ಅಣ್ಣಾವ್ರ ಹಿಂದಿನ ಜನ್ಮದ ಬಗ್ಗೆ ಮಾಸ್ಟರ್ ಆನಂದ್ ಮಾತು; ಎದುರಾಯ್ತು ಭಾರೀ ಟೀಕೆ
ಬಾಲನಟನಾಗಿ ಚಿತ್ರರಂಗಕ್ಕೆ ಬಂದು ಗೆದ್ದವರು ಆನಂದ್. ಮುಂದೆ ಹಾಸ್ಯ ನಟನಾಗಿ ನಿರ್ದೇಶಕರಾಗಿಯೂ ಗುರ್ತಿಸಿಕೊಂಡರು. ಕನ್ನಡ ಕಿರುತೆರೆಯ ನಿರೂಪಕರಾಗಿಯೂ ಆನಂದ್ ಗಮನ ಸೆಳೆದಿದ್ದಾರೆ. ಸಂದರ್ಶನವೊಂದರಲ್ಲಿ ನಟಸಾರ್ವಭೌಮ ರಾಜ್‌ಕುಮಾರ್ ಬಗ್ಗೆ ಮಾಸ್ಟರ್ ಆನಂದ್ ಆಡಿರುವ ಮಾತುಗಳು ಕೆಲವರ ಬೇಸರಕ್ಕೆ ಕಾರಣವಾಗಿದೆ.
ವರನಟ ರಾಜ್‌ಕುಮಾರ್ ಸಾಧನೆಯ ಶಿಖರ. ಕನ್ನಡ ಸಿನಿಮಾಲೋಕಕ್ಕೆ ಮಾತ್ರವಲ್ದೇ ಕರುನಾಡಿಗೆ ಅತ್ಯಮೂಲ್ಯ ಕೊಡುಗೆ ನೀಡಿದವರು. ತಮ್ಮ ನಟನೆಯಿಂದ ಕನ್ನಡಿಗರ ಮನದಲ್ಲಿ ನೆಲೆಸಿರುವ ರಾಜಕುಮಾರ್ ಅವರ ಪೌರಾಣಿಕ, ಸಾಮಾಜಿಕ ಚಿತ್ರಗಳು, ಅವುಗಳಲ್ಲಿನ ಮೌಲ್ಯ ಎಂದೆಂದಿಗೂ ಶಾಶ್ವತ. ಬರೀ ಸಿನಿಮಾ ಮಾತ್ರವಲ್ಲ ನಿಜ ಜೀವನದಲ್ಲಿ ಕೂಡ ತಮ್ಮ ಸರಳ ಸಜ್ಜನ ವ್ಯಕ್ತಿತ್ವದಿಂದ ರಾಜ್‌ಕುಮಾರ್ ಎಲ್ಲರಿಗೂ ಮಾದರಿ ಆಗಿದ್ದರು.

ರಂಗಭೂಮಿಯಿಂದ ಚಿತ್ರರಂಗಕ್ಕೆ ಬಂದು ಮುತ್ತುರಾಜ್ ಗೆದ್ದಿದ್ದರು. ಆಡು ಮುಟ್ಟದ ಸೊಪ್ಪಿಲ್ಲ, ಅಣ್ಣಾವ್ರು ಮಾಡದ ಪಾತ್ರಗಳಿಲ್ಲ ಎಂದರೆ ಅತಿಶಯೋಕ್ತಿ ಆಗುವುದಿಲ್ಲ. ಇನ್ನು ಯಾವುದೇ ಪಾತ್ರ ಕೊಟ್ಟರೂ ಪರಕಾಯ ಪ್ರವೇಶ ಮಾಡಿ ಆ ಪಾತ್ರವೇ ತಾವಾಗಿ ಬಿಡುತ್ತಿದ್ದರು. ಅಣ್ಣಾನ ಈ ಅದ್ಭುತ ಶಕ್ತಿಗೆ ಕಾರಣ ಏನಿರಬಹುದು ಎಂದು ಮಾಸ್ಟರ್ ಆನಂದ್ ಮಾತನಾಡಿದ್ದಾರೆ. ರ್ಯಾಪಿಡ್ ರಶ್ಮಿ ಯೂಟ್ಯೂಬ್ ಸಂದರ್ಶನದಲ್ಲಿ ಸಾಕಷ್ಟು ವಿಚಾರಗಳನ್ನು ಹಂಚಿಕೊಂಡಿದ್ದಾರೆ.
