ಝೀರೋದಿಂದ 830 ಕೋಟಿ ಮೌಲ್ಯದ ಕಂಪನಿ ಸ್ಥಾಪಿಸಿದ ಈ ನಾಯಕಿಯ ಹಿನ್ನೆಲೆ ಗೊತ್ತಾ..?
ಬದುಕೇ ಹಾಗೆ... ಅದು ಯಾರನ್ನು, ಯಾವಾಗ, ಎಲ್ಲಿಗೆ ಬೇಕಾದರೂ ಕರೆದುಕೊಂಡು ಬಂದು ನಿಲ್ಲಿಸುತ್ತದೆ. ನಾನು ಅಂತಾ ಮೆರೆಯುವವರನ್ನು ನಡುಬೀದಿಗೆ ಬಿಡಬಹುದು; ನಾನೇನೂ ಅಲ್ಲ ಅಂದುಕೊಂಡೇ ಕುಂತರೆ ಇದ್ದಲ್ಲೇ ಇರಬಹುದು. ಅಥವಾ, ನನ್ನಲ್ಲೇನೋ ಇದೆ ಅಂದುಕೊಳ್ಳುವುದರ ಜೊತೆಗೆ ತನ್ನ ಶಕ್ತಿ ಸಾಮರ್ಥ್ಯಗಳನ್ನು ಗುರುತಿಸಿಕೊಂಡವನು, ಮತ್ತದನ್ನು ಹೊರತೆಗೆಯುವಲ್ಲಿ ಶ್ರಮಿಸಿದವನು ಎಂಥ ಎತ್ತರಕ್ಕೆ ಬೇಕಾದರೂ ಏರಿ ನಿಲ್ಲಬಹುದು. ಇದಕ್ಕೆ ಆಶ್ಕಾ ಗೊರಾಡಿಯಾ ಅತ್ಯುತ್ತಮ ಉದಾಹರಣೆ.
ಹೌದು.. ಆಶ್ಕಾ ಗೊರಾಡಿಯಾ.. ಒಂದ್ಕಾಲದ ಸೀರಿಯಲ್ ನಾಯಕಿ. ಎರಡು ದಶಕದ ಹಿಂದೆ ಅಂದರೆ 2002ರಲ್ಲಿಯೇ ಬಣ್ಣದ ಕನಸೊತ್ತು ಮುಂಬೈನಲ್ಲಿ ಓಡಾಡುತ್ತಿದ್ದ ಆಶ್ಕಾ, ಒಂದೆರಡು ವರ್ಷ ಪಡಬಾರದ ಕಷ್ಟವನ್ನೂ ಪಟ್ಟರು. ಆ ನಂತರ ಕುಸುಮ್' ಸೀರಿಯಲ್ನಲ್ಲಿ ಕುಮುದ್ ಪಾತ್ರದ ಮೂಲಕ ಜನ ಮನ ಗೆದ್ದರು. ಆ ನಂತರ ಕ್ಯುಂಕಿ ಸಾಸ್ ಭೀ ಕಭಿ ಬಹು ಥಿ.. ಸಿಂಧೂರ್ ತೇರೇ ನಾಮ್ ಕಾ.. ಮೇರೆ ಅಪ್ನೆ.. 'ವಿರುದ್ಧ್.. ಮೇರೆ ಅಪ್ನೆ.. ಸೇರಿ ಕೆಲ ಧಾರಾವಾಹಿಯಲ್ಲಿ ಆಕ್ಟ್ ಮಾಡಿದ ಆಶ್ಕಾ 2012ರಲ್ಲಿಯೇ ಬಿಗ್ ಬಾಸ್ ಮನೆಯನ್ನೂ ಪ್ರವೇಶಿಸಿದರು.

