ಮಿಡಲ್ ಕ್ಲಾಸ್ ಹುಡುಗರ ಒಂದು ಕನಸಿನ ಕಥೆ; ಹೇಗಿದೆ 'ಮೆಕಾನಿಕ್: ಗ್ರೀಸ್ & ಡ್ರೀಮ್ಸ್'
ಸಿನಿಮಾ ಅನ್ನೋದು ಒಂದು ಕ್ರಿಯೇಟಿವ್ ಫೀಲ್ಡ್. ಇಲ್ಲಿ ಏನಾದರೂ ಸಾಧಿಸಬೇಕು ಅಂತ ಕನಸು ಹೊತ್ತು ಬರುವವರಿಗೇನು ಕಮ್ಮಿಯಿಲ್ಲ. ಕೆಲವರಿಗೆ ಯಶಸ್ಸು ಸಿಗುತ್ತೆ. ಮತ್ತೆ ಕೆಲವರು ಕನಸನ್ನು ಬೆನ್ನತ್ತಿ ಮುನ್ನುಗ್ಗುತ್ತಲೇ ಇರುತ್ತಾರೆ. ಸಿನಿಮಾ ಕ್ಷೇತ್ರದಲ್ಲಿ ಗಟ್ಟಿಯಾಗಿ ನೆಲೆಯೂರಬೇಕು ಅಂದರೆ, ಶಾರ್ಟ್ ಫಿಲ್ಮ್ ಮಾಡಿ ಅನುಭವವನ್ನು ಪಡೆಯಬೇಕು. ಇತ್ತೀಚೆಗೆ ಸಿನಿಮಾ ಕನಸು ಹೊತ್ತು ಬರುವವರಿಗೆ ಕಿರು ಚಿತ್ರವೇ ಸಿನಿಮಾದೆಡೆಗೆ ದಾರಿ ತೋರಿಸುತ್ತಿದೆ.
ಇಲ್ಲೊಂದು ತಂಡ ಇತ್ತೀಚೆಗಷ್ಟೇ 'ಮೆಕಾನಿಕ್: ಗ್ರೀಸ್ ಅಂಡ್ ಡ್ರೀಮ್ಸ್' ಅನ್ನುವ ಕಿರು ಚಿತ್ರವನ್ನು ನಿರ್ಮಾಣ ಮಾಡಿ ರಿಲೀಸ್ ಕೂಡ ಮಾಡಿದೆ. ಈ ಕಿರುಚಿತ್ರ ಇಬ್ಬರ ಯುವಕರ ಕಥೆಯನ್ನು ಹೇಳುತ್ತಿದೆ. ಮೆಕಾನಿಕ್ ಕೆಲಸ ಮಾಡಿಕೊಂಡಿದ್ದ ಮಧ್ಯಮ ವರ್ಗದ ಇಬ್ಬರು ಮ್ಯಾಕಾನಿಕ್ ಬದುಕು ಹೇಗೆ ಅನಿರೀಕ್ಷಿತವಾಗಿ ಬದಲಾಗುತ್ತೆ ಅನ್ನೋದು ಈ ಕಿರುಚಿತ್ರದ ತಿರುಳು.

ನೂರೆಂಟು ಕನಸುಗಳನ್ನು ಹೊತ್ತುಕೊಂಡಿರುವ ಮಧ್ಯಮ ವರ್ಗದ ಯುವಕರ ಕತೆಯನ್ನು ಇಲ್ಲಿ ಹೇಳಲಾಗಿದೆ. ಸ್ಥಿತಿವಂತರ ಬಣ್ಣ ಬಣ್ಣದ ಮಾತುಗಳಿಗೆ ಮರುಳಾಗುವ ಮಿಡಲ್ ಕ್ಲಾಸ್ ಕುಟುಂಬದ ಯುವಕರ ಪಾಡು ಏನಾಯಿತು ಅನ್ನೋದು ಈಡೀ ಕಿರುಚಿತ್ರದ ತಿರುಳು. ಮೇಕಿಂಗ್‌ನಲ್ಲಿ ಯಾವುದೇ ಕಾಂಪ್ರಮೈಸ್ ಆಗಿಯೇ ಇಲ್ಲ. ಕಿರು ಚಿತ್ರಕ್ಕೆ ಸಿನಿಮಾ ಕ್ವಾಲಿಟಿ ಕೊಟ್ಟಿರುವುದು ಇಲ್ಲಿ ಎದ್ದು ಕಾಣುತ್ತೆ.
'ಮೆಕಾನಿಕ್: ಗ್ರೀಸ್ ಅಂಡ್ ಡ್ರೀಮ್ಸ್'ನಲ್ಲಿ ಎರಡು ಪ್ರಮುಖ ಪಾತ್ರಗಳಿವೆ. ಇನ್ನೆರಡು ಸಪೋರ್ಟಿಂಗ್ ಪಾತ್ರಗಳಿವೆ. ಒಟ್ಟು ನಾಲ್ಕು ಪಾತ್ರಗಳಲ್ಲಿಯೇ ಇಡೀ ಕಿರುಚಿತ್ರ ಮುಗಿದು ಹೋಗಿದೆ. ಹೆಚ್ಚು ಕಡಿಮೆ 18 ಸೆಕೆಂಡುಗಳ ಈ ಕಿರುಚಿತ್ರ ನೆಟ್ಟಿಗರಿಗೆ ಇಷ್ಟ ಆಗಿದೆ. ಈ ಶಾರ್ಟ್ ಫಿಲ್ಮ್ ನಿರ್ಮಾಣ ಮಾಡಿರುವ ವಿಕ್ಕಿ ಮೀಡಿಯಾ ತನ್ನ ಯೂಟ್ಯೂಬ್ ಚಾನೆಲ್‌ನಲ್ಲಿ ಆಗಸ್ಟ್ 31ಕ್ಕೆ ರಿಲೀಸ್ ಮಾಡಿದೆ.