ಸಂದರ್ಶನದಲ್ಲಿ ಅಣ್ಣಾವ್ರ ಹಿಂದಿನ ಜನ್ಮದ ಬಗ್ಗೆ ಮಾಸ್ಟರ್ ಆನಂದ್ ಮಾತನಾಡಿರುವುದು ಕೆಲವರ ಬೇಸರಕ್ಕೆ ಕಾರಣವಾಗಿದೆ. ರಾಜ್‌ಕುಮಾರ್ ಅವರಿಗೆ ಬಹಳ ಆಪ್ತರು ಆಗಿದ್ದ ನಿರ್ದೇಶಕ ಪ್ರಕಾಶ್ ರಾಜ್ ಮೇಹು ಈ ಬಗ್ಗೆ ಬೇಸರ ವ್ಯಕ್ತಪಡಿಸಿದ್ದಾರೆ. ಇದೆಲ್ಲಾ ಮೂಢನಂಬಿಕೆ ಎಂದು ಅವರು ಫೇಸ್‌ಬುಕ್‌ನಲ್ಲಿ ಬರೆದುಕೊಂಡಿದ್ದಾರೆ. ಕೆಲವರು ಇದಕ್ಕೆ ದನಿಗೂಡಿಸಿದ್ದಾರೆ.
ಮಾಸ್ಟರ್ ಆನಂದ್ ಆಧ್ಯಾತ್ಮದತ್ತ ವಾಲಿದ್ದಾರೆ. ವಿಜಯ್ ಗುರೂಜಿ ಅವರನ್ನು ಅನುಸರಿಸುತ್ತಿದ್ದಾರೆ. ಅಣ್ಣಾವ್ರ ಸಾಧನೆ ಬಗ್ಗೆ ಗುರೂಜಿ ಹೇಳಿದ ಸಂಗತಿಯನ್ನು ಸಂದರ್ಶನದಲ್ಲಿ ಬಿಚ್ಚಿಟ್ಟಿದ್ದಾರೆ. "ಅಣ್ಣಾವ್ರ ಬಹಳ ಚೆನ್ನಾಗಿ ಬದುಕಿದವರು. ಕೊನೆಯವರೆಗೂ ಯಾವುದೋ ಶಕ್ತಿ ಇದೆಲ್ಲಾ ನನ್ನಿಂದ ಮಾಡಿಸುತ್ತಿದೆ ಎನ್ನುತ್ತಿದ್ದರು. ಇದೆಲ್ಲಾ ಹೇಗೆ ಸಾಧ್ಯ ಎಂದು ನಾನು ಗುರೂಜಿ ಅವರನ್ನು ಕೇಳಿದ್ದೆ" ಎಂದು ಮಾಸ್ಟರ್ ಆನಂದ್ ಆ ವಿಚಾರ ಹೇಳಿದ್ದಾರೆ.
"ಅಣ್ಣಾವ್ರು ಹಿಂದಿನ ಜನ್ಮದಲ್ಲಿ ರಾಮಕೃಷ್ಣ ಪರಮಹಂಸರ 7ನೇ ಶಿಷ್ಯ ಎಂದು ಗುರೂಜಿ ನನಗೆ ಹೇಳಿದರು. ರಾಜ್‌ಕುಮಾರ್ ಅಂದಾಕ್ಷಣ ಅನ್ನಮಯ ಕೋಶ ನಮ್ಮ ಕಣ್ಮುಂದೆ ಬರುತ್ತದೆ. ಅದನ್ನು ಬಿಟ್ಹಾಕಿ. ಅಣ್ಣಾವ್ರ ಹಿನ್ನೆಲೆ ಬಗ್ಗೆ ಗುರೂಜಿ ಒಂದು ಘಟನೆಯನ್ನು ಹೇಳಿದರು. ಅಣ್ಣಾವ್ರು, ರಾಮಕೃಷ್ಣ ಪರಮಹಂಸರ ಶಿಷ್ಯ ಎಂದು ಈ ಹಿಂದೆ ಕೂಡ ಸಂದರ್ಶನವೊಂದರಲ್ಲಿ ಯಾರೋ ಹೇಳಿದ್ದಾರೆ" ಎಂದು ಮಾಸ್ಟರ್ ಆನಂದ್ ತಿಳಿಸಿದ್ದಾರೆ.