ಬಿಗ್ ಬಾಸ್ ನಿಂದ ಬಂದ ನಂತರ ಬದುಕು ಬದಲಾಗುತ್ತೆ ಎಂದು ಆಶ್ಕಾ ಅಂದುಕೊಂಡಿದ್ದರು. ಆದರೆ, ಇದು ಬದುಕು. ಇಲ್ಲಿ ಅಂದುಕೊಳ್ಳುವುದು ಒಂದು ಆಗುವುದು ಇನ್ನೊಂದು. ಇದಕ್ಕೆ ಕೈಗನ್ನಡಿ ಎಂಬಂತೆ ಮೇಲೇರಬೇಕಿದ್ದ ಆಶ್ಕಾ ಬದುಕು ನಿಧಾನಗತಿಯಲ್ಲಿ ಸಾಗಲು ಶುರುವಾಯಿತು. ಇನ್ನೇನು.. ಬಂದ ದಾರಿಗೆ ಸುಂಕ ಇಲ್ಲ ಎಂದು ಮರಳಬೇಕೆನ್ನುವಷ್ಟರಲ್ಲಿ ನಾಗಿನ್ ಧಾರಾವಾಹಿ ಇವರಿಗೆ ಎಲ್ಲಿಲ್ಲದ ಜನಪ್ರಿಯತೆ ತಂದು ಕೊಡ್ತು.
ನಾಗಿನ್ ನಂತರ ಆಶ್ಕಾ ಕಿರುತೆರೆಯ ಪ್ರಪಂಚದಲ್ಲಿ ಸಿಕ್ಕಾಪಟ್ಟೆ ಬ್ಯುಸಿಯಾಗ್ತಾರೆ ಎಂದು ಎಲ್ಲರೂ ಅಂದುಕೊಂಡಿದ್ದರು. ಆದರೆ.. ದುರಾದೃಷ್ಟ ಈ ಬಾರಿ ಕೂಡ ಆಶ್ಕಾ ಅವರನ್ನು ಕಿರುತೆರೆ ಇವರನ್ನೂ ಅದ್ಯಾಕೋ ಒಪ್ಪಿಕೊಳ್ಳಲಿಲ್ಲ. ಹೀಗಾಗಿಯೇ ಏನೋ ಬೇಸತ್ತು, ಕಿರುತೆರೆಗೆ ಗುಡ್ ಬೈ ಹೇಳಿದ ಆಶ್ಕಾ ಇಂದು 830 ಕೋಟಿಯ ಒಡತಿ ಅಂದರೆ ನೀವೂ ನಂಬ್ಲೇಬೇಕು.

ಹೌದು, ಯಾವಾಗ ಕಿರುತೆರೆ ತನ್ನ ಕೈ ಹಿಡಿಯುತ್ತಿಲ್ಲವೆನ್ನುವ ಸತ್ಯ, ಆಶ್ಕಾಗೆ ಮನವರಿಕೆಯಾಯಿತೋ ಅವತ್ತೇ ಆಶ್ಕಾ ತಮ್ಮ ಗಮನವನ್ನು ಬೇರೆ ಕ್ಷೇತ್ರದ ಕಡೆ ಕೊಡಲು ಶುರುಮಾಡಿದ್ದರು. ಭಾರತೀಯರು ಎಂದೂ ನೋಡದ ಕಾಸ್ಮೆಟಿಕ್ ಪ್ರಾಡಕ್ಟ್ಗಳನ್ನ ತರಬೇಕು. ಅದೂ ಕೂಡ ಕಡಿಮೆ ಬೆಲೆಯಲ್ಲಿ ಎಲ್ಲರಿಗೂ ಪ್ರೊಫೆಷನಲ್ ಮೇಕಪ್ನ ಸೌಲಭ್ಯ ಸಿಗಬೇಕು ಅನ್ನೋ ಕನಸು ಕಂಡರು. ಇವರ ಈ ಕನಸಿಗೆ ಇವರ ಕಾಲೇಜಿನ ಸ್ನೇಹಿತರಾದ ಪ್ರಿಯಾಂಕ್ ಶಾ ಹಾಗೂ ಅಶುತೋಷ್ ವಲಾನಿ ಕೈ ಜೋಡಿಸಿದರು. ಆ ನಂತರ ಮೂವರು ರೆನೆ ಕಾಸ್ಮೆಟಿಕ್ಸ್ ಸಂಸ್ಥೆಯನ್ನ ಹುಟ್ಟು ಹಾಕಿದರು.
