆ ಗೂಬೆ ಕೂರಿಸುವವರು ಇದ್ದಾರೆ. ಇದೇ ವಿಚಾರದ ಬಗ್ಗೆ ಅಪ್ಪು ಆ ಸಂದರ್ಶನದಲ್ಲಿ ಮುಂದುವರೆದು ಮಾತನಾಡಿದ್ದರು. "ನಿನ್ನಿಂದಲೇ ಚಿತ್ರಕ್ಕೆ ಮಿಶ್ರ ಪ್ರತಿಕ್ರಿಯೆ ಬಂದಿದ್ದಕ್ಕೆ ನಾನು ನಿರ್ದೇಶಕ ಅಥವಾ ನಿರ್ಮಾಪಕರನ್ನು ದೂಷಿಸುವುದಿಲ್ಲ. ಅದಕ್ಕೆ ಕಾರಣ ಏನು ಎಂದು ಹುಡುಕಬೇಕು. ನಿರ್ದೇಶಕರು ಕಥೆ ಹೇಳಿದಾಗ ಚೆನ್ನಾಗಿದೆ ಎನಿಸಬಹುದು. ಪ್ರಾಕ್ಟಿಕಲ್ ಆಗಿ ತೆರೆಮೇಲೆ ಆ ರೀತಿ ಬರದೇ ಹೋಗಬಹುದು. ಕೆಲವೊಮ್ಮೆ ಜಡ್ಜ್‌ಮೆಂಟ್ ಮಾಡುವುದಕ್ಕೆ ಆಗಲ್ಲ. ಮುಂದೆ ಒಳ್ಳೆ ಸಿನಿಮಾ ಮಾಡ್ತೀನಿ" ಎಂದು ಹೇಳಿದ್ದರು.
ಸದ್ಯ 'ಮಾರ್ಟಿನ್' ಸಿನಿಮಾ ರಿವ್ಯೂ ವಿವಾದ ತಾರಕಕ್ಕೇರುತ್ತಿದ್ದಂತೆ ಅಂದು ಪುನೀತ್ ರಾಜ್‌ಕುಮಾರ್ ಆಡಿದ್ದ ಮಾತುಗಳು ವೈರಲ್ ಆಗುತ್ತಿದೆ. ಅಭಿಮಾನಿಗಳು ಯಾವತ್ತಿಗೂ ದೊಡ್ಮನೆ ದೊಡ್ಮನೆನೇ ಎಂದು ಕಾಮೆಂಟ್ ಮಾಡುತ್ತಿದ್ದಾರೆ.


Click it and Unblock the Notifications