ಒಮ್ಮೆ ರಾಮಕೃಷ್ಣ ಪರಮಹಂಸರ ಬಳಿಕ ಅಣ್ಣಾವ್ರು ಕುಳಿತ್ತಿದ್ದರಂತೆ. ಅವರ ಮನಸ್ಸು ಅರಿತ ರಾಮಕೃಷ್ಣ ಪರಮಹಂಸ ನಿನಗೆ ಏನು ಬೇಕು ಎಂದು ಕೇಳಿದ್ದರಂತೆ. ಆಗ ಅಣ್ಣಾವ್ರು ನಾನು ಕಲೆಯಲ್ಲಿ ಮುಂದೆ ಬರಬೇಕು ಎನ್ನುವ ಆಸೆ ನನಗೆ ಎಂದು ಕೇಳಿದ್ದರಂತೆ. ಅದೇ ರೀತಿ ಆಗ್ತೀಯಾ ಹೋಗು ಎಂದು ಆಶೀರ್ವದಿಸಿದ್ದರಂತೆ, ಕಟ್ ಮಾಡಿದರೆ ಮುಂದೆ ಮುತ್ತುರಾಜನಾಗಿ ಹುಟ್ಟಿದ್ದರು" ಎಂದು ಗುರೂಜಿ ಹೇಳಿದ್ದನ್ನು ಮಾಸ್ಟರ್ ಆನಂದ್ ನೆನಪು ಮಾಡಿಕೊಂಡಿದ್ದಾರೆ.
ಮುಂದೆ ಅಣ್ಣಾವ್ರಿಗೆ ಅದ್ಭುತ ವೇದಿಕೆ ಸಿಕ್ಕಿತ್ತು. ಒಳ್ಳೆಯ ನಿರ್ದೇಶಕರು, ಕಥೆಗಳು ಎಲ್ಲವೂ ಸಿಕ್ಕಿತ್ತು. ಒಂದು ರಂಗಮಂಚ ಸಿದ್ಧವಾಯಿತು. "ಯಾವುದೋ ಶಕ್ತಿ ನನ್ನನ್ನು ಕರ್ಕೊಂಡ್ ಹೋಯಿತು, ಇನ್ನು ಇದೆ ನಡಿ ಮಂಕೆ" ಎಂದು ಸ್ವತಃ ರಾಜ್‌ಕುಮಾರ್ ಸಂದರ್ಶನಗಳಲ್ಲಿ ಹೇಳುತ್ತಿದ್ದರು" ಎಂದು ಮಾಸ್ಟರ್ ಆನಂದ್ ಹೇಳಿದ್ದಾರೆ. ಆ ಸಂದರ್ಶನದ ಪ್ರೋಮೊ ವೀಡಿಯೋವನ್ನು ನಿರ್ದೇಶಕ ಪ್ರಕಾಶ್ ರಾಜ್ ಮೇಹು ಫೇಸ್‌ಬುಕ್‌ನಲ್ಲಿ ಹಂಚಿಕೊಂಡಿದ್ದಾರೆ. "ಎಂಥಾ ಮೂಢನಂಬಿಕೆ.. ಛೇ... ಅಣ್ಣಾವ್ರ ಪ್ರತಿಭೆ, ಪರಿಶ್ರಮಕ್ಕೆ ಬೆಲೆಯೇ ಇಲ್ಲವೆ? ಈ ರೀತಿಯ ಚಿಂತನೆ ಡಾ. ರಾಜಕುಮಾರ್ ಅವರಿಗೆ ಮಾಡುವ ಅವಮಾನ" ಎಂದು ಬರೆದುಕೊಂಡಿದ್ದಾರೆ.
ಇದೇ ಸಂದರ್ಶನದಲ್ಲಿ ನಟ ಸಾಹಸಸಿಂಹ ವಿಷ್ಣುವರ್ಧನ್ ಹಿಂದಿನ ಜನ್ಮದ ಬಗ್ಗೆ ಗುರೂಜಿ ಮಾತನಾಡಿದ್ದನ್ನು ಕೂಡ ಮಾಸ್ಟರ್ ಆನಂದ್ ಹೇಳಿದ್ದಾರೆ. ಒಮ್ಮೆ ಭಾರತೀ ವಿಷ್ಣುವರ್ಧನ್ ಅವರ ಬಳಿಯೇ ಗುರೂಜಿ ಮಾತನಾಡಿದರು. ಹಿಂದಿನ ಜನ್ಮದಲ್ಲಿ ವಿಷ್ಣುವರ್ಧನ್ ಅವರು ಋಷಿಯಾಗಿದ್ರು ಎಂದು ಗುರೂಜಿ ಹೇಳಿದ್ದಾಗಿ ಮಾಸ್ಟರ್ ಆನಂದ್ ವಿವರಿಸಿದ್ದಾರೆ. ನಾನು ರಾಮಕೃಷ್ಣ ಪರಮಹಂಸರ ಶಿಷ್ಯರ ಬಗ್ಗೆ ಗೂಗಲ್ ಮಾಡಿ ಚೆಕ್ ಮಾಡಿದ್ದೆ. ಅದರಲ್ಲಿ ಕೆಲವರು 1929ಕ್ಕೂ ಹಿಂದೆ ನಿಧನರಾಗಿದ್ದರು. ಅವರಲ್ಲಿ ಯಾರೋ ಒಬ್ಬರು ಅಣ್ಣಾವ್ರು ಎನಿಸುತ್ತದೆ. 100% ಪಕ್ಕಾ. ನಾನು ಬಾಲ್ಯದಲ್ಲಿ ರಾಜ್‌ಕುಮಾರ್ ಅವರನ್ನು ಭೇಟಿ ಮಾಡಿದ್ದೆ. 'ಗೌರಿ ಗಣೇಶ' ಸಿನಿಮಾ ಬಹಳ ಸಲ ನೋಡಿದ್ದರು. ರಾಘಣ್ಣ 'ಡ್ರಾಮಾ ಜ್ಯೂನಿಯರ್ಸ್' ಶೋಗೆ ಬಂದಾಗ ಹೇಳಿದ್ದರು. ಅಪ್ಪಾಜಿ ಊಟದ ಬಳಿಕ ವಜ್ರಾಸನದಲ್ಲಿ ಕೂರುತ್ತಿದ್ದರು. ಆ ರೀತಿ ಕುಳಿತಾಗಾ ಆ ಹುಡುಗನ(ಮಾಸ್ಟರ್ ಆನಂದ್) ಸಿನಿಮಾ ಹಾಕ್ರಪ್ಪ ಎಂದು ಹೇಳಿ ನೋಡುತ್ತಿದ್ದರಂತೆ, ಅದಕ್ಕಿಂತ ಭಾಗ್ಯ ನನಗೇನು ಬೇಕು ಎಂದು ಮಾಸ್ಟರ್ ಆನಂದ್ ಮೆಲುಕು ಹಾಕಿದ್ದಾರೆ.
ಜಯಮಾಲಾ ಅವರ ಮಗಳ ಮದುವೆಯಲ್ಲಿ ಭಾರತೀ ವಿಷ್ಣುವರ್ಧನ್ ಹಾಗೂ ಮಗಳು ಕೀರ್ತಿ ಸಿಕ್ಕಿದ್ದರು. 2009ರಲ್ಲಿ ವಿಷ್ಣುವರ್ಧನ್ ಸರ್ ಹೋದ ಮೇಲೆ ಇವತ್ತಿನವರೆಗೆ ನನಗೆ ಕನಸಿನಲ್ಲಿ ಬರ್ತಿರ್ತಾರೆ. ಈ ವಿಷಯವನ್ನು ಅವರಿಬ್ಬರ ಬಳಿ ಹೇಳಿದ್ದೆ. ಆ ಕನಸು ಬಹಳ ವಿಶೇಷವಾಗಿರುತ್ತದೆ. ಶೂಟಿಂಗ್ ಸೆಟ್‌ನಲ್ಲೇ ಇರ್ತೀವಿ. ಅವರು ನನ್ನೊಟ್ಟಿಗೆ ಮಾತನಾಡುತ್ತಿರುತ್ತಾರೆ. 'ಜೇಷ್ಠ' ಚಿತ್ರದ ಶೂಟಿಂಗ್ ರೀತಿ. ಕನಸಿನಲ್ಲಿ ಆನಂದ್‌ಗೆ ವಿಷ್ಣುವರ್ಧನ್ ಈಗ ಇಲ್ವಲ್ಲಾ ಎನಿಸುತ್ತಿದ್ದಂತೆ ಅವರು ಹೊರಟುಬಿಡುತ್ತಾರೆ ಎಂದು ಮಾಸ್ಟರ್ ಆನಂದ್ ಇಂಟ್ರೆಸ್ಟಿಂಗ್ ಸಂಗತಿ ಬಿಚ್ಚಿಟ್ಟಿದ್ದಾರೆ.