ಈಗ ರೆನೆ ಕಾಸ್ಮೆಟಿಕ್ಸ್ ಶುರುವಾಗಿ ಈಗ 4 ವರ್ಷಗಳಾಗಿವೆ. ಈ ನಾಲ್ಕು ವರ್ಷದಲ್ಲಿ ರೆನೆ ಕಾಸ್ಮೆಟಿಕ್ಸ್ ನ ಮೌಲ್ಯ 830 ಕೋಟಿ ರೂಪಾಯಿಗೆ ತಲುಪಿದೆ. ಆಫ್ ಲೈನ್ ಹಾಗೂ ಆನ್ ಲೈನ್ ಮಾರುಕಟ್ಟೆಯಲ್ಲಿ ರೆನೆ ಕಾಸ್ಮೆಟಿಕ್ಸ್ನ 200ಕ್ಕೂ ಹೆಚ್ಚು ಪ್ರಾಡಕ್ಟ್ಗಳು ಮಾರಾಟವಾಗ್ತಿವೆ. ಇನ್ನೂ ಗುಜರಾತ್ನ ಅಹ್ಮದಾಬಾದ್ನಲ್ಲಿ ಶುರು ಮಾಡಿ ಇವತ್ತು ಅಮೆರಿಕಾ, ಆಸ್ಟ್ರೇಲಿಯಾ, ಯುಎಇ.. ಹೀಗೆ ಅಂತರಾಷ್ಟ್ರೀಯ ಮಾರುಕಟ್ಟೆಗೂ ಲಗ್ಗೆ ಇಟ್ಟಿರುವ ರೆನೆ ಕಾಸ್ಮೆಟಿಕ್ಸ್ ದೇಶ-ವಿದೇಶದ ಪ್ರತಿಷ್ಠಿತ ಬ್ರ್ಯಾಂಡ್‌ಗಳ ವಿರುದ್ಧ ಸ್ಫರ್ಧೆ ಮಾಡುತ್ತಿದೆ. ಪೈಪೋಟಿಯನ್ನೂ ನೀಡುತ್ತಿದೆ.

ಒಟ್ನಲ್ಲಿ ನಟಿಯಾಗಿ ನೆಲೆಯೂರಬೇಕೆಂದು ಆಶ್ಕಾ ಗೊರಾಡಿಯಾ ಒಂದಲ್ಲ..ಎರಡಲ್ಲ.. ಹೆಚ್ಚು ಕಡಿಮೆ ಹದಿನೇಳು ವರ್ಷ ಪ್ರಯತ್ನ ಮಾಡಿದರು. ತಮ್ಮ ಈ ಪ್ರಯತ್ನದಲ್ಲಿ ಒಂದು ಹಂತಕ್ಕೆ ಯಶಸ್ವಿಯೂ ಆದರು. ಆದರೂ ಅವರ ಕನಸಿನ ಬದುಕು ಹಾದಿ ತಪ್ಪಿತ್ತು. ಹೀಗಾಗಿಯೇ ಆ ಕನಸಿಗೆ ಪೂರ್ಣವಿರಾಮ ಹಾಕಿ ಬೇರೆಯ ಕನಸೆಂಬ ಕುದುರೆಯ ಬೆನ್ನೇರಿದರು. ಫಲಿತಾಂಶ ಸದ್ಯಕ್ಕೆ ಕಣ್ಮುಂದೆ ಇದೆ. ಇವತ್ತು ಆಶ್ಕಾ ಗೊರಾಡಿಯಾ 830 ಕೋಟಿಯ ಒಡತಿ. ಸಾಧನೆ ಅಂದರೆ ಇದೇ ಅಲ್ಲವಾ..?


Click it and Unblock the Notifications











