ದರ್ಶನ್-ಸುದೀಪ್ ಮುನಿಸಿಗೆ 7 ವರ್ಷ; ಅಂದಿನಿಂದ ಇಲ್ಲಿಯವರೆಗೆ ಏನೆಲ್ಲ ಆಯಿತು?
ಆತ್ಮೀಯ ಸ್ನೇಹಿತರಾಗಿದ್ದ ಕನ್ನಡದ ಚಿತ್ರರಂಗದ ಸ್ಟಾರ್ ನಟರಿಬ್ಬರು ಅಂದು ದಿಢೀರನೇ ದೂರಾಗಿದ್ದರು. ನಟ ದರ್ಶನ್ ಒಂದೇ ಒಂದು ಟ್ವೀಟ್ ಮಾಡಿ ನಟ ಸುದೀಪ್ ಜೊತೆ ಟೂ ಬಿಟ್ಟಿದ್ದರು. ಆ ಬಳಿಕ ಮತ್ತೆ ಎಂದೂ ಇಬ್ಬರೂ ಒಟ್ಟಿಗೆ ಕಾಣಿಸಿಕೊಳ್ಳಲಿಲ್ಲ. ಇಬ್ಬರು ಒಂದಾಗಬೇಕು ಎಂದು ಸಾಕಷ್ಟು ಜನ ಅಭಿಮಾನಿಗಳು ಇನ್ನು ಹಾರೈಸುತ್ತಲೇ ಇದ್ದಾರೆ.
"ನಾನು ಹಾಗೂ ಸುದೀಪ್ ಇನ್ನು ಮುಂದೆ ಸ್ನೇಹಿತರಲ್ಲ. ನಾವಿಬ್ಬರು ಕನ್ನಡ ಚಿತ್ರರಂಗದ ಕಲಾವಿದರಷ್ಟೆ. ಯಾವುದೇ ಊಹಾಪೋಹ ಬೇಡ. ಎಲ್ಲಾ ಇಲ್ಲಿಗೆ ಮುಗೀತು" ಎಂದು ಮಾರ್ಚ್ 5, 2017ರಲ್ಲಿ ದರ್ಶನ್ ಟ್ವೀಟ್ ಮಾಡಿದ್ದರು. ಇದನ್ನು ನೋಡಿ ಒಂದು ಕ್ಷಣ ಅಭಿಮಾನಿಗಳು ಶಾಕ್ ಆಗಿದ್ದರು. ಅರೇ, ಏನಾಯ್ತು? ಆಪ್ತಮಿತ್ರರ ನಡುವೆ ಬಿರುಕಿಗೆ ಕಾರಣ ಏನು? ಎಂದು ಕೆಲವರು ತಲೆಕೆಡಿಸಿಕೊಂಡಿದ್ದರು.

ಕನ್ನಡ ಚಿತ್ರರಂಗದಲ್ಲಿ ಅಂಬರೀಶ್- ವಿಷ್ಣುವರ್ಧನ್ ರೀತಿ ಹೆಚ್ಚು ಕಡಿಮೆ ಒಂದೇ ಸಮಯದಲ್ಲಿ ಚಿತ್ರರಂಗಕ್ಕೆ ಬಂದು ಸ್ಟಾರ್‌ಗಳಾಗಿ ಬೆಳೆದವರು ದರ್ಶನ್ ಹಾಗೂ ಸುದೀಪ್. ಅಂಬಿ-ವಿಷ್ಣು ಬಳಿಕ ಅದೇ ರೀತಿ ಆತ್ಮೀಯ ಸ್ನೇಹ ಇವರಿಬ್ಬರ ನಡುವೆ ಇತ್ತು. ಹೋದಲ್ಲಿ ಬಂದಲ್ಲಿ ಇಬ್ಬರೂ ಒಟ್ಟೊಟ್ಟಿಗೆ ಕಾಣಿಸಿಕೊಳ್ಳುತ್ತಿದ್ದರು. ಪಾರ್ಟಿ, ಟ್ರಿಪ್ ಎಂದು ಫ್ರೆಂಡ್ಸ್ ಜೊತೆ ಸುತ್ತಾಡುತ್ತಿದ್ದಾರೆ. ಸುದೀಪ್ ಸಿನಿಮಾ ಕಾರ್ಯಕ್ರಮಗಳಿಗೆ ದರ್ಶನ್, ಅದೇ ರೀತಿ ದರ್ಶನ್ ನಟನೆಯ ಸಿನಿಮಾ ಕಾರ್ಯಕ್ರಮಗಳಿಗೆ ಸುದೀಪ್ ಹೋಗಿ ಬರುತ್ತಿದ್ದರು.