15 ದಿನಗಳ ಹಿಂದೆ ಕೂಡ ವಿಷ್ಣುವರ್ಧನ್ ಕನಸ್ಸಿನಲ್ಲಿ ಬಂದಿದ್ದರು. ಹೀಗೆ ಕನಸು ಬಂದಹೋದ ಬಳಿಕ ಎದ್ದು ಬಹಳ ಹೊತ್ತು ಅಳುತ್ತೇನೆ. ಒಮ್ಮೆ ಕನಸ್ಸಿನಲ್ಲಿ ವಿಷ್ಣುವರ್ಧನ್ ನನ್ನನ್ನು ಕರ್ಕೊಂಡು ಒಂದು ರೂಮ್ ಒಳಕ್ಕೆ ಹೋಗುತ್ತಾರೆ. ಆ ರೂಮ್‌ನಲ್ಲಿ ಅವರದ್ದೇ ದೇಹ ಮಲಗಿದ ಸ್ಥಿತಿಯಲ್ಲಿರುತ್ತದೆ. ಅದನ್ನು ಕೆಲವೊತ್ತು ನೋಡಿ ಇಲ್ಲ, ನಾನು ಹೊರಡಬೇಕು ಎಂದು ಹೊರಡುತ್ತಾರೆ. ಬೇಡ ಎಂದರೂ ಕೇಳಲ್ಲ. ಇದೇ ವಿಚಾರವನ್ನು ಕೀರ್ತಿ ಅವರಿಗೂ ಹೇಳ್ದೆ. ನಮ್ಮ ಕನಸ್ಸಿನಲ್ಲೂ ಬರ್ತಾರೆ. ಆದರೆ ಮಾತನಾಡಿಲ್ಲ ಎನ್ನುತ್ತಿದ್ದರು ಎಂದು ಮಾಸ್ಟರ್ ಆನಂದ್ ತಿಳಿಸಿದ್ದಾರೆ.
'ಕಿಂದರಿ ಜೋಗಿ' ಚಿತ್ರದಲ್ಲಿ ಬಾಲನಟನಾಗಿ ಬಣ್ಣ ಹಚ್ಚಲು ಆರಂಭಿಸಿದ ಮಾಸ್ಟರ್ ಆನಂದ್ 'ಗೌರಿ ಗಣೇಶ' ಚಿತ್ರದಲ್ಲಿ ನಟಿಸಿ ಮೋಡಿ ಮಾಡಿದ್ದರು. ಆ ಸಿನಿಮಾ ಸೂಪರ್ ಹಿಟ್ ಆಗಿದೆ. ಅನಂತ್ ನಾಗ್ ಜೊತೆಯಲ್ಲಿ ಬಾಲನಟನಾಗಿ ಹೆಚ್ಚು ಸ್ಕ್ರೀನ್ ಸ್ಪೇಸ್ ಸಿಕ್ಕಿತ್ತು. ಈ ಚಿತ್ರದ ನಟನೆಗಾಗಿ ರಾಜ್ಯಪ್ರಶಸ್ತಿ ಕೂಡ ಸಿಕ್ಕಿತ್ತು. 'ಬೆಳ್ಳಿಯಪ್ಪ ಬಂಗಾರಪ್ಪ', 'ಶಾಂತಿ ಕ್ರಾಂತಿ', 'ಮುತ್ತಿನಹಾರ', 'ಕರ್ಪೂರದ ಗೊಂಬೆ' ಹೀಗೆ ಒಂದಷ್ಟು ಸಿನಿಮಾಗಳಲ್ಲಿ ಬಾಲನಟನಾಗಿ ಮಿಂಚಿದ್ದರು.
ದೊಡ್ಡವರಾದ ಬಳಿಕ ಒಂದಷ್ಟು ಸಿನಿಮಾಗಳಲ್ಲಿ ಆನಂದ್ ನಟಿಸಿದ್ದರು. 'ಫ್ರೆಂಡ್ಸ್', 'ಪ್ರೀತಿಗಾಗಿ', 'ಜೇಷ್ಠ', 'ಸಜಿನಿ', '5 ಈಡಿಯಟ್ಸ್', 'ಬುಲೆಟ್ ಬಸ್ಯಾ' ಸಿನಿಮಾಗಳಲ್ಲಿ ಬಣ್ಣ ಹಚ್ಚಿದ್ದರು. ಬಳಿಕ ಡ್ಯಾನ್ಸಿಂಗ್ ಸ್ಟಾರ್, ಡ್ರಾಮಾ ಜ್ಯೂನಿಯರ್ಸ್, ಕಾಮಿಡಿ ಕಿಲಾಡಿಗಳು ಸೇರಿ ಒಂದಷ್ಟು ಕಿರುತೆರೆ ಕಾರ್ಯಕ್ರಮಗಳನ್ನು ಆನಂದ್ ನಿರೂಪಣೆ ಮಾಡಿ ಸೈ ಎನಿಸಿಕೊಂಡಿದ್ದಾರೆ. ತಮ್ಮ ಮಾತು, ಮಿಮಿಕ್ರಿ ಮೂಲಕ ನೋಡುಗರನ್ನು ರಂಜಿಸಿದ್ದಾರೆ.


Click it and Unblock the Notifications











