ಛೇ.. ಆ ಚಿತ್ರದಲ್ಲಿ ಪುನೀತ್‌ಗೆ ಮೇಘನಾ ರಾಜ್ ನಾಯಕಿ ಆಗಬೇಕಿತ್ತಂತೆ!
ಕೈಗೆ ಬಂದ ತುತ್ತು ಬಾಯಿಗೆ ಬರಲಿಲ್ಲ ಎನ್ನುವಂತೆ ಪದೇ ಪದೆ ಆಗುತ್ತಿರುತ್ತದೆ. ಚಿತ್ರರಂಗದಲ್ಲಿ ನಟ, ನಟಿಯರಿಗೆ ಇಂತಹ ಅನುಭವ ಸಾಕಷ್ಟು ಬಾರಿ ಆಗುತ್ತದೆ. ಒಂದು ರಿಜೆಕ್ಟ್ ಮಾಡಿದ ಸ್ಟೋರಿ ಮತ್ತೊಬ್ಬರು ಮಾಡಿ ಸಿನಿ ಆ ಹಿಟ್ ಆಗುವುದು, ಯಾರೋ ಮಾಡಬೇಕಿದ್ದ ಪಾತ್ರ ಮತ್ತ್ಯಾರದ್ದೋ ಪಾಲಾಗುವುದು ಸರ್ವೇ ಸಾಮಾನ್ಯ.
ದೊಡ್ಮನೆ ಸಾಕಷ್ಟು ನಟಿಯರನ್ನು ಚಿತ್ರರಂಗಕ್ಕೆ ಪರಿಚಯಿಸಿದೆ. ಪಾರ್ವತಮ್ಮ ಅಂತೂ ಹೊಸ ಪ್ರತಿಭೆಗಳನ್ನು ಬಹಳ ಪ್ರೋತ್ಸಾಹಿಸುತ್ತಿದ್ದರು. ಸುಧಾರಾಣಿ, ಮಾಲಾಶ್ರೀ, ರಮ್ಯಾ, ರಕ್ಷಿತಾ, ಅನು ಪ್ರಭಾಕರ್ ಹೀಗೆ ಪಟ್ಟಿ ಬೆಳೆಯುತ್ತಾ ಹೋಗುತ್ತದೆ. ನಟಿ ಮೇಘನಾ ರಾಜ್ ಕೂಡ ದೊಡ್ಮನೆ ಚಿತ್ರದ ಮೂಲಕವೇ ಚಿತ್ರರಂಗಕ್ಕೆ ಬರಬೇಕಿತ್ತು. ಆದರೆ ಕಾರಣಾಂತರಗಳಿಂದ ಅದು ನಿಜವಾಗಲಿಲ್ಲ.

20 ವರ್ಷಗಳ ಬಳಿಕ ಮೇಘನಾ ರಾಜ್ ಈ ವಿಚಾರವನ್ನು ಬಹಿರಂಗ ಪಡಿಸಿದ್ದಾರೆ. ಗೋಲ್ಡ್ ಕ್ಲಾಸ್ ವಿತ್ ಮಯೂರ ಯೂಟ್ಯೂಬ್ ಸಂದರ್ಶನದಲ್ಲಿ ಮೇಘನಾ ರಾಜ್ ಮಾತನಾಡಿದ್ದಾರೆ. ತಮ್ಮ ಸಿನಿಮಾ ಹಾಗೂ ವೈಯಕ್ತಿಕ ಜೀವನಕ್ಕೆ ಸಂಬಂಧಿಸಿ ಸಾಕಷ್ಟು ವಿಚಾರ ಹಂಚಿಕೊಂಡಿದ್ದಾರೆ. ಯಾವುದಾದರೂ ಒಂದು ಸಿನಿಮಾ ಪಾತ್ರ ಮಿಸ್ ಮಾಡಿಕೊಂಡಿದ್ದಕ್ಕೆ ಬೇಸರ ಇದ್ಯಾ? ಎನ್ನುವ ಪ್ರಶ್ನೆ ಇಂಟ್ರೆಸ್ಟಿಂಗ್ ಉತ್ತರ ನೀಡಿದ್ದಾರೆ.
2009ರಲ್ಲಿ ತೆಲುಗಿನ 'ಬೆಂಡು ಅಪ್ಪಾರಾವು' ಚಿತ್ರದ ಮೂಲಕ ಮೇಘನಾ ಚಿತ್ರರಂಗಕ್ಕೆ ಬಂದರು. ಮರುವರ್ಷ ಕನ್ನಡದ 'ಪುಂಡ' ಚಿತ್ರದಲ್ಲಿ ಯೋಗಿ ಜೊತೆ ನಟಿಸಿದ್ದರು. ಬಳಿಕ ತಮಿಳು ಹಾಗೂ ಮಲಯಾಳಂ ಚಿತ್ರರಂಗಕ್ಕೂ ಎಂಟ್ರಿ ಕೊಟ್ಟಿದ್ದರು. ಚಿರು ಅಗಲಿಕೆ ಬಳಿಕ ಮಗನ ಲಾಲನೆ ಪಾಲನೆಯಲ್ಲೇ ಮೇಘನಾ ಬ್ಯುಸಿಯಾಗಿದ್ದಾರೆ. ಇತ್ತೀಚೆಗೆ 'ತತ್ಸಮ ತದ್ಬವ' ಚಿತ್ರದಲ್ಲಿ ಮಿಂಚಿದ್ದರು.

ಅಂದಹಾಗೆ ಪುನೀತ್ ರಾಜ್‌ಕುಮಾರ್ ನಟನೆಯ 'ಆಕಾಶ್' ಚಿತ್ರದಲ್ಲಿ ಮೇಘನಾ ರಾಜ್ ನಾಯಕಿಯಾಗಿ ನಟಿಸಬೇಕಿತ್ತಂತೆ. ಈ ವಿಚಾರ ನೆನಪಿಸಿಕೊಂಡು ಅವರು ಬೇಸರ ವ್ಯಕ್ತಪಡಿಸಿದ್ದಾರೆ. "ಇದನ್ನು ಹೇಗೆ ಸ್ವೀಕರಿಸುತ್ತಾರೆ ಗೊತ್ತಿಲ್ಲ. 'ಆಕಾಶ್' ಚಿತ್ರದ ಆಫರ್ ನನಗೆ ಬಂದಿತ್ತು. ಆಗ ನಾನು ಇನ್ನು ಬಹಳ ಚಿಕ್ಕವಳು. ಶಾಲೆಗೆ ಹೋಗುತ್ತಿದ್ದೆ. ಇತ್ತೀಚೆಗೆ ಅಶ್ವಿನಿ ಮೇಡಂ ಹೇಳುತ್ತಿದ್ದರು. ಮೇಘನಾ ನೀನು ಆಗ ಬಂದಿದ್ದೆ, ಬಹಳ ಚಿಕ್ಕ ಹುಡುಗಿ. ಹೇಗೆ ನಾಯಕಿ ಅಂತ" ಎಂದು ನೆನಪಿಸಿಕೊಂಡಿದ್ದಾರೆ.
"ನಾನು ಆಗ 9ನೇ ತರಗತಿಯಲ್ಲಿ ಓದುತ್ತಿದ್ದೆ. ಆ ಅವಕಾಶ ಕಳೆದುಕೊಂಡಿದ್ದು ಅದರಲ್ಲೂ ಅಪ್ಪು ಸರ್ ಜೊತೆ ನಟಿಸೋಕೆ ಸಾಧ್ಯವಾಗಲಿಲ್ಲ ಎನ್ನುವ ಬೇಸರ ಸದಾ ಇರುತ್ತದೆ" ಎಂದು ಮೇಘನಾ ರಾಜ್ ವಿವರಿಸಿದ್ದಾರೆ. ಈ ವಿಚಾರವನ್ನು ಈವರೆಗೆ ಎಲ್ಲಿಯೂ ಹೇಳಿರಲಿಲ್ಲ. ಇದೇ ಮೊದಲು ಹೇಳುತ್ತಿರುವುದು ಎಂದು ತಿಳಿಸಿದ್ದಾರೆ.
2005ರಲ್ಲಿ ಬಂದಿದ್ದ 'ಆಕಾಶ್' ಚಿತ್ರಕ್ಕೆ ಮಹೇಶ್ ಬಾಬು ಆಕ್ಷನ್ ಕಟ್ ಹೇಳಿದ್ದರು. ಶ್ರೀ ಚಕ್ರೇಶ್ವರಿ ಕಂಬೈನ್ಸ್ ಬ್ಯಾನರ್ ಅಡಿಯಲ್ಲಿ ಪಾರ್ವತಮ್ಮ ರಾಜ್‌ಕುಮಾರ್ ಚಿತ್ರ ನಿರ್ಮಾಣ ಮಾಡಿದ್ದರು. ಪುನೀತ್ ಜೊತೆ ರಮ್ಯಾ 2ನೇ ಬಾರಿ ನಾಯಕಿಯಾಗಿ ನಟಿಸಿ ಗೆದ್ದಿದ್ದರು. ಅದಕ್ಕೂ ಮುನ್ನ 'ಅಭಿ' ಚಿತ್ರದಲ್ಲಿ ಇಬ್ಬರೂ ಒಟ್ಟಿಗೆ ನಟಿಸಿದ್ದರು. ಆರ್.ಪಿ ಪಟ್ನಾಯಕ್ ಸಂಗೀತ ಚಿತ್ರದ ಆಲ್ಬಮ್ ಸಹ ಹಿಟ್ ಆಗಿತ್ತು.
ಚಿತ್ರದಲ್ಲಿ ಶ್ರೀಮಂತ ಮನೆತನದ ಹುಡುಗಿ ನಂದಿನಿ ಪಾತ್ರದಲ್ಲಿ ರಮ್ಯಾ ನಟಿಸಿದ್ದರು. ಸಿನಿಮಾ ಯಶಸ್ವಿಯಾಗಿ 200 ದಿನಗಳ ಕಾಲ ಪ್ರದರ್ಶನ ಕಂಡು ದಾಖಲೆ ಬರೆದಿತ್ತು. ಇವತ್ತಿಗೂ 'ಆಕಾಶ್' ಚಿತ್ರದ ಹಾಡುಗಳನ್ನು ಸಿನಿರಸಿಕರು ಇನ್ನು ಮರೆತ್ತಿಲ್ಲ. ಈ ಚಿತ್ರದಲ್ಲಿ ನಟಿ ಮೇಘನಾ ರಾಜ್ ನಾಯಕಿಯಾಗಿ ನಟಿಸಿದ್ದರೆ ನಿಜಕ್ಕೂ ದೊಡ್ಡ ಬ್ರೇಕ್ ಸಿಗುತ್ತಿತ್ತು ಅನಿಸುತ್ತದೆ.


Click it and Unblock the Notifications