ಬಹಳ ಅನ್ಯೋನ್ಯ ಸ್ನೇಹಿತರಾಗಿದ್ದವರು ದಿಢೀರನೆ ದೂರಾಗಿದ್ದು ಅಭಿಮಾನಿಗಳ ಬೇಸರಕ್ಕೆ ಕಾರಣವಾಗಿತ್ತು. ಆ ಬಳಿಕ ಎಂದೂ ಇಬ್ಬರೂ ಒಟ್ಟಿಗೆ ಕಾಣಿಸಿಕೊಳ್ಳಲಿಲ್ಲ. ಇತ್ತೀಚೆಗೆ ಸುಮಲತಾ ಅಂಬರೀಶ್ ಬರ್ತ್‌ಡೇ ಪಾರ್ಟಿಯಲ್ಲಿ ಎದುರುಬದುರಾಗಿದ್ದರು. ಅಲ್ಲೂ ದರ್ಶನ್ ಅಂತರ ಕಾಯ್ದುಕೊಂಡಿದ್ದರು. ಅಭಿಮಾನಿಗಳ ನಿರೀಕ್ಷೆಯಂತೆ ಇಬ್ಬರ ನಡುವೆ ಮಾತುಕತೆ ಆಗಲಿಲ್ಲ. ಅಂದಹಾಗೆ ದರ್ಶನ್ ಆ ರೀತಿ ಟ್ವೀಟ್ ಮಾಡಿ ಇಂದಿಗೆ ಸರಿಯಾಗಿ 7 ವರ್ಷಗಳಾಗಿದೆ. ಇಬ್ಬರೂ ಮತ್ತೆ ಹೆಗಲ ಮೇಲೆ ಕೈಹಾಕಿಕೊಂಡು ಸುತ್ತಾಡಬೇಕು ಎನ್ನುವ ಅಭಿಮಾನಿಗಳ ಆಸೆ ಇನ್ನು ಈಡೇರಿಲ್ಲ.
ಇವತ್ತಿಗೂ ದರ್ಶನ್ ಕಡೆ ಸುದೀಪ್ ಸ್ನೇಹ ಹಸ್ತ ಚಾಚಿ ನಿಂತಿದ್ದಾರೆ. ಆಗೊಮ್ಮೆ ಈಗೊಮ್ಮೆ ದರ್ಶನ್ ಬಗ್ಗೆ ತಮ್ಮ ಅಭಿಪ್ರಾಯ ವ್ಯಕ್ತಪಡಿಸುತ್ತಾರೆ. ಆದರೆ ದರ್ಶನ್ ಮಾತ್ರ ಮೌನ ವಹಿಸಿದ್ದಾರೆ. ಆ ಸಮಯದಲ್ಲೇ ಸುದೀಪ್ ಜೊತೆ ಸ್ನೇಹ ಕಡಿದುಕೊಳ್ಳಲು ಕಾರಣ ಏನು ಎನ್ನುವುದನ್ನು ದರ್ಶನ್ ಹೇಳಿದ್ದರು. ಈ ವಿಚಾರವನ್ನು ದರ್ಶನ್ ಸಾಕಷ್ಟು ಬಾರಿ ಒತ್ತಿ ಹೇಳುತ್ತಾ ಬಂದಿದ್ದಾರೆ.
ಆತ್ಮೀಯ ಸ್ನೇಹಿತರು ದಿಢೀರ್ ದೂರಾಗಲು ಹೇಗೆ ಸಾಧ್ಯ? ಒಂದು ವೇಳೆ ಏನಾದರೂ ಭಿನ್ನಾಭಿಪ್ರಾಯ ಇದ್ದರೂ ದರ್ಶನ್ ಟ್ವೀಟ್ ಯಾಕೆ ಮಾಡುತ್ತಾರೆ ಎಂದೇ ಕೆಲವರು ಭಾವಿಸಿದ್ದರು. ಅಂದು ಸಂಜೆ ಕೆಲವರು ಈ ಟ್ವೀಟ್ ನಂಬಲು ಸಿದ್ಧರಿರಲಿಲ್ಲ. ನಟ ದರ್ಶನ್ ಟ್ವಿಟರ್ ಅಕೌಂಟ್ ಯಾರೋ ಹ್ಯಾಕ್ ಮಾಡಿದ್ದಾರೆ ಎಂದೇ ಅಂದುಕೊಂಡಿದ್ದರು. ಬಳಿಕ ಮತ್ತೊಂದು ಟ್ವೀಟ್ ಮಾಡಿ ದರ್ಶನ್ ಈ ಬಗ್ಗೆ ಸ್ಪಷ್ಟನೆ ಕೊಟ್ಟಿದ್ದರು. ಆ ನಂತರವೇ ಇದು ಖಚಿತವಾಗಿದ್ದು. ಬಳಿಕ ಶುರುವಾಗಿದ್ದು ಕಾರಣ ಏನು ಎನ್ನುವ ಪ್ರಶ್ನೆ?