ಇಬ್ಬರು ಯಂಗ್ ಮೆಕಾನಿಕ್‌ಗಳು ಕಾರು ರಿಪೇರಿ ಮಾಡಿಕೊಂಡು ಬದುಕು ನಡೆಸುತ್ತಿರುತ್ತಾರೆ. ತಮ್ಮ ಗ್ಯಾರೇಜ್‌ಗೆ ಒಬ್ಬ ಶ್ರೀಮಂತ ವ್ಯಕ್ತಿ ಔಡಿಯಲ್ಲಿ ಬರುತ್ತಾನೆ. ಯುವಕರ ಮನಸ್ಸಿನಲ್ಲಿ ಕನಸುಗಳನ್ನು ತುಂಬುತ್ತಾನೆ. ಅಲ್ಲಿವರೆಗೂ ಮಿಡಲ್ ಕ್ಲಾಸ್ ಮೆಕಾನಿಕ್ ಆಗಿದ್ದ ಯುವಕನ ಐಷಾರಾಮಿ ಜೀವನದ ಕನಸು ಕಾಣುವುದಕ್ಕೆ ಶುರು ಮಾಡುತ್ತಾನೆ. ಕ್ಲೈಮ್ಯಾಕ್ಸ್‌ನಲ್ಲಿ ಈ ಸಿನಿಮಾಗೆ ಒಂದೊಳ್ಳೆಯ ಟರ್ನ್ ಕೊಡಲಾಗಿದೆ.
ಪ್ರಶಸ್ತಿ ಗೆದ್ದಿರುವ 'ಮೆಕಾನಿಕ್: ಗ್ರೀಸ್ ಅಂಡ್ ಡ್ರೀಮ್ಸ್' ಕಿರುಚಿತ್ರವನ್ನು ಸಂದೇಶ್ ಪರ್ಜಾನ್ಯ ಕಥೆ ಬರೆದು ನಿರ್ದೇಶನ ಮಾಡಿದ್ದಾರೆ. ಪ್ರಮುಖ ಪಾತ್ರದಲ್ಲಿ ಪ್ರಜ್ವಲ್ ಹಾಗೂ ಗಗನ್ ನಟಿಸಿದ್ದಾರೆ. ಗ್ಯಾರೇಜ್ ಹಿನ್ನೆಲೆಯನ್ನಿಟ್ಟುಕೊಂಡು ಈ ಕಿರುಚಿತ್ರವನ್ನು ನಿರ್ಮಾಣ ಮಾಡಲಾಗಿದೆ. ಈ ಕಿರು ಚಿತ್ರದ ಮತ್ತೊಂದು ಹೈಲೈಟ್ ಅಂದರೆ ಹಿನ್ನೆಲೆ ಸಂಗೀತ. ಪ್ರಿನ್ಸ್ ಜೋಸೆಫ್ ಈ ಕಿರು ಚಿತ್ರಕ್ಕೆ ಹಿನ್ನೆಲೆ ಸಂಗೀತ ಒದಗಿಸಿದ್ದಾರೆ. ವಿಕ್ಕಿ ಪೀಡಿಯಾ ಯೂಟ್ಯೂಬ್ ಚಾನೆಲ್‌ನಲ್ಲಿ 'ಮೆಕಾನಿಕ್: ಗ್ರೀಸ್ ಅಂಡ್ ಡ್ರೀಮ್ಸ್' ಕಿರುಚಿತ್ರ ಲಭ್ಯವಿದೆ.


Click it and Unblock the Notifications