ನಟ ಸುದೀಪ್ ಟಿವಿ9 ಸಂದರ್ಶನದಲ್ಲಿ ನೀಡಿದ್ದ ಹೇಳಿಕೆ ಕಾರಣಕ್ಕೆ ತಾವು ಈ ನಿರ್ಧಾರ ಕೈಗೊಂಡಿದ್ದೇನೆ ಎನ್ನುವ ಅರ್ಥದಲ್ಲಿ ದರ್ಶನ್ ಸ್ಪಷ್ಟನೆ ನೀಡಿದ್ದರು. "ಮೆಜೆಸ್ಟಿಕ್' ಚಿತ್ರಕ್ಕೆ ನಾಯಕನಾಗಿ ದರ್ಶನ್ ಹೆಸರನ್ನು ನಾನೇ ಸೂಚಿಸಿದ್ದು ಎಂದು ಸುದೀಪ್ ಸಂದರ್ಶನದಲ್ಲಿ ಹೇಳಿದ್ದರು. ಆದರೆ ಇದನ್ನು ಒಪ್ಪಲು ದರ್ಶನ್ ಸಿದ್ಧರಿಲ್ಲ. ನನ್ನನ್ನು ಆ ಚಿತ್ರಕ್ಕೆ ಆಯ್ಕೆ ಮಾಡಿದ್ದು ನಿರ್ಮಾಪಕರಾದ ಎಂ. ಜಿ ರಾಮಮೂರ್ತಿ ಹಾಗೂ ಪಿ. ಎನ್ ಸತ್ಯ ಎಂದು ಸಾಕಷ್ಟು ಸಂದರ್ಭಗಳಲ್ಲಿ ಹೇಳಿದ್ದಾರೆ. "ಮೆಜೆಸ್ಟಿಕ್ ಚಿತ್ರಕ್ಕೆ ನನ್ನ ಹೆಸರು ಸೂಚಿಸಿದ್ದು ಸುದೀಪ್ ಅಲ್ಲ' ಎಂದು ದರ್ಶನ್ ಮತ್ತೊಂದು ಟ್ವೀಟ್‌ನಲ್ಲಿ ಹೇಳಿದ್ದರು.
ಅಂದು ಟ್ವೀಟ್ ಮಾಡಿ ಸುಮ್ಮನಾದ ದರ್ಶನ್ ಬಳಿಕ ಸುದೀಪ್ ಬಗ್ಗೆ ಮಾತನಾಡಲೇ ಇಲ್ಲ. ಆದರೆ ನಟ ಸುದೀಪ್ ಮಾತ್ರ ಸಾಕಷ್ಟು ಬಾರಿ ದರ್ಶನ್ ಬಗ್ಗೆ ಪ್ರತಿಕ್ರಿಯಿಸಿದರು. ಪದೇ ಪದೇ ಸ್ನೇಹ ಹಸ್ತ ಚಾಚಿದರು. ದರ್ಶನ್ ಅಪಘಾತದಲ್ಲಿ ಗಾಯಗೊಂಡು ಆಸ್ಪತ್ರೆ ಸೇರಿದಾಗ ಶೀಘ್ರ ಚೇತರಿಸಿಕೊಳ್ಳಲಿ ಎಂದು ಟ್ವೀಟ್ ಮಾಡಿದ್ದರು. ಇನ್ನು ಹೊಸಪೇಟೆ ಪ್ರಕರಣದಲ್ಲಿ ದರ್ಶನ್ ಪರ ಸುದೀಪ್ ನಿಂತಿದ್ದರು. ಘಟನೆ ಬಗ್ಗೆ ಸುದೀರ್ಘ ಪತ್ರ ಬರೆದು ಬೆಂಬಲ ಸೂಚಿಸಿದ್ದರು. ದರ್ಶನ್ ಕೂಡ ಇದಕ್ಕೆ ಧನ್ಯವಾದ ತಿಳಿಸಿದ್ದರು.
ಇತ್ತೀಚೆಗೆ ಆಸ್ಕ್ ಕಿಚ್ಚ ಸೆಷನ್ ವೇಳೆಯೂ ದರ್ಶನ್ ಬಗ್ಗೆ ಅಭಿಮಾನಿಗಳ ಪ್ರಶ್ನೆಗಳಿಗೆ ಉತ್ತರಿಸುತ್ತಿದ್ದಾರೆ. ಒಟ್ನಲ್ಲಿ ಇಂದಿಗೂ ಸುದೀಪ್, ದರ್ಶನ್ ಜೊತೆ ಸ್ನೇಹ ಮುಂದುವರೆಸುವ ಸಿದ್ಧರಿದ್ದಾರೆ. ಆದರೆ ದರ್ಶನ್ ಮಾತ್ರ ಮುನಿಸು ಮುಂದುವರೆಸಿದ್ದಾರೆ. ಇನ್ನು ಹೊಸಪೇಟೆ ಪ್ರಕರಣದ ವೇಳೆ ಸುದೀಪ್ ಬೆಂಬಲಕ್ಕೆ ದರ್ಶನ್ ಧನ್ಯವಾದ ತಿಳಿಸಿದ್ದು, ಸುಮಲತಾ ಅಂಬರೀಶ್ ಹುಟ್ಟುಹಬ್ಬಕ್ಕೆ ಇಬ್ಬರೂ ಹಾಜರಾಗಿದ್ದು ಮತ್ತೆ ಇಬ್ಬರೂ ಒಂದಾಗುವ ಬಗ್ಗೆ ಕೊಂಚ ಆಶಾಭಾವನೆ ಮೂಡಿಸಿರುವುದು ಸುಳ್ಳಲ್ಲ.


Click it and Unblock the Notifications











